7

‘ದಾಸರಿ’ಯವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಗೊಂದಲ

Published:
Updated:

ಬೆಂಗಳೂರು: ‘ದಾಸರಿ’ ಎಂದು ಹೆಸರು ನಮೂದಿಸುವ ದಾಸರ ಜಾತಿಯವರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವ ವಿಚಾರ ವಿಧಾನಸಭೆಯಲ್ಲಿ ಸೋಮವಾರ ಚರ್ಚೆಗೆ ಗ್ರಾಸವಾಯಿತು.

ಗಮನ ಸೆಳೆಯುವ ಸೂಚನೆ ಮಂಡಿಸಿದ್ದ ಬಿಜೆಪಿಯ ಪಿ.ರಾಜೀವ, ‘ಆಂಧ್ರಪ್ರದೇಶದ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ನಮ್ಮ ರಾಜ್ಯದ ಹಳ್ಳಿಗಳಲ್ಲಿ ವಾಸಿಸುವ ದಾಸರ ಸಮುದಾಯದವರು ಪರಿಶಿಷ್ಟ ಜಾತಿಗೆ ಸೇರಿದವರು. ಅನಕ್ಷರಸ್ಥರೇ ಹೆಚ್ಚಾಗಿ ಇರುವ ಈ ಜಾತಿಯವರು ತೆಲುಗು ಪ್ರಭಾವದಿಂದ ಹಾಗೂ ಮಾಹಿತಿ ಕೊರತೆಯಿಂದಾಗಿ ದಾಸರಿ ಎಂದೇ ಹೇಳಿಕೊಳ್ಳುತ್ತಾರೆ. ಇತ್ತೀಚೆಗೆ ತಾಲ್ಲೂಕು ಕಚೇರಿಗಳಲ್ಲಿ ಅವರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಲು ಅಧಿಕಾರಿಗಳು ತಕರಾರು ತೆಗೆಯುತ್ತಿದ್ದಾರೆ. ಅವರಿಗೂ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಲು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಗೋವಿಂದ ಕಾರಜೋಳ, ‘ಅಸ್ಪೃಶ್ಯರು ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ ಪಡೆಯಲು ಅರ್ಹರು. ಕಾಡಿ ಬೇಡಿ ಪರಿಶಿಷ್ಟ ಜಾತಿ ಸ್ಥಾನ ಪಡೆಯುವ ಪ್ರಯತ್ನ ಇತ್ತೀಚೆಗೆ ನಡೆಯುತ್ತಿದೆ. ಇದರಿಂದ ಅರ್ಹರಿಗೆ ಅನ್ಯಾಯವಾಗುತ್ತದೆ’ ಎಂದರು.

ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ರಮೇಶ್‌ ಕುಮಾರ್‌, ‘ ಅಸ್ಪೃಶ್ಯತೆಯ ನೋವು ಅನುಭವಿಸಿದವರಿಗೆ ಮಾತ್ರ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸ್ಥಾನ ಸಿಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆಂಧ್ರದ ಗಡಿಭಾಗದಲ್ಲಿರುವ ದಾಸರಿಗಳಿಗೆ ಅರ್ಹವಾಗಿಯೇ ಈ ಹಿಂದೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿತ್ತು. ಇತ್ತೀಚೆಗೆ ನಿರಾಕರಿಸಲಾಗುತ್ತಿದೆ. ಅರ್ಹರಿಗೆ ಸೌಲಭ್ಯ ವಂಚಿತವಾಗದಂತೆ ನೋಡಿಕೊಳ್ಳಬೇಕಲ್ಲವೇ’ ಎಂದು ಪ್ರಶ್ನಿಸಿದರು.

‘ಹಿಂಭಾಗಕ್ಕೆ ಏಟು ಬಿದ್ದರೂ ಮುಂಭಾಗದ ಹಲ್ಲು ಉದುರುತ್ತದೆ. ಇದರ ಅರಿವು ನಮಗಿರಬೇಕು. ನಾಗರಿಕ ಹಕ್ಕು ಜಾರಿ ಕೋಶಗಳ ಅಧಿಕಾರಿಗಳೂ ಕೆಲವೊಮ್ಮೆ ಮಾಡಬೇಕಾದುದನ್ನು ಬಿಟ್ಟು ಉಳಿದುದೆಲ್ಲವನ್ನು ಮಾಡುತ್ತಾರೆ. ಈ ವ್ಯವಸ್ಥೆ ಸರಿಪಡಿಸಬೇಕಿದೆ’ ಎಂದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !