ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಫೋನ್‌-ಇನ್‌ | 1000 ಟ್ರೈನಿ ಎಂಜಿನಿಯರ್‌ಗಳ ನೇಮಕಾತಿ ಪ್ರಕ್ರಿಯೆ ಆರಂಭ

ಲೋಕೋಪಯೋಗಿ ಇಲಾಖೆ: ಒಂದು ವರ್ಷದ ಗುತ್ತಿಗೆ ಆಧಾರದಲ್ಲಿ ಖಾಲಿ ಹುದ್ದೆ ಭರ್ತಿ
Last Updated 24 ಜೂನ್ 2020, 19:23 IST
ಅಕ್ಷರ ಗಾತ್ರ

ಬೆಂಗಳೂರು: ‘ಲೋಕೋಪಯೋಗಿ ಇಲಾಖೆಯಲ್ಲಿ ಟ್ರೈನಿ ಕಿರಿಯ ಎಂಜಿನಿಯರ್‌ಗಳು ಹಾಗೂ ಟ್ರೈನಿ ಸಹಾಯಕ ಎಂಜಿನಿಯರ್‌ಗಳ 1 ಸಾವಿರ ಹುದ್ದೆಗಳನ್ನು ಒಂದು ವರ್ಷದ ಗುತ್ತಿಗೆ ಆಧಾರದಲ್ಲಿ ಶೀಘ್ರವೇ ಭರ್ತಿ ಮಾಡಲಿದ್ದೇವೆ’ ಎಂದು ಲೋಕೋಪಯೋಗಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

‘ಪ್ರಜಾವಾಣಿ’ ವತಿಯಿಂದ ಬುಧವಾರ ಏರ್ಪಡಿಸಿದ್ದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಅವರು ಈ ಮಾಹಿತಿ ನೀಡಿದರು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನಡೆದಿದ್ದ ನೇರ ಎಂಜಿನಿಯರ್‌ಗಳ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿದ್ದಕ್ಕೆ ಸಂಬಂಧಿಸಿ ವಿಜಯಪುರದ ಸದಾಶಿವ ಮೇತ್ರಿ ಹಾಗೂ ಶಿವಮೊಗ್ಗದ ಮಂಜುನಾಥ್‌ ಸೇರಿದಂತೆ ಅನೇಕ ಉದ್ಯೋಗಾಕಾಂಕ್ಷಿಗಳು ಪ್ರಶ್ನೆ ಕೇಳಿದ್ದರು. ‘ನಾವು ಎರಡು ವರ್ಷ ಕಷ್ಟಪಟ್ಟು ಓದಿ ಪರೀಕ್ಷೆ ಬರೆದಿದ್ದೇವೆ. ನಮ್ಮ ಪರಿಶ್ರಮ ವ್ಯರ್ಥವಾಗಲು ಅವಕಾಶ ಕೊಡಬೇಡಿ’ ಎಂದು ಅಳಲು ತೋಡಿಕೊಂಡರು.

‘ಎಂಜಿನಿಯರ್‌ಗಳ ನೇಮಕಾತಿಗೆ ಸಂಬಂಧಿಸಿದ ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. ಈ ಪ್ರಕರಣ ಇತ್ಯರ್ಥವಾಗುವವರೆಗೆ ಇಲಾಖೆಯ ಕೆಲಸಗಳು ಸುಗಮವಾಗಿ ಸಾಗಲು ಟ್ರೈನಿ ಎಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಹುದ್ದೆಗಳ ಭರ್ತಿಗೆ ಶೀಘ್ರವೇ ಅರ್ಜಿ ಆಹ್ವಾನಿಸಲಿದ್ದೇವೆ. ಬಿ.ಇ (ಸಿವಿಲ್‌) ಹಾಗೂ ಡಿಪ್ಲೊಮಾ (ಸಿವಿಲ್‌) ವಿದ್ಯಾರ್ಹತೆ ಹೊಂದಿರುವವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು’ ಎಂದು ಸಚಿವರು ತಿಳಿಸಿದರು.

‘ಈ ಹಿಂದೆ ಆರಂಭಿಸಿದ್ದ ಎಂಜಿನಿಯರ್‌ಗಳ ನೇಮಕಾತಿ ಪ್ರಕ್ರಿಯೆಯನ್ನು ಕಾನೂನು ಸಮಸ್ಯೆಯಿಂದಾಗಿ ಸ್ಥಗಿತಗೊಳಿಸಲಾಗಿದೆ. ಹಿಂದೆ ನೇಮಕಾತಿ ನಡೆಸುವ ಸಂದರ್ಭದಲ್ಲಿ ಹೈದರಾಬಾದ್‌ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಸಂವಿಧಾನದ 371 ಜೆ ವಿಧಿ ಪ್ರಕಾರ ನೀಡಬೇಕಾಗಿದ್ದ ಮೀಸಲಾತಿ ನೀಡಿಲ್ಲ. ಪ್ರಾದೇಶಿಕ ಅಸಮಾನತೆ ನೀಗಿಸಲು ಕ್ರಮಕೈಗೊಂಡಿಲ್ಲ ಎಂಬ ದೂರುಗಳೂ ಇದ್ದವು. ಈ ಕುರಿತ ಗೊಂದಲಗಳು ಬಗೆಹರಿದ ಬಳಿಕ ನೇಮಕಾತಿ ಪ್ರಕ್ರಿಯೆ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ಸದ್ಯಕ್ಕೆ ಟ್ರೈನಿ ಎಂಜಿನಿಯರ್‌ ಹುದ್ದೆಗೆ ಆಯ್ಕೆಯಾಗುವ ಅವಕಾಶ ಬಳಸಿಕೊಳ್ಳಿ’ ಎಂದು ಉದ್ಯೋಗಾಕಾಂಕ್ಷಿಗಳಿಗೆ ಸಚಿವರು ಸಲಹೆ ನೀಡಿದರು.

ಕೋವಿಡ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬಡವರು, ಕಟ್ಟಡ ಕಾರ್ಮಿಕರು ಸಮಸ್ಯೆ ಹೇಳಿಕೊಂಡರು. ಅವರ ಸಮಸ್ಯೆಗಳನ್ನು ಪರಿಹರಿಸಲು ಕ್ರಮಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.

2,501 ಬ್ಯಾಕ್‌ಲಾಗ್‌ ಹುದ್ದೆ ಭರ್ತಿಗೆ ಕ್ರಮ

‘ರಾಜ್ಯದಲ್ಲಿ ವಿವಿಧ ಇಲಾಖೆಗಳಲ್ಲಿ ಸುಮಾರು 2,501 ಬ್ಯಾಕ್‌ಲಾಗ್‌ ಹುದ್ದೆಗಳು ಖಾಲಿ ಇವೆ. ನಾನು ಸಚಿವ ಸಂಪುಟದ ಉಪಸಮಿತಿ ಅಧ್ಯಕ್ಷನಾಗಿ ಕ್ರಮ ವಹಿಸಿದ್ದೆ. ಇವುಗಳ ಭರ್ತಿಗೆ ಮೂರು ತಿಂಗಳ ಒಳಗೆ ಇವುಗಳನ್ನು ಭರ್ತಿ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದೆ. ಅಷ್ಟರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ಈ ಪ್ರಕ್ರಿಯೆಗೆ ಹಿನ್ನಡೆ ಆಗಿದೆ. ಈ ಪ್ರಕ್ರಿಯೆ ಚುರುಕುಗೊಳಿಸಲು ಕ್ರಮಕೈಗೊಳ್ಳುತ್ತೇವೆ’ ಎಂದು ಗೋವಿಂದ ಕಾರಜೋಳ ಭರವಸೆ ನೀಡಿದರು.

ರಾಯಚೂರಿನ ಸಿದ್ದಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘2001ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ 19,115 ಹುದ್ದೆಗಳನ್ನು ಗುರುತಿಸಿ ಅಧಿಸೂಚನೆ ಹೊರಡಿಸಲಾಗಿತ್ತು. ಇವುಗಳಲ್ಲಿ 16,933 ಹುದ್ದೆಗಳ ನೇಮಕಾತಿ ಪೂರ್ಣಗೊಂಡಿತ್ತು. ನಂತರ ಅಧಿಸೂಚನೆ ಹೊರಡಿಸಿದ ಪರಿಶಿಷ್ಟ ಜಾತಿಯ 1,789 ಹುದ್ದೆಗಳು ಹಾಗೂ ಪರಿಶಿಷ್ಟ ಪಂಗಡದ 2,261 ಹುದ್ದೆಗಳು ಸೇರಿ ಒಟ್ಟು 21,376 ಬ್ಯಾಕ್‌ಲಾಗ್‌ ಹುದ್ದೆಗಳಿವೆ. 18,710 ಮಂದಿಗೆ ನೇಮಕಾತಿ ಆಗಿದೆ. ಇನ್ನುಳಿದವುಗಳ ನೇಮಕಾತಿ ಬಾಕಿ ಇದೆ’ ಎಂದರು.

‘ನಷ್ಟದಲ್ಲಿರುವ ಹಾಗೂ ಈಗಾಗಲೇ ಸ್ಥಗಿತಗೊಂಡಿರುವ ಕೆಲವು ಸಂಸ್ಥೆಗಳಲ್ಲಿ 165 ಹುದ್ದೆಗಳ ಭರ್ತಿಗೆ ವಿನಾಯಿತಿ ನೀಡಿದ್ದೇವೆ’ ಎಂದರು.

‘ಲಾಕ್‌ಡೌನ್‌ ನೆಪದಲ್ಲಿ ಅನುದಾನಿತ ಶಾಲಾ–ಕಾಲೇಜುಗಳಲ್ಲಿನ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಆಡಳಿತ ಮಂಡಳಿಯವರು ತುಂಬಿಕೊಳ್ಳುತ್ತಿಲ್ಲ’ ಎಂದು ಕೆಲವರು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಅನುದಾನಿತ ಶಾಲಾ–ಕಾಲೇಜುಗಳಲ್ಲಿನ ಖಾಲಿ ಹುದ್ದೆ ಭರ್ತಿ ಮಾಡಿಕೊಳ್ಳುವುದಕ್ಕೆ ಸರ್ಕಾರ ಈಗಾಗಲೇ ಸೂಚನೆ ನೀಡಿದೆ. ಆಡಳಿತ ಮಂಡಳಿಗಳು ಯಾವುದೇ ನೆಪ ಹೇಳದೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಸಂಬಂಧಪಟ್ಟ ಶಾಲೆ ಅಥವಾ ಕಾಲೇಜಿಗೆ ಅನುದಾನ ನೀಡುವುದನ್ನು ಸ್ಥಗಿತಗೊಳಿಸಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ಕ್ರೈಸ್‌: 990 ಶಿಕ್ಷಕರಿಗೆ ಶೀಘ್ರ ನೇಮಕಾತಿ ಆದೇಶ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿಗೆ 2017ರಲ್ಲಿ ನಡೆಸಿದ ನೇಮಕಾತಿ ಪ್ರಕ್ರಿಯೆಯಲ್ಲಿ 660 ಮಂದಿಗೆ ಈಗಾಗಲೇ ನೇಮಕಾತಿ ಆದೇಶ ತಲುಪಿದೆ. ಈ ಹುದ್ದೆಗೆ ಆಯ್ಕೆಯಾಗಿರುವವರ ಜಾತಿ ಪ್ರಮಾಣ ಪತ್ರದ ಪರಿಶೀಲನೆ ವಿಳಂಬವಾಗಿದ್ದರಿಂದ 990 ಮಂದಿಗೆ ನೇಮಕಾತಿ ಆದೇಶ ನೀಡಲು ಬಾಕಿ ಇದೆ’ ಎಂದು ಗೋವಿಂದ ಕಾರಜೋಳ ತಿಳಿಸಿದರು.

ಹುಬ್ಬಳ್ಳಿಯ ಲಕ್ಷ್ಮೀ ನಾಟೇಕರ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಕೊರೋನಾ ಸೋಂಕು ಹಬ್ಬುವಿಕೆ ಹೆಚ್ಚುತ್ತಿರುವುದರಿಂದ ಸದ್ಯ ಶಾಲೆಗಳು ಮುಚ್ಚಿವೆ. ಸದ್ಯಕ್ಕೆ ಕೌನ್ಸೆಲಿಂಗ್‌ ನಡೆಸಲು ಸಾಧ್ಯವಿಲ್ಲ. ಕೊರೊನಾ ಸೋಂಕು ಹತೋಟಿಗೆ ಬಂದು ಶಾಲೆಗಳು ಆರಂಭವಾಗುವಷ್ಟರಲ್ಲಿ ಬಾಕಿ ಇರುವ 990 ಮಂದಿಗೂ ನೇಮಕಾತಿ ಆದೇಶ ನೀಡಲಾಗುತ್ತದೆ ಎಂದು ಸಚಿವರು ಭರವಸೆ ನೀಡಿದರು.

ಮೇಲ್ಜಾತಿಯವರಿಂದ ದೌರ್ಜನ್ಯ

‘ನಮಗೆ ಸಮಾಜ ಕಲ್ಯಾಣ ಇಲಾಖೆಯಿಂದ 5 ಎಕರೆ 20 ಗುಂಟೆ ಭೂಮಿ ಮಂಜೂರಾಗಿದೆ. ಅದರಲ್ಲಿ ಕೃಷಿ ಮಾಡುತ್ತಿದ್ದೇವೆ. ಆದರೆ, ಹೊಲಕ್ಕೆ ಹೋಗುವ ದಾರಿಗೆ ಸಂಬಂಧಿಸಿದಂತೆ ಮೇಲ್ಜಾತಿಯವರು ನಮ್ಮ ಮೇಲೆ ದೌರ್ಜನ್ಯ ಮಾಡುತ್ತಿದ್ದಾರೆ. ಪ್ರಕರಣ ಕೂಡ ದಾಖಲಾಗಿದೆ. ಯಾರೂ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಮಾಗಡಿ ತಾಲ್ಲೂಕಿನ ವಿರೂಪಾಪುರದ ಜಯಲಕ್ಷ್ಮಮ್ಮ ಕೆಂಪಯ್ಯ ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಈ ಕುರಿತು ಜಿಲ್ಲಾಧಿಕಾರಿ ಮತ್ತು ಪೊಲೀಸರ ಬಳಿ ಮಾತನಾಡಿ, ನಿಮಗೆ ರಕ್ಷಣೆ ಕೊಡಲು ಸೂಚನೆ ನೀಡುತ್ತೇನೆ. ಪ್ರಕರಣದ ಪರಿಶೀಲನೆ ಮಾಡಿ ಶೀಘ್ರ ಪರಿಹಾರ ಮಾಡುವಂತೆಯೂ ಹೇಳುತ್ತೇನೆ. ಮೊದಲು ಅದು ಸರ್ಕಾರದ ಜಾಗ ಆಗಿದ್ದರಿಂದ ಸಾರ್ವಜನಿಕರು ಓಡಾಡುತ್ತಾರೆ. ಜನರಿಗೆ ಓಡಾಡಲು ಸ್ವಲ್ಪ ದಾರಿ ಬಿಟ್ಟು ನೀವೂ ಸಹಕಾರ ನೀಡಿ. ನೆರೆ–ಹೊರೆಯವರ ಜೊತೆಗೆ ಚೆನ್ನಾಗಿರಿ’ ಎಂದು ಸಲಹೆ ನೀಡಿದರು.

ಶಿಕ್ಷಕರೆಂಬ ಹೆಮ್ಮೆ, ತೃಪ್ತಿ ಇರಲಿ

‘2017ರಲ್ಲಿ ವಸತಿ ಶಾಲೆಯ ಶಿಕ್ಷಕನಾಗಿ ನೇಮಕಗೊಂಡಿದ್ದೇನೆ. ವೃಂದ ಬದಲಾವಣೆ ಮಾಡುವುದಾಗಿ ಸರ್ಕಾರ ಹೇಳಿತ್ತು. ಈವರೆಗೆ ಈ ಪ್ರಕ್ರಿಯೆಗೆ ಚಾಲನೆ ನೀಡಿಲ್ಲ’ ಎಂದು ಕಲಬುರ್ಗಿಯ ಶಿಕ್ಷಕರೊಬ್ಬರು ಕೇಳಿದರು.

‘ವೃಂದ ಬದಲಾವಣೆ ಮಾಡುವುದಾಗಿ ಸರ್ಕಾರ ಹೇಳಿಲ್ಲ. ಪಾಠ ಮಾಡಬೇಕು, ಶಿಕ್ಷಕರಾಗಿ ಕೆಲಸ ಮಾಡಬೇಕು ಎಂದು ನೇಮಕ ಮಾಡಿಕೊಂಡಿದ್ದೇವೆ. ಪಾಠ ಮಾಡುವುದರತ್ತ ಗಮನ ನೀಡಿ. ಶಿಕ್ಷಕರ ಬದಲು, ಗುಮಾಸ್ತರಾಗಿ ಕೆಲಸ ಮಾಡಲು ಏಕೆ ಬಯಸುತ್ತೀರಿ’ ಎಂದು ಸಚಿವರು ಹೇಳಿದರು.

64,500 ಮಂದಿ ಕ್ವಾರಂಟೈನ್‌ಗೆ ವ್ಯವಸ್ಥೆ

‘ಕೊರೊನಾ ಸೋಂಕು ಹಬ್ಬದಂತೆ ತಡೆಯುವ ಸಲುವಾಗಿ ಸಮಾಜ ಕಲ್ಯಾಣ ಇಲಾಖೆಯು 549 ವಸತಿ ಶಾಲೆಗಳಲ್ಲಿ ಒಟ್ಟು 60,545 ಮಂದಿಯನ್ನುಪ್ರತ್ಯೇಕ ವಾಸಕ್ಕೆ (ಕ್ವಾರಂಟೈನ್‌) ಒಳಪಡಿಸಲು ವ್ಯವಸ್ಥೆ ಕಲ್ಪಿಸಿದೆ. ಅಲ್ಲಿದ್ದವರೆಲ್ಲ ರೋಗಿಗಳಲ್ಲ. ಅಲೆಮಾರಿ, ವಲಸೆ ಕಾರ್ಮಿಕರು, ಹೊಟ್ಟೆಗೆ ಹಿಟ್ಟಿಲ್ಲ ಎಂದು ಬಂದವರಿಗೆ ಸಹಾಯ ಮಾಡಿದ್ದೇವೆ’ ಎಂದು ಗೋವಿಂದ ಕಾರಜೋಳ ತಿಳಿಸಿದರು.

47,548 ಮಂದಿ ಈಗಾಗಲೇ ನಿಗದಿತ ಅವಧಿಯ ಪ್ರತ್ಯೇಕ ವಾಸದ ಅವಧಿ ಪೂರ್ಣಗೊಳಿಸಿ ಮನೆಗೆ ಹಿಂತಿರುಗಿದ್ದಾರೆ. ಈಗಲೂ 12,977 ಮಂದಿ ನಮ್ಮ ಇಲಾಖೆ ವಿವಿಧ ಶಾಲೆಗಳಲ್ಲಿ ಪ್ರತ್ಯೇಕವಾಸದಲ್ಲಿದ್ದಾರೆ ಎಂದರು.

11,772 ಚಮ್ಮಾರರಿಗೆ ತಲಾ ₹5 ಸಾವಿರ

‘ಚರ್ಮದ ಕೆಲಸದಲ್ಲಿ ತೊಡಗಿರುವ ಚಮ್ಮಾರರಿಗೆ, ರಸ್ತೆ ಬದಿ ಚಪ್ಪಲಿ ಹೊಲಿಯುವ ಕಾರ್ಮಿಕರಿಗೆ, ಶೂ ಪಾಲಿಷ್‌ ಮಾಡುವವರಿಗೆ ತಲಾ ₹ 5 ಸಾವಿರವನ್ನು ನೀಡಿದ್ದೇವೆ. ಈ ಮೊತ್ತವನ್ನು ಅವರ ಬ್ಯಾಂಕ್‌ ಖಾತೆಗೆ ಜಮಾ ಮಾಡಿದ್ದೇವೆ. ಲಾಕ್‌ಡೌನ್‌ ವೇಳೆ ಸಂಕಷ್ಟಕ್ಕೆ ಸಿಲುಕಿದ್ದ ಒಟ್ಟು 11,722 ಚಮ್ಮಾರರಿಗೆ ಇದರಿಂದ ಪ್ರಯೋಜನವಾಗಿದೆ’ ಎಂದು ಸಚಿವರು ಮಾಹಿತಿ ನೀಡಿದರು

ಸಮಾಜ ಕಲ್ಯಾಣ ಆಯುಕ್ತ ರವಿಕುಮಾರ್‌ ಸುರಪುರ, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಬಿ.ಗುರುಪ್ರಸಾದ್‌, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾರ್ಯಕ್ರಮಗಳ ಸಲಹೆಗಾರ ಇ.ವೆಂಕಟಯ್ಯ, ಸಮಾಜ ಕಲ್ಯಾಣ ಇಲಾಖೆಯಹೆಚ್ಚುವರಿ ನಿರ್ದೇಶಕ ಪಿ.ನಾಗೇಶ್, ಉಪನಿರ್ದೇಶಕಿ ಸರಸ್ವತಿ, ಬುಡಕಟ್ಟು ಅಭಿವೃದ್ಧಿ ಕಾರ್ಯಕ್ರಮಗಳ ಉಪನಿರ್ದೇಶಕ ನವೀನ್‌ ಶಿಂತ್ರೆ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ ನಿರ್ದೇಶಕ ಸಂಗಪ್ಪ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಕಾರ್ಯಕಾರಿ ನಿರ್ದೇಶಕ ರಾಘವೇಂದ್ರ, ಸಚಿವರ ಆಪ್ತ ಕಾರ್ಯದರ್ಶಿ ವಿ.ಶ್ರೀನಿವಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

28 ಸಾವಿರ ಕಿ.ಮೀ ರಸ್ತೆ ಮೇಲ್ದರ್ಜೆಗೆ

‘ರಾಜ್ಯದಲ್ಲಿ ರಸ್ತೆಗಳನ್ನು ಹಾಗೂ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ತಾತ್ವಿಕ ಅನುಮೋದನೆ ಪಡೆದುಕೊಂಡಿದ್ದೇವೆ. ಈ ಬಗ್ಗೆ ಶೀಘ್ರವೇ ಆದೇಶ ಮಾಡಲಿದ್ದೇವೆ’ ಎಂದು ಗೋವಿಂದ ಕಾರಜೋಳ ತಿಳಿಸಿದರು.

‘ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಜಾರಿಗೊಳಿಸಲಾದ ಲಾಕ್‌ಡೌನ್‌ನಿಂದಾಗಿ ಸ್ಥಗಿತಗೊಂಡಿದ್ದ ಕಾಮಗಾರಿಗಳನ್ನು ಮತ್ತೆ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.

‘ಇಲಾಖೆಯ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ಶಿವಮೊಗ್ಗದಲ್ಲಿ ಮುಖ್ಯ ಎಂಜಿನಿಯರ್‌ ಅವರ ಕೇಂದ್ರ ವಲಯ ಕಚೇರಿ ಆರಂಭಿಸಲಾಗಿದೆ. ಇಲಾಖೆಯ ಕಾಮಗಾರಿಗಳಿಗೆ ಬಳಸುವ ಕಾರ್ಮಿಕರನ್ನು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ’ ಎಂದರು.

ಪ್ರವಾಹ ಕಾಮಗಾರಿ ಬಹುತೇಕ ಪೂರ್ಣ

ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಒಟ್ಟು ₹ 500 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೆತ್ತಿಕೊಂಡ ಕಾಮಗಾರಿ ಪೂರ್ಣಗೊಳಿಸಲು ಇಲಾಖೆ ಆದ್ಯತೆ ನೀಡಿದೆ. ಇದರಲ್ಲಿ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿವೆ. ಒಂದು ಕಾಮಗಾರಿ ಮಾತ್ರ ಇನ್ನಷ್ಟೇ ಆರಂಭವಾಗಬೇಕಿದೆ.

ಬುಡಕಟ್ಟು ಜನರಿಗೆ ಪ್ರಮುಖ ಕಾರ್ಯಕ್ರಮ

* ಬುಡಕಟ್ಟು ಜನ ಹೆಚ್ಚಾಗಿರುವ ಪ್ರದೇಶಗಳ ಜನರ ಆರೋಗ್ಯ ಸುಧಾರಣೆಗೆ ₹ 2.55 ಕೋಟಿ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮೂಲಸೌಕರ್ಯ ಒದಗಿಸಲಾಗುತ್ತಿದೆ

* ಕಲ್ಯಾಣ ಕರ್ನಾಟಕ ಭಾಗದಲ್ಲಿ ₹3.78 ಕೋಟಿ ವೆಚ್ಚದಲ್ಲಿ 10 ಸಂಚಾರ ಆರೋಗ್ಯ ಕೇಂದ್ರಗಳ ಸ್ಥಾಪನೆ

* ಆದಿವಾಸಿಗಳ ಆರೋಗ್ಯ ಸೌಲಭ್ಯಕ್ಕೆ ₹ 7.98 ಕೋಟಿ ಧರ್ಮಶಾಲೆಗಳ ಸ್ಥಾಪನೆ

* 9 ವೈದ್ಯಕೀಯ ಕಾಲೇಜುಗಳಲ್ಲಿ ₹ 1.08 ಕೋಟಿ ವೆಚ್ಚದಲ್ಲಿ ಬುಡಕಟ್ಟು ಆರೋಗ್ಯ ಕೋಶ ಸ್ಥಾಪನೆ

* 19 ವನ–ಧನ ಕೇಂದ್ರ ಸ್ಥಾಪನೆ(₹ 2.85 ಕೋಟಿ)

* ಕಿರು ಅರಣ್ಯ ಉತ್ಪನ್ನ ಸಂಸ್ಕರಿಸಿ ಮಾರಾಟ ಮಾಡಲು ಉತ್ತೇಜನ ನೀಡಲು ‌₹ 7.50 ಕೋಟಿ ವೆಚ್ಚದಲ್ಲಿ ಎನ್‌ಟಿಪಿಸಿಇ ಸ್ಥಾಪನೆ

* ಹುಣಸೂರು ನಾಗಪುರದಲ್ಲಿ ₹ 4.53 ಕೋಟಿ ವೆಚ್ಚದಲ್ಲಿ ಪರಿಶಿಷ್ಟ ಪಂಗಡದ ರೈತ ಉತ್ಪಾದಕರ ಸಂಸ್ಥೆ ಸ್ಥಾಪನೆಗೆ ಕ್ರಮ

* ಬುಡಕಟ್ಟು ಜನರ ಪಾರಂಪರಿಕ ವೈದ್ಯ ಪದ್ಧತಿ ಮತ್ತು ಆಚರಣೆ ದಾಖಲೀಕರಣಕ್ಕೆ ಮತ್ತು ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಆಯ್ದ ಔಷಧ ಸಂಸ್ಕರಣಾ ಘಟಕ ಸ್ಥಾಪನೆಗೆ ₹ 5 ಕೋಟಿ

***

ವಿದ್ಯಾರ್ಥಿಗಳಿಗೆ ಫೆಲೋಷಿಪ್‌ ಶೀಘ್ರ

ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಅವರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ನೂರಾರು ಜನ ಕರೆ ಮಾಡಿ ಸಮಸ್ಯೆ ಹೇಳಿಕೊಂಡರು. ಪ್ರಮುಖವಾಗಿ ಪಿಡಬ್ಲ್ಯುಡಿ ಎಂಜಿನಿಯರ್‌ಗಳ ಪರೀಕ್ಷೆ ಫಲಿತಾಂಶ ಬಿಡುಗಡೆಯಾಗದಿರುವ ಕುರಿತು ಅಭ್ಯರ್ಥಿಗಳು ಪ್ರಶ್ನೆ ಕೇಳಿದರು. ಆಯ್ದ ಪ್ರಶ್ನೋತ್ತರಗಳು ಇಲ್ಲಿವೆ.

* ಸಂಶೋಧನಾ ವಿದ್ಯಾರ್ಥಿಗಳಿಗೆ ಫೆಲೋಷಿಪ್‌ ಸಿಗುತ್ತಿಲ್ಲ, ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಸ್ಕಾಲರ್‌ಷಿಪ್‌ ಕೂಡ ಸರಿಯಾಗಿ ಕೊಡುತ್ತಿಲ್ಲ

ರಮೇಶ್‌ ಕೂಡ್ಲಿಗಿ ಬಳ್ಳಾರಿ, ಗಿರೀಶ್‌ ಸಿಂಧನೂರು

ಸಚಿವರು: ಸಂಶೋಧನಾ ವಿದ್ಯಾರ್ಥಿಗಳಿಗೆ ಫೆಲೋಷಿಪ್‌ ಅಥವಾ ಸ್ಕಾಲರ್‌ಶಿಪ್‌ ನೀಡಲು ಸೂಚನೆ ನೀಡಿದ್ದೇನೆ. ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗಳಿಗೆ ಆರ್‌ಟಿಜಿಎಸ್‌ ಮೂಲಕ ಹಣ ಸಂದಾಯ ಮಾಡಲಾಗುವುದು.

* ಚರ್ಮ ಕೈಗಾರಿಕೆ (ಚಪ್ಪಲಿ ತಯಾರಿಕೆ) ನಡೆಸುತ್ತಿದ್ದೇನೆ. ಲಾಕ್‌ಡೌನ್‌ನಿಂದ ನಷ್ಟವಾಗಿದೆ. ಉದ್ಯಮ ಪುನರಾರಂಭಿಸಲು ಸಾಲದ ಅವಶ್ಯಕತೆ ಇದೆ.

ವಿಜಯ್‌, ಮೈಸೂರು

ಸಚಿವರು: ಸ್ವ ಉದ್ಯೋಗ ಮಾಡುವವರಿಗೆ ಸರ್ಕಾರದಿಂದಲೇ ₹50 ಸಾವಿರದಿಂದ ₹1ಲಕ್ಷದವರೆಗೆ ಸಾಲ ಸೌಲಭ್ಯ ನೀಡುವ ಉದ್ದೇಶವಿದೆ. 15 ಸಾವಿರದಿಂದ 20 ಸಾವಿರ ಫಲಾನುಭವಿಗಳಿಗೆ ಈ ನೆರವು ನೀಡಲಾಗುವುದು.

* ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 15 ವರ್ಷಗಳಿಂದ ಹೊರಗುತ್ತಿಗೆ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದೇನೆ. ಕಳೆದ ತಿಂಗಳಿಂದ ವೇತನ ನೀಡಿಲ್ಲ

ಜಗದೀಶ, ಮೈಸೂರು

ಸಚಿವರು: ಕಿತ್ತೂರು ರಾಣಿ ಚನ್ನಮ್ಮ, ಅಟಲ್‌ಬಿಹಾರಿ ವಾಜಪೇಯಿ, ಡಾ.ಬಿ.ಆರ್. ಅಂಬೇಡ್ಕರ್‌ ವಸತಿ ಶಾಲೆಗಳಲ್ಲಿ ಶಿಕ್ಷಕರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿದ್ದೇವೆ. ಹತ್ತು ತಿಂಗಳ ವೇತನ ಮಾತ್ರ ನೀಡಲಾಗುತ್ತದೆ. ರಜೆಯ ಅವಧಿಯಲ್ಲಿ ಸಂಬಳ ನೀಡುವುದಿಲ್ಲ. ರಜೆ ಮುಗಿದು, ಶಾಲೆ ಪ್ರಾರಂಭವಾದ ನಂತರ ನಿಮಗೆ ವೇತನ ಬರುತ್ತದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಕಷ್ಟವಾಗಬಾರದು ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಎರಡು ತಿಂಗಳು, ಕೇಂದ್ರ ಸರ್ಕಾರ ಎರಡು ತಿಂಗಳು... ಹೀಗೆ ನಾಲ್ಕು ತಿಂಗಳು ಪಡಿತರ ನೀಡುತ್ತಿದೆ. ಅಲ್ಲದೆ, ಮೂರು ತಿಂಗಳವರೆಗೆ ಸುಮಾರು 8 ಕೋಟಿ ಕುಟುಂಬಕ್ಕೆ ಉಚಿತವಾಗಿ ಅಡುಗೆ ಅನಿಲ ಸಿಲಿಂಡರ್‌ ನೀಡುವ ವ್ಯವಸ್ಥೆ ಮಾಡಲಾಗಿದೆ. ಹೊರಗುತ್ತಿಗೆ ಶಿಕ್ಷಕರಿಗೆ ಹೆಚ್ಚು ವೇತನ ಇರದಿರುವುದರಿಂದ ಈ ಎಲ್ಲ ಸೌಲಭ್ಯವನ್ನು ಪಡೆದುಕೊಳ್ಳಬಹುದು.

* ನಮ್ಮ ಊರಿನಲ್ಲಿ 65 ಎಕರೆ ಗೋಮಾಳದ ಜಾಗ ಇದೆ. ಅಲ್ಲಿ ಒಂದು ಕೆರೆ ಕಟ್ಟಿಸಿಕೊಡಿ...

ಹನುಮಂತರಾಯಪ್ಪ ಗೌರಿಪುರ, ಗುಬ್ಬಿ ತಾಲ್ಲೂಕು

ಸಚಿವರು: ಕೆರೆ ಕಟ್ಟಬೇಕೆಂದರೆ, ಆ ಪ್ರದೇಶಕ್ಕೆ ಹರಿದು ಬರುವ ನೀರಿನ ಪ್ರಮಾಣ, ಅಲ್ಲಿ ಸುರಿಯುವ ಸರಾಸರಿ ಮಳೆಯ ಪ್ರಮಾಣದ ಸಮೀಕ್ಷೆ ಮಾಡಬೇಕಾಗುತ್ತದೆ. ತಗ್ಗು ಪ್ರದೇಶ ಇರಬೇಕು, ಸಮತಟ್ಟಾದ ಭೂಮಿ ಇದ್ದರೆ ಕೆರೆ ಕಟ್ಟಲು ಸಾಧ್ಯವಿಲ್ಲ. ಸಣ್ಣ ನೀರಾವರಿ ಸಚಿವರಿಗೆ ಈ ಕುರಿತು ಅರ್ಜಿ ಕೊಡಿ. ಎಲ್ಲ ಸರಿಯಾಗಿದ್ದರೆ ಕೆರೆ ಕಟ್ಟಲು ವ್ಯವಸ್ಥೆ ಮಾಡುತ್ತಾರೆ.

* ನಾನು ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದೇನೆ. ಕಾರ್ಮಿಕ ಇಲಾಖೆಯಲ್ಲಿ ಸದಸ್ಯತ್ವ ನೋಂದಾಯಿಸಿದ್ದೇನೆ. ಆದರೆ, ನಾಲ್ಕು ವರ್ಷಗಳಿಂದ ನವೀಕರಣ ಮಾಡಿಲ್ಲ. ಸರ್ಕಾರದ ನೆರವು ಸಿಗುತ್ತಿಲ್ಲ.

ಪ್ರದೀಪ್‌ ಚಿತ್ರದುರ್ಗ

ಸಚಿವರು: ರಾಜ್ಯದಲ್ಲಿ ಸುಮಾರು 21 ಲಕ್ಷಕ್ಕಿಂತ ಹೆಚ್ಚು ನೋಂದಾಯಿತ ಕಾರ್ಮಿಕರಿದ್ದಾರೆ. ಎಲ್ಲರಿಗೂ ₹5 ಸಾವಿರ ನೆರವು ನೀಡುವುದಾಗಿ ಘೋಷಿಸಲಾಗಿದ್ದು, ಖಾತೆಗೆ ಹಣವನ್ನು ಹಾಕಲಾಗುತ್ತಿದೆ. ನಾಲ್ಕು ವರ್ಷಗಳಿಂದ ನವೀಕರಣ ಮಾಡಿಲ್ಲ ಎಂದರೆ ನೆರವು ನೀಡುವುದು ಕಷ್ಟವಾಗುತ್ತದೆ. ಸದ್ಯ, ಚಿತ್ರದುರ್ಗದಲ್ಲಿರುವ ಕಾರ್ಮಿಕ ಇಲಾಖೆ ಕಚೇರಿಗೆ ಹೋಗಿ ಅರ್ಜಿ ಕೊಟ್ಟು ಸದಸ್ಯತ್ವ ನವೀಕರಣ ಮಾಡಿಸಿಕೊಳ್ಳಿ. ಭವಿಷ್ಯದಲ್ಲಿ ಅನುಕೂಲವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT