ನೂಡಲ್ಸ್‌ ಪೊಟ್ಟಣದಲ್ಲಿ ₹1.20 ಕೋಟಿ ಮೌಲ್ಯದ ಕೊಕೇನ್!

7
ಸ್ಲೀಪರ್‌ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ವಶಕ್ಕೆ

ನೂಡಲ್ಸ್‌ ಪೊಟ್ಟಣದಲ್ಲಿ ₹1.20 ಕೋಟಿ ಮೌಲ್ಯದ ಕೊಕೇನ್!

Published:
Updated:
Deccan Herald

ಬೆಂಗಳೂರು: ನೂಡಲ್ಸ್‌ ಪೊಟ್ಟಣದಲ್ಲಿ ಮಾದಕ ವಸ್ತುವಿಟ್ಟುಕೊಂಡು ಸಾಗಣೆ ಮಾಡುತ್ತಿದ್ದ ಮಹಿಳೆಯನ್ನು ಮಾದಕ ವಸ್ತು ಕಳ್ಳಸಾಗಣೆ ನಿಯಂತ್ರಣ ದಳದ (ಎನ್‌ಸಿಬಿ) ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಡಾರ್ಜಲಿಂಗ್‌ ನಿವಾಸಿಯಾದ 35 ವರ್ಷದ ಮಹಿಳೆ, ಉದ್ಯೋಗ ಅರಸಿ ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಬಂದು ನೆಲೆಸಿದ್ದಾಳೆ. ಇತ್ತೀಚೆಗೆ ಮುಂಬೈಗೆ ಹೋಗಿದ್ದ ಆಕೆ, ಸ್ಲೀಪರ್‌ ಬಸ್ಸಿನಲ್ಲಿ ವಾಪಸ್‌ ನಗರಕ್ಕೆ ಬರುವಾಗಲೇ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಆಕೆಯಿಂದ ₹1.20 ಕೋಟಿ ಮೌಲ್ಯದ 200 ಗ್ರಾಂ ಕೊಕೇನ್ ಹಾಗೂ 100 ಗ್ರಾಂ ಕೆಟಾಮಿನ್ ಜಪ್ತಿ ಮಾಡಲಾಗಿದೆ.

‘ಆರೋಪಿಯು ಮಾದಕ ವಸ್ತು ಸಾಗಣೆ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದಿತ್ತು. ತುಮಕೂರು ರಸ್ತೆಯಲ್ಲೇ ಬಸ್‌ ನಿಲ್ಲಿಸಿ ಪರಿಶೀಲನೆ ನಡೆಸಲಾಯಿತು. ಮಹಿಳೆಯು ತನ್ನ ಬ್ಯಾಗ್‌ನಲ್ಲಿ ಮೂರು ನೂಡಲ್ಸ್‌ ಪೊಟ್ಟಣಗಳನ್ನು ಇಟ್ಟುಕೊಂಡಿದ್ದಳು. ಮಕ್ಕಳಿಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ಸುಳ್ಳು ಹೇಳಿದ್ದಳು. ಪೊಟ್ಟಣಗಳನ್ನು ಹರಿದು ನೋಡಿದಾಗ ಮಾದಕ ವಸ್ತುವಿರುವುದು ಗೊತ್ತಾಯಿತು’ ಎಂದು ಎನ್‌ಸಿಬಿ ಪ್ರಾದೇಶಿಕ ನಿರ್ದೇಶಕ ಸುನೀಲ್‌ಕುಮಾರ್ ಸಿನ್ಹಾ ತಿಳಿಸಿದರು.

'ಕೆಲವು ದಿನಗಳ ಹಿಂದಷ್ಟೇ ಬಸ್ಸಿನಲ್ಲೇ ವ್ಯಕ್ತಿಯೊಬ್ಬನನ್ನು ಬಂಧಿಸಿ, ಮಾದಕ ವಸ್ತು ಜಪ್ತಿ ಮಾಡಲಾಗಿತ್ತು. ಅದೇ ಮಾದರಿಯಲ್ಲೇ ಮಹಿಳೆ ಸಹ ಮಾದಕ ವಸ್ತು ಸಾಗಣೆ ಮಾಡುತ್ತಿದ್ದಳು. ಅದನ್ನು ಆಕೆ ಎಲ್ಲಿಂದ ತಂದಿದ್ದಳು ಎಂಬುದನ್ನು ತಿಳಿದುಕೊಳ್ಳಲಾಗುತ್ತಿದೆ’ ಎಂದರು. 

Tags: 

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !