ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್–19: ಒಂದೇ ದಿನ 51 ಹೊಸ ಪ್ರಕರಣ!

ದ್ವಿಶತಕದ ಗಡಿ ದಾಟಿದ ಸೋಂಕಿತರ ಸಂಖ್ಯೆ
Last Updated 2 ಜೂನ್ 2020, 14:58 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ ಹೊಸದಾಗಿ 51 ಮಂದಿಗೆ ಕೋವಿಡ್–19 ಸೋಂಕು ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 204ಕ್ಕೆ ಏರಿದ್ದು, ಸಾರ್ವಜನಿಕರಲ್ಲಿ ಆತಂಕವನ್ನೂ ಹೆಚ್ಚಿಸಿದೆ.

ಇವರಲ್ಲಿ 7, 16 ಹಾಗೂ 4 ವರ್ಷದ ಬಾಲಕಿಯರು ಮತ್ತು 2, 6, 13, 14 ಹಾಗೂ 15 ವರ್ಷದ ಬಾಲಕರಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಖೆಯಿಂದ ಮಂಗಳವಾರ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ,46 ಮಂದಿ ಮಹಾರಾಷ್ಟ್ರದಿಂದ ವಾಪಸಾದವರಿದ್ದಾರೆ. ಒಬ್ಬರು ಗುಜರಾತ್‌ ಹಾಗೂ ಇಬ್ಬರು ದೆಹಲಿ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ರೋಗಿ ಸಂಖ್ಯೆ 13 ವರ್ಷದ ಬಾಲಕ ಹಾಗೂ 22 ವರ್ಷದ ಮಹಿಳೆಯ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ ಎಂದು ತಿಳಿಸಲಾಗಿದೆ.

ಒಂದೇ ದಿನ 51 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿರುವುದು ಇದೇ ಮೊದಲಾಗಿದೆ. ಹಸಿರು ವಲಯದಲ್ಲಿದ್ದ ಕೆಲವು ತಾಲ್ಲೂಕುಗಳಲ್ಲೂ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಇಲ್ಲಿನ ಹಲವು ಹಳ್ಳಿಗಳಿಗೆ ಕೊರೊನಾ ವ್ಯಾಪಿಸಿದಂತಾಗಿದೆ. ಆ ಗ್ರಾಮಗಳನ್ನು ಕಂಟೈನ್ಮೆಂಟ್ ಝೋನ್ ಮಾಡಲಾಗಿದೆ.

ಸಾಂಸ್ಥಿಕ ಕ್ವಾರಂಟೈನ್‌ ಮುಗಿಸಿ ಮನೆಗೆ ವಾಪಸಾಗಿದ್ದ ಕೆಲವರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿರುವುದು ಆತಂಕ ಮೂಡಿಸಿದೆ. ಅವರ ಸಂಪರ್ಕಕ್ಕೆ ಬಂದವರ ದುಗುಡಕ್ಕೆ ಕಾರಣವಾಗಿದೆ.

ಸೋಂಕಿತರು ಬೆಳಗಾವಿ, ಹುಕ್ಕೇರಿ, ಗೋಕಾಕ, ಮೂಡಲಗಿ ತಾಲ್ಲೂಕುಗಳವರು ಎಂದು ತಿಳಿದುಬಂದಿದೆ.

ಸೋಂಕಿತರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೂಡಲಗಿ ವರದಿ:ತಾಲ್ಲೂಕಿನ ಕಲ್ಲೋಳಿ ಗ್ರಾಮದಲ್ಲಿ ಮಹಾರಾಷ್ಟ್ರದ ಮುಂಬೈನಿಂದ ಬಂದಿದ್ದ ನಾಲ್ವರ ಪೈಕಿ ಒಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಕೋವಿಡ್–19 ಬಾಧಿತ ತಾಲ್ಲೂಕುಗಳ ಪಟ್ಟಿಗೆ ಮೂಡಲಗಿ ಸೇರ್ಪಡೆಯಾಗಿದೆ.

ಸೋಂಕು ದೃಢಪಟ್ಟ ಪ್ರದೇಶದ 50 ಮೀಟರ್ ವ್ಯಾಪ್ತಿಯಲ್ಲಿ ತಾಲ್ಲೂಕು ಆಡಳಿತವು ಸೀಲ್‌ಡೌನ್‌ ಮಾಡಿದೆ. ಮುಂಬೈನಿಂದ ಬಂದಿದ್ದ ಕುಟುಂಬದವರು ಸಾಂಸ್ಥಿಕ ಕ್ವಾರಂಟೈನ್ ಕೇಂದ್ರದಲ್ಲಿತ್ತು. 14 ದಿನಗಳ ಕ್ವಾರಂಟೈನ್ ಅವಧಿ ಮುಗಿಸಿ ಮೂರು ದಿನಗಳ ಹಿಂದೆ ಮನೆಗೆ ತೆರಳಿದ್ದರು. ಈ ನಡುವೆ ಅವರ ಪರೀಕ್ಷಾ ವರದಿ ಮಂಗಳವಾರ ಬಂದಿದೆ. 25 ವರ್ಷದ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಆ ವ್ಯಕ್ತಿ ಮೂರು ದಿನಗಳಿಂದ ಪಟ್ಟಣದಲ್ಲಿ ಓಡಾಡಿದ್ದರು. ಇದರಿಂದ ಜನರಲ್ಲಿ ಆತಂಕ ಮೂಡಿದೆ. ಅವರ ಮನೆಯವರನ್ನು ಮತ್ತೆ ಕ್ವಾರಂಟೈನ್ ಕೇಂದ್ರಕ್ಕೆ ಸೇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT