ಬುಧವಾರ, ಏಪ್ರಿಲ್ 21, 2021
23 °C

ಗೌಡಾಜೀ ಆಯಿಯೇ ಕುಛ್‌ ತೋ ಕರೇಂಗೆ...ದೇವೇಗೌಡರಿಗೆ ಅಟಲ್‌ಜೀ ಸ್ವಾಗತ ನುಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಗೌಡಾಜೀ ಆಯಿಯೇ ಕುಛ್‌ ತೋ ಕರೇಂಗೆ’.

‘ಹೀಗೆ ತಿಳಿ ನಗುವಿನಿಂದ ನನ್ನನ್ನು ಸ್ವಾಗತಿಸಿ, ಬೆನ್ನು ತಟ್ಟಿ ಬರ ಮಾಡಿಕೊಂಡವರು ಅಟಲ್‌ಜೀ. ರೈತರ ಸಮಸ್ಯೆಗಳ ಬಗ್ಗೆ ಪ್ರಧಾನಿ ಅಟಲ್‌ ಗಮನ ಸೆಳೆದು, ಮ್ಯಾಗ್ನಾ ಕಾರ್ಟಾ ಅರ್ಪಿಸಲು ಎರಡು ರೈಲು ಭರ್ತಿ ರೈತರನ್ನು ಕರೆದು ಕೊಂಡು ದೆಹಲಿಗೆ ಹೋಗಿದ್ದೆ. ಕೂರಿಸಿಕೊಂಡು ಆತ್ಮೀಯವಾಗಿ ಮಾತನಾಡಿ, ಸಮಸ್ಯೆಗಳನ್ನು ಆಲಿಸಿದರು’ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ತಮ್ಮ ನೆನಪನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

‘ಕರ್ನಾಟಕ ಮತ್ತು ಕಾವೇರಿ ವಿಷಯದ ಬಗ್ಗೆ ಸಂಸತ್ತಿನಲ್ಲಿ ಮಾತನಾಡುತ್ತಿದ್ದಾಗ ಅವರು ಗಮನವಿಟ್ಟು ಕೇಳುತ್ತಿದ್ದರು. ಮೈಸೂರು ರಾಜ್ಯಕ್ಕೆ ಕಾವೇರಿ ವಿಚಾರದಲ್ಲಿ ಎಷ್ಟೆಲ್ಲ ಅನ್ಯಾಯವಾಗಿದೆ. ಇದು ಗೊತ್ತೇ ಇರಲಿಲ್ಲ ಎಂದು ಗ್ವಾಲಿಯರ್‌ ರಾಜಮಾತೆ ವಿಜಯರಾಜೇ ಸಿಂಧಿಯಾ ಅವರಿಗೆ ವಾಜಪೇಯಿ ಹೇಳಿದ್ದರಂತೆ. ಅದನ್ನು ಸಿಂಧಿಯಾ ನನಗೆ ಹೇಳಿದ್ದರು’ ಎಂದು ದೇವೇಗೌಡ ತಿಳಿಸಿದರು.

‘ಸಂಸತ್ತನ್ನು ನಾನು ಮೊದಲ ಬಾರಿಗೆ ಪ್ರವೇಶಿಸಿದಾಗ, ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರು. ಗೌರವದಿಂದ ನಡೆಸಿಕೊಂಡಿದ್ದರು. ಗೌಡ ಏನಪ್ಪಾ ಇಷ್ಟೊಂದು ಮಾಹಿತಿಗಳನ್ನು ಹೇಗೆ ಸಂಗ್ರಹಿಸಿಕೊಂಡು ಮಾತನಾ ಡುತ್ತೀಯ’ ಎಂದು ಹಾಸ್ಯಚಟಾಕಿ ಹಾರಿಸುತ್ತಿದ್ದರು.

‘ಅವರೊಬ್ಬ ದೊಡ್ಡ ವ್ಯಕ್ತಿ. ಆ ಜಾಗವನ್ನು ಮತ್ತೊಬ್ಬರು ತುಂಬಲು ಸಾಧ್ಯವಿಲ್ಲ. ಗೋಧ್ರಾ ಘಟನೆ ನಡೆದಾಗ, ಗುಜರಾತ್‌ ಮುಖ್ಯಮಂತ್ರಿ ಆಗಿದ್ದ ನರೇಂದ್ರ ಮೋದಿಯವರಿಗೆ ರಾಜಧರ್ಮ ಪಾಲಿಸುವಂತೆ ಸೂಚನೆ ನೀಡಿದ್ದರು. ತಮ್ಮ ಪಕ್ಷದವರಾದರೂ ಯಾವುದೇ ರಿಯಾಯ್ತಿ ನೀಡಲಿಲ್ಲ. ಇದರಿಂದ ಅವರ ವ್ಯಕ್ತಿತ್ವ ಎಂತಹದ್ದು ಎಂಬುದನ್ನು ತಿಳಿದುಕೊಳ್ಳಬಹುದು’ ಎಂದರು.

‘ದೆಹಲಿಯಲ್ಲಿ ನಮ್ಮ ಸರ್ಕಾರವನ್ನು ಉರುಳಿಸಿದಾಗ, ಅಟಲ್‌ ಅವರು ಸಣ್ಣ ಚೀಟಿ ಕಳಿಸಿ, ಬೆಂಬಲ ನೀಡಿ ಸರ್ಕಾರ ಉಳಿಸಲು ಸಿದ್ಧರಿರುವುದಾಗಿ ಹೇಳಿದರು. ಆದರೆ, ರಾಜಕೀಯ ಕಾರಣಗಳಿಗಾಗಿ ಅವರ ಆಹ್ವಾನವನ್ನು ನಯವಾಗಿಯೇ ಬೇಡ ಎಂದಿದ್ದೆ’.

‘1977ರಲ್ಲಿಯೇ ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ಅವರು ನನ್ನನ್ನು ಒತ್ತಾಯಿಸಿದ್ದರು. ಮೊರಾರ್ಜಿ ಜತೆ ಒಟ್ಟಿಗೆ ಕೆಲಸ ಮಾಡೋಣ, ಸಚಿವ ಸಂಪುಟ ಸೇರಿ ಎಂದು ಹೇಳಿದ್ದರು. ಆದರೆ, ಕರ್ನಾಟಕದಲ್ಲಿ ಜನತಾ ಸರ್ಕಾರವನ್ನು ಅಧಿಕಾರಕ್ಕೆ ತರುವ ಅಗತ್ಯವನ್ನು ಮನವರಿಕೆ ಮಾಡಿಕೊಟ್ಟ ಬಳಿಕ ಅವರು ಒಪ್ಪಿಕೊಂಡರು’ ಎಂದರು. ‘ಮೊರಾರ್ಜಿ ನೇತೃತ್ವದ ಸರ್ಕಾರದಲ್ಲಿ ಅಟಲ್‌ ವಿದೇಶಾಂಗ ಸಚಿವರಾಗಿದ್ದರು. ಅವರಿಗೆ ಕರ್ನಾಟಕದ ವಿದ್ಯಮಾನಗಳ ಮಾಹಿತಿ ನೀಡುವ ಕೆಲಸ ನನಗೆ ಒಪ್ಪಿಸಲಾಗಿತ್ತು. ಅಂದಿನಿಂದಲೂ ಅವರ ಜೊತೆಗೆ ಉತ್ತಮ ಒಡನಾಟವಿತ್ತು’ ಎಂದು ಹೇಳಿದರು.

‘ರಾಜಕೀಯ ಜೀವನದಲ್ಲಿ ಶತ್ರುವನ್ನೂ ಕೂಡ ಕಟುವಾದ ಶಬ್ದದಿಂದ ಟೀಕಿಸಿದವರಲ್ಲ. ಪಾಕಿಸ್ತಾನದ ಜತೆ ಸಂಬಂಧ ಉತ್ತಮಪಡಿಸಲು ಲಾಹೋರ್‌ಗೆ ಬಸ್‌ ಯಾತ್ರೆ ಮಾಡಿದ್ದರು. ಮುಷರಫ್‌ ಅವರನ್ನು ಕರೆಸಿ, ಸಂಬಂಧ ಸುಧಾರಣೆಗೆ ಸರ್ವ ಪ್ರಯತ್ನ ಮಾಡಿದ್ದರು. ಆದರೆ, ಅವರ ಪ್ರಯತ್ನ ಕೈಗೂಡಲಿಲ್ಲ. ಉಭಯ ದೇಶಗಳ ನಡುವೆ ಶಾಂತಿ ಸ್ಥಾಪಿಸುವ ಪ್ರಾಮಾಣಿಕ ಪ್ರಯತ್ನ ನಡೆಸಿದರು’ ಎಂದು ತಿಳಿಸಿದರು.

‘ಪ್ರತಿ ವರ್ಷ ಜನವರಿಯಲ್ಲಿ ಅವರ ಮನೆಗೆ ಹೋಗಿ ಭೇಟಿ ಮಾಡಿ ಬರುತ್ತಿದೆ. ಇತ್ತೀಚೆಗೆ ದೆಹಲಿಗೆ ಹೋದಾಗ ಅವರ ಮನೆಗೆ ಹೋಗಿದ್ದೆ’ ಎಂದು ಅವರು ನೆನಪಿಸಿಕೊಂಡರು.

‘ಅವರೊಬ್ಬ ಸೂಕ್ಷ್ಮಸ್ವಭಾವದ ವ್ಯಕ್ತಿ. ಒಮ್ಮೆ ವಿಎಚ್‌ಪಿಯವರು ರಾಮಮಂದಿರ ನಿರ್ಮಾಣದ ಶಿಲೆಯನ್ನು ಪ್ರಧಾನಿ ಆಗಿದ್ದ ಅಟಲ್‌ ಅವರಿಗೆ ಕಳಿಸಿದ್ದರು. ಆದರೆ, ಅದನ್ನು ಸ್ವೀಕರಿಸದೇ, ಅಧಿಕಾರಿಗಳನ್ನು ಅಲ್ಲಿಗೆ ಕಳಿಸಿದರು’ ಎಂದು ದೇವೇಗೌಡ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು