ಗೌರಿ ಲಂಕೇಶ್ ಹತ್ಯೆ: ಚಾಚಿಕೊಳ್ಳುತ್ತಲೇ ಇದೆ ಹಂತಕರ ಜಾಲ

7
ಕಾರ್ಯಾಚರಣೆಯ ಪೂರ್ಣಪಾಠ

ಗೌರಿ ಲಂಕೇಶ್ ಹತ್ಯೆ: ಚಾಚಿಕೊಳ್ಳುತ್ತಲೇ ಇದೆ ಹಂತಕರ ಜಾಲ

Published:
Updated:
Deccan Herald

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ರಾಜ್ಯ ಪೊಲೀಸ್ ಇಲಾಖೆ ಭೇದಿಸಿದೆ. ತನಿಖೆಯ ಆಳಕ್ಕೆ ಇಳಿದಂತೆ ಜಾಲದ ಬೇರು ಚಾಚಿಕೊಳ್ಳುತ್ತಲೇ ಇದೆ. ಇದುವರೆಗೆ ಹತ್ತು ಮಂದಿಯನ್ನು ಬಂಧಿಸಲಾಗಿದ್ದು, ಮಹಾರಾಷ್ಟ್ರದ ಮಾಸ್ಟರ್ ಮೈಂಡ್ ಅಮೋಲ್ ಕಾಳೆಗೆ ಹಿಟ್‌ಲಿಸ್ಟ್ ಕೊಟ್ಟ ರಾಜ್ಯದ ವ್ಯಕ್ತಿ ಸೇರಿದಂತೆ ಇನ್ನೂ ಕೆಲವರು ಪತ್ತೆಯಾಗಬೇಕಿದೆ.

‘ಅಧರ್ಮೀಯರ ವಿನಾಶ’ ಹೆಸರಿನಲ್ಲಿ ರಾಜ್ಯ ಹಾಗೂ ಹೊರರಾಜ್ಯದ 37 ಚಿಂತಕರನ್ನು ಕೊಲ್ಲಲು ಕಾರ್ಯಾಚರಣೆ ಪ್ರಾರಂಭಿಸಿದ್ದ ಈ ಜಾಲವು, ವ್ಯವಸ್ಥಿತವಾಗಿ ಸಂಚು ರೂಪಿಸಿ ಗೌರಿ ಅವರನ್ನು ಹತ್ಯೆ ಮಾಡಿತು. ಆ ಕೃತ್ಯದಲ್ಲಿ ಯಾರ‍್ಯಾರು ಯಾವ ಪಾತ್ರ ನಿರ್ವಹಿಸಿದ್ದರು, ಬಂಧಿತರ ಪೂರ್ವಾಪರವೇನು ಹಾಗೂ ಅವರು ಪೊಲೀಸರಿಗೆ ಎಲ್ಲಿ ಸೆರೆಸಿಕ್ಕರು ಎಂಬುದರ ವಿವರ ಇಲ್ಲಿದೆ.

ಯಾರಿವರು? ಹತ್ಯೆಯಲ್ಲಿ ಇವರ ಪಾತ್ರವೇನು?

ಅಮೋಲ್ ಕಾಳೆ: ಮಹಾರಾಷ್ಟ್ರದವನು. ಮೆಕ್ಯಾನಿಕ್ ಎಂಜಿನಿಯರಿಂಗ್ ಪದವೀಧರ. 2009ರಿಂದ ಅಲ್ಲಿನ ಧಾರ್ಮಿಕ ಸಂಘಟನೆಯೊಂದರಲ್ಲಿ ಗುರುತಿಸಿಕೊಂಡಿದ್ದ ಈತ, ಪ್ರಗತಿಪರರನ್ನು ಕೊಲ್ಲುವ ಸಲುವಾಗಿಯೇ ಪುಣೆ ಹಾಗೂ ಗೋವಾದಲ್ಲಿ 2014–15ರಲ್ಲಿ ವಿಶೇಷ ತರಬೇತಿ ಪಡೆದಿದ್ದ. ಈವರೆಗಿನ ತನಿಖೆ ಪ್ರಕಾರ ಗೌರಿ ಹತ್ಯೆ ಪ್ರಕರಣದಲ್ಲಿ ಈತನೇ ಮಾಸ್ಟರ್ ಮೈಂಡ್.

ಅಮಿತ್ ದೆಗ್ವೇಕರ್: ಕಾಳೆ ಗುರುತಿಸಿಕೊಂಡಿದ್ದ ಸಂಘಟನೆಯಲ್ಲೇ ಇದ್ದ ಅಮಿತ್, ಪುಣೆಯಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ. ಈತನಿಗೆ ಕಾಳೆಯೇ ಶಸ್ತ್ರಾಸ್ತ್ರ ಬಳಕೆ ಬಗ್ಗೆ ತರಬೇತಿ ನೀಡಿದ್ದ. ಗೌರಿ ಅವರ ಮನೆ ಹತ್ತಿರ ಹೋಗಿ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದು ಈತನೇ.

ಕೆ.ಟಿ.ನವೀನ್‌ಕುಮಾರ್: ಮಂಡ್ಯದ ಮದ್ದೂರಿನವನು. ಹಿಂದೂ ಯುವ ಸೇನೆ ಅಧ್ಯಕ್ಷನಾದ ಈತ, ಅಮೋಲ್ ಕಾಳೆಗೆ ಜೀವಂತ ಗುಂಡುಗಳನ್ನು ಪೂರೈಸಿದ್ದ ಆರೋಪ ಎದುರಿಸುತ್ತಿದ್ದಾನೆ.

ಪರಶುರಾಮ ವಾಘ್ಮೋರೆ: ವಿಜಯಪುರದ ಈತ, ಗೌರಿ ಅವರ ಮೇಲೆ ಗುಂಡಿನ ದಾಳಿ ನಡೆಸಿದವನು. ಜಾಲದ ಸದಸ್ಯನೊಬ್ಬ ಈತನಿಗೆ ವಿಜಯಪುರದ ಅರಣ್ಯ ಪ್ರದೇಶದಲ್ಲೇ ಶಸ್ತ್ರಾಸ್ತ್ರ ಬಳಕೆಯ ತರಬೇತಿ ನೀಡಿದ್ದ.

ಪ್ರವೀಣ್ ಅಲಿಯಾಸ್ ಸುಜಿತ್: ಶಿಕಾರಿಪುರದ ಕಪ್ಪನಹಳ್ಳಿ ಗ್ರಾಮದವನು. ನವೀನ್‌ನನ್ನು ಕಾಳೆಗೆ ಪರಿಚಯ ಮಾಡಿಸಿದವನು.

ಮನೋಹರ್ ಯಡವೆ: ವಿಜಯಪುರದ ರತ್ನಾಪುರ ಗ್ರಾಮದ ಯಡವೆ, ಅಮೋಲ್ ಕಾಳೆ ಹಾಗೂ ಅಮಿತ್‌ಗೆ ಹಲವು ವರ್ಷಗಳಿಂದ ಪರಿಚಿತ. ಜಾಲಕ್ಕೆ ಹುಡುಗರನ್ನು ಸೇರಿಸುತ್ತಿದ್ದವನು.

ಗಣೇಶ್ ಮಿಸ್ಕಿನ್: ಹುಬ್ಬಳ್ಳಿಯವನು. ಅಗರಬತ್ತಿ ತಯಾರಿಕಾ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಗೌರಿ ಅವರಿಗೆ ಗುಂಡಿಕ್ಕಲು ವಾಘ್ಮೋರೆಯನ್ನು ಬೈಕ್‌ನಲ್ಲಿ ಕರೆದುಕೊಂಡ ಆರೋಪ ಈತನ ಮೇಲಿದೆ.

ಅಮಿತ್ ಬದ್ದಿ: ಈತನದ್ದೂ ಹುಬ್ಬಳ್ಳಿಯೇ. ಗಣೇಶ್‌ನ ಬಾಲ್ಯ ಸ್ನೇಹಿತ. ಸ್ಥಳೀಯ ಸಂಘಟನೆಯೊಂದರ ಕಾರ್ಯಕರ್ತ. ಕಾಳೆ ಹಾಗೂ ಅಮಿತ್‌ಗೆ ವಾಹನಗಳ ವ್ಯವಸ್ಥೆ ಮಾಡಿಕೊಟ್ಟ ಆರೋಪ ಎದುರಿಸುತ್ತಿದ್ದಾನೆ.

ಮೋಹನ್ ನಾಯಕ್: ಸುಳ್ಯದ ಸಂಪಾಜೆ ಗ್ರಾಮದವನು. ಶಸ್ತ್ರಾಸ್ತ್ರ ವ್ಯಾಪಾರದ ಜತೆಗೆ, ಆಯುರ್ವೇದ ವೈದ್ಯ. ಬೆಂಗಳೂರಿನ ಕುಂಬಳಗೋಡು ಬಳಿ ಕ್ಲಿನಿಕ್ ಇಟ್ಟುಕೊಂಡಿದ್ದ ಈತ, ಹಂತಕರಿಗೆ ಕ್ಲಿನಿಕ್‌ನಲ್ಲೇ ಆಶ್ರಯ ಕೊಟ್ಟಿದ್ದ.

ರಾಜೇಶ್ ಬಂಗೇರ: ಮಡಿಕೇರಿಯವನು. ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕ. ಕಾಳೆಯ ನಿಕಟವರ್ತಿ. ಆತನಿಗೆ 20 ಗುಂಡುಗಳನ್ನು ಪೂರೈಸಿದ್ದ. ಅಲ್ಲದೆ, ಐದು ಹುಡುಗರಿಗೆ ಶಸ್ತ್ರಾಸ್ತ್ರ ಬಳಿಕೆ ಬಗ್ಗೆ ತರಬೇತಿ ಕೊಟ್ಟಿದ್ದ.

ಎಲ್. ಸುರೇಶ್: ತುಮಕೂರಿನ ಕುಣಿಗಲ್‌ನವನು. ಸಿವಿಲ್ ಗುತ್ತಿಗೆದಾರ ಹಾಗೂ ಶಿಕ್ಷಕ. ಆರೋಪಿಗಳಿಗೆ ಆಶ್ರಯ ನೀಡಿದ ಹಾಗೂ ಸಾಕ್ಷ್ಯನಾಶ ಮಾಡಿದ ಆರೋಪ ಈತನ ಮೇಲಿದೆ.

ಯಾರ‍್ಯಾರು ಎಲ್ಲಿ ಸಿಕ್ಕರು?

ಫೆ.18: ಕೆ.ಟಿ.ನವೀನ್‌ಕುಮಾರ್. ಉಪ್ಪಾರಪೇಟೆ

ಮೇ 15: ಪ್ರವೀಣ್ ಅಲಿಯಾಸ್ ಸುಜಿತ್. ಉಡುಪಿ

ಮೇ 21: ಕಾಳೆ, ಅಮಿತ್, ಮನೋಹರ್. ದಾವಣಗೆರೆ

ಜೂನ್ 7: ಪರಶುರಾಮ ವಾಘ್ಮೋರೆ. ವಿಜಯಪುರ

ಜುಲೈ 20: ಗಣೇಶ್, ಅಮಿತ್ ಬದ್ದಿ. ಹುಬ್ಬಳ್ಳಿ

ಜುಲೈ 22: ಮೋಹನ್ ನಾಯಕ್. ಸುಳ್ಯ

ಜುಲೈ 23: ರಾಜೇಶ್ ಬಂಗೇರ. ಮಡಿಕೇರಿ

ಜುಲೈ 25: ಎಲ್.ಸುರೇಶ. ಬೆಂಗಳೂರು

ಜಪ್ತಿಯಾಗಿರುವ ವಸ್ತುಗಳು

48 ಮೊಬೈಲ್‌ಗ‌ಳು, ಐದು ಡೈರಿಗಳು, 37 ಎಡಪಂಥೀಯ ಚಿಂತಕರ ಹೆಸರುಗಳ ಪಟ್ಟಿ, ಗೌರಿ ಲಂಕೇಶ್‌ ಮನೆ ಮಾರ್ಗದ ಸ್ಕೆಚ್‌, ಬೆಂಗಳೂರಿನ ನಕ್ಷೆ, ಶಿವ–ಪಾರ್ವತಿ, ಕೃಷ್ಣ–ರುಕ್ಮಿಣಿಯ ಫೋಟೊಗಳು, ₹ 22,931 ನಗದು, ಅಗರಬತ್ತಿ ಪೊಟ್ಟಣಗಳು, ಎರಡು ಕಪ್ಪು ಬ್ಯಾಗ್‌ಗಳು.

ಹಂತಕರ ಹಿಟ್‌ಲಿಸ್ಟ್‌ನಲ್ಲಿದ್ದ ರಾಜ್ಯದವರು

ಸಾಹಿತಿ ಗಿರೀಶ್ ಕಾರ್ನಾಡ್

ಪತ್ರಕರ್ತೆ ಗೌರಿ ಲಂಕೇಶ್

ಸಾಹಿತಿ ಚಂದ್ರಶೇಖರ ಪಾಟೀಲ

ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ

ಸಾಹಿತಿ ಬಂಜಗೆರೆ ಜಯಪ್ರಕಾಶ್

ಲೇಖಕಿ ಬಿ.ಟಿ.ಲಲಿತಾ ನಾಯಕ್

ಸಾಹಿತಿ ಕೆ.ಎಸ್.ಭಗವಾನ್

 

ಬರಹ ಇಷ್ಟವಾಯಿತೆ?

  • 21

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !