ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: 10 ದಿನಗಳಲ್ಲಿ 26 ಅಗ್ನಿ ಅವಘಡ

ರೈತರ ಮೇವಿನ ಬಣವೆ, ಕಾಳಿನ ರಾಶಿ ಬೆಂಕಿಗೆ ಆಹುತಿ
Last Updated 11 ಡಿಸೆಂಬರ್ 2018, 19:59 IST
ಅಕ್ಷರ ಗಾತ್ರ

ದಾವಣಗೆರೆ: ಚಳಿಯ ಜೊತೆಗೆ ಬಿಸಿಲಿನ ಕಾವು ದಿನೇ ದಿನೇ ಹೆಚ್ಚುತ್ತಿದ್ದು, ಜಿಲ್ಲೆಯಲ್ಲಿ ಕಳೆದ ಹತ್ತು ದಿನಗಳಲ್ಲಿ ಒಟ್ಟು 26 ಅಗ್ನಿ ಅವಘಡಗಳು ನಡೆದಿವೆ. ಅವುಗಳ ಪೈಕಿ 20 ಪ್ರಕರಣಗಳು ರೈತರಿಗೆ ಸಂಬಂಧಿಸಿದ್ದು, ಮೇವಿನ ಬಣವೆ, ಕಾಳಿನ ರಾಶಿ, ತೆನೆ ಕಟಾವು ಮಾಡಿದ ಜೋಳದ ದಂಟುಗಳು ಬೆಂಕಿಗೆ ಆಹುತಿಯಾಗಿವೆ.

ಸೋಮವಾರ ತಡರಾತ್ರಿ ಜಗಳೂರು ತಾಲ್ಲೂಕಿನ ಗಡಿಮಾಕುಂಟೆ ಗ್ರಾಮದಲ್ಲಿ 10 ರೈತರಿಗೆ ಸೇರಿದ 30ಕ್ಕೂ ಹೆಚ್ಚು ಮೆಕ್ಕೆ
ಜೋಳ, ಶೇಂಗಾ ಬಣವೆಗಳು ಸುಟ್ಟುಹೋಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಗೋಪನಗೊಂಡನಹಳ್ಳಿಯಲ್ಲಿ
ಮಂಗಳವಾರ ಟ್ರ್ಯಾಕ್ಟರ್‌ನಲ್ಲಿ ಸಾಗಿಸುತ್ತಿದ್ದ ಹುಲ್ಲಿಗೂ ಬೆಂಕಿ ಹತ್ತಿಕೊಂಡಿತ್ತು.

ನವೆಂಬರ್‌ ಒಂದರಿಂದ ಡಿಸೆಂಬರ್‌ 11ರವರೆಗೆ ಜಿಲ್ಲೆಯಲ್ಲಿ ಒಟ್ಟು 69 ಅಗ್ನಿ ಅವಘಡಗಳು ದಾಖಲಾಗಿವೆ. ಇವುಗಳ ಪೈಕಿ 45 ನೇರವಾಗಿ ರೈತರ ಬೆಳೆಗೆ ಸಂಬಂಧಿಸಿದ್ದಾಗಿವೆ. ಮುಂಗಾರು ಹಂಗಾಮಿನಲ್ಲಿ ರೈತರು ಬೆಳೆ ಕಟಾವು ಮಾಡಿ ಹಾಕಿದ್ದ ಬಣವೆಗಳಿಗೆ ಮೇಲಿಂದ ಮೇಲೆ ಬೆಂಕಿ ಬೀಳತೊಡಗಿವೆ. ಇದು ‘ಬರ’ದಿಂದ ತತ್ತರಿಸಿದ್ದ ರೈತರಿಗೆ ‘ಗಾಯದ ಮೇಲೆ ಬರೆ’ ಎಳೆದಂತಾಗಿದೆ.

ದಾವಣಗೆರೆ, ಜಗಳೂರು, ಹರಪನಹಳ್ಳಿ ತಾಲ್ಲೂಕಿನಲ್ಲಿ ರೈತರ ಉತ್ಪನ್ನಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಬೆಂಕಿ ಬೀಳುತ್ತಿದೆ. ಅಪಾರ ಪ್ರಮಾಣದ ಮೇವು ಸುಟ್ಟು ಕರಕಲಾಗುತ್ತಿರುವುದರಿಂದ ಜಾನುವಾರುಗಳಿಗೆ ಬೇಸಿಗೆ ವೇಳೆ ಅಗತ್ಯವಿರುವ ಮೇವನ್ನು ಸಂರಕ್ಷಿಸಿ ಇಡುವ ಸವಾಲು ಸಹ ಎದುರಾಗಿದೆ.

ಕಾರಣಗಳೇನು?:

‘ರೈತರು ಹುಲ್ಲನ್ನು ಸರಿಯಾಗಿ ಒಣಗಿಸದೇ ಬಣವೆ ಹಾಕಿದರೆ, ಒಳಗೆ ಉಷ್ಣಾಂಶ ಹೆಚ್ಚಿ ಬೆಂಕಿ ಹತ್ತಿಕೊಳ್ಳುವ ಸಾಧ್ಯತೆ ಇದೆ. ಹೈಟೆನ್ಷನ್‌ ವಿದ್ಯುತ್‌ ತಂತಿಯ ಕೆಳಗೆ ಬಣವೆ ಅಥವಾ ಮೇವನ್ನು ಒಣಗಿಸಿಟ್ಟಾಗ ಕಿಡಿ ಬಿದ್ದು ಬೆಂಕಿ ಕಾಣಿಸಿಕೊಳ್ಳಬಹುದು. ರೈತರು ರಸ್ತೆ ಬದಿಯಲ್ಲಿ ಬಣವೆ ಹಾಕುತ್ತಿರುವುದರಿಂದ ದಾರಿಹೋಕರು ಎಸೆಯುವ ಸೇದಿ ಬಿಟ್ಟ ಬೀಡಿ–ಸಿಗರೇಟ್‌ನಿಂದಲೂ ಅವಘಡ ಸಂಭವಿಸಬಹುದು. ವಾಹನಗಳ ಸೈಲೆನ್ಸರ್‌ ಪೈಪ್‌ನಿಂದ ಹೊರಬಿದ್ದ ಕಿಡಿಯೂ ಬಣವೆಗೆ ತಾಗುವ ಸಾಧ್ಯತೆ ಇದೆ. ಮಿತಿ ಮೀರಿ ಹುಲ್ಲನ್ನು ಟ್ರ್ಯಾಕ್ಟರ್‌ನಲ್ಲಿ ಹಾಕಿಕೊಂಡು ಹೋಗುವುದರಿಂದ ವಿದ್ಯುತ್‌ ತಂತಿ ತಾಗಿ ಬೆಂಕಿ ಬೀಳುತ್ತದೆ’ ಎಂದು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಪಿ.ಎಸ್‌. ಜಯರಾಮಯ್ಯ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

**

ಮುನ್ನೆಚ್ಚರಿಕೆ ಕ್ರಮ ವಹಿಸಿ

‘ಉದ್ದಕ್ಕೆ ಬಣವೆ ಹಾಕುವುದರಿಂದ ಅವಘಡ ನಡೆದರೆ ಎಲ್ಲವೂ ಒಂದೇ ಬಾರಿ ಸುಟ್ಟು ಭಸ್ಮವಾಗುತ್ತದೆ. ಹೀಗಾಗಿ ಕನಿಷ್ಠ 5 ಅಡಿಗಳ ಅಂತರ ಕಾಯ್ದುಕೊಂಡು ಪುಟ್ಟ ಪುಟ್ಟ ಬಣವೆಗಳನ್ನು ಹಾಕಬೇಕು. ಮೇವನ್ನು ಚೆನ್ನಾಗಿ ಒಣಗಿಸಿಯೇ ಬಣವೆ ಮಾಡಬೇಕು. ಮನೆಯಿಂದ ಕನಿಷ್ಠ 15 ಅಡಿ ದೂರದಲ್ಲಿ ಬಣವೆ ಇರಬೇಕು. ಬಣವೆ ಹಾಕಿರುವ ಸ್ಥಳಕ್ಕೆ ತೆರಳುವ ರಸ್ತೆಯನ್ನು ಮುಕ್ತಗೊಳಿಸಿರಬೇಕು’ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮಾ ರೈತರಿಗೆ ಸಲಹೆ ನೀಡಿದರು.

ರಾತ್ರಿ ವೇಳೆ ಕೊಟ್ಟಿಗೆಯಲ್ಲಿ ಸೊಳ್ಳೆ ಬತ್ತಿಗಳನ್ನು ಹಚ್ಚಿಡಬಾರದು. ತಿಪ್ಪೆಗೆ ಬೂದಿ–ಕೆಂಡ ಹಾಕಬಾರದು ಎಂದು ಹೇಳಿದರು.

ಅಗ್ನಿ ಅವಘಡ ನಡೆದ ತಕ್ಷಣ 101ಗೆ ಕರೆ ಮಾಡಿ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರೆ ಹೆಚ್ಚಿನ ಹಾನಿ ತಪ್ಪಿಸಬಹುದು
ಬಸವಪ್ರಭು ಶರ್ಮ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT