ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಸಾಮಾನ್ಯರ ನಡುವಿನ ‘ಬಸವಣ್ಣ’

ಧರ್ಮ ಮೀರಿ ನಿಂತ ಸಂತ
Last Updated 20 ಅಕ್ಟೋಬರ್ 2018, 19:04 IST
ಅಕ್ಷರ ಗಾತ್ರ

ಗದಗ: ‘ಸತ್ಯ ನಿರೂಪಣೆಗೆ ಸಂಘರ್ಷ ಅನಿವಾರ್ಯ’ ಎನ್ನುತ್ತಿದ್ದ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ, ಬದುಕಿನುದ್ದಕ್ಕೂ ಸಮಾನತೆಯ ಮೌಲ್ಯಗಳನ್ನು ಸಮಾಜದಲ್ಲಿ ಜಾತಿ, ಮತ, ಲಿಂಗಭೇದವಿಲ್ಲದೇ ಜಾರಿಗೊಳಿಸಲು ಹೋರಾಟ ನಡೆಸಿದ್ದರು.

12ನೇ ಶತಮಾನದ ಶರಣರು ರಾಜಪ್ರಭುತ್ವದೊಂದಿಗೆ ಸಂಘರ್ಷ ಮಾಡುವ ಅನಿವಾರ್ಯತೆ ಉಂಟಾಗಿತ್ತು. ಪಟ್ಟಭದ್ರ ಹಿತಾಸಕ್ತಿಗಳು ಎಲ್ಲ ಕಾಲದಲ್ಲೂ ಬದಲಾವಣೆಯನ್ನು ವಿರೋಧಿಸುತ್ತಾರೆ ಎನ್ನುತ್ತಿದ್ದ ಅವರು, ರಾಜಸತ್ತೆಯ ಈ ಮಠವನ್ನು ಪ್ರಜಾಸತ್ತೆಯ ಮಠವನ್ನಾಗಿ ಪರಿವರ್ತಿಸಿದ್ದರು. ಸಕಲ ಜೀವಾತ್ಮರಿಗೆ ಲೇಸು ಬಯಸುವವರೇ ಕುಲಜರು ಎಂಬ ಬಸವ ಸಂದೇಶವನ್ನು ಅಕ್ಷರಶಃ ಆಚರಣೆಗೆ ತಂದಿದ್ದರು.

15ನೇ ಶತಮಾನದ ಶಿವಯೋಗಿ ಎಡೆಯೂರು ತೋಂಟದ ಸಿದ್ಧಲಿಂಗ ಶ್ರೀಗಳ ನೇರ ವಾರಸುದಾರಿಕೆಯ ಮಠ ತೋಂಟದಾರ್ಯ ಸಂಸ್ಥಾನ ಮಠ. ಅಲ್ಲಮಪ್ರಭು ಪೀಠ ಪರಂಪರೆಯ ಈ ಮಠದ 19ನೇ ಪೀಠಾಧಿಪತಿಯಾಗಿ ಬಂದವರು ಸಿದ್ಧಲಿಂಗ ಸ್ವಾಮೀಜಿ. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದ ಬೆನ್ನಲ್ಲೇ, ಅಂದರೆ 25 ವರ್ಷದ ಯುವಕನಿದ್ದಾಗಲೇ (1974) ಪೀಠಾಧಿಪತಿಯಾಗಿ ನೇಮಕಗೊಂಡಿದ್ದರು. ಬಸವ ಪರಂಪರೆಯನ್ನು ನಾಲ್ಕು ದಶಕಗಳ (2018) ಕಾಲ ಮುಂದುವರಿಸಿದ್ದರು.

ಮಠದ ಬಾಗಿಲನ್ನು ಎಲ್ಲ ಜನಾಂಗದವರಿಗೆ ಮುಕ್ತವಾಗಿರಿಸಿ, ‘ಜನಸಾಮಾನ್ಯರ ಸ್ವಾಮೀಜಿ’ ಎನಿಸಿಕೊಂಡಿದ್ದರು. ತಮ್ಮ ವಿಧಾಯಕ ಕಾರ್ಯಗಳಿಂದ ಧರ್ಮಕ್ಕೆ ಹೊಸ ವ್ಯಾಖ್ಯೆಯನ್ನು ಕಲ್ಪಿಸಿ, ಅದರ ಹರವನ್ನು ವಿಸ್ತರಿಸಿದರು. ಅನ್ನ, ಅಕ್ಷರ, ಪುಸ್ತಕ ದಾಸೋಹದ ಮೂಲಕ ತ್ರಿವಿಧ ದಾಸೋಹ ಪರಂಪರೆ ಹುಟ್ಟುಹಾಕಿದ್ದರು.

ಭಕ್ತರನ್ನು ಮತೀಯ ಚೌಕಟ್ಟಿನಿಂದ ಬಿಡಿಸಿ, ಮಾನವೀಯತೆಯ ವಿಸ್ತಾರಕ್ಕೆ ಅಣಿಗೊಳಿಸಿದ್ದರಿಂದ ಈ ಮಠವು ಸರ್ವಮತ ಬಾಂಧವರ ಪ್ರೀತಿಯ ಪೀಠವಾಗಿತ್ತು.
ಸಿದ್ಧಲಿಂಗ ಸ್ವಾಮೀಜಿ ಅವರ ವಿದ್ಯಾ ಗುರುಗಳೂ ಆಗಿದ್ದ, ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರು, ‘ವಿರಕ್ತ ಪರಂಪರೆಯ ಆ ತುದಿ ಕಲ್ಯಾಣದ ಅಲ್ಲಮಪ್ರಭು. ಈ ತುದಿ ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ’ ಎಂದು ಬಣ್ಣಿಸಿದ್ದರು.

‘ತಾಯಿಯಾದವಳು ಹೊಟ್ಟೆ, ನೆತ್ತಿ ನೋಡುವಳು’ ಎನ್ನುವ ಮಾತಿನಂತೆ ‘ತಾಯಿ’ ಪದದ ಅನ್ವರ್ಥದಂತಿದ್ದ ತೋಂಟದ ಶ್ರೀಗಳು ಭಕ್ತ ಸಮೂಹಕ್ಕೆ ನಿಜ ಧರ್ಮದ ‘ಅನ್ನಪೂರ್ಣೆ’ ಆಗಿದ್ದರು. ‘ಮನುಷ್ಯ ಮನುಷ್ಯನನ್ನು ಹೊತ್ತುಕೊಂಡು ನಡೆಯುವುದು ಮಾನವೀಯತೆ ವಿರೋಧಿ’ಎನ್ನುತ್ತಿದ್ದ ಅವರು, ಮಠದ ಜಾತ್ರೆಯ ಮೂಲಕ ವೈಚಾರಿಕ ಕ್ರಾಂತಿಯನ್ನೇ ಉಂಟು ಮಾಡಿದ್ದರು.

ಪೀಠಾಧಿಪತಿಯಾದ ನಂತರ ಅಡ್ಡಪಲ್ಲಕ್ಕಿ ಸೇವೆ ನಿಲ್ಲಿಸಿ ಸರಳತೆಯ ಮೇಲ್ಪಂಕ್ತಿ ಹಾಕಿದ್ದರು. ಪಲ್ಲಕ್ಕಿಯಲ್ಲಿ ವಚನಗಳ ಕಟ್ಟುಗಳನ್ನಿಟ್ಟು, ತೇರು ಸಾಗುವಷ್ಟು ದೂರ ಜನಸಾಮಾನ್ಯರ ಜತೆಗೆ ಕಾಲ್ನಡಿಗೆಯಲ್ಲೇ ಸ್ವಾಮೀಜಿ ಸಾಗುತ್ತಿದ್ದರು.

ಕೋಮು ಸಾಮರಸ್ಯ ಬೆಳೆಸುವ ವಿಶಿಷ್ಟ ಉತ್ಸವವಾಗಿ ಈ ಜಾತ್ರೆಯನ್ನು ಅವರು ರೂಪಿಸಿದ್ದರು.

ಮಠದಲ್ಲಿ 40 ವರ್ಷಗಳಿಂದ ನಿರಂತರವಾಗಿ ಪ್ರತಿವಾರ ‘ಶಿವಾನುಭವ’ ಕಾರ್ಯಕ್ರಮ ಆಯೋಜಿಸಿ, ಅಧ್ಯಾತ್ಮದ ಜತೆಗೆ ಸಾಹಿತ್ಯ, ಸಂಗೀತ, ರಂಗಕಲೆ, ಸರ್ವ ಧರ್ಮಗಳ ಉತ್ತಮ ವಿಚಾರಗಳ ಮಂಡನಾ ವೇದಿಕೆಯಾಗಿ ಅದನ್ನು ಬೆಳೆಸಿದ್ದರು. ದಲಿತ, ಹಿಂದುಳಿದ ಸಮುದಾಯದ ವಿದ್ಯಾರ್ಥಿಗಳನ್ನು ಮಠದಲ್ಲಿಟ್ಟುಕೊಂಡು, ಅವರನ್ನು ಮಠಾಧೀಶರನ್ನಾಗಿ ಮಾಡಿದರು.

ದಲಿತರ ಕೇರಿ, ಲಂಬಾಣಿ ತಾಂಡಾಗಳನ್ನು ದತ್ತು ತೆಗೆದುಕೊಂಡರು. ಮಠದಲ್ಲಿ ಅಂತರ್ಜಾತಿ ವಿವಾಹ ಸೇರಿ ನೂರಾರು ಸಾಮೂಹಿಕ ವಿವಾಹಗಳಾದವು. ದೆಹಲಿಯ ಕರೋಲಭಾಗದ ಜಾಟವಾ ಜನಾಂಗದ ಭಕ್ತರಿಗೆ ಬಸವಧರ್ಮ ದೀಕ್ಷೆ ನೀಡುವ ಮೂಲಕ ಕನ್ನಡ ನಾಡಿನಾಚೆಗೂ ಬಸವತತ್ವ ಪ್ರಸಾರ ಕೈಗೊಂಡರು. ಮಠದಲ್ಲಿ ಲಿಂಗಾಯತ ಅಧ್ಯಯನ ಸಂಸ್ಥೆ ಸ್ಥಾಪಿಸಿ, ಒಂದು ವಿಶ್ವವಿದ್ಯಾಲಯ ಪ್ರಸಾರಾಂಗ ಮಾಡುವಷ್ಟು ಕೆಲಸವನ್ನು ಸ್ವಾಮೀಜಿ ಮಾಡಿದ್ದಾರೆ.

ಬಸವಾದಿ ಶರಣರ ವಚನ ಸಾಹಿತ್ಯ ಸೇರಿದಂತೆ 500ಕ್ಕೂ ಹೆಚ್ಚು ಶೀರ್ಷಿಕೆಯ ಪುಸ್ತಕಗಳು ಪ್ರಕಟಿಸಿದ್ದಾರೆ.

ಕಾಯಕ ದಾಸೋಹದ ಜೊತೆಗೆ ತೋಂಟದಾರ್ಯ ಶ್ರಿಗಳು ಪುಸ್ತಕ ಪ್ರೇಮಿಯೂ ಆಗಿದ್ದರು.

ಕನ್ನಡ ನಾಡು, ನುಡಿ, ನೆಲ, ಜಲದ ಪ್ರಶ್ನೆ ಎದುರಾದಾಗಲೆಲ್ಲ ಸ್ವಾಮೀಜಿ ಬೀದಿಗಿಳಿದು ಹೋರಾಟ ನಡೆಸಿದ್ದರು. ಗೋಕಾಕ ಚಳವಳಿಯಲ್ಲಿ ಅವರ ನಿರಂತರ ಹೋರಾಟ ಸ್ಮರಣೀಯ. ಅವರ ನೇತೃತ್ವದಲ್ಲಿ ಗೋಕಾಕ ವರದಿ ಜಾರಿಗಾಗಿ 1982ರಲ್ಲಿ ಸಿಂದಗಿಯಲ್ಲಿ ಮೊದಲ ಬಹಿರಂಗ ಉಪವಾಸ ಸತ್ಯಾಗ್ರಹ ನಡೆಯಿತು.

ಶ್ರೀಗಳ ದಿಟ್ಟ ನಿರ್ಧಾರ ಫಲವಾಗಿ ನೂರಾರು ಹೋರಾಟಗಾರರು ಚಳವಳಿಯಲ್ಲಿ ಧುಮುಕಿದರು. ಈ ಹೋರಾಟಕ್ಕೆ ಜಯ ಲಭಿಸಿದ್ದು ಇತಿಹಾಸ. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವಂತೆ, ನಂಜುಂಡಪ್ಪ ವರದಿ ಅನುಷ್ಠಾನಗೊಳಿಸುವಂತೆ, ಬೆಳಗಾವಿ ಗಡಿ ಸಮಸ್ಯೆ ಪರಿಹಾರಕ್ಕಾಗಿ, ಪೋಸ್ಕೊ ಕಂಪನಿ ವಿರುದ್ಧ ನಡೆಸಿದ ಹೋರಾಟ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿವೆ. ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯ ಅಪರೂಪದ ಜೀವವೈವಿಧ್ಯ ತಾಣ ಕಪ್ಪತಗುಡ್ಡದ ಉಳಿವಿಗಾಗಿ ಹೋರಾಟ ನಡೆಸಿದ್ದರು.

ಇದರ ಫಲವಾಗಿ ಸರ್ಕಾರ ಇದನ್ನು ಸಂರಕ್ಷಿತ ಮೀಸಲು ಅರಣ್ಯ ಪ್ರದೇಶವೆಂದು ಘೋಷಿಸಿತು. ಮಹದಾಯಿ ನದಿ ನೀರಿಗಾಗಿ ಹೋರಾಟ ಹಾಗೂ ಲಿಂಗಾಯತ ಧರ್ಮ ಪರ ಹೋರಾಟಗಳಲ್ಲೂ ಅವರು ಸಕ್ರಿಯರಾಗಿದ್ದರು.

ಲಿಂಗಾಯತ ಧರ್ಮಕ್ಕಾಗಿ ಹೋರಾಟ

ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಪ್ರಾರಂಭಗೊಂಡಿದ್ದೇ ಗದಗ ನೆಲದಿಂದ. ಸಿದ್ಧಲಿಂಗ ಸ್ವಾಮೀಜಿ ಈ ಹೋರಾಟದ ಮುಂಚೂಣಿಯಲ್ಲಿದ್ದರು. ‘ಬಸವಣ್ಣ ಸ್ಥಾಪಿಸಿದ ಸಮಾನತೆ ಸಾರುವ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ಸಿಗುವವರೆಗೆ ಹೋರಾಟ ನಿರಂತರ. ಈ ಹೋರಾಟ ಬೆಂಬಲಿಸಿದವರನ್ನು ಸಮಾಜ ಸ್ಮರಿಸಬೇಕು. ವಿರೋಧಿಸಿದವರನ್ನು ಹಾಗೂ ವಿರೋಧಿಸುತ್ತಿರುವವರನ್ನು ಸಮಾಜ ಉಪೇಕ್ಷಿಸಬೇಕು’ ಎಂದು ಅವರು ಶುಕ್ರವಾರವಷ್ಟೇ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT