ಅತ್ಯಾಚಾರದ ವಿರುದ್ಧ ‘ಘನತೆಯ ನಡಿಗೆ’

ಸೋಮವಾರ, ಮಾರ್ಚ್ 25, 2019
33 °C

ಅತ್ಯಾಚಾರದ ವಿರುದ್ಧ ‘ಘನತೆಯ ನಡಿಗೆ’

Published:
Updated:
Prajavani

‘ಅತ್ಯಾಚಾರಕ್ಕೊಳಗಾದವರು ಅಪರಾಧಿಗಳಲ್ಲ. ಅಪರಾಧಿ ಪ್ರಜ್ಞೆಯಿಂದ ಹೊರಬರೋಣ. ಎಲ್ಲರೂ ಒಟ್ಟಾಗಿ ಸೇರಿ ಲೈಂಗಿಕ ದೌರ್ಜನ್ಯದ ವಿರುದ್ಧ ಧ್ವನಿ ಎತ್ತೋಣ. ಮಹಿಳೆಯರು ಮತ್ತು ಮಕ್ಕಳ ಮೇಲೆ ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯ ನಿಲ್ಲಲೇಬೇಕು.’ಅತ್ಯಾಚಾರ, ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರೆಲ್ಲಾ ಸೇರಿ ನಡೆಸುತ್ತಿರುವ ‘ಘನತೆಯ ನಡಿಗೆ’ಯ (Dignity March) ಘೋಷಣೆಗಳಿವು.
ಅತ್ಯಾಚಾರಕ್ಕೊಳಗಾದವರು ಮಾನಸಿಕವಾಗಿ, ದೈಹಿಕವಾಗಿ ಹಾಗೂ ಸಾಮಾಜಿಕವಾಗಿ ಕುಗ್ಗಿರುತ್ತಾರೆ. ಅಂತಹವರಿಗೆ ಧೈರ್ಯ ತುಂಬುತ್ತಾ, ತಮಗಾದ ನೋವಿನ ಕಥೆಯನ್ನು ಹೇಳಿಕೊಳ್ಳುತ್ತಾ, ಆತ್ಮವಿಶ್ವಾಸದ ಮಾತುಗಳನ್ನಾಡುತ್ತಾ, ನಮಗಾದ ದೌರ್ಜನ್ಯ ಬೇರಾರಿಗೂ ಆಗದಿರಲಿ. ಅತ್ಯಾಚಾರದ ವಿರುದ್ಧ ಒಗ್ಗಟ್ಟಾಗಿ ಹೋರಾಡೋಣ ಎಂದು ಸಾರಿ ಹೇಳುತ್ತಾ ಭಾರತದ 24 ರಾಜ್ಯಗಳ 200 ಜಿಲ್ಲೆಗಳಿಗೆ ಪಯಣಿಸಿ (ಸುಮಾರು 11 ಸಾವಿರ ಕಿ.ಮೀ) ಸಂತ್ರಸ್ತರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ‘ರಾಷ್ಟ್ರೀಯ ಗರೀಮ್‌ ಅಭಿಯಾನ’.

ಸರ್ಕಾರಗಳು ಸಂತ್ರಸ್ತರಿಗೆ ಅಗತ್ಯವಿರುವ ವೈದ್ಯಕೀಯ, ಆರ್ಥಿಕ ಹಾಗೂ ಕಾನೂನು ನೆರವು ನೀಡಬೇಕು. ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟುವಲ್ಲಿ ಕಾನೂನುಗಳನ್ನು ಸರಿಯಾಗಿ ಜಾರಿ ಮಾಡಬೇಕು ಎಂಬುದು ಅವರ ಹಕ್ಕೊತ್ತಾಯ.

‘ಅತ್ಯಾಚಾರಕ್ಕೆ ಒಳಗಾದವರು ಆ ಘಟನೆಯನ್ನು ಹೇಳಿಕೊಳ್ಳಲು ಹಿಂಜರಿಯುವುದು ಸಹಜ. ಶೋಷಣೆಗೆ ಒಳಗಾದ ಮಹಿಳೆ ನಂತರದಲ್ಲಿ ಅನುಭವಿಸುವ ಸಮಸ್ಯೆಗಳು ಅಪಾರ. ವೈದ್ಯಕೀಯ ಚಿಕಿತ್ಸೆ, ಕಾನೂನು ಹೋರಾಟಗಳು ಅವಳನ್ನು ಮತ್ತಷ್ಟು ಒತ್ತಡಕ್ಕೆ, ಖಿನ್ನತೆಗೆ ಒಳಗಾಗಿಸುತ್ತವೆ. ಆದರೆ ನಾವು ಅವರೊಟ್ಟಿಗೆ ಜೊತೆಯಾಗಿ ನಿಂತರೆ ಮಾತನಾಡುತ್ತಾರೆ. ಇದರಿಂದ ಅವರ ಮಾನಸಿಕ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಹಾಗಾಗಿ ನಾವು ನಮಗಾದ ದೌರ್ಜನ್ಯದ ಬಗ್ಗೆ ಮುಕ್ತವಾಗಿ ಮಾತನಾಡಬೇಕು ಎಂದು ನಿರ್ಧರಿಸಿ, ಅತ್ಯಾಚಾರ ಸಂತ್ರಸ್ತೆಯರೆಲ್ಲಾ ಸೇರಿ ‘ರಾಷ್ಟ್ರೀಯ ಗರೀಮ್‌ ಅಭಿಯಾನ’ ಸಂಘಟನೆ ಕಟ್ಟಿಕೊಂಡೆವು. ಅತ್ಯಾಚಾರ ಪ್ರಕರಣಗಳ ವಿರುದ್ಧ ಕಾನೂನು, ಹೋರಾಟ ಒಂದೆಡೆಯಾದರೆ ಜನರಲ್ಲಿ ಜಾಗೃತಿ ಮೂಡಿಸಬೇಕಿರುವುದು ಪ್ರಮುಖ ವಿಷಯ. ಹಾಗಾಗಿ ದೇಶದಾದ್ಯಂತ ಜನರಿಗೆ ಹಾಗೂ ಅತ್ಯಾಚಾರ ಸಂತ್ರಸ್ತರಿಗೆ ಅರಿವು ಮೂಡಿಸಬೇಕು ಎಂದು ಕೊಂಡು ಈ ಸುದೀರ್ಘ ನಡಿಗೆ ಆರಂಭಿಸಿದೆವು’ ಎನ್ನುತ್ತಾರೆ ಈ ಅಭಿಯಾನದ ಭಾಗವಾಗಿರುವ ಆಶಿಫ್‌ ಜಾನ್‌.

‌ಡಿಸೆಂಬರ್‌ 20 ರಂದು ಮುಂಬೈನಲ್ಲಿ ಆರಂಭವಾದ ಈ ನಡಿಗೆಯು ಗೋವಾ, ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ, ಪಶ್ಚಿಮ ಬಂಗಾಳ, ಬಿಹಾರ್‌, ಜಾರ್ಖಂಡ್‌, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್‌, ರಾಜಸ್ಥಾನ, ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ, ಚತ್ತೀಸಗಡ ಮೂಲಕ ಫೆಬ್ರುವರಿ 22ರಂದು ದೆಹಲಿಯನ್ನು ತಲುಪಿದೆ. ಅತ್ಯಾಚಾರಕ್ಕೊಳಗಾಗಿ ನ್ಯಾಯಕ್ಕಾಗಿ ಹೋರಾಡಿ, ‘ವಿಶಾಖ ಗೈಡ್‌ಲೈನ್ಸ್‌’ ಕಾನೂನು ಜಾರಿಗೆ ಕಾರಣರಾದ ಭನ್ವಾರಿ ದೇವಿ ಅವರು ಈ ಆಂದೋಲನದ ಭಾಗವಾಗಿದ್ದಾರೆ.

‘ಈ ಸುದೀರ್ಘ ನಡಿಗೆಯ ಮೂಲಕ ದೇಶದ ನಾನಾ ಭಾಗಗಳಲ್ಲಿರುವ ಸಂತ್ರಸ್ಥೆಯರನ್ನು ಒಂದೆಡೆಗೆ ತಂದು, ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟಲು ಸರ್ಕಾರದ ಮೇಲೆ ಒತ್ತಡ ಹೇರುವಂತಹ ಕೆಲಸಗಳಲ್ಲಿ ರಾಷ್ಟ್ರೀಯ ಗರೀಮ್‌ ಅಭಿಯಾನವು ತೊಡಗಿಕೊಳ್ಳಲಿದೆ’ ಎನ್ನುತ್ತಾರೆ ಆಶಿಫ್‌ ಜಾನ್‌.

‘ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ನುಗ್ಗಹಳ್ಳಿ ಗ್ರಾಮದಲ್ಲಿ 7 ವರ್ಷದ ಬಾಲಕಿಯನ್ನು ಪರಿಚಿತನೇ ಅತ್ಯಾಚಾರಗೈದು, ಕೊಲೆ ಮಾಡಿದ ಘಟನೆ 2015ರ ಮಾರ್ಚ್‌ನಲ್ಲಿ ನಡೆದಿತ್ತು. ಆ ಬಾಲಕಿಯ ಪೋಷಕರು ‘ನನ್ನ ಮಗಳ ಸಾವಿಗೆ ನ್ಯಾಯ ಸಿಗಲೇಬೇಕು’ ಎಂದು ಕೋರ್ಟ್‌ ಮೆಟ್ಟಿಲೇರಿದರು. ಮಗಳನ್ನು ಕಳೆದುಕೊಂಡ ನೋವಿನ ಜೊತೆಗೆ ಪದೇ ಪದೇ ಅದೇ ವಿಷಯವನ್ನು ಮಾತನಾಡುತ್ತಿದ್ದುದ್ದು ಅವರನ್ನು ಮಾನಸಿಕವಾಗಿಯೂ ಕುಗ್ಗಿಸಿತ್ತು. ಸುಮಾರು ಮೂರು ವರ್ಷಗಳ ನಂತರ ಕಳೆದ ಮೂರ್ನಾಲ್ಕು ತಿಂಗಳ ಹಿಂದೆಯಷ್ಟೇ ಜಿಲ್ಲಾ ನ್ಯಾಯಾಲಯ ಸಾಕ್ಷ್ಯಾಧಾರಗಳ ಕೊರತೆಯ ನೆಪ ಹೇಳಿ ಅಪರಾಧಿಯನ್ನು ನಿರ್ದೋಷಿ ಎಂದು ಬಿಡುಗಡೆ ಮಾಡಿತು. ಇಂತಹ ಹತ್ತಾರು ಪ್ರಕರಣಗಳನ್ನು ನಾವು ಕಣ್ಣಾರೆ ಕಂಡಿದ್ದೇವೆ. ಅತ್ಯಾಚಾರ ಪ್ರಕರಣಗಳಿಗೆ ನ್ಯಾಯ ಸಿಗಬೇಕೆಂದರೆ ನಾವೆಲ್ಲರೂ ಒಟ್ಟಾಗಬೇಕಿದೆ ಎನ್ನುತ್ತಾರೆ ಅತ್ಯಾಚಾರ ವಿರೋಧಿ ಜನ ಚಳವಳಿಯ ಪೂರ್ಣಿಮಾ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !