ಮಂಗಳವಾರ, ಮಾರ್ಚ್ 9, 2021
31 °C
ಪಾಂಡಂಡ ಕುಟ್ಟಪ್ಪ ‘ಹಾಕಿ ಭೀಷ್ಮ’ ಬಿರುದು ನೀಡಿ ಗೌರವ

ವಿಶಾಲ ಚಿಂತನೆಯಿಂದ ಉದಯಿಸಿದ ಕ್ರೀಡಾ ಬೆಳಕು

ಸಿ.ಎಸ್‌.ಸುರೇಶ್‌ Updated:

ಅಕ್ಷರ ಗಾತ್ರ : | |

Prajavani

ನಾಪೋಕ್ಲು: 1998, 1999ರಲ್ಲಿ ಹಾಗೂ 2002ರಲ್ಲಿ ನಡೆದ ಕೊಡವ ಹಾಕಿ ಕಪ್ ಟೂರ್ನಿಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಕುಲ್ಲೇಟಿರ ಕುಟುಂಬವು 2018ರಲ್ಲಿ ನಾಪೋಕ್ಲುವಿನಲ್ಲಿ ಕುಲ್ಲೇಟಿರ ಕಪ್ ಹಾಕಿ ಆಯೋಜಿಸಿತ್ತು. ಈ ಟೂರ್ನಿಯಲ್ಲಿ 334 ಕುಟುಂಬಗಳು ಪಾಲ್ಗೊಂಡಿದ್ದವು. ಕುಲ್ಲೇಟಿರ ಐನ್‍ಮನೆಯಲ್ಲಿ ನಡೆದ ಸಮಾರಂಭದಲ್ಲಿ ಕೊಡವ ಹಾಕಿ ಟೂರ್ನಿಯ ಜನಕ ಪಾಂಡಂಡ ಕುಟ್ಟಪ್ಪ ಅವರಿಗೆ ‘ಹಾಕಿ ಭೀಷ್ಮ’ ಎಂಬ ಬಿರುದು ನೀಡಿ ಗೌರವಿಸಲಾಗಿತ್ತು ಎಂದು ಕುಲ್ಲೇಟಿರ ಕಪ್ ಹಾಕಿ ಟೂರ್ನಿಯ ಸಂಚಾಲಕ ಕುಲ್ಲೇಟಿರ ಅರುಣ್‍ಬೇಬ ಸ್ಮರಿಸಿದರು.

ಪಾಂಡಂಡ ಕುಟ್ಟಪ್ಪ ಅವರ ದೂರದೃಷ್ಟಿ ಹಾಗೂ ವಿಶಾಲ ಚಿಂತನೆಯಿಂದ ಕೊಡವ ಸಮುದಾಯ ಒಂದೇ ವೇದಿಕೆಯಲ್ಲಿ ಒಗ್ಗೂಡುವಂತಾಯಿತು. ನಾಲ್ಕುನಾಡಿನ ಹಲವು ಯುವಕರು ಹಾಕಿಯಿಂದ ಉನ್ನತ ಸ್ಥಾನ ಪಡೆದುಕೊಂಡಿದ್ದಾರೆ. ನೂರಾರು ಮಕ್ಕಳಿಗೆ ಕೆಲಸ ಸಿಗುವಂತಾಯಿತು. ಈ ನಿಟ್ಟಿನಲ್ಲಿ ಪಾಂಡಂಡ ಕುಟ್ಟಪ್ಪ ಪ್ರಾತಃಸ್ಮರಣೀಯರು ಎಂದು ಅವರು ಹೇಳಿದರು.

ರಾಜ್ಯ ತಂಡಕ್ಕೆ ಹೋಗಲು ವೇದಿಕೆ: ಪಾಂಡಂಡ ಎಂ. ಕುಟ್ಟಪ್ಪ ಅವರ ಅಭಿಲಾಷೆಯಂತೆ ಹಾಕಿ ಟೂರ್ನಿ ಉತ್ಸವದಂತೆ ನಡೆಯುತ್ತಿತ್ತು. ಬಿದ್ದಾಟಂಡ ಹಾಕಿ ನಮ್ಮೆಯಲ್ಲಿ 306 ತಂಡಗಳು ಪಾಲ್ಗೊಂಡಿದ್ದವು. ರಾಷ್ಟ್ರ, ರಾಜ್ಯ ತಂಡಕ್ಕೆ ಆಯ್ಕೆಯಾಗಲು ಹಲವರಿಗೆ ಬಿದ್ದಾಟಂಡ ಹಾಕಿ ನಮ್ಮೆ ವೇದಿಕೆಯಾಯಿತು. 2017ರ ಏ.17ರಂದು ನಾಪೋಕ್ಲುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆರಂಭಗೊಂಡ 21ನೇ ಕೊಡವ ಕುಟುಂಬಗಳ ಹಾಕಿ ಉತ್ಸವದಲ್ಲಿ ಕೌಟುಂಬಿಕ ಹಾಕಿ ಸಂಸ್ಥಾಪಕ ಪಾಂಡಂಡ ಕುಟ್ಟಪ್ಪ ಪಾಲ್ಗೊಂಡಿದ್ದರು ಎಂದು ನಾಪೋಕ್ಲು ಬಿದ್ದಾಟಂಡ ರೋಜಿಚಿಣ್ಣಪ್ಪ ಹೇಳಿದರು.

ಇಂದು ಪ್ರತಿಯೊಂದು ಕುಟುಂಬದಲ್ಲೂ ಕನಿಷ್ಠ ಐದು ಮಂದಿ ಹಾಕಿ ಪಟುಗಳಿದ್ದಾರೆ. ಹೆಣ್ಣುಮಕ್ಕಳು ಸಹ ಹಾಕಿಯಲ್ಲಿ ಸೈ ಎನಿಸಿಕೊಂಡಿದ್ದಾರೆ. ಕೊಡವ ಹಾಕಿ ಕೌಟುಂಬಿಕ ಟೂರ್ನಿಯು ಹಲವರು ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದೆ. ನಾಲ್ಕುನಾಡಿನ ಆಟದ ಮೈದಾನಗಳು ಸೇರಿದಂತೆ ಜಿಲ್ಲೆಯ ಹಲವು ಆಟದ ಮೈದಾನಗಳು ಅಭಿವೃದ್ಧಿಯಾಗಿವೆ. ಕೊಡವ ಯುವಕ, ಯುವತಿಯರು ದೈಹಿಕವಾಗಿಯೂ ಬೌದ್ಧಿಕವಾಗಿಯೂ ಪ್ರಗತಿ ಸಾಧಿಸಲು ಹಾಕಿ ಟೂರ್ನಿ ಸಹಕಾರಿಯಾಗಿದೆ ಎಂದು ಹೇಳಿದರು.

‘ನನ್ನ ಮಗ ಗಿನ್ನೆಸ್‍ ಪೊನ್ನಣ್ಣ ಬೆಂಗಳೂರಿನ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ಪಡೆಯಲೂ ಹಾಕಿ ಕ್ರೀಡೆ ಸಹಕಾರಿಯಾಗಿದೆ. ಹಲವು ಯುವಕರು ಶೈಕ್ಷಣಿಕವಾಗಿ ಔದ್ಯೋಗಿಕವಾಗಿ ಉತ್ತಮ ಸ್ಥಾನವನ್ನು ಅಲಂಕರಿಸಿದ್ದಾರೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು