ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಹಿತಕ್ಕಿಂತ ‘ಕ್ಯಾಬಿನೆಟ್‌ ಬರ್ಡ್‌’ ಆಗುವುದರಲ್ಲೇ ಆಸಕ್ತಿ: ಮೋದಿ

ರಾಜ್ಯ ಸರ್ಕಾರದ ಆಡಳಿತ ಟೀಕಿಸಿದ ಪ್ರಧಾನಿ
Last Updated 28 ಡಿಸೆಂಬರ್ 2018, 16:25 IST
ಅಕ್ಷರ ಗಾತ್ರ

ದಾವಣಗೆರೆ: ‘ಕರ್ನಾಟಕದಲ್ಲಿ ಜನಸಾಮಾನ್ಯರು ಅಭಿವೃದ್ಧಿಯನ್ನು ಬಯಸುತ್ತಿದ್ದಾರೆ. ಆದರೆ, ಆಡಳಿತ ನಡೆಸುತ್ತಿರುವವರಿಗೆ ‘ಕ್ಯಾಬಿನೆಟ್‌ ಬರ್ಡ್‌’ ಆಗುವುದರಲ್ಲಿ ಮಾತ್ರ ಆಸಕ್ತಿ ಇದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು.

‘ನಮೋ ಆ್ಯಪ್‌’ ಮೂಲಕ ರಾಜ್ಯದ ಐದು ಜಿಲ್ಲೆಗಳ ಬಿಜೆಪಿ ಕಾರ್ಯಕರ್ತರೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ‘ಕರ್ನಾಟಕ ಸರ್ಕಾರಕ್ಕೆ ಕೇವಲ ಅಧಿಕಾರದ ಬಗ್ಗೆ ಆಸಕ್ತಿ ಇದೆ. ಜನಸಾಮಾನ್ಯರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಇಂಥ ಸಂದರ್ಭದಲ್ಲಿ ನಾವು ಏನು ಮಾಡಬೇಕು’ ಎಂದು ಬೆಳಗಾವಿಯ ಬಿಜೆಪಿ ಉತ್ತರ ಮಂಡಲದ ಅಧ್ಯಕ್ಷ ಶ್ರೀನಿವಾಸ್‌ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.

‘ಕರ್ನಾಟಕ ಜನರ ನೋವು ಅರ್ಥವಾಗುತ್ತದೆ. ಸಚಿವ ಸಂಪುಟದ ಖಾತೆ ಹಂಚಿಕೆಯಲ್ಲಿ ಯಾರಿಗೆ ಖುಷಿಯಾಯಿತು; ಯಾರಿಗೆ ನೋವಾಯಿತು ಎಂಬುದೇ ದಿನಾಲೂ ಸುದ್ದಿಯಾಗುತ್ತಿದೆ. ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದವರು ಮ್ಯೂಸಿಕಲ್‌ ಚೇರ್‌ ಆಟ ಆಡುತ್ತಿದ್ದಾರೆ. ಜನರ ಕಲ್ಯಾಣಕ್ಕೆ ಅಧಿಕಾರವನ್ನು ಬಳಸಿಕೊಳ್ಳಲು ಅವರಿಗೆ ಆಸಕ್ತಿ ಇಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಕರ್ನಾಟಕದಲ್ಲಿ ಅಧಿಕಾರದಲ್ಲಿರುವವರಿಗೆ ವಂಶಪಾರಂಪರ್ಯ ಆಡಳಿತ ನಡೆಸುವಲ್ಲಿ ಮಾತ್ರ ಆಸಕ್ತಿ ಇದೆ. ಇಂಥ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಜನರ ಧ್ವನಿಯಾಗುವ ಮೂಲಕ ಸರ್ಕಾರವನ್ನು ನಿದ್ದೆಯಿಂದ ಎಬ್ಬಿಸ ಬೇಕು’ ಎಂದು ಸಲಹೆ ನೀಡಿದರು.

‘ಜನ ಭ್ರಷ್ಟಾಚಾರ ಮುಕ್ತ ಆಡಳಿತ ಬಯಸುತ್ತಿದ್ದಾರೆ. ಆದರೆ, ಅಧಿಕಾರದಲ್ಲಿರುವವರು ಅಭಿವೃದ್ಧಿಯ ಜೊತೆಗೆ ಉಚಿತವಾಗಿ ಭ್ರಷ್ಟಾಚಾರವನ್ನೂ ಕೊಡುತ್ತಿದ್ದಾರೆ. ಆರು ತಿಂಗಳು ಆಡಳಿತ ನಡೆಸಿದ ಬಳಿಕವೂ ರೈತರ ಸಾಲ ಮನ್ನಾ ಮಾಡಲು ಆಗಿಲ್ಲ. ಹೀಗಿದ್ದರೂ ಸಾಲ ಮನ್ನಾ ಮಾಡಿರುವುದಾಗಿ ದೇಶದಾದ್ಯಂತ ಪ್ರಚಾರ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬೆಳಗಾವಿಯ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿದಿಲ್ಲ. ರೈತರ ಹಾಗೂ ಜನಸಾಮಾನ್ಯರ ಹಿತ ಕಾಪಾಡುವ ನಿಟ್ಟಿನಲ್ಲಿ ಇವರಿಗೆ ಬದ್ಧತೆ ಇಲ್ಲ’ ಎಂದು ಮೋದಿ ಬೇಸರ ವ್ಯಕ್ತಪಡಿಸಿದರು.

‘ಕರ್ನಾಟಕ ಹಾಗೂ ದೇಶದ ಜನ ಈ ಬೆಳವಣಿಗೆಯನ್ನು ನೋಡುತ್ತಿದ್ದಾರೆ. ಶೀಘ್ರವೇ ದುರಾಡಳಿತಕ್ಕೆ ಜನ ತಕ್ಕ ಪಾಠ ಕಲಿಸುತ್ತಾರೆ’ ಎಂದು ಎಚ್ಚರಿಸಿದರು.

ದಾವಣಗೆರೆ, ಹಾವೇರಿ, ಬೆಳಗಾವಿ, ಧಾರವಾಡ ಹಾಗೂ ಬೀದರ್‌ ಜಿಲ್ಲೆಗಳ ಬಿಜೆಪಿಯ ತಲಾ ಒಬ್ಬ ಕಾರ್ಯಕರ್ತರ ಪ್ರಶ್ನೆಗೆ ಮೋದಿ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT