ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣ ಲೋಕಾರ್ಪಣೆಗೆ ಸಿಎಂ

22ರಂದು ಕಾರ್ಯಕ್ರಮ , ಸಿದ್ಧತೆ ಪರಿಶೀಲಿಸಿದ ಸಂಸದ ಡಾ.ಉಮೇಶ ಜಾಧವ
Last Updated 17 ನವೆಂಬರ್ 2019, 13:51 IST
ಅಕ್ಷರ ಗಾತ್ರ

ಕಲಬುರ್ಗಿ: ಕಲಬುರ್ಗಿ ವಿಮಾನ ನಿಲ್ದಾಣದ ಲೋಕಾರ್ಪಣೆ ಕಾರ್ಯಕ್ರಮ ನ.22ರಂದು ನಡೆಯಲಿದ್ದು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಪಾಲ್ಗೊಳ್ಳಲಿದ್ದಾರೆ.

ಅಂದು ಮಧ್ಯಾಹ್ನ 12.30ಕ್ಕೆ ಬೆಂಗಳೂರಿನಿಂದ ಹೊರಟು ಮಧ್ಯಾಹ್ನ 1.35ಕ್ಕೆ ಕಲಬುರ್ಗಿಗೆ ಬರಲಿರುವ ಸ್ಟಾರ್‌ ಏರ್‌ ವಿಮಾನದಲ್ಲಿಯೇ ಮುಖ್ಯಮಂತ್ರಿ ಬರುವರು. ವಿಮಾನ ನಿಲ್ದಾಣ ಉದ್ಘಾಟಿಸಿ ಮಧ್ಯಾಹ್ನ 1.55ಕ್ಕೆ ಅದೇ ವಿಮಾನದಲ್ಲಿ ಬೆಂಗಳೂರಿಗೆ ವಾಪಸ್ಸಾಗುವರು.

ಸಿದ್ಧತಾ ಸಭೆ: ನ. 22ರಂದು ನಡೆಯಲಿರುವ ಕಲಬುರ್ಗಿ ವಿಮಾನ ನಿಲ್ದಾಣ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕು. ಜಿಲ್ಲಾಡಳಿತ ಹಾಗೂ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ಸಾಂಘಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಸಂಸದ ಡಾ.ಉಮೇಶ ಜಾಧವ ನಿರ್ದೇಶನ ನೀಡಿದರು.

ನಗರದಲ್ಲಿ ಶನಿವಾರ ಜಿಲ್ಲೆಯ ಎಲ್ಲ ಶಾಸಕರು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ, ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ ಸೇರಿದಂತೆ ಕೇಂದ್ರ ವಿಮಾನಯಾನ ಸಚಿವರು ಆಗಮಿಸುವರು ಎಂದು ಹೇಳಿದರು.

‘ವಿಮಾನ ನಿಲ್ದಾಣ ಆವರಣದಲ್ಲೇ ಕಾರ್ಯಕ್ರಮ ನಡೆಯುತ್ತಿರುವ ಕಾರಣ ಡಿಜಿಸಿಎ ನಿಯಮಾನುಸಾರ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ಉದ್ಘಾಟನಾ ಕಾರ್ಯಕ್ರಮದ ವೇದಿಕೆ ಸೇರಿ ಸಂಪೂರ್ಣ ನಿರ್ವಹಣೆ ಮಾಡಬೇಕು. ಶಿಷ್ಟಾಚಾರದಂತೆ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳಿಗೆ ಆಮಂತ್ರಣ ಪತ್ರಿಕೆ ಮುಂಚಿತವಾಗಿ ತಲುಪಿಸಬೇಕು. ಎಲ್ಲ ಸರ್ಕಾರಿ ಹಾಗೂ ಸ್ವಾಯತ್ತ ವಿಶ್ವವಿದ್ಯಾಲಯಗಳ ಕುಲಪತಿಗಳು, ಉದ್ಯಮಿಗಳು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು,ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನೂ ಆಹ್ವಾನಿಸಬೇಕು’ ಎಂದು ಸೂಚಿಸಿದರು.

ವೇದಿಕೆ ಕಾರ್ಯಕ್ರಮದಲ್ಲಿ ಸುಮಾರು 5 ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಬೇಕು. ಎಲ್ಲೆಡೆ ಸ್ವಚ್ಛತೆ ಮತ್ತು ಸೌಂದರ್ಯೀಕರಣ ಕೈಗೊಳ್ಳಬೇಕು. ಎಲ್ಲಿಯೂ ಪ್ಲಾಸ್ಟಿಕ್ ಬಳಸದಂತೆ ಕಟ್ಟೆಚ್ಚರ ವಹಿಸಬೇಕು ಎಂದು ಕಲಬುರ್ಗಿ ವಿಮಾನ ನಿಲ್ದಾಣದ ನಿರ್ದೇಶಕ ಜ್ಞಾನೇಶ್ವರ ರಾವ್ ಅವರಿಗೆ ನಿರ್ದೇಶನ
ನೀಡಿದರು.

ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮೂಡ, ಸುಭಾಷ ಗುತ್ತೇದಾರ, ವಿಧಾನ ಪರಿಷತ್‌ ಸದಸ್ಯ ಬಿ.ಜಿ.ಪಾಟೀಲ, ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ, ಜಿಲ್ಲಾಧಿಕಾರಿ ಶರತ್ ಬಿ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪಿ. ರಾಜಾ, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಎಚ್.ಕೆ.ಸಿ.ಸಿ.ಐ ಅಧ್ಯಕ್ಷ ಅಮರನಾಥ ಪಾಟೀಲ, ಶಿಷ್ಠಾಚಾರ ತಹಶೀಲ್ದಾರ್‌ ಪ್ರಕಾಶ ಚಿಂಚೋಳೀಕರ ಸೇರಿದಂತೆ ಸಂಬಂಧಟಪ್ಟ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT