ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ಮತ್ತೆ ಕನ್ನಡಿಗನ ಧ್ವನಿ: ಮುಖ್ಯಮಂತ್ರಿ ಕುಮಾರಸ್ವಾಮಿ

ಮಂಡ್ಯ: ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ
Last Updated 27 ಫೆಬ್ರುವರಿ 2019, 20:25 IST
ಅಕ್ಷರ ಗಾತ್ರ

ಮಂಡ್ಯ: ‘1996ರಲ್ಲಿ 16 ಸಂಸದರನ್ನು ಹೊಂದಿದ್ದ ಎಚ್‌.ಡಿ.ದೇವೇಗೌಡ ಅವರಿಗೆ 10 ತಿಂಗಳು ಪ್ರಧಾನಿಯಾಗುವ ಅವಕಾಶ ದೊರೆಯಿತು. ಕಾಂಗ್ರೆಸ್‌ ಜೊತೆಗಿನ ಮೈತ್ರಿಯಿಂದ ಲೋಕಸಭೆ ಚುನಾವಣೆಯಲ್ಲಿ 20–22 ಸ್ಥಾನ ಗಳಿಸಿದರೆ ದೆಹಲಿಯಲ್ಲಿ ಮತ್ತೊಮ್ಮೆ ಕನ್ನಡಿಗರ ಧ್ವನಿ ಕೇಳುವ ಅವಕಾಶ ಸಿಗಲಿದೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಬುಧವಾರ ₹ 5 ಸಾವಿರ ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

‘ಮುಂಬರುವ ಲೋಕಸಭಾ ಚುನಾವಣೆ ದೇಶದ ಹಿತದೃಷ್ಟಿಯಿಂದ ಅತ್ಯಂತ ಮಹತ್ವಪೂರ್ಣವಾದುದು. ದೇವೇಗೌಡರು ಪ್ರಧಾನಮಂತ್ರಿಯಾಗಿದ್ದ ಸಂದರ್ಭದಲ್ಲಿ ಒಬ್ಬ ಸೈನಿಕನ ಪ್ರಾಣವೂ ಹೋಗಿರಲಿಲ್ಲ. ಕಾಶ್ಮೀರದಲ್ಲಿ ಶಾಂತಿ ನೆಲೆಸಿತ್ತು. ಆದರೆ ಈಗ ಉಗ್ರರ ಉಪಟಳ ಮಿತಿಮೀರಿದೆ’ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಬೆಳಿಗ್ಗೆ ಎದ್ದ ಕೂಡಲೇ ಬಣ್ಣದ ಮಾತುಗಳನ್ನಾಡುತ್ತಾರೆ. ರೈತರ ಸಾಲ ಮನ್ನಾ ಮಾಡುವುದು ಪಾಪದ ಕೆಲಸ ಎಂದು ಹೇಳಿದ್ದರು. ಆದರೆ ಈಗ ರೈತರ ಖಾತೆಗೆ ₹ 6 ಸಾವಿರ ಹಣ ಜಮೆ ಮಾಡಲಾಗುವುದು ಎಂದು ಹೇಳಿದ್ದಾರೆ. ಇದರಿಂದ ರಾಜ್ಯಕ್ಕೆ ₹ 2,098 ಕೋಟಿ ದೊರೆಯಲಿದೆ. ಆದರೆ ಇದು ದೊಡ್ಡದಲ್ಲ, ನಾವು ನಮ್ಮ ಹಾಲು ಉತ್ಪಾದಕರಿಗೆ ನೀಡುವ ಸಹಾಯಧನವೇ ₹ 2,500 ಕೋಟಿಯಷ್ಟಾಗುತ್ತದೆ. ಮಾರ್ಚ್ 1ರಿಂದ ಪ್ರತಿ ಲೀಟರ್‌ ಹಾಲಿಗೆ ₹ 1 ಹೆಚ್ಚುವರಿ ಸಹಾಯಧನ ನೀಡಲು ನಿರ್ಧರಿಸಲಾಗಿದೆ. ಒಟ್ಟಾರೆ ಹಾಲು ಉತ್ಪಾದಕರು ₹ 6 ಸಹಾಯಧನ ಪಡೆಯಲಿದ್ದಾರೆ’ ಎಂದು ತಿಳಿಸಿದರು.

ನಿಖಿಲ್‌ ಸ್ಪರ್ಧೆ: ಲೋಕಸಭಾ ಚುನಾವಣೆಯಲ್ಲಿ ನಿಖಿಲ್‌ ಸ್ಪರ್ಧೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಆದರೆ ವಿರೋಧಿಗಳು ಗೊಂದಲ ಮೂಡಿಸುತ್ತಿದ್ದಾರೆ ಎಂದರು.

‘ಅಂಬರೀಷ್‌ ಬೇರೆ ಪಕ್ಷದಲ್ಲಿದ್ದರೂ ನನಗೆ ಆತ್ಮೀಯರಾಗಿದ್ದರು. ಅವರ ಮೃತದೇಹವನ್ನು ಮಂಡ್ಯಕ್ಕೆ ತಂದವರು ಯಾರು. ನಾನು ಆಸ್ಪತ್ರೆಗೆ ತೆರಳಿ ಅಂತಿಮ ದರ್ಶನ ಪಡೆದು ಮನೆಗೆ ತೆರಳಬಹುದಿತ್ತು. ಇದನ್ನು ಅಂಬರೀಷ್‌ ಅಭಿಮಾನಿಗಳು ಅರ್ಥಮಾಡಿಕೊಳ್ಳಬೇಕು. ನಮ್ಮ ನಡುವೆ ಬಿರುಕು ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಮೃತದೇಹ ಕೊಂಡೊಯ್ಯುವುದು ಬೇಡ ಎಂದವರೇ ಈಗ ಮಂಡ್ಯ ಮಣ್ಣಿಗೆ ಗೌರವ ತೋರಿಸುವ ಮಾತುಗಳನ್ನಾಡುತ್ತಿದ್ದಾರೆ’ ಎಂದು ಪರೋಕ್ಷವಾಗಿ ಸುಮಲತಾ ಅವರನ್ನು ಚುಚ್ಚಿದರು.

‘ರೈತರ ಸಾಲ ಮನ್ನಾಕ್ಕಾಗಿ ಮಂಗಳವಾರ ಬೆಳಿಗ್ಗೆ 10 ಗಂಟೆವರೆಗೂ ₹ 4,130 ಕೋಟಿ ಹಣ ಬಿಡುಗಡೆ ಮಾಡಿದ್ದೇನೆ. ಈ ವರ್ಷದ ಅಂತ್ಯದ ವೇಳೆಗೆ ಸಂಪೂರ್ಣ ಋಣಮುಕ್ತಗೊಳಿಸಲಾಗುವುದು’ ಎಂದರು.

ರಾಜ್ಯದಲ್ಲಿ ಹೈ ಅಲರ್ಟ್‌

‘ದೇಶದಲ್ಲಿ ಕ್ಲಿಷ್ಟಕರ ಪರಿಸ್ಥಿತಿ ಇರುವ ಕಾರಣ ನಾವೆಲ್ಲರೂ ಎಚ್ಚರಿಕೆಯಿಂದ ಇರಬೇಕು. ಹೀಗಾಗಿ ಹೈ ಅಲರ್ಟ್‌ ಆಗಿರುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಭದ್ರತೆ ದೃಷ್ಟಿಯಿಂದ ಕರಾವಳಿ ಸೇರಿ ಸೂಕ್ಷ್ಮ ಪ್ರದೇಶದಲ್ಲಿ ಎಚ್ಚರಿಕೆ ವಹಿಸುವಂತೆ ಪೊಲೀಸ್‌, ಗುಪ್ತಚರ ಇಲಾಖೆಗೆ ಆದೇಶಿಸಿದ್ದೇನೆ’ ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

‘ಮಂಗಳವಾರ ಪಾಕಿಸ್ತಾನದ ಮೇಲೆ ನಡೆದ ನಿರ್ದಿಷ್ಟ ದಾಳಿಗೆ ದೇಶದಾದ್ಯಂತ ಬಿಜೆಪಿ ಮುಖಂಡರು ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಇಂತಹ ಸೂಕ್ಷ್ಮ ವಿಚಾರದಲ್ಲಿ ಶಾಂತಿ ಕಾಪಾಡಬೇಕಿದೆ. ಕೆಲ ಪಕ್ಷಗಳ ನಾಯಕರ ನಡವಳಿಕೆಯಿಂದ ಆಂತರಿಕ ಭದ್ರತೆಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT