ಶುಕ್ರವಾರ, ಜೂನ್ 18, 2021
24 °C
ನಟ ದುನಿಯಾ ವಿಜಯ್ ಜಾಮೀನು ಅರ್ಜಿ: ತೀರ್ಪು ಕಾಯ್ದಿರಿಸಿದ ನ್ಯಾಯಾಲಯ

‘ಆರೋಪಿಗಳಿಗೆ ರಾಜಕೀಯ, ಹಣದ ಬೆಂಬಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜಿಮ್ ತರಬೇತುದಾರ ಮಾರುತಿ ಗೌಡ ಅವರನ್ನು ಅಪಹರಿಸಿ ಹಲ್ಲೆ ಮಾಡಿದ ಆರೋಪದಡಿ ಜೈಲು ಸೇರಿರುವ ನಟ ದುನಿಯಾ ವಿಜಯ್ ಹಾಗೂ ಅವರ ಸಹಚರರು ಸಲ್ಲಿಸಿರುವ ಜಾಮೀನು ಅರ್ಜಿಯ ತೀರ್ಪನ್ನು ಅಕ್ಟೋಬರ್ 1ಕ್ಕೆ ಕಾಯ್ದಿರಿಸಲಾಗಿದೆ.

ಜಾಮೀನು ಕೋರಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಶನಿವಾರ ಕೈಗೆತ್ತಿಕೊಂಡಿದ್ದ 70ನೇ ಸಿಸಿಎಚ್‌ ನ್ಯಾಯಾಲಯ, ಆರೋಪಿಗಳ ಪರ ವಕೀಲ ಹಾಗೂ ಪಬ್ಲಿಕ್ ಪ್ರಾಸಿಕ್ಯೂಟರ್ ಅವರ ವಾದ– ಪ್ರತಿವಾದ ಆಲಿಸಿತು.

ಆರೋಪಿಗಳ ಪರ ವಕೀಲ, ‘ನನ್ನ ಕಕ್ಷಿದಾರರಿಗೆ ಯಾವುದೇ ಉದ್ದೇಶವಿರಲಿಲ್ಲ. ಘಟನೆಯಲ್ಲಿ ಯಾವುದೇ ಆಯುಧ ಬಳಕೆ ಆಗಿಲ್ಲ. ಕಕ್ಷಿದಾರರಿಗೆ ಜಾಮೀನು ಸಿಗಬಾರದೆಂಬ ಕಾರಣಕ್ಕೆ ಜಾಮೀನುರಹಿತ ಪ್ರಕರಣ ದಾಖಲಿಸಲಾಗಿದೆ. ದೂರುದಾರರಿಂದ ಎರಡು ಬಾರಿ ಹೇಳಿಕೆ ಪಡೆದು ಎಫ್‌ಐಆರ್‌ನಲ್ಲಿರುವ ಅಂಶಗಳನ್ನೇ ಬದಲಾಯಿಸಲಾಗಿದೆ. ಅಮಾಯಕರಾದ ನನ್ನ ಕಕ್ಷಿದಾರರಿಗೆ ಜಾಮೀನು ನೀಡಬೇಕು’ ಎಂದು ವಾದಿಸಿದರು.

ಪಬ್ಲಿಕ್ ಪ್ರಾಸಿಕ್ಯೂಟರ್ ಟಿ.ಎಂ.ನರೇಂದ್ರ, ‘ಆರೋಪಿ, ಈ ಹಿಂದೆ ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದಾನೆ. ಆ ಬಗ್ಗೆ ಚನ್ನಮ್ಮನ
ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಅದಾದ ನಂತರವೂ ಆರೋಪಿ, ಪುನಃ ಕೃತ್ಯ ಎಸಗಿದ್ದಾನೆ. ಆತನಿಗೆ ರಾಜಕೀಯ ಹಾಗೂ ಹಣದ ಬೆಂಬಲವಿದ್ದು, ಸಮಾಜದಲ್ಲಿ ಶಾಂತಿ ಕದಡುವ ಯತ್ನ ಮಾಡುತ್ತಿದ್ದಾನೆ’ ಎಂದು ಪ್ರತಿ ವಾದಿಸಿದರು.

‘ದೂರುದಾರರ ಕಣ್ಣು, ಮುಖಕ್ಕೆ ತೀವ್ರ ಪೆಟ್ಟು ಬಿದ್ದಿದೆ. ಅವರು ನೀಡಿದ್ದ ಹೇಳಿಕೆಯಂತೆ ಪೊಲೀಸರು ತನಿಖೆ ನಡೆಸಿದಾಗ, ಆರೋಪಿಗಳ ಕೃತ್ಯವು ಮೇಲ್ನೋಟಕ್ಕೆ ಸಾಬೀತಾಗಿದೆ. ಹೀಗಾಗಿ, ಆರೋಪಿಗಳಿಗೆ ಜಾಮೀನು ಮಂಜೂರು ಮಾಡಬಾರದು’ ಎಂದು ಕೋರಿದರು.

ಪತ್ನಿಯರ ಜಗಳ ಮುಂದುವರಿಕೆ

ದುನಿಯಾ ವಿಜಯ್, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಇತ್ತ ಹೊರಗಡೆ, ಅವರ ಪತ್ನಿಯರಿಬ್ಬರ ಜಗಳ ಮುಂದುವರಿದಿದೆ.

‘ಎರಡು ದಿನಗಳ ಹಿಂದೆ ನನ್ನ ಮಕ್ಕಳ ಚಿನ್ನಾಭರಣ ಹಾಗೂ ಹಣ ಕದ್ದುಕೊಂಡು ಕೀರ್ತಿಗೌಡ ನಾಪತ್ತೆಯಾಗಿದ್ದಾಳೆ. ಅವಳು ಕದಿಯೋಕೆ ಅಂತಾನೆ ಮನೆಗೆ ಬಂದಿದ್ದಳು’ ಎಂದು ಮೊದಲ ಪತ್ನಿ ನಾಗರತ್ನ ಆರೋಪಿಸಿದ್ದಾರೆ.

ಅದಕ್ಕೆ ಪ್ರತಿಕ್ರಿಯಿಸಿರುವ ಕೀರ್ತಿಗೌಡ, ‘ನಾನು ಎಲ್ಲಿಯೂ ಹೋಗಿಲ್ಲ. ಪತಿಯ ಮಾತಿನಂತೆ ತವರು ಮನೆಯಲ್ಲಿದ್ದೇನೆ. ನಾನು ನಾಪತ್ತೆ ಆಗಿರುವುದಾಗಿ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ನನ್ನ ಪತಿ ಜೈಲಿನಿಂದ ಬಿಡುಗಡೆಗೊಂಡ ಬಳಿಕ ಎಲ್ಲರ ಪ್ರಶ್ನೆಗೂ ಉತ್ತರಿಸುತ್ತೇನೆ’ ಎಂದಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು