ಬಂಧಿಸುವುದಿಲ್ಲ ಎಂಬ ಭರವಸೆ ನೀಡಲು ಇ.ಡಿ ನಿರಾಕರಣೆ

ಮಂಗಳವಾರ, ಮಾರ್ಚ್ 19, 2019
21 °C
ಡಿ.ಕೆ.ಶಿವಕುಮಾರ್‌ ವಿರುದ್ಧದ ಪ್ರಕರಣ

ಬಂಧಿಸುವುದಿಲ್ಲ ಎಂಬ ಭರವಸೆ ನೀಡಲು ಇ.ಡಿ ನಿರಾಕರಣೆ

Published:
Updated:
Prajavani

ಬೆಂಗಳೂರು: ‘ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸುವುದಿಲ್ಲ ಎಂಬ ಭರವಸೆ ನೀಡಲು ಸಾಧ್ಯವಿಲ್ಲ’ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಹೈಕೋರ್ಟ್‌ಗೆ ಖಡಾಖಂಡಿತ ದನಿಯಲ್ಲಿ ತಿಳಿಸಿದೆ.

‘ವಿಚಾರಣೆಗೆ ಹಾಜರಾಗಬೇಕು’ ಎಂದು ಇ.ಡಿ ನೀಡಿರುವ ಸಮನ್ಸ್ ರದ್ದು ಕೋರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಐವರು ಸಲ್ಲಿಸಿರುವ ರಿಟ್‌ ಅರ್ಜಿಗಳನ್ನು ನ್ಯಾಯಮೂರ್ತಿ ಅರವಿಂದ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ಮುಂದಿನ ವಿಚಾರಣೆಯನ್ನು ಇದೇ 11ಕ್ಕೆ ಮುಂದೂಡಲಾಯಿತು.

ಈ ವೇಳೆ ಶಿವಕುಮಾರ್ ಪರ ವಾದ ಮಂಡಿಸಿದ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು, ‘11ರತನಕ ಶಿವಕುಮಾರ್‌ ಅವರನ್ನು ಬಂಧಿಸುವುದಿಲ್ಲ ಎಂಬ ಭರವಸೆಯನ್ನು ಇ.ಡಿ ಕಡೆಯಿಂದ ಕೊಡಿಸಿ’ ಎಂದು ನ್ಯಾಯಪೀಠಕ್ಕೆ ವಿನಂತಿಸಿದರು.

ಇದಕ್ಕೆ ಉತ್ತರಿಸಿದ ಇ.ಡಿ. ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ, ‘ಆ ರೀತಿ ಭರವಸೆ ನೀಡಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠಕ್ಕೆ ಸ್ಪಷ್ಟವಾಗಿ ಅರುಹಿದರು.

ಇದಕ್ಕೆ ತೃಪ್ತರಾಗದ ಕಪಿಲ್‌ ಸಿಬಲ್‌, ‘ಈ ರೀತಿ ಹೇಳಿದರೆ ಹೇಗೆ, ನಮ್ಮನ್ನು ಅವರು ಯಾವುದೇ ಸಮಯದಲ್ಲಾದರೂ ಬಂಧಿಸಬಹುದು. ಅರ್ಜಿದಾರರಿಗೆ ಸಾಂವಿಧಾನಿಕ ರಕ್ಷಣೆ ಬೇಕು’ ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಹಾಗಾದರೆ, ಅರ್ಜಿದಾರರು ಇ.ಡಿ. ಮುಂದೆ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ಬೇಕು ಎಂದು ಕೋರಿದರೆ ಅದನ್ನು ಪರಿಗಣಿಸಬೇಕು’ ಎಂದು ಇ.ಡಿಗೆ ನಿರ್ದೇಶಿಸಿತು. ‘ಒಂದು ವೇಳೆ ಏನಾದರೂ ತೊಂದರೆ ಎದುರಾದಲ್ಲಿ ಕೋರ್ಟ್ ಮೊರೆ ಹೋಗಬಹುದು’ ಎಂದೂ ಸೂಚಿಸಿತು.

ಇದಕ್ಕೂ ಮುನ್ನ ವಾದ ಮಂಡಿಸಿದ ಕಪಿಲ್‌ ಸಿಬಲ್‌, ‘ವಿಚಾರಣೆಗೆ ಹಾಜರಾಗುವಂತೆ ಕರೆದಿರುವ ಇ.ಡಿ ಕ್ರಮ ಮೇಲ್ನೋಟಕ್ಕೆ ಕಾನೂನು ಅರಿವಿನಿಂದ ಕೂಡಿಲ್ಲ. ಇಸಿಐಆರ್‌ (ಜಾರಿ ಪ್ರಕರಣ ಮಾಹಿತಿ ವರದಿ) ಆಂತರಿಕ ದಾಖಲೆ. ಅದನ್ನು ನಮಗೆ ನೀಡಿಲ್ಲ ಮತ್ತು ನ್ಯಾಯಪೀಠಕ್ಕೂ ಸಲ್ಲಿಸಿಲ್ಲ. ಹೀಗಿರುವಾಗ ನಮ್ಮನ್ನು ವಿಚಾರಣೆಗೆ ಕರೆಯುವುದು ಎಷ್ಟು ಸರಿ. ಅರ್ಜಿದಾರರಿಗೆ ಪೀಡನೆ ನೀಡುವ ಏಕೈಕ ಉದ್ದೇಶವನ್ನು ಇ.ಡಿ ಹೊಂದಿದೆ’ ಎಂದು ದೂರಿದರು.

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !