ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ವಿವಿಧೆಡೆ ಉತ್ತಮ ಮಳೆ

ದಕ್ಷಿಣ ಕನ್ನಡ: ವಿದ್ಯುತ್ ಆಘಾತದಿಂದ ವ್ಯಕ್ತಿ ಸಾವು
Last Updated 14 ಜೂನ್ 2020, 19:31 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧೆಡೆ ಉತ್ತಮ ಮಳೆಯಾಗಿದ್ದು, ಕೆಲವು ಭಾಗಗಳಲ್ಲಿ ಮುಂಗಾರು ಬಿರುಸಾಗಿದೆ.ದಕ್ಷಿಣ ಕನ್ನಡ, ಉಡುಪಿ ಹಾಗೂ ಮಲೆನಾಡು ಭಾಗದಲ್ಲಿ ಜೋರಾಗಿ ಸುರಿದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕೆಯ್ಯೂರು ಗ್ರಾಮದ ಉದ್ದೋಳೆಯಲ್ಲಿ ಮಳೆ ಸುರಿಯುತ್ತಿರುವಾಗಲೇ ಪಂಪ್‌ ಸ್ವಿಚ್‌ ಆಫ್‌ ಮಾಡಲು ಹೋದ ರಮೇಶ ಗೌಡ (42) ಎಂಬುವರು ವಿದ್ಯುತ್‌ ಆಘಾತದಿಂದ ಮೃತಪಟ್ಟಿದ್ದಾರೆ. ಮಂಗಳೂರು ತಾಲ್ಲೂಕಿನ ಕೊಣಾಜೆ‌ ಗ್ರಾಮದ ಪಟ್ಟೋರಿ ಹಾಗೂ ಪುಳಿಂಚಾಡಿಯಲ್ಲಿ ಪಕ್ಕದ ಮನೆಯ ಆವರಣಗೋಡೆ ಕುಸಿದು ಬಿದ್ದು ಎರಡು ಮನೆಗಳಿಗೆ ಹಾನಿಯಾಗಿದೆ. ಅಂಬ್ಲಮೊಗರಿನ ತಿಲಕನಗರ ಎಂಬಲ್ಲಿ ಪಕ್ಕದ ಮನೆಯ ಆವರಣಗೋಡೆ ಬಿದ್ದಿದೆ.

ಮೂಡುಬಿದಿರೆ, ಬಂಟ್ವಾಳ, ಪುತ್ತೂರು, ಸುಳ್ಯ, ಬೆಳ್ತಂಗಡಿ ಸೇರಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಹೆಚ್ಚಿನ ಮಳೆ ಸುರಿದಿದೆ. ಉಳ್ಳಾಲ, ಸೋಮೇಶ್ವರ ಸೇರಿದಂತೆ ತೀರದಲ್ಲಿ ಕಡಲ ಅಲೆಗಳ ಅಬ್ಬರ ಹೆಚ್ಚಾಗಿದೆ.

ಉಡುಪಿಯಲ್ಲಿ ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಬಾಳೆಹೊನ್ನೂರು, ಎನ್.ಆರ್‌.ಪುರ ಭಾಗದಲ್ಲಿ ಧಾರಾಕಾರವಾಗಿ ಸುರಿದಿದೆ. ಕೊಟ್ಟಿಗೆಹಾರದಲ್ಲಿ 5 ಸೆಂ.ಮೀ ಮಳೆಯಾಗಿದೆ. ಕೊಡಗು ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಯಾಗಿದೆ.ಮಡಿಕೇರಿ, ತಲಕಾವೇರಿ, ಭಾಗಮಂಡಲ ಹಾಗೂ ನಾಪೋಕ್ಲು ವ್ಯಾಪ್ತಿಯಲ್ಲಿ ಬಿಡುವು ಕೊಟ್ಟು ಜೋರು ಮಳೆ ಬಂದಿದೆ.ಶಿವಮೊಗ್ಗ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ.

ದಾವಣಗೆರೆ, ಚಿತ್ರದುರ್ಗ, ಧಾರವಾಡ, ಬೆಳಗಾವಿ, ಬಳ್ಳಾರಿ ಜಿಲ್ಲೆಗಳಲ್ಲಿ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT