ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರುತಿ ಹರಿಹರನ್ ಬೆಂಬಲಿಸಿ ಫೇಸ್‌ಬುಕ್‌ನಲ್ಲಿ ಅಭಿಯಾನ

Last Updated 22 ಅಕ್ಟೋಬರ್ 2018, 11:31 IST
ಅಕ್ಷರ ಗಾತ್ರ

ಬೆಂಗಳೂರು: ‘ನಿಮ್ಮ ಸಹಮತವಿದ್ದರೆ ನಿಮ್ಮ ಹೆಸರು ಸೇರಿಸಿ ದಯವಿಟ್ಟು share ಮಾಡಿ, ಹೆಚ್ಚು ಜನರಿಗೆ ತಲುಪಿಸಿ. ನಮ್ಮ ಸಣ್ಣ ಸಿನಿಕತೆಗಳನ್ನು ಸದ್ಯಕ್ಕೆ ಮರೆತು ಬಿಡೋಣ...’ ಎನ್ನುವ ಒಕ್ಕಣೆಯೊಂದಿಗೆ ದೆಹಲಿಯ ಜವಹರಲಾಲ್ ನೆಹರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ ಅವರು ಆರಂಭಿಸಿದ ಅಭಿಯಾನಕ್ಕೆ ಫೇಸ್‌ಬುಕ್‌ನಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಹಲವರು ಮಂದಿ ವಾಟ್ಸ್ಯಾಪ್‌ ಸಂಖ್ಯೆಗಳಿಗೂ ಸಂದೇಶವನ್ನು ರವಾನಿಸಿ ಬೆಂಬಲ ಕೋರುತ್ತಿದ್ದಾರೆ.

‘ಅಕ್ಟೋಬರ್ ಮೊದಲ ವಾರದಲ್ಲಿ ಪುನರಾರಂಭಗೊಂಡ#MeTooಅಭಿಯಾನ ನಟಿ ಸಂಗೀತಾ ಭಟ್ ತಮ್ಮ ಅನುಭವ ಹಂಚಿಕೊಳ್ಳುವ ಮೂಲಕ ಕರ್ನಾಟಕಕ್ಕೂ ಕಾಲಿಟ್ಟಿತು. ಮುಂದುವರಿಕೆಯಾಗಿ ಶ್ರುತಿ ಹರಿಹರನ್ ತಮ್ಮ ಕೆಲವು ಅನುಭವಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡರು. ಅವರ ಪೋಸ್ಟ್’ಗೆ ಬಂದಿರುವ ಮುನ್ನೂರಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಅವರನ್ನು ವೈಯಕ್ತಿಕವಾಗಿ ನಿಂದಿಸಿವೆ. ಅಶ್ಲೀಲ ಭಾಷೆ, ಬೆದರಿಕೆಗಳೂ ಆ ಪ್ರತಿಕ್ರಿಯೆಗಳಲ್ಲಿವೆ’ ಎಂದು ಬಿಳಿಮಲೆ ಅವರು ಪೋಸ್ಟ್‌ನಲ್ಲಿ ಹೇಳಿದ್ದಾರೆ.

‘ಈ ಪ್ರತಿಕ್ರಿಯೆಗಳಲ್ಲಿ ಬಳಸಲಾಗಿರುವ ಭಾಷೆ ಮತ್ತು ಧಾಟಿ, ದೌರ್ಜನ್ಯದ ವಿರುದ್ಧ ಮಾತಾಡುವ ಹೆಣ್ಣುಗಳ ದನಿಯನ್ನೇ ಅಡಗಿಸುವಂತಿದ್ದು, ಮುಂದೆ ಯಾರೂ ಈ ಬಗ್ಗೆ ಮಾತನಾಡದಿರುವಂತೆ ಮಾಡುವಷ್ಟು ತೀಕ್ಷ್ಣವಾಗಿದೆ. ಇದು ಹೀಗೇ ಮುಂದುವರಿದರೆ, ಕನ್ನಡ ಚಿತ್ರರಂಗದಲ್ಲಿ ನಡೆದಿರಬಹುದಾದ ಇನ್ನೂ ದೊಡ್ಡ ಮಟ್ಟದ ದೌರ್ಜನ್ಯಗಳು, ಸ್ಟಾರ್ ನಟರ ಪ್ರಕರಣಗಳು ಬೆಳಕಿಗೇ ಬಾರದೆ ಉಳಿದುಬಿಡುವ ಆತಂಕವಿದೆ. ಅತ್ಯಾಚಾರವಿರಲಿ, ಲೈಂಗಿಕ ಕಿರುಕುಳದ ಕುರಿತು ಕೂಡಾ ಮಾತನಾಡುವುದು, ದೂರು ನೀಡುವುದು ಸುಲಭವಲ್ಲದ ಸಮಾಜದಲ್ಲಿ ನಾವಿದ್ದೇವೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಲೈಂಗಿಕ ಕಿರುಕುಳ ಮಹಿಳೆಯರ ದುಡಿಮೆಯ ಸ್ಪೇಸ್ ಕಸಿದುಕೊಳ್ಳುತ್ತದೆ. ಆದ್ದರಿಂದ ಇದು ಕೇವಲ ಒಬ್ಬ ನಟಿ, ಒಬ್ಬ ಪತ್ರಕರ್ತೆಯ ಸಮಸ್ಯೆ ಅಲ್ಲ. ಇದು ಕೇವಲ ಮಹಿಳೆಯರ ಪ್ರಶ್ನೆಯೂ ಅಲ್ಲ. ಇದು ಒಟ್ಟು ಸಮಾಜದ ಪ್ರಶ್ನೆ. ಮಹಿಳೆಯರ ಮೇಲೆ ವಾಗ್ದಾಳಿ ನಡೆಸುತ್ತ, ಅವರ ಆತ್ಮಸ್ಥೈರ್ಯ ಕಸಿಯುವ ಪ್ರಯತ್ನ ನಡೆಯಲು ಬಿಡಬಾರದು. ‘ಮಹಿಳೆ ಮಾತಾಡುತ್ತಿದ್ದಾಳೆ ಎಂದರೆ, ಮೊದಲು ಅದನ್ನು ಕೇಳಿಸಿಕೊಳ್ಳಿ, ಅದರ ಸರಿತಪ್ಪುಗಳನ್ನು ನಂತರ ನಿರ್ಧರಿಸಿ’ ಅನ್ನುತ್ತಾರೆ ಅಂಬೇಡ್ಕರ್. ಈಗಿನ ಪರಿಸ್ಥಿತಿಯಲ್ಲಿ ಮುಖ್ಯವಾಗಿ ಬೇಕಿರುವುದೇ ಈ ‘ಕೇಳಿಸಿಕೊಳ್ಳುವಿಕೆ’ ಎಂದು ಅವರು ಪ್ರತಿಪಾದಿಸಿದ್ದಾರೆ.

‘ನಮ್ಮ ಸಮಾಜದಲ್ಲಿ ಹೆಣ್ಣುಗಳು ಮಾತಾಡಲು ನಿರ್ಭೀತ ವಾತಾವರಣ ಸೃಷ್ಟಿಯಾಗಬೇಕು. ಮತ್ತು ಕೇಳಿಸಿಕೊಳ್ಳುವ ವ್ಯವಧಾನ ಹೆಚ್ಚಬೇಕು. #MeToo ಅಭಿಯಾನ ದುಡಿಯುವ ಮಹಿಳೆಯರ ಕರಾಳ ಅನುಭವಗಳನ್ನು ಬಿಚ್ಚಿಡುತ್ತಿದೆ. ಇದು ಹೊರಗೆ ಬಂದರಷ್ಟೆ ಸುಧಾರಣೆ ಸಾಧ್ಯ. ಆದ್ದರಿಂದ, ಮಾತನಾಡುವ ಹೆಣ್ಣುಮಕ್ಕಳ ಆತ್ಮಸ್ಥೈರ್ಯ ಕಸಿಯುವ ಪ್ರಯತ್ನಗಳನ್ನು ತಡೆಯಬೇಕಿದೆ. ಅಂಥವರ ಪರ ನಾಡಿನ ಎಲ್ಲ ಸಂವೇದನಾಶೀಲರೂ ದನಿಗೂಡಿಸಿ ಧೈರ್ಯ ತುಂಬಬೇಕಿದೆ’ ಎಂದು ಅವರು ಹೇಳಿದ್ದಾರೆ.

ಸೋಮವಾರ ಸಂಜೆ 5 ಗಂಟೆ ವೇಳೆಗೆ 61 ಮಂದಿ ಬಿಳಿಮಲೆ ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದ್ದರು. 43 ಮಂದಿ ಪೋಸ್ಟ್ ಶೇರ್ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT