ಸಚಿವ ಶಿವಕುಮಾರ್ ನಿವಾಸದಲ್ಲಿ 'ಉಪಾಹಾರ ರಾಜಕೀಯ'

7

ಸಚಿವ ಶಿವಕುಮಾರ್ ನಿವಾಸದಲ್ಲಿ 'ಉಪಾಹಾರ ರಾಜಕೀಯ'

Published:
Updated:

ಬೆಂಗಳೂರು: ಕಾಂಗ್ರೆಸ್ ಸಚಿವರಿಗೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಗುರುವಾರ ಬೆಳಿಗ್ಗೆ ಆಯೋಜಿಸಿದ ಉಪಾಹಾರ ಕೂಟದಲ್ಲಿ ರಮೇಶ ಜಾರಕಿಹೊಳಿ ಮತ್ತು ರಾಜಶೇಖರ ಪಾಟೀಲ ಹೊರತುಪಡಿಸಿ ಉಳಿದ ಎಲ್ಲರೂ ಭಾಗವಹಿಸಿದರು.

ಮುಳಬಾಗಿಲು ದೋಸೆ, ಇಡ್ಲಿ, ವಡೆ, ಚೌಚೌ ಬಾತ್, ಮಸಾಲೆ ದೋಸೆ, ಸೆಟ್, ಪುರಿ, ಸಾಗು, ನೀರ್ ದೋಸೆ, ಪೊಂಗಲ್ ಉಪಾಹಾರದ ವಿಶೇಷ ಆಗಿತ್ತು.

ಕ್ರೆಸೆಂಟ್ ರಸ್ತೆಯಲ್ಲಿರುವ ಶಿವಕುಮಾರ್ ಅವರ ಸರ್ಕಾರಿ ನಿವಾಸದಲ್ಲಿ ಉಪಾಹಾರ ನೆಪದಲ್ಲಿ ಸಚಿವರೆಲ್ಲ ಸೇರಿ ರಾಜಕೀಯ ಚರ್ಚಿಸಿದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಕೂಡಾ ಭಾಗವಹಿಸಿದರು.

ತಮ್ಮ ನಿವಾಸ ಕಾವೇರಿಯಲ್ಲೇ ಇದ್ದ ಕಾಂಗ್ರೆಸ್ ಶಾಸಕಾಂಗದ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಆಹ್ವಾನ ಇರಲಿಲ್ಲ. ವಿದೇಶ ಪ್ರವಾಸ ಮುಗಿಸಿ ಬೆಳಿಗ್ಗೆ ಬೆಂಗಳೂರಿಗೆ ಮರಳಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರಿಗೂ ಆಹ್ವಾನ ಇರಲಿಲ್ಲ.

ಆಹ್ವಾನ ಇದ್ದರೂ 'ಮುಂಬೈನಲ್ಲಿದ್ದೇನೆ' ಎಂದು ಹೇಳಿ ಸಚಿವ ರಮೇಶ ಜಾರಕಿಹೊಳಿ ದೂರ ಉಳಿದರು. ವಿದೇಶಕ್ಕೆ ತೆರಳಿರುವ ಸಚಿವ ರಾಜಶೇಖರ ಪಾಟೀಲ ಕೂಡಾ ಗೈರಾದರು.

ಉಪಾಹಾರ ಕೂಟಕ್ಕೆ ಸಿದ್ದರಾಮಯ್ಯ ಗೈರು ಬಗ್ಗೆ ಪ್ರತಿಕ್ರಿಯಿಸಿದ ಶಿವಕುಮಾರ್, 'ಸಿದ್ದರಾಮಯ್ಯ ಅವರನ್ನು ಯಾವಾಗ ಕರೆಯಬೇಕೊ ಆಗ ಕರೆಯುತ್ತೇವೆ. ಎಲ್ಲದಕ್ಕೂ ಕರೆಯಲು ಸಾಧ್ಯವಿಲ್ಲ. ಮುಂದೆ ಸಚಿವರು ಆರ್.ವಿ. ದೇಶಪಾಂಡೆ ಮನೆಯಲ್ಲಿ ಸಭೆ ಸೇರುತ್ತೇವೆ' ಎಂದರು.

'ಸಿದ್ದರಾಮಯ್ಯ ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಅವರ ಮನೆಯಲ್ಲಿ ಕುಳಿತೇ ಉಪಾಹಾರ ‌ಕೂಟದ ಆಯೋಜನೆ ನಿರ್ಧಾರ ಮಾಡಿದ್ದೇವೆ. ಸಿದ್ದರಾಮಯ್ಯ ಸಲಹೆ, ಸೂಚನೆಯಂತೆ ಸಭೆ ಮಾಡಿದ್ದೇವೆ' ಎಂದರು.

'ದಿನೇಶ್ ಗುಂಡೂರಾವ್ ಊರಲ್ಲಿ ಇಲ್ಲ. ವಿದೇಶಕ್ಕೆ ಹೋಗಿದ್ದಾರೆ. ಹೀಗಾಗಿ ಅವರಿಗೆ ಆಹ್ವಾನ ನೀಡಿಲ್ಲ' ಎಂದೂ ಶಿವಕುಮಾರ್ ತಿಳಿಸಿದರು.

ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಅವರಿಗೆ ಬಿಟ್ಟಿದ್ದು. ಖಾತೆ ಬದಲಾವಣೆ ಎಂಬುದು ಸುಳ್ಳು. ಉಪ ಚುನಾವಣೆಗೆ ಅಭ್ಯರ್ಥಿಯನ್ನು ಹೈಕಮಾಂಡ್ ಆಯ್ಕೆ ಮಾಡುತ್ತದೆ ಎಂದರು.

ಐ.ಟಿ, ಇ.ಡಿ ಟಾರ್ಗೆಟ್ ಮಾಡುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಅದಕ್ಕೆ ಸಮಯ ಬಂದಾಗ ಉತ್ತರ ಕೊಡುತ್ತೇನೆ' ಎಂದರು.

ಉಪಾಹಾರ ಕೂಟದ ಬಳಿಕ ಸಚಿವ‌ ಯು.ಟಿ ಖಾದರ್ ಮಾತನಾಡಿ, 'ಶಿವಕುಮಾರ್ ನನ್ನ ಆತ್ಮೀಯರು. ಅವರ ಮನೆಯಲ್ಲಿ ಎಲ್ಲರೂ ಉಪಾಹಾರ ಸೇವಿಸಿದೆವು. ಲೋಕಸಭಾ ಚುನಾವಣೆ, ಉಪಚುನಾವಣೆ ಕುರಿತು ಚರ್ಚೆ ನಡೆಯಿತು' ಎಂದರು.

'ಸಂಪುಟ ಸಭೆ ಇದ್ದಾಗ ಎಲ್ಲ ಸಚಿವರು ಇರುತ್ತಾರೆ ಎಂಬ ಕಾರಣಕ್ಕೆ ಸಿದ್ಧತಾ ಸಭೆ ನಡೆಯಿತು' ಎಂದೂ ಖಾದರ್ ಸಮರ್ಥನೆ ನೀಡಿದರು.

ಉಪಾಹಾರ ಕೂಟಕ್ಕೆ ಬೆಳ್ಳಿ ತಟ್ಟೆ!
ಉಪಾಹಾರ ಕೂಟದಲ್ಲಿ ಕಾಂಗ್ರೆಸ್ ಸಚಿವರಿಗೆ ಬೆಳ್ಳಿ ತಟ್ಟೆಯಲ್ಲಿ ತಿಂಡಿ ವ್ಯವಸ್ಥೆ ಮಾಡಲಾಗಿತ್ತು.

ಬರಹ ಇಷ್ಟವಾಯಿತೆ?

 • 8

  Happy
 • 3

  Amused
 • 2

  Sad
 • 1

  Frustrated
 • 6

  Angry

Comments:

0 comments

Write the first review for this !