ಶುಕ್ರವಾರ, ಫೆಬ್ರವರಿ 26, 2021
20 °C

ಗ್ರಾ.ಪಂ.ಗಳಿಗೆ 6 ತಿಂಗಳ ಅವಧಿಗೆ ಆಡಳಿತ ಸಮಿತಿ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾದಿಂದಾಗಿ ಚುನಾವಣೆ ನಡೆಸಲು ಸಾಧ್ಯವಾಗದ ಕಾರಣ, ಗ್ರಾಮ ಪಂಚಾಯಿತಿಗಳಿಗೆ ಮುಂದಿನ ಆರು ತಿಂಗಳ ಅವಧಿಗೆ ಆಡಳಿತ ಸಮಿತಿ ನೇಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಈ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಸಚಿವ ಕೆ.ಎಸ್‌. ಈಶ್ವರಪ್ಪ, ‘ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡಿದ್ದೇವೆ’ ಎಂದರು.

‘ಹಾಲಿ ಇರುವ ಸಮಿತಿಯನ್ನೇ ಮುಂದುವರಿಸಬೇಕೆ, ಆಡಳಿತಾಧಿಕಾರಿ ನೇಮಕ ಸೂಕ್ತವೇ ಅಥವಾ ಆಡಳಿತ ಸಮಿತಿ ನೇಮಿಸುವುದೇ ಎಂಬ ಮೂರು ಆಯ್ಕೆಗಳ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಿತು.
ಅಂತಿಮವಾಗಿ ಆಡಳಿತ ಸಮಿತಿ ನೇಮಿಸಲು ಕಾನೂನುಬದ್ಧವಾಗಿ ಅವಕಾಶ ಇರುವುದರಿಂದ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿದೆ’ ಎಂದು ಅವರು ಸ್ಪಷ್ಟಪಡಿಸಿದರು.

‘ರಾಜ್ಯದ 6,018 ಗ್ರಾಮ ಪಂಚಾಯಿತಿಯಲ್ಲಿ 96 ಸಾವಿರ ಸದಸ್ಯರಿದ್ದಾರೆ. ಗ್ರಾಮ ಪಂಚಾಯಿತಿಗೆ ಸದಸ್ಯರಾಗಲು ಎಲ್ಲ ಅರ್ಹತೆ ಇರುವವರನ್ನು ಆಯಾ ಜಿಲ್ಲಾಧಿಕಾರಿಗಳು ಆಡಳಿತ ಸಮಿತಿಗೆ ಸದಸ್ಯರನ್ನಾಗಿ ನೇಮಿಸಲಿದ್ದಾರೆ. ಈ ಸಮಿತಿ 6 ತಿಂಗಳವರೆಗೆ ಅಸ್ತಿತ್ವದಲ್ಲಿ ಇರಲಿದ್ದು, ಆರು ತಿಂಗಳು ಪೂರ್ಣಗೊಳ್ಳುವ ಮೊದಲೇ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ’ ಎಂದರು.

‘ಆಡಳಿತ ಸಮಿತಿಗೆ ಅಧಿಕಾರಿಯೇ ಅಧ್ಯಕ್ಷರಾಗಿರುತ್ತಾರೆ. ರೋಸ್ಟರ್‌ ಪ್ರಕಾರವೇ ಸಮಿತಿ ಇರಲಿದೆ. ಈ ಸಮಿತಿಗೆ ಗ್ರೂಪ್ ‘ಎ’ ಅಥವಾ ಗ್ರೂಪ್‌ ‘ಬಿ’ ಶ್ರೇಣಿಯ ಅಧಿಕಾರಿಯನ್ನು ಅಧ್ಯಕ್ಷರಾಗಿ ನೇಮಿಸಿ, ಆರ್ಥಿಕ ಪ್ರತ್ಯೋಜನೆಯ ಅಧಿಕಾರ ನೀಡಲಾಗುತ್ತದೆ. ಸಮಿತಿಯ ಸಲಹೆಗಳನ್ನು ಕಾನೂನಡಿ ಅವಕಾಶವಿದೆಯೇ ಎಂದು ಪರಿಶೀಲಿಸಿ ಅನುಷ್ಠಾನಗೊಳಿಸಲು ಅಧಿಕಾರಿ ಒಪ್ಪಿಗೆ ನೀಡಲಿದ್ದಾರೆ’ ಎಂದು ವಿವರಿಸಿದರು. ಕಾನೂನು ಇಲಾಖೆ ಕಾರ್ಯದರ್ಶಿ, ಅಡ್ವೊಕೇಟ್‌ ಜನರಲ್‌ ಅವರು ನೀಡಿದ ಅಭಿಪ್ರಾಯದಂತೆ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದೂ ಗೊತ್ತಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು