ಭಾನುವಾರ, ನವೆಂಬರ್ 17, 2019
28 °C
ಮಿಂಟೊ ಕಣ್ಣಿನ ಆಸ್ಪತ್ರೆ: ಮುಂದುವರಿದ ಕಿರಿಯ ವೈದ್ಯರ ಪ್ರತಿಭಟನೆ

ಗಂಟೆ ಗಟ್ಟಲೆ ಕಾದು ಮರಳಿದ ರೋಗಿಗಳು

Published:
Updated:
Prajavani

ಬೆಂಗಳೂರು: ‘ಹಲ್ಲೆಯ ವಿಚಾರವಾಗಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಕಾರ್ಯಕರ್ತರು ಕ್ಷಮೆ ಯಾಚಿಸಬೇಕು ಹಾಗೂ ಕಾನೂನಿನ ಅಡಿಯಲ್ಲಿ ಪೊಲೀಸರು ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಕಿರಿಯ ವೈದ್ಯರು ಎರಡನೇ ದಿನವಾದ ಭಾನುವಾರವೂ ಪ್ರತಿಭಟನೆಯನ್ನು ಮುಂದುವರಿಸಿದರು.

ಇದರಿಂದ ಹೊರ ರೋಗಿಗಳ ಚಿಕಿತ್ಸಾ ಸೌಲಭ್ಯದಲ್ಲಿ (ಒಪಿಡಿ) ವ್ಯತ್ಯಯ ಉಂಟಾಯಿತು. ಆಸ್ಪತ್ರೆಯ ಒಪಿಡಿಯಲ್ಲಿ ವೈದ್ಯರ ಕೊರತೆಯಿಂದಾಗಿ ರೋಗಿಗಳು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. 

ಮಿಂಟೊ ಕಣ್ಣಿನ ಆಸ್ಪತ್ರೆ, ವಿಕ್ಟೋರಿಯಾ, ವಾಣಿವಿಲಾಸ ಸೇರಿದಂತೆ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ಅಡಿಯಲ್ಲಿ ಬರುವ ಆಸ್ಪತ್ರೆಗಳ ಕಿರಿಯ ವೈದ್ಯರು ಕರ್ತವ್ಯಕ್ಕೆ ಹಾಜರಾಗದ ಪರಿಣಾಮ ಚಿಕಿತ್ಸೆ ಲಭಿಸದೆ ರೋಗಿಗಳು ಸಮಸ್ಯೆ ಎದುರಿಸಿದರು.

ಬಿಎಂಸಿಆರ್‌ಐ ಡೀನ್‌ ಡಾ.ಎಚ್‌.ಎಸ್‌. ಸತೀಶ್‌ ಪ್ರತಿಭಟನಾಕಾರರ ಮನವೊಲಿಕೆಗೆ ನಡೆಸಿದ ಪ್ರಯತ್ನ ಫಲಿಸಲಿಲ್ಲ. ವೈದ್ಯಕೀಯ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ ಅವರೇ ಮನವಿ ಮಾಡಿದರೂ ವೈದ್ಯರು ಪ್ರತಿಭಟನೆ ಕೈಬಿಡಲು ಒಪ್ಪಲಿಲ್ಲ.

‘ವೈದ್ಯರ ಮೇಲೆ ಹಲ್ಲೆ ಮಾಡಿದ ಕರವೇ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿ ಗೌಡ ಬಂಧನದವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ’ ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು.

‘ರೋಗಿಗಳು ಚಿಕಿತ್ಸೆಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವ ಬಗ್ಗೆ ನಮಗೂ ನೋವಿದೆ. ವೈದ್ಯರ ಮೇಲೆ ಹಲ್ಲೆ ಮಾಡುವುದು ಸರಿಯಿಲ್ಲ. ನ್ಯಾಯಕ್ಕಾಗಿ ಹೋರಾಡುತ್ತಿದ್ದೇವೆ’ ಎಂದು ಪ್ರತಿಭಟನಾನಿರತ ವೈದ್ಯರೊಬ್ಬರು ತಿಳಿಸಿದರು. 

‘ಅಶ್ವಿನಿ ಗೌಡ ಕ್ಷಮೆ ಕೇಳಬೇಕು ಎಂದು ಪ್ರತಿಭಟನಾನಿರತರು ಪಟ್ಟು ಹಿಡಿದಿದ್ದಾರೆ. ಆಸ್ಪತ್ರೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಆಂತರಿಕ ಭದ್ರತೆಗೆ ಕ್ರಮ ಕೈಗೊಳ್ಳುವಂತೆ ಬೇಡಿಕೆ ಇಟ್ಟಿದ್ದಾರೆ. ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆಯನ್ನು ನೀಡಲಾಗುತ್ತಿದೆ. ರೋಗಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗಿದೆ’ ಎಂದು ಬಿಎಂಸಿಆರ್‌ಐ ಡೀನ್‌ ಡಾ.ಎಚ್‌.ಎಸ್‌. ಸತೀಶ್‌ ಮಾಹಿತಿ ನೀಡಿದರು.

**

ಕೆಲ ಕರವೇ ಕಾರ್ಯಕರ್ತರು ಕಾನೂನು ಕೈಗೆತ್ತಿಕೊಂಡಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ. ವೈದ್ಯರಿಗೆ ಸೂಕ್ತ ಭದ್ರತೆ ನೀಡುತ್ತೇವೆ. ಕಣ್ಣು ಕಳೆದುಕೊಂಡ ಸಂತ್ರಸ್ತರಿಗೆ ತಲಾ ₹ 3 ಲಕ್ಷ ಪರಿಹಾರ ನೀಡಲಿದ್ದೇವೆ
–ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ವೈದ್ಯಕೀಯ ಶಿಕ್ಷಣ ಸಚಿವ

ಪ್ರತಿಕ್ರಿಯಿಸಿ (+)