ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾ. ಭಗವತಿ ಓಜಾ 83ರ ವಯಸ್ಸಿನಲ್ಲಿಯೂ ಕ್ರೀಡೆಗೆ ಫಿಟ್‌

Last Updated 25 ಏಪ್ರಿಲ್ 2018, 6:05 IST
ಅಕ್ಷರ ಗಾತ್ರ

ಆ್ಯಮ್‌ ಜಸ್ಟ್ 83 ಎಂದು ಮಾತು ಆರಂಭಿಸಿದ ಡಾ. ಮಿಸ್ ಭಗವತಿ ಮನ್ವಂತರಂ ಓಜಾ ಮೂಲತಃ ಗುಜರಾತಿನ ವಡೋದರಾದವರು.  ವೃತ್ತಿಯಲ್ಲಿ ವೈದ್ಯೆ ಆಗಿದ್ದಾರೆ. ಅವಿವಾಹಿತರಾಗಿ ಸಾಧನೆಯ ಹಾದಿಯನ್ನೇ ಆಯ್ಕೆ ಮಾಡಿಕೊಂಡವರು. 100, 200 ಮೀಟರ್ ಓಟದಲ್ಲಿ ಮಂಗಳೂರಿನಲ್ಲಿ ಚಿನ್ನವನ್ನು ದಾಖಲಿಸುವೆ ಎಂಬ ಆತ್ಮವಿಶ್ವಾಸದ ಮಾತು ಅವರದು.

ಮಂಗಳೂರಿನಲ್ಲಿ  ಆರಂಭವಾಗಿರುವ ರಾಷ್ಟ್ರೀಯ ಹಿರಿಯರ ಅಥ್ಲೆಟಿಕ್ಸ್‌ನಲ್ಲಿ ಪಾಲ್ಗೊಳ್ಳುವುದಕ್ಕೆ ದೂರದ ಗುಜರಾತ್‌ನ ವಡೋದರಾದಿಂದ ಬಂದಿರುವ ಹಿರಿಯ ಕ್ರೀಡಾಪಟು ಡಾ. ಭಗವತಿ ಮನ್ವಂತರಂ ಓಜಾ ಕೂಡಾ ಒಬ್ಬರು ಪದಕ ಬಾಚುವ ಅಥ್ಲೀಟ್‌.

83ರ ಇಳಿ ವಯಸ್ಸಿನಲ್ಲಿಯೂ ಡಾ. ಭಗವತಿ ಓಜಾ ಅವರ ಕ್ರೀಡಾ ಆಸಕ್ತಿ ನಿಂತ ನೀರಾಗಿಯೇ ಉಳಿದಿಲ್ಲ. ಅವರು ನಿರಂತರವಾಗಿ ತಮ್ಮನ್ನು ತಾವೂ ಪ್ರಯೋಗಕ್ಕೆ ಒಡ್ಡಿಕೊಳ್ಳುವ ಶೈಲಿ ಬೆಳೆಸಿಕೊಂಡಿದ್ದಾರೆ. ಇವರು ಇದುವರೆಗೆ ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು 350ಕ್ಕೂ ಹೆಚ್ಚು ಪದಕ ಮುಡಿಗೇರಿಸಿಕೊಂಡಿದ್ದಾರೆ. ವೃತ್ತಿಯಲ್ಲಿ ಸ್ತ್ರೀ ರೋಗ ತಜ್ಞೆ ಆಗಿರುವ ಇವರು ಕ್ರೀಡೆಗೆ ಎಂಟ್ರಿ ಕೊಟ್ಟಿದ್ದು ಬಹಳ ತಡವಾಗಿ. 68 ರ ವಯಸ್ಸಿನಲ್ಲಿ ಕ್ರೀಡೆಯತ್ತ ಅವರ ಮನಸ್ಸು ವಾಲಿತು.

100, 200 ಮೀಟರ್ ಓಟ, 1 ಕಿಲೋ ಮೀಟರ್ ನಡಿಗೆ (ವಾಕ್) , ಸೈಕ್ಲಿಂಗ್, ಈಜು, ಮ್ಯಾರಾಥಾನ್‌ಲ್ಲಿಯೂ ಹಲವು ಪ್ರಶಸ್ತಿ ಬಾಚಿಕೊಂಡಿರುವ ಜತೆಗೆ ಸೈಕ್ಲಿಂಗ್‌ನಲ್ಲಿ ಸಾವಿರಾರೂ ಕಿಲೋ ಮೀಟರ್‌ ಪ್ರಯಾಣ ಮಾಡುವ ಮೂಲಕ ಲಿಮ್ಕಾ ದಾಖಲೆ ಕೂಡಾ ಮಾಡಿದ್ದಾರೆ. ಹಲವು ರಾಷ್ಟ್ರ ಮಟ್ಟದ ಪ್ರಶಸ್ತಿ ಡಾ. ಭಗವತಿ ಓಜಾ ಅವರನ್ನು  ಹುಡುಕಿ ಬಂದಿವೆ.

ಡಾ. ಭಗವತಿ ಓಜಾ

‘ ಒಮ್ಮೆ ಹೀಗೆ ಆಸೆಯಿಂದ ಹಿರಿಯರ ಕ್ರೀಡಾಕೂಟ ನೋಡುವುದಕ್ಕೆ ಹೋಗಿದ್ದೇ. ನಾನೂ ಯಾಕೆ ಪಾಲ್ಗೊಳ್ಳಬಾರದು ಎಂಬ ಭಾವನೆಯಿಂದ ಅಂಕಣಕ್ಕೆ ಇಳಿದೆ.  ಓಟದ ಸ್ಪರ್ಧೆಯಲ್ಲಿ ಚಿನ್ನವೂ ಬಂತು. ಅಂದಿನಿಂದ ಇಂದಿನವರಿಗೆ ಕ್ರೀಡೆಯಿಂದ ಹಿಂದೆ ಸರಿದಿಲ್ಲ. ನನಗೆ ಅಷ್ಟೊಂದು ವಯಸ್ಸಾಗಿಲ್ಲ ಎಂದು ನಡುಗುವ ಧ್ವನಿಯಲ್ಲಿಯೇ ಮುಗಳ್ನಗೆಯ ಬಾಣ ಬಿಟ್ಟರು ಡಾ. ಭಗವತಿ.

ತಂದೆ ಮನ್ವಂತರಂ ಓಜಾ ಅವರು ರೈಲ್ವೆಯ ಉದ್ಯೋಗಿ ಆಗಿದ್ದರು. ತಾಯಿ ಭಾನುಮತಿ ಗೃಹಿಣಿ. ಇಬ್ಬರ ಅಕ್ಕರೆ ಪ್ರೀತಿಯ ಮಗಳು ನಾನು. ಗುಜರಾತ್‌ನ ಮೊರರ್ಬಿ ನಾನು ಹುಟ್ಟಿದ ಊರು. ಗುರುಜರಾತಿನಲ್ಲಿ ನಮ್ಮದೂ ಸಂಪ್ರದಾಯಸ್ಥ ಕುಟುಂಬ. ಮನೆಯಲ್ಲಿ ನನ್ನನ್ನೂ ಶಾಲೆಗೆ ಹೋಗುವುದಕ್ಕೆ ಬಿಟ್ಟಿದ್ದೆ ದೊಡ್ಡದು. ಓದು ಮುಗಿಸಿ ವೈದ್ಯೆ ಆಗಿ ಸೇನೆಯಲ್ಲಿ ಸುಮಾರು 12 ವರ್ಷ ಸೇವೆ ಮಾಡಿದ್ದೇನೆ. ಕಾಲೇಜು ದಿನಗಳಲ್ಲಿ ಕ್ರೀಡೆಯಲ್ಲಿ ಪಾಲ್ಗೊಂಡಿದ್ದು ಅಪರೂಪ.  2014 ರಲ್ಲಿ ಗುಜರಾತ್‌ನ ಕಚ್‌ನಿಂದ ಕೊಚ್ಚಿನ್‌ವರಿಗೆ 3000 ಕಿಲೋ ಮೀಟರ್‌ ಸೈಕಲ್‌ ಪ್ರಯಾಣ ಮಾಡಿದ್ದು, ಸಾಹಸ ಮತ್ತು ಸೈಕ್ಲಿಂಗ್‌ ಕ್ರೀಡೆಯಲ್ಲಿ ಮಾಡಿದ ಸಾಧನೆಗೆ ಲಿಮ್ಕಾ ದಾಖಲೆ ಪುಟಗಳಲ್ಲಿ ಸೇರಿದೆ ಎಂದು ಹೆಮ್ಮಯಿಂದ ಹೇಳಿಕೊಂಡರು.

ಸೈಕಲ್ ಪ್ರೇಮ: ಗುಜರಾತಿನ ವಡೋದರಾದಲ್ಲಿ  ತಮ್ಮದೇ ಓಜಾ ಆಸ್ಪತ್ರೆ ನಡೆಸುತ್ತಿದ್ದು, 83ರ ಇಳಿ ವಯಸ್ಸಿನಲ್ಲಿಯೂ ಸೈಕಲ್‌ನಲ್ಲಿಯೇ ಈಗಲೂ ಆಸ್ಪತ್ರೆಗೆ ಬರುವ ರೂಢಿ ಇಟ್ಟುಕೊಂಡಿದ್ದಾರೆ. ಪರಿಸರ ಉಳಿಸುವ ಕಾಳಜಿಯ ಜೀವನ ಶೈಲಿ ಅವರದು. ತಮ್ಮಲ್ಲಿದ್ದ ಕಾರು, ಬೈಕ್‌ ಮಾರಾಟ ಮಾಡಿದ್ದಾರೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ತಪಾಸಣೆ ಮಾಡಿ ಇನ್ನುಳಿದ ಹೊತ್ತು  ಕ್ರೀಡೆಗೆ ನೀಡುವ ಹವ್ಯಾಸ ರೂಡಿಸಿಕೊಂಡಿದ್ದಾರೆ. ಇದರ ಜತೆಗೆ ನಿತ್ಯವೂ 50 ಕಿಲೋ ಮೀಟರ್‌ ಸೈಕಲ್‌ ತುಳಿಯುವ ಅಭ್ಯಾಸವನ್ನು ನಿಲ್ಲಿಸಿಲ್ಲ.

ಈಜಿನಲ್ಲಿಯೂ ಸಾಧನೆ: ರಾಷ್ಟ್ರ ಮಟ್ಟದ ಹಿರಿಯರ ವಿಭಾಗದ ಹಲವಾರು ಈಜು ಸ್ಪರ್ಧಗಳಲ್ಲಿ ಸಾಧನೆ ಮಾಡಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. 1000 ಮೀಟರ್‌ ಫ್ರೀ ಸ್ಟೈಲ್‌ ಬೆಳ್ಳಿ, 100, 50 ಮೀಟರ್‌ ಬ್ರೆಸ್ಟ್‌ ಸ್ಟ್ರೋಕ್‌ನಲ್ಲಿ ಚಿನ್ನ, 100 ಮೀಟರ್‌ ಮುಕ್ತ ಸಮುದ್ರ ಈಜು ಸ್ಪರ್ಧೆ, ಸೈನಿಕ ಈಜು ಸ್ಪರ್ಧೆಯಲ್ಲಿಯೂ ಮಿಂಚಿದ್ದಾರೆ.

ವೈದ್ಯಕೀಯ ಸೇವೆಗೆ ಹಲವು ಪ್ರಶಸ್ತಿ: 2001ರ ಕಾರ್ಗಿಲ್‌ ಯುದ್ದದ ವೇಳೆ ಮಾಡಿದ ಸೇವೆಗೆ ಸದ್ಭಾವನಾ ಆಪರೇಶನ್‌ ಆಫ್‌ ಆರ್ಮಿ, ಮದರ್‌ ತೇರೆಸಾ ಪುನರ್‌ ವಸತಿ ಕೇಂದ್ರ ಸೇವೆ, ಮೊರರ್ಬಿ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದಕ್ಕಾಗಿ ಸೇವಾ ಪ್ರಶಸ್ತಿಗಳು ಸಿಕ್ಕಿವೆ. ಹಿರಿಯ ನಾಗರೀಕ ಪ್ರಶಸ್ತಿಯೂ ಕೂಡಾ ಇವರಿಗೆ ಸಂದಿದೆ.

ಕ್ರೀಡೆಯಿಲ್ಲದೆ ಬದುಕಿಲ್ಲ

ಕ್ರೀಡೆಗೆ ಬದುಕಿನ ಆರೋಗ್ಯದ ದಿಕ್ಕು ಬದಲಿಸುವ ಶಕ್ತಿ ಇದೆ. ಯಾವಾಗ ಕ್ರೀಡೆಯಿಂದ ವಿಮುಖರಾಗುತ್ತವೆಯೋ ಆಗ ಖಂಡಿತವಾಗಿಯೂ ಅನಾರೋಗ್ಯವೂ ನಮ್ಮ ದೇಹ ಪ್ರವೇಶ ಮಾಡುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವಾಗ ನಿರಂತರವಾಗಿ ಕೆಲಸ ಮಾಡುವ ಗುಣ ಬೆಳೆಸಿಕೊಂಡಿದೆ. ಕೆಲವು ಬಸ್‌ ಸೌಕರ್ಯ ಇಲ್ಲದ ಪ್ರದೇಶಗಳಿಗೆ ಚಕ್ಕಡಿ ಗಾಡಿಯಲ್ಲಿ ಹೋಗಿ ರೋಗಿಗಳಿಗೆ ಚಿಕಿತ್ಸೆ ನೀಡದ್ದು ಇದೆ. ಈಗಲೂ ನಾನೊಂದು ಸೈಕಲ್‌ ಇಟ್ಟುಕೊಂಡಿದ್ದೇನೆ. ಮಂಗಳೂರಿಗೂ ಅದರಲ್ಲಿಯೇ ಬರಬೇಕು ಎಂದಿದ್ದೆ. ಆಟಕ್ಕೆ ಸಮಸ್ಯೆ ಆಗುತ್ತದೆ ಎಂಬ ಕಾರಣಕ್ಕೆ ಸೈಕಲ್‌ ಬಿಟ್ಟು ಬಂದಿದ್ದೇನೆ ಎಂದು ಡಾ. ಭಗವತಿ ಓಜಾ ಹೇಳಿದರು.

ಮಹೇಶ ಎಸ್. ಕನ್ನೇಶ್ವರ

ಚಿತ್ರಗಳು: ಗೋವಿಂದರಾಜ ಜವಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT