ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಯಾರಣ್ಯದಲ್ಲಿ ರಾತ್ರಿ ಸಂಚಾರಕ್ಕೆ ಅನುವು: ಗೋವಾ ಕೋರಿಕೆ

ಭೀಮಗಡ ಹಾಗೂ ದಾಂಡೇಲಿ ವನ್ಯಧಾಮಗಳ ಮೂಲಕ ಹಾದುಹೋಗುವ ಖಾನಾಪುರ–ಹೆಮ್ಮಡಗಾ–ಅನಮೋಡ ರಸ್ತೆ
Last Updated 24 ಡಿಸೆಂಬರ್ 2018, 18:40 IST
ಅಕ್ಷರ ಗಾತ್ರ

ಬೆಂಗಳೂರು: ಭೀಮಗಡ ಹಾಗೂ ದಾಂಡೇಲಿ ವನ್ಯಧಾಮಗಳ ಮೂಲಕ ಹಾದುಹೋಗುವ ಖಾನಾಪುರ–ಹೆಮ್ಮಡಗಾ–ಅನಮೋಡ ರಸ್ತೆಯಲ್ಲಿ ರಾತ್ರಿ 9ರವರೆಗೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಗೋವಾ ಸರ್ಕಾರವು ರಾಜ್ಯ ಸರ್ಕಾರವನ್ನು ಕೋರಿದೆ.

ಈ ಸಂಬಂಧ ಗೋವಾ ಲೋಕೋಪಯೋಗಿ ಸಚಿವ ರಾಮಕೃಷ್ಣ ಸುದೀನ್‌ ದವಲೀಕಾರ್‌ ಅವರು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರನ್ನು ಸೋಮವಾರ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.

ಅಪಘಾತಗಳಲ್ಲಿ ವನ್ಯಜೀವಿಗಳ ಸರಣಿ ಸಾವನ್ನು ತಡೆಯಲು ರಾತ್ರಿ ವಾಹನ ಸಂಚಾರ ನಿಷೇಧಿಸಿ ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲಾಧಿಕಾರಿಗಳು 2015ರಲ್ಲಿ ಆದೇಶ ಹೊರಡಿಸಿದ್ದರು. ಬೆಳಿಗ್ಗೆ 6ರಿಂದ ರಾತ್ರಿ 9ರವರೆಗೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂಬುದು ಗೋವಾದ ಮನವಿ. ಖಾನಾಪುರ–ಲೋಂಡಾ–ರಾಮನಗರ–ಅನಮೋಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ 2 ವರ್ಷಗಳು ಬೇಕಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ ಎಂಬುದು ಗೋವಾದ ವಾದ.

‘ರಾತ್ರಿ 9ರ ವರೆಗೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ಕೋರಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್‌ ಒಪ್ಪಿಗೆ ನೀಡಿದರಷ್ಟೇ ಕ್ರಮ ಕೈಗೊಳ್ಳಬಹುದು. ಅದು ಸಹ ಲಘು ವಾಹನಗಳಿಗೆ ಮಾತ್ರ. ಅದಕ್ಕೂ ಸಹ ಕೆಲವು ಷರತ್ತುಗಳನ್ನು ವಿಧಿಸುತ್ತೇವೆ’ ಎಂದು ಎಚ್‌.ಡಿ.ರೇವಣ್ಣ ಸುದ್ದಿಗಾರರಿಗೆ ತಿಳಿಸಿದರು.

‘ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಜತೆಗೆ ಪರ್ಯಾಯ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಮನವಿ ಸಲ್ಲಿಸುತ್ತೇವೆ. ಈ ಕಾಮಗಾರಿಗೆ ₹30 ಕೋಟಿಯಿಂದ ₹40 ಕೋಟಿ ಬೇಕು. ಇದು 90 ಕಿ.ಮೀ.ಯ ಕಾಮಗಾರಿ. ಇದನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಕವೇ ಮಾಡಿಸಲಿ’ ಎಂದು ಅವರು ಹೇಳಿದರು.

ರಾಮಕೃಷ್ಣ ಸುದೀನ್‌ ಡವಲೀಕಾರ್‌, ‘ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕ ರಾಜ್ಯದ ಗಡಿ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಕೇಂದ್ರ ಸರ್ಕಾರ ₹1,000 ಕೋಟಿ ಅನುದಾನ ನೀಡಿದೆ. ಅಭಿವೃದ್ಧಿ ದೃಷ್ಟಿಯಿಂದ ಮೂರೂ ರಾಜ್ಯಗಳು ಪರಸ್ಪರ ಸಹಕರಿಸಬೇಕು’ ಎಂದರು.

ಜ.15ಕ್ಕೆ ದಶಪಥ ಕಾಮಗಾರಿ ಶುರು

ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ದಶಪಥ ಕಾಮಗಾರಿ 2019ರ ಜನವರಿ 15ಕ್ಕೆ ಆರಂಭವಾಗಲಿದೆ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ತಿಳಿಸಿದರು.

ಕಾಮಗಾರಿಗಾಗಿ ಭೂಸ್ವಾಧೀನ ಬಹುತೇಕ ಪೂರ್ಣಗೊಂಡಿದೆ. 5 ಕಿ.ಮೀ. ಅರಣ್ಯ ಭೂಮಿ ಸ್ವಾಧೀನಕ್ಕೆ ಕೇಂದ್ರ ಪರಿಸರ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕೆಲವೇ ದಿನಗಳಲ್ಲಿ ಒಪ್ಪಿಗೆ ಸಿಗಲಿದೆ ಎಂದರು. ದಿಲೀಪ್‌ ಬಿಲ್ಡ್‌ಕಾನ್‌ ಕಂಪನಿ ಜತೆ ‘ಹೈಬ್ರೀಡ್ ಆನ್ಯುಯಿಟಿ ಮೋಡ್‌’(ಎಚ್‌ಎಎಂ) ಮಾದರಿಯ ಗುತ್ತಿಗೆಯ ಒಪ್ಪಂದ ಮಾಡಿಕೊಳ್ಳಲಾಗಿದೆ. ಕಾಮಗಾರಿ ಪೂರ್ಣಗೊಳಿಸಲು 30 ತಿಂಗಳ ಗಡುವು ವಿಧಿಸಲಾಗಿದೆ. 24 ತಿಂಗಳಲ್ಲಿ ಕಾಮಗಾರಿ ಪೂರ್ಣ ಮಾಡಿಕೊಡುವುದಾಗಿ ಕಂಪನಿ ವಾಗ್ದಾನ ನೀಡಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT