ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ ರೈತನ ಪುತ್ರಿ ಶಿವನೂರು ಗ್ರಾಮದ ಕಾವೇರಿ ಕಾಲೇಜಿಗೇ ಫಸ್ಟ್

Last Updated 15 ಏಪ್ರಿಲ್ 2019, 14:14 IST
ಅಕ್ಷರ ಗಾತ್ರ

ಚನ್ನಮ್ಮನ ಕಿತ್ತೂರು: ‘ಶಿಕ್ಷಕರು ಪುಸ್ತಕ ಕೊಟ್ಟು ಓದು ಎಂದು ಪ್ರೋತ್ಸಾಹಿಸಿದರು. ಒಬ್ಬರು ಶುಲ್ಕ ಕಟ್ಟಲು ಹಣ ನೀಡಿದರು. ಕಷ್ಟಪಟ್ಟು ಓದಿದೆ. ಅದರ ಪ್ರತಿಫಲ ದಕ್ಕಿದೆ’ ಎಂದು ಖುಷಿ ಹಂಚಿಕೊಂಡವರು ತಾಲ್ಲೂಕಿನ ಶಿವನೂರು ಗ್ರಾಮದ ಕಾವೇರಿ ಮಹಾರುದ್ರಪ್ಪ ಹುಬ್ಬಳ್ಳಿ.

‘ಕಿತ್ತೂರು ನಾಡ ವಿದ್ಯಾವರ್ಧಕ ಸಂಘದ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದೇನೆ. ದ್ವಿತೀಯ ಪಿಯು ವಾಣಿಜ್ಯ ವಿಷಯದಲ್ಲಿ ಶೇ 92.66ರಷ್ಟು ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುವುದು ಹೆಮ್ಮೆ ಎನಿಸಿದೆ’ ಎಂದು ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.

‘ತಂದೆ ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಾರೆ. ತಾಯಿ ಟೈಲರಿಂಗ್ ಮಾಡುತ್ತಾರೆ. ಇದ್ದೊಬ್ಬ ತಮ್ಮ 9ನೇ ತರಗತಿಯಲ್ಲಿ ಓದುತ್ತಿದ್ದಾನೆ. ದ್ವಿತೀಯ ಪಿಯುಗಾಗಿ ಟ್ಯೂಷನ್ ಕ್ಲಾಸಿಗೆ ಹೋಗುತ್ತಿದ್ದಾಗ ಮೆಹಬೂಬ ಮುಲ್ತಾನಿ ಮತ್ತು ಭುವನಾ ಹಿರೇಮಠ ಶಿಕ್ಷಕರ ಪರಿಚಯದಿಂದ ಬೆಳಗಾವಿಯ ಅಶೋಕ ಚಂದರಗಿ ಅವರು ಶುಲ್ಕ ಕಟ್ಟಲು ಹಣ ನೀಡಿದರು. ಎಲ್ಲರ ಪ್ರೋತ್ಸಾಹ ನನ್ನ ಯಶಸ್ಸಿಗೆ ಕಾರಣವಾಗಿದೆ. ಎಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ’ ಎಂದರು.

ಕನ್ನಡದಲ್ಲಿ 95, ಇಂಗ್ಲಿಷ್‌ನಲ್ಲಿ 70, ಅರ್ಥಶಾಸ್ತ್ರ, ಬಿಜಿನೆಸ್ ಸ್ಟಡೀಸ್‌ನಲ್ಲಿ ನೂರಕ್ಕೆ ನೂರು, ರಾಜಕೀಯವಿಜ್ಞಾನದಲ್ಲಿ 98 ಮತ್ತು ಅಕೌಂಟ್ಸ್‌ನಲ್ಲಿ 93 ಅಂಕ ಪಡೆದಿದ್ದಾರೆ. ವಿದ್ಯಾರ್ಥಿನಿಯನ್ನು ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಆಡಳಿತ ಮಂಡಳಿ ಅಧ್ಯಕ್ಷ ಈರಣ್ಣ ಮಾರಿಹಾಳ, ಗೌರವ ಕಾರ್ಯದರ್ಶಿ ಜಗದೀಶ ವಸ್ತ್ರದ, ಆಡಳಿತ ಮಂಡಳಿ ಸದಸ್ಯರು ಮತ್ತು ಬೋಧಕ ಸಿಬ್ಬಂದಿ ಅಭಿನಂದಿಸಿದ್ದಾರೆ.

‘ಕಾವೇರಿಗೆ ಆರ್ಥಿಕ ತೊಂದರೆ ಎದುರಾಗಿದ್ದನ್ನು ಶಿಕ್ಷಕಿ, ಲೇಖಕಿ ಭುವನಾ ಹಿರೇಮಠ ಗಮನಕ್ಕೆ ತಂದಿದ್ದರು. ನೇರವಾಗಿ ಆಕೆಯ ಕಾಲೇಜಿನ ಖಾತೆಗೆ ಶುಲ್ಕದ ಹಣ ಕಳುಹಿಸಿದ್ದೆ. ಶಿಕ್ಷಕ ಮಾವಿನಕಟ್ಟಿ ಪುಸ್ತಕ ಕೊಡಿಸಿದ್ದರು. ಆ ಹುಡುಗಿ ಈಗ ಉತ್ತಮ ಅಂಕ ಗಳಿಸಿರುವುದು ಕೇಳಿ ಸಂತವಾಯಿತು. ಬಡತನದ ಬೇಗೆಯಲ್ಲಿಯೂ ಸಾಧನೆ ಮಾಡುವ ಇಂತಹ ಪ್ರತಿಭೆಗಳಿಗೆ ಎಷ್ಟು ಅಭಿನಂದನೆ ಹೇಳಿದರೂ ಸಾಲದು’ ಎಂದು ಚಂದರಗಿ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT