ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

15 ‘ಪರಿಶಿಷ್ಟ’ ಎಂಜಿನಿಯರ್‌ಗಳು ಯಾರಿಗೂ ಬೇಡ!

ರೇವಣ್ಣ ‘ಲೆಕ್ಕಾಚಾರ’ಕ್ಕೆ ನಗರಾಭಿವೃದ್ಧಿ ಇಲಾಖೆ ಸಡ್ಡು
Last Updated 18 ಜೂನ್ 2019, 20:00 IST
ಅಕ್ಷರ ಗಾತ್ರ

ಬೆಂಗಳೂರು: ಹಿಂಬಡ್ತಿಗೆ ಒಳಗಾಗಿದ್ದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನೌಕರರಿಗೆ ಬಡ್ತಿ ನೀಡಿ ಸ್ಥಳ ನಿಯುಕ್ತಿಗೊಳಿಸುವ ವಿಚಾರವಾಗಿ ಲೋಕೋಪಯೋಗಿ ಇಲಾಖೆ ಹಾಗೂ ನಗರಾಭಿವೃದ್ಧಿ ಇಲಾಖೆಯ ಮಧ್ಯೆ ‘ವರ್ಗ’ ಸಂಘರ್ಷ ಆರಂಭವಾಗಿದೆ. ಹೀಗಾಗಿ, 15 ಎಂಜಿನಿಯರ್‌ಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ.

ಹಿಂಬಡ್ತಿಗೆ ಒಳಗಾಗಿದ್ದ ಎಂಜಿನಿಯರ್‌ಗಳಿಗೆ ಸ್ಥಳ ನಿಯುಕ್ತಿ ಮಾಡಿ ಲೋಕೋಪಯೋಗಿ ಇಲಾಖೆ ಇದೇ 14ರಂದು ಆದೇಶ ಹೊರಡಿಸಿತ್ತು. 22 ಸೂಪರಿಂಟೆಂಡಿಂಗ್‌ ಎಂಜಿನಿಯರ್‌ಗಳು ಹಾಗೂ 178 ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ಸ್ಥಳ ನಿಯುಕ್ತಿ ಮಾಡಲಾಗಿತ್ತು. ಈ ಎಂಜಿನಿಯರ್‌ಗಳಿಗೆ ಜಲಸಂಪನ್ಮೂಲ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌, ಸಣ್ಣ ನೀರಾವರಿ, ನಗರಾಭಿವೃದ್ಧಿ, ಸಮಾಜ ಕಲ್ಯಾಣ, ಶಿಕ್ಷಣ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಗಳಲ್ಲಿ ಸ್ಥಳ ಹಂಚಿಕೆ ಮಾಡಲಾಗಿತ್ತು. ಏಳು ಎಂಜಿನಿಯರ್‌ಗಳನ್ನಷ್ಟೇ ಇಲಾಖೆಯಲ್ಲಿ ಉಳಿಸಿಕೊಳ್ಳಲಾಗಿತ್ತು. ಸಚಿವ ಎಚ್‌.ಡಿ.ರೇವಣ್ಣ ಅವರ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ (ಬಿಎಂಆರ್‌ಸಿಎಲ್‌) ನಾಲ್ವರು ಹಾಗೂ ಸ್ಮಾರ್ಟ್‌ ಸಿಟಿ ಯೋಜನೆಗೆ 11 ಕಾರ್ಯಪಾಲಕ ಎಂಜಿನಿಯರ್‌ಗಳನ್ನು ಕೊಡಲಾಗಿದೆ. ಈ 15 ಎಂಜಿನಿಯರ್‌ಗಳ ಸೇವೆಯನ್ನು ಪಡೆಯಲು ನಗರಾಭಿವೃದ್ಧಿ ಇಲಾಖೆ ಒಪ್ಪಿಲ್ಲ. ‘ಬಿಎಂಆರ್‌ಸಿಎಲ್‌ನಲ್ಲಿ ಹಾಗೂ ಏಳು ಸ್ಮಾರ್ಟ್‌ ಸಿಟಿ ಯೋಜನೆಗಳಲ್ಲಿ ಕಾರ್ಯಪಾಲಕ ಎಂಜಿನಿಯರ್‌ಗಳ ಹುದ್ದೆಗಳು ಖಾಲಿ ಇಲ್ಲ. ಹೀಗಾಗಿ, ಈ ಅಧಿಕಾರಿಗಳು ನಮ್ಮ ಇಲಾಖೆಗೆ ಅಗತ್ಯ ಇಲ್ಲ’ ಎಂದೂ ತಿಳಿಸಿದೆ.

‘ಎಂಜಿನಿಯರ್‌ಗಳನ್ನು ನಿಯೋಜನೆ ಮಾಡುವಾಗ ಕಡ್ಡಾಯವಾಗಿ ನಮ್ಮ ಅಭಿಪ್ರಾಯ ಪಡೆಯಬೇಕು’ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ 2018ರ ಜುಲೈ 27ರಂದು ಪತ್ರ ಬರೆದಿದ್ದರು.

ಆದರೆ, 15 ಎಂಜಿನಿಯರ್‌ಗಳ ನೇಮಕಕ್ಕೆ ಮುನ್ನ ನಗರಾಭಿವೃದ್ಧಿ ಇಲಾಖೆಯ ಅಭಿಪ್ರಾಯ ಪಡೆದಿರಲಿಲ್ಲ. ‘ಇನ್ನು ಮುಂದೆ ಎಂಜಿನಿಯರ್‌ಗಳ ಸ್ಥಳ ನಿಯೋಜನೆ ಮಾಡುವ ವೇಳೆ ಇಲಾಖೆಯ ಅಭಿಪ್ರಾಯವನ್ನು ಪಡೆಯಲೇಬೇಕು’ ಎಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ಸೋಮವಾರ(ಜೂ 17) ಮತ್ತೊಮ್ಮೆ ಪತ್ರ ಬರೆದಿದ್ದಾರೆ.

ಹಿಂಬಡ್ತಿಗೆ ಒಳಗಾಗಿದ್ದ ನೌಕರರಿಗೆ ಮರು ಬಡ್ತಿ ನೀಡುವ ವಿಷಯದಲ್ಲಿ ಇಲಾಖೆಗಳು ಕ್ರಮವಹಿಸದೇ ಇರುವುದಕ್ಕೆ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಹಾಗೂ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಇತ್ತೀಚೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರಿಗೆ ಜೂನ್‌ 4ರಂದು ಪತ್ರ ಬರೆದಿದ್ದರು.

ನಿಯೋಜನೆ ಎಲ್ಲಿಗೆ

ಬಿಎಂಆರ್‌ಸಿಎಲ್‌ಗೆ: ಸಿ.ನಟರಾಜ್‌, ರಾಜಶೇಖರ್‌ ಕೆ., ಕೃಷ್ಣಮೂರ್ತಿ ಡಿ., ವಿಜಯಕುಮಾರ್ ಆರ್‌.

ಸ್ಮಾರ್ಟ್ ಸಿಟಿಗೆ: ರಮೇಶ್‌ ಎಸ್‌., ರಾಜು ಎಂ.ಎಸ್‌., ಶಿವರಾಮು ಟಿ.ಆರ್‌., ನಾಗರಾಜು ಟಿ., ವೇಣುಗೋಪಾಲ್‌ ಎಸ್‌., ಆಂಜನೇಯ ಎ., ವೆಂಕಟಾಚಲಯ್ಯ ಟಿ., ನಾಗರಾಜಮೂರ್ತಿ ಪಿ., ಶ್ರೀಧರಮೂರ್ತಿ ಎಲ್‌., ಮರಿಸ್ವಾಮಿ ಕೆ.ಎಂ., ಶಂಕರ್‌.

‘250 ಹುದ್ದೆ ಇದ್ದರೂ ಸ್ಥಳ ನಿಯುಕ್ತಿ ಇಲ್ಲ’

‘ಲೋಕೋಪಯೋಗಿ ಇಲಾಖೆಯಲ್ಲಿ ಇಬ್ಬರು ಕಾರ್ಯ‍ಪಾಲಕ ಎಂಜಿನಿಯರ್‌ಗಳಿಗಷ್ಟೇ ಅವಕಾಶ ನೀಡಿದ್ದಾರೆ. ಉಳಿದ 215 ಎಂಜಿನಿಯರ್‌ಗಳನ್ನು ಬೇರೆ ಬೇರೆ ಇಲಾಖೆಗೆ ಹಂಚಿಕೆ ಮಾಡಿದ್ದಾರೆ. ಕಾರ್ಯಪಾಲಕ ಎಂಜಿನಿಯರ್‌ ಶಿವರಾಮು ಟಿ.ಆರ್. ಅವರನ್ನು ಕ್ರೈಸ್‌ ಸಂಸ್ಥೆಗೆ ನೀಡುವಂತೆ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಕೋರಿದ್ದರು. ಅದಕ್ಕೂ ಸಚಿವರು ಮನ್ನಣೆ ನೀಡಿಲ್ಲ. ಶಿವರಾಮು ಅವರನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಸ್ಥಳ ನಿಯುಕ್ತಿ ಮಾಡಿದ್ದಾರೆ. ಇಲಾಖೆಯಲ್ಲಿ 250 ಕಾರ್ಯಪಾಲಕ ಎಂಜಿನಿಯರ್‌ ಹುದ್ದೆಗಳು ಖಾಲಿ ಇವೆ. ಆದರೂ, ಹುದ್ದೆ ನೀಡುತ್ತಿಲ್ಲ. ಈ ಮೂಲಕ ಸಚಿವರು ದಲಿತ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ’ ಎಂದು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸಮನ್ವಯ ಸಮಿತಿಯ ಕಾನೂನು ಸಲಹೆಗಾರ ಚಂದ್ರಶೇಖರಯ್ಯ ಕಿಡಿಕಾರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT