ಡ್ರೋನ್‌ ಹಾರಾಟದಿಂದ ಆತಂಕ ಸೃಷ್ಟಿ

ಶನಿವಾರ, ಮಾರ್ಚ್ 23, 2019
34 °C
ನಾಯಕನಹಟ್ಟಿಯ ಕುದಾಪುರ ಬಳಿ ಇರುವ ವಿಜ್ಞಾನ ಸಂಸ್ಥೆಗಳ ಬಳಿ ಕಟ್ಟೆಚ್ಚರ

ಡ್ರೋನ್‌ ಹಾರಾಟದಿಂದ ಆತಂಕ ಸೃಷ್ಟಿ

Published:
Updated:

ನಾಯಕನಹಟ್ಟಿ: ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮೇಲೆ ನಡೆದ ಡ್ರೋನ್‌ ಹಾರಾಟ ಆತಂಕ ಸೃಷ್ಟಿಸಿತ್ತು.

ಡಿಆರ್‌ಡಿಒದ ವೈಮಾನಿಕ ನೆಲೆಯ ಮೇಲೆ ಬುಧವಾರ ಸಂಜೆ 12 ನಿಮಿಷ ಅಪರಿಚಿತ ಡ್ರೋನ್ ಹಾರಾಟ ನಡೆಸಿದೆ. ಭಾರತ-ಪಾಕಿಸ್ತಾನ ನಡುವೆ ಸಂಘರ್ಷ ಉಂಟಾಗಿರುವ ಈ ಸಂದರ್ಭ ಹಾರಾಟ ನಡೆಸಿ ನಿರ್ಗಮಿಸಿರುವುದು ನಾನಾ ಆತಂಕಗಳಿಗೆ ಎಡೆಮಾಡಿತ್ತು.

‘ಡಿಆರ್‌ಡಿಒ ಕಾಂಪೌಂಡ್‍ಗೆ ಹೊಂದಿಕೊಂಡಂತೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಕಾರ್ಯ ನಿರ್ವಹಿಸುತ್ತಿದ್ದು, ಬೆಂಗಳೂರು ಕ್ಯಾಂಪಸ್‍ನ ಏರೋನಾಟಿಕಲ್ ಸಂಶೋಧನಾ ವಿಭಾಗ ಇಲ್ಲಿ ಸಂಶೋಧನಾ ಕಾರ್ಯದಲ್ಲಿ ತೊಡಗಿದೆ. ಡ್ರೋನ್‌ನ ಹೊಸ ಯೋಜನೆ ಮಾದರಿಗಳ ಪರೀಕ್ಷಾರ್ಥ ಕಾರ್ಯದಲ್ಲಿ ತಂಡ ತೊಡಗಿದೆ. ಸಂಶೋಧನಾ ತಂಡ ಬಳಸುತ್ತಿದ್ದ ಡ್ರೋನ್‌ ಕಣ್ತಪ್ಪಿನಿಂದ ಐಐಎಸ್ಸಿ ಆವರಣ ದಾಟಿ ಡಿಆರ್‌ಡಿಒ ಪ್ರವೇಶಿಸಿದೆ. ಆದರೆ ಸಂಶೋಧನಾನಿರತರಿಗೆ ಪಕ್ಕದಲ್ಲಿರುವ ಆವರಣ ಡಿಆರ್‌ಡಿಒಗೆ ಸೇರಿದ್ದು ಎಂಬ ಮಾಹಿತಿ ಇರಲಿಲ್ಲ. ಹೀಗಾಗಿ ಅವಾಂತರ ಸೃಷ್ಟಿಯಾಗಿದೆ’ ಎಂದು ಐಐಎಸ್ಸಿ ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ಅರುಣ್, ‘ವಿಜ್ಞಾನ ಸಂಸ್ಥೆಗಳು, ವಿಮಾನ ನಿಲ್ದಾಣಗಳು ಸೇರಿ ದೇಶದ ಬಹುತೇಕ ಕಡೆ ಕಟ್ಟೆಚ್ಚರ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಡಿಆರ್‌ಡಿಒ, ಭಾರತೀಯ ವಿಜ್ಞಾನ ಸಂಸ್ಥೆಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೇ, ಈ ಸಂಸ್ಥೆಗಳಲ್ಲಿ ಯಾವುದಾದರೂ ಅನಾಹುತ ಸಂಭವಿಸಿದರೆ ತುರ್ತು ಸಂದರ್ಭ ಜಿಲ್ಲಾ ಕೇಂದ್ರದಿಂದ ಪೊಲೀಸ್ ತಂಡ ಎಷ್ಟು ಬೇಗ ಆ ಸ್ಥಳ ತಲುಪಬಹುದೆಂದು ಇಡೀ ತಂಡದೊಂದಿಗೆ ಸಣ್ಣ ಪರೀಕ್ಷೆ ನಡೆಸಲಾಗಿದೆ’ ಎಂದರು.

Tags: 

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !