ಕಡಲು ಪ್ರಕ್ಷುಬ್ಧ: ಮಂಗಳೂರಿನ ಹಲವೆಡೆ ಮನೆಗಳಿಗೆ ನುಗ್ಗಿದ ನೀರು

7
ವಾಯುಭಾರ ಕುಸಿತ

ಕಡಲು ಪ್ರಕ್ಷುಬ್ಧ: ಮಂಗಳೂರಿನ ಹಲವೆಡೆ ಮನೆಗಳಿಗೆ ನುಗ್ಗಿದ ನೀರು

Published:
Updated:
Deccan Herald

ಮಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಕಾಣಿಸಿಕೊಂಡಿರುವ ತಿತ್ಲಿ ಚಂಡಮಾರುತ ಮತ್ತಷ್ಟು ತೀವ್ರಗೊಂಡಿದ್ದು, ಪಶ್ಚಿಮ ಕರಾವಳಿಯಲ್ಲೂ ಕಡಲು ಪ್ರಕ್ಷುಬ್ಧಗೊಂಡಿದೆ.

ಬುಧವಾರ ಬೆಳಿಗ್ಗೆಯಿಂದಲೇ ಪಣಂಬೂರು, ಉಳ್ಳಾಲ, ಸೋಮೇಶ್ವರ-ಉಚ್ಚಿಲದ ಹಲವೆಡೆ ಸಮುದ್ರದ ಅಬ್ಬರ ಮಿತಿ ಮೀರಿದೆ. ಕರಾವಳಿಯುದ್ದಕ್ಕೂ ಸಮುದ್ರದ ಆಳೆತ್ತರದ ಅಲೆಗಳು ತೀರ ಪ್ರದೇಶಕ್ಕೆ ನುಗ್ಗುತ್ತಿವೆ. ಇಲಾಖೆಯ ಮುನ್ನೆಚ್ಚರಿಕೆಯ ಪರಿಣಾಮ ಮೀನುಗಾರರು ಸಮುದ್ರಕ್ಕಿಳಿಯಲಿಲ್ಲ.

ಇದನ್ನೂ ಓದಿ: ಒಡಿಶಾ, ಆಂಧ್ರಪ್ರದೇಶದಲ್ಲಿ 'ತಿತ್ಲಿ' ಚಂಡಮಾರುತ: ಹೈ ಅಲರ್ಟ್

ಸೋಮೇಶ್ವರ ಉಚ್ಚಿಲ ಸಮೀಪದ ಪೆರಿಬೈಲ್‌ನಲ್ಲಿ ಕಡಲಿನ ಅಲೆಗಳು ಅಬ್ಬರಿಸುತ್ತಿದ್ದು, ಪಕ್ಕದ ರಸ್ತೆಯನ್ನೂ ದಾಟಿ ನೀರು ನುಗ್ಗುತ್ತಿದೆ. ಇದರಿಂದ ಸಮುದ್ರ ಕಸಕಡ್ಡಿಗಳು ರಸ್ತೆಯಲ್ಲಿ ಸಂಗ್ರಹವಾಗಿವೆ. ಸ್ಥಳೀಯವಾಗಿ ನಾಲ್ಕೈದು ಮನೆಗಳಿಗೆ ನೀರು ನುಗ್ಗಿದ್ದು, ಬಾವಿ ನೀರು ಕೂಡಾ ಉಪ್ಪು ನೀರಾಗಿ ಪರಿವರ್ತನೆಗೊಂಡಿದೆ.

ಪಣಂಬೂರು ಬೀಚ್‌ನಲ್ಲಿ ಮುಂಜಾಗ್ರತಾ ಕ್ರಮ ವಹಿಸಲು ಹವಾಮಾನ ಇಲಾಖೆ ಸೂಚಿಸಿದೆ. ಇದೆಲ್ಲದರ ನಡುವೆ ಮತ್ತೆ ಕರಾವಳಿಯಲ್ಲಿ ಭಾರಿ ಮಳೆಯಾಗುವ ಸಂಭವವೂ ಇದೆ ಎನ್ನಲಾಗಿದೆ. ಅಕ್ಟೋಬರ್ 13ರವರೆಗೆ ಮೀನುಗಾರರು ಕಡಲಿಗಿಳಿಯದಂತೆ ಸೂಚನೆ ನೀಡಲಾಗಿದೆ.

ಮರವಂತೆಯಲ್ಲಿ ಬುಧವಾರ ಸಮುದ್ರ ಪ್ರಕ್ಷುಬ್ಧಗೊಂಡು ದೊಡ್ಡ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸಿವೆ. ಆ ಪ್ರದೇಶದ ದಂಡೆಯಲ್ಲಿ ಬಲೆಗಳನ್ನು ತುಂಬಿಸಿ ನಿಲ್ಲಿಸಿದ್ದ ಎಂಜಿನ್ ಅಳವಡಿಸಿದ ಸುಮಾರು 20 ಸಾಂಪ್ರದಾಯಿಕ ದೋಣಿಗಳು ಅಪಾಯಕ್ಕೆ ಸಿಲುಕಿದವು.

‘ಅಲೆಗಳ ತೀವ್ರತೆಯ ಕಾರಣ ಕೆಲವೆಡೆ ಅವು ರಸ್ತೆಗೆ ಅಪ್ಪಳಿಸುತ್ತಿವೆ. ಸಮುದ್ರ ಶಾಂತವಾಗುವ ತನಕ ದೋಣಿಗಳನ್ನು ಸಮುದ್ರಕ್ಕೆ ಇಳಿಸಲಾಗುವುದಿಲ್ಲ’ ಎಂದು ಮೀನುಗಾರರ ಸೇವಾ ಸಮಿತಿಯ ಅಧ್ಯಕ್ಷ ಮೋಹನ ಖಾರ್ವಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ ಪಟಗಾರ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !