ಶನಿವಾರ, ಮಾರ್ಚ್ 6, 2021
26 °C

ಗೌರಿ ಹಂತಕರ ಆಶ್ರಯಕ್ಕೆ ಕ್ಲಿನಿಕ್ ಬಿಟ್ಟುಕೊಟ್ಟಿದ್ದ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಎಸ್‌ಐಟಿ ಬಲೆಗೆ ಬಿದ್ದಿರುವ ಮೋಹನ್‌ ನಾಯಕ್, ಗೌರಿ ಅವರ ಚಲನವಲನ ಗಮನಿಸಲು ನಗರಕ್ಕೆ ಬಂದಿದ್ದ ಮಹಾರಾಷ್ಟ್ರದ ಅಮೋಲ್ ಕಾಳೆ ಹಾಗೂ ಅಮಿತ್‌ ದೆಗ್ವೇಕರ್‌ಗೆ ಕುಂಬಳಗೋಡಿನ ತನ್ನ ಕ್ಲಿನಿಕ್‌ನಲ್ಲೇ ಆಶ್ರಯ ಕೊಟ್ಟಿದ್ದ!

‘ಸುಳ್ಯದ ಸಂಪಾಜೆ ಗ್ರಾಮದವನಾದ ಮೋಹನ್, ವೃತ್ತಿಯಲ್ಲಿ ಆಯುರ್ವೇದ ವೈದ್ಯ. ಮೊದಲು ಮಹಾರಾಷ್ಟ್ರದ ಸಂಘಟನೆಯೊಂದರಲ್ಲಿ ಸದಸ್ಯನಾಗಿದ್ದ. ಅಲ್ಲಿ ಆತನಿಗೆ ಪ್ರಕರಣದ ಕಿಂಗ್‌ಪಿನ್ ಕಾಳೆಯ ಪರಿಚಯವಾಗಿತ್ತು. ರಾಜ್ಯದಲ್ಲೂ ಎರಡು ಸಂಘಟನೆಗಳ ಜತೆ ಮೋಹನ್ ಗುರುತಿಸಿಕೊಂಡಿದ್ದ’ ಎಂದು ಎಸ್‌ಐಟಿ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಬುಧವಾರ ಸಂಪಾಜೆ ಗ್ರಾಮದಲ್ಲೇ ಆರೋಪಿಯನ್ನು ವಶಕ್ಕೆ ಪಡೆದ ಅಧಿಕಾರಿಗಳು, ಮೂರನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಧೀಶರು ಆತನನ್ನು ಆರು ದಿನ ಪೊಲೀಸರ ಕಸ್ಟಡಿಗೆ ಒಪ್ಪಿಸಿದ್ದಾರೆ.

‘ಮೋಹನ್, ಅಕ್ಯುಪಂಕ್ಚರ್‌ ಕ್ಲಿನಿಕ್ ನಡೆಸಲು ಕುಂಬಳಗೋಡಿನಲ್ಲಿ ಕೊಠಡಿ ಬಾಡಿಗೆ ಪಡೆದಿದ್ದ. ಗೌರಿ ಅವರನ್ನು ಕೊಲ್ಲಲು ನಿರ್ಧರಿಸಿದ ಬಳಿಕ ಮೋಹನ್‌ನನ್ನು ಭೇಟಿಯಾಗಿದ್ದ ಕಾಳೆ, ‘ಧರ್ಮದ ಉಳಿವಿಗಾಗಿ ಒಂದು ಕಾರ್ಯ ಆಗಬೇಕಿದೆ. ಹೀಗಾಗಿ, ನಗರಕ್ಕೆ ಬರುತ್ತಿದ್ದೇವೆ. ನಾವು ಉಳಿದುಕೊಳ್ಳಲು ವ್ಯವಸ್ಥೆ ಮಾಡು’ ಎಂದಿದ್ದ. ಅದಕ್ಕೆ ಒಪ್ಪಿಕೊಂಡ ಆತ, ಕಾಳೆ ಹಾಗೂ ಅಮೋಲ್‌ ಉಳಿದುಕೊಳ್ಳಲು ತನ್ನ ಕ್ಲಿನಿಕ್‌ನಲ್ಲೇ ವ್ಯವಸ್ಥೆ ಮಾಡಿದ್ದ’ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ತಿಳಿಸಿದರು.

‘ಪ್ರತಿದಿನ ಗೌರಿ ಅವರ ಮನೆ ಹತ್ತಿರ ಹೋಗುತ್ತಿದ್ದ ಕಾಳೆ ಹಾಗೂ ಅಮಿತ್, ಅವರು ಯಾವ ಸಮಯಕ್ಕೆ ಕಚೇರಿಗೆ ಹೋಗುತ್ತಾರೆ? ಯಾವ ಸಮಯಕ್ಕೆ ಮನೆಗೆ ವಾಪಸಾಗುತ್ತಾರೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿದ್ದರು. ಅಲ್ಲದೆ, ಹತ್ಯೆಗೈದ ಬಳಿಕ ಸುಲಭವಾಗಿ ಪರಾರಿಯಾಗಲು ಅಡ್ಡದಾರಿಗಳನ್ನೂ ಹುಡುಕಿದ್ದರು. ಅಕ್ಬೋಬರ್ ಮೊದಲ ವಾರದಲ್ಲಿ ವಿಜಯಪುರದ ಪರಶುರಾಮ ವಾಘ್ಮೋರೆಯನ್ನೂ (ಗೌರಿಗೆ ಗುಂಡಿಕ್ಕಿದವನು) ಕರೆಸಿಕೊಂಡಿದ್ದ ಅವರು, ಯಾವ ರೀತಿ ಕೊಲೆ ಮಾಡಿ ಪರಾರಿಯಾಗಬೇಕು ಎಂಬುದನ್ನು ವಿವರಿಸಿದ್ದರು.’

‘ತಯಾರಿ ಪೂರ್ಣಗೊಂಡ ನಂತರ ಆರೋಪಿಗಳು ವಾಸ್ತವ್ಯವನ್ನು ಸೀಗೆಹಳ್ಳಿಗೆ ಬದಲಾಯಿಸಿದ್ದರು. ಸೆ.3ರಂದು ವಾಘ್ಮೋರೆಯನ್ನು ಪುನಃ ಆ ಮನೆಗೆ ಕರೆಸಿಕೊಂಡು, ‘ಗೌರಿಯನ್ನು ನಾಳೆಯೇ ಹೊಡೆಯಬೇಕು’ ಎಂದಿದ್ದರು. ಅಂತೆಯೇ ಸೆ.4ರ ಸಂಜೆ ಒಬ್ಬಾತ (ಇನ್ನೂ ಹೆಸರು ಗೊತ್ತಾಗಿಲ್ಲ) ವಾಘ್ಮೋರೆಯನ್ನು ಬೈಕ್‌ನಲ್ಲಿ ಮನೆ ಹತ್ತಿರ ಕರೆದುಕೊಂಡು ಹೋಗಿದ್ದ. ಅಷ್ಟರೊಳಗೆ ಗೌರಿ ಅವರು ಮನೆಯೊಳಗೆ ಹೋಗಿದ್ದರಿಂದ ಸಂಚು ವಿಫಲವಾಗಿತ್ತು.’

‘ಆ ದಿನ ಕೆಲಸ ಆಗದಿದ್ದಕ್ಕೆ ಕೆಂಡಾಮಂಡಲರಾಗಿದ್ದ ಕಾಳೆ ಹಾಗೂ ಅಮೋಲ್, ವಾಘ್ಮೋರೆಗೆ ಬೈದಿದ್ದರು. ಮರುದಿನ (ಸೆ.5) ಬೆಳಿಗ್ಗೆ 5.30ಕ್ಕೇ ನಿದ್ರೆಯಿಂದ ಆತನನ್ನು ಎಬ್ಬಿಸಿ, ‘ಇವತ್ತು ಕೆಲಸ ಆಗಲೇಬೇಕು. ನೀನು ಭಯಬೀಳಬಾರದು. ಮನಸ್ಸು ಶಾಂತವಾಗಿರಲಿ’ ಎಂದು ಆರು ತಾಸು ಧ್ಯಾನ ಮಾಡಿಸಿದ್ದರು. ಆ ನಂತರ ಮಧ್ಯಾಹ್ನವೇ ಆತ ಸಹಚರನೊಂದಿಗೆ ಗೌರಿ ಮನೆ ಹತ್ತಿರ ಹೋಗಿ ಸಮೀಪದ ಪಾರ್ಕ್‌ನಲ್ಲಿ ಕುಳಿತಿದ್ದ. ರಾತ್ರಿ 8.10ಕ್ಕೆ ಗೌರಿ ಬಂದಾಗ ಕಾರನ್ನು ಹಿಂಬಾಲಿಸಿಕೊಂಡು ಹೋದ ಅವರಿಬ್ಬರು, ಮನೆ ಎದುರೇ ಗುಂಡಿಕ್ಕಿ ಪರಾರಿಯಾಗಿದ್ದರು’ ಎಂದು ವಿವರಿಸಿದರು.

**
ಮೂರು ತಿಂಗಳ ಬಳಿಕ ಕ್ಲಿನಿಕ್ ಬಂದ್
‘ಗೌರಿ ಹತ್ಯೆ ನಡೆದ ಬಳಿಕವೂ ಮೋಹನ್ ಮೂರು ತಿಂಗಳು ಕ್ಲಿನಿಕ್ ನಡೆಸಿದ್ದ. ತಕ್ಷಣಕ್ಕೆ ಖಾಲಿ ಮಾಡಿದರೆ, ಸ್ಥಳೀಯರಿಗೆ ಅನುಮಾನ ಬರಬಹುದು ಎಂದು ಆತ ಯೋಚಿಸಿದ್ದ. ಕಳೆದ ಫೆಬ್ರುವರಿ ಮೊದಲ ವಾರದಲ್ಲಿ ಕ್ಲಿನಿಕ್ ಬಂದ್‌ ಮಾಡಿ, ಮಡಿಕೇರಿಯ ಕುಶಾಲನಗರದಲ್ಲಿ ಕ್ಲಿನಿಕ್ ತೆರೆದಿದ್ದ’ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
**
ಕೋಡ್‌ವರ್ಡ್‌ನಲ್ಲಿ ಮೋಹನ್ ಹೆಸರು!
‘ಕಾಳೆ ತನ್ನ ಡೈರಿಯಲ್ಲಿ ಮೋಹನ್‌ನ ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ಕೋಡ್‌ವರ್ಡ್‌ನಲ್ಲಿ ಬರೆದುಕೊಂಡಿದ್ದ. ಅದನ್ನು ಡಿ–ಕೋಡ್ ಮಾಡಿದಾಗ ರಹಸ್ಯ ಬಯಲಾಯಿತು. ಕಾಳೆ ಸಹಚರರೊಂದಿಗೆ ಸಂಪರ್ಕದಲ್ಲಿರಲು ಬಳಸುತ್ತಿದ್ದ ದೂರವಾಣಿ ಸಂಖ್ಯೆಯಿಂದ, ಮೋಹನ್‌ನ ಮೊಬೈಲ್‌ಗೂ ಹಲವು ಬಾರಿ ಕರೆಗಳು ಬಂದಿದ್ದವು. ಸಿಡಿಆರ್ ಪರಿಶೀಲಿಸಿದಾಗ ಆ ವಿಷಯ ಗೊತ್ತಾಯಿತು’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು