ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಡಿಗೊ ವಿಮಾನದ ಟೈರ್‌ ಸ್ಫೋಟ, ಪ್ರಯಾಣಿಕರು ಪಾರು

Last Updated 29 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಹೈದರಾಬಾದ್‌: ಇಂಡಿಗೊ ವಿಮಾನಯಾನ ಸಂಸ್ಥೆಯ ವಿಮಾನದ ಟೈರ್‌ ಬುಧವಾರ ರಾತ್ರಿ ಸ್ಫೋಟಿಸಿದ್ದು, ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷದ ಶಾಸಕಿ ರೋಜಾ ಸೇರಿದಂತೆ ಎಲ್ಲ 72 ಪ್ರಯಾಣಿಕರೂ ಅಪಾಯದಿಂದ ಪಾರಾಗಿದ್ದಾರೆ.

ತಿರುಪತಿಯಿಂದ ರಾತ್ರಿ 10.30ರ ಸುಮಾರಿಗೆ ಇಲ್ಲಿಗೆ ಬಂದ ವಿಮಾನ, ಲ್ಯಾಂಡ್‌ ಆಗುವ ವೇಳೆ ಅದರ ಟೈರ್‌ ಸ್ಫೋಟಿಸಿತು. ಇದರ ಪರಿಣಾಮ ಇಲ್ಲಿನ ರಾಜೀವ್‌ಗಾಂಧಿ ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ (ಆರ್‌ಜಿಐಎ) ಬರುವ ಮತ್ತು ಇಲ್ಲಿಂದ ಹೊರಡುವ ವಿಮಾನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿತ್ತು. ಕೆಲವು ವಿಮಾನಗಳನ್ನು ಬೇರೆ ನಿಲ್ದಾಣಗಳತ್ತ ತಿರುಗಿಸಲಾಯಿತು.

ಟೈರ್‌ ಸ್ಫೋಟಿಸುತ್ತಿದ್ದಂತೆಯೇ ವಿಮಾನದಲ್ಲಿದ್ದ 72 ಪ್ರಯಾಣಿಕರು ಮತ್ತು ಐವರು ಸಿಬ್ಬಂದಿಯನ್ನು ಯಾವುದೇ ಅಪಾಯವಿಲ್ಲದೆ ಕೆಳಗೆ ಇಳಿಸಲಾಯಿತು. ನಂತರ ರನ್‌ವೇ ಪರಿಶೀಲಿಸಿದ ಅಧಿಕಾರಿಗಳು, ಇತರ ವಿಮಾನಗಳ ಸಂಚಾರಕ್ಕೆ ಅನುಮತಿ ನೀಡಿದರು.

‘ಸ್ಫೋಟದಿಂದ ಬೆಂಕಿ ಹೊತ್ತಿಕೊಂಡಿರಲಿಲ್ಲ ಮತ್ತು ರನ್‌ವೇಗೆ ಯಾವುದೇ ಹಾನಿಯಾಗಿರಲಿಲ್ಲ ಎಂಬುದು ಪರಿಶೀಲನೆಯಿಂದ ಖಚಿತವಾಯಿತು. ಹಾಗಾಗಿ ವಿಮಾನ ಸಂಚಾರಕ್ಕೆ ಅನುಮತಿ ನೀಡಲಾಯಿತು ಎಂದು ಆರ್‌ಜಿಐಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಪರಿಶೀಲನೆ ಮುಗಿಯುವವರೆಗೂ ಯಾರಿಗೂ ಕೆಳಗೆ ಇಳಿಯಲು ಬಿಡಲಿಲ್ಲ. ಹಾಗಾಗಿ ಒಂದು ಗಂಟೆಯವರೆಗೆ ಎಲ್ಲರೂ ವಿಮಾನದೊಳಗೆ ಇರಬೇಕಾಯಿತು. ಇದರಿಂದ ವಿಮಾನದ ಸಿಬ್ಬಂದಿ ಮತ್ತು ಪ್ರಯಾಣಿಕರ ನಡುವೆ ಜಗಳವಾಯಿತು. ತಿರುಮಲ ದೇವರ ಆಶೀರ್ವಾದದಿಂದ ಎಲ್ಲರೂ ಸುರಕ್ಷಿತವಾಗಿ ಇಳಿದೆವು’ ಎಂದು ರೋಜಾ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು ವರದಿ: ಹೈದರಾಬಾದ್‌ ವಿಮಾನ ನಿಲ್ದಾಣದಲ್ಲಿ ಇಂಡಿಗೊ ವಿಮಾನದ ಟೈರ್‌ ಸ್ಪೋಟಗೊಂಡು ರನ್‌ವೇ ಬಂದ್‌ ಆಗಿದ್ದರಿಂದ, ಅಲ್ಲಿ ಇಳಿಯಬೇಕಿದ್ದ 20 ವಿಮಾನಗಳು ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದವು.

ಬುಧವಾರ ಬೆಳಿಗ್ಗೆ 10.28 ಗಂಟೆಯಿಂದ ಮಧ್ಯಾಹ್ನ 2.22ರ ಅವಧಿಯಲ್ಲಿ ನಗರದ ನಿಲ್ದಾಣದಿಂದ ಹೈದರಾಬಾದ್‌ಗೆ ಹೊರಡಬೇಕಿದ್ದ ವಿಮಾನಗಳು, ಹಾರಾಟ ನಡೆಸಲಿಲ್ಲ. ಇದರಿಂದಾಗಿ ಪ್ರಯಾಣಿಕರು ನಿಲ್ದಾಣದಲ್ಲೇ ಕಾಯುವಂತಾಯಿತು.

ನಿರ್ದಿಷ್ಟ ಸಂಖ್ಯೆಗಿಂತ ಹೆಚ್ಚಿನ ವಿಮಾನಗಳು ನಿಲ್ದಾಣದಲ್ಲೇ ನಿಂತಿದ್ದರಿಂದ, ಬೇರೆ ನಿಲ್ದಾಣದಿಂದ ನಗರಕ್ಕೆ ಬರಬೇಕಿದ್ದ ವಿಮಾನಗಳ ಹಾರಾಟವೂ ತಡವಾಯಿತು. ಜತೆಗೆ, ಕೆಲ ವಿಮಾನಗಳನ್ನು ಚೆನ್ನೈ ಹಾಗೂ ಮುಂಬೈ ನಿಲ್ದಾಣಕ್ಕೆ ಮಾರ್ಗ ಬದಲಾವಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT