ಭಾನುವಾರ, ನವೆಂಬರ್ 17, 2019
27 °C

ಅಂಗನವಾಡಿಗಳಲ್ಲಿ ಇಂಗ್ಲಿಷ್ ಮಾಧ್ಯಮ ಬೇಕೋ, ಬೇಡವೋ ಚಿಂತನೆ: ಸಚಿವೆ ಶಶಿಕಲಾ ಜೊಲ್ಲೆ

Published:
Updated:
ಸಚಿವೆ ಶಶಿಕಲಾ ಜೊಲ್ಲೆ

ಬೆಳಗಾವಿ: ‘ಅಂಗನವಾಡಿ ಕೇಂದ್ರಗಳಲ್ಲಿ ಇಂಗ್ಲಿಷ್ ಮಾಧ್ಯಮ ಇರಬೇಕೋ, ಬೇಡವೋ ಎನ್ನುವ ಬಗ್ಗೆ ಚಿಂತನೆ ನಡೆದಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

‘ಮಕ್ಕಳಿಗೆ ಭಾರತೀಯ ಸಂಸ್ಕೃತಿ, ಸಂಪ್ರದಾಯದ ಜೊತೆಗೆ ಇಂಗ್ಲಿಷ್ ಕಲಿಕೆ ಅಗತ್ಯ ಇಂದಿನ ಅಗತ್ಯವಾಗಿದೆ. ಈ ವಿಷಯದಲ್ಲಿ ಅಧಿಕಾರಿಗಳೊಂದಿಗೆ ಒಂದು ಹಂತದ ಸಭೆ ನಡೆಸಿದ್ದೇನೆ. ಮತ್ತೊಂದು ಹಂತದ ಚರ್ಚೆ ನಡೆಸಿ, ಶಿಕ್ಷಣ ತಜ್ಞರ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಭಾನುವಾರ ಇಲ್ಲಿ ಹೇಳಿದರು.

‘ನೆರೆ ಹಾನಿಗೆ ಕೇಂದ್ರದಿಂದ ಹೆಚ್ಚಿನ ಪರಿಹಾರ ತರದ ಬಿಜೆಪಿ‌ ಸಂಸದರು ಬಳೆ ತೊಡಬೇಕು’ ಎಂಬ ಕೆಪಿಸಿಸಿ ಮಹಿಳಾ‌ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಎಲ್ಲ ಸಂಸದರೂ ಸಮರ್ಥರಿದ್ದಾರೆ. ಅವರು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು’ ಎಂದರು.

‘ಕೇಂದ್ರ ಸರ್ಕಾರದಿಂದ ಈಗಾಗಲೇ ₹ 1,200 ಕೋಟಿ ಮಧ್ಯಂತರ ಪರಿಹಾರ ಮಂಜೂರಾಗಿದೆ. ಇನ್ನೂ ಹೆಚ್ಚಿ‌ನ ಪರಿಹಾರ ಸಿಗಲಿದೆ. ಸಂತ್ರಸ್ತರು ಆತಂಕಕ್ಕೆ ಒಳಗಾಗಬಾರದು.

‘ಬೇರೆ ಸಂಸದರಿಗೆ ಹೋಲಿಸಿದರೆ, ಅಣ್ಣಾಸಾಹೇಬ ಜೊಲ್ಲೆ ಚಿಕ್ಕೋಡಿ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಜನರಿಗೆ ಸ್ಪಂದಿಸುತ್ತಿದ್ದಾರೆ. ಷಹುದಲಿಯಲ್ಲಿ ಪಾದಯಾತ್ರೆ ನಡೆಸುತ್ತಿದ್ದ ವೇಳೆ ಕೆಲವರು ಉದ್ದೇಶಪೂರ್ವಕವಾಗಿಯೇ ಘೇರಾವ್ ಹಾಕಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

ಪ್ರತಿಕ್ರಿಯಿಸಿ (+)