ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ ಡಿಸಿ ಅಕ್ರಂಪಾಷ ದಿಢೀರ್‌ ಎತ್ತಂಗಡಿ; ಮೇರಿ ಫ್ರಾನ್ಸಿಸ್‌ ಅಧಿಕಾರ ಸ್ವೀಕಾರ

Last Updated 30 ಮಾರ್ಚ್ 2019, 13:37 IST
ಅಕ್ಷರ ಗಾತ್ರ

ಹಾಸನ:‘ತಿಂಗಳ ಹಿಂದಷ್ಟೇ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಅಕ್ರಂ ಪಾಷ ಅವರಿಂದ ನಿಷ್ಪಕ್ಷಪಾತ ಚುನಾವಣೆ ಸಾಧ್ಯವಿಲ್ಲ’ ಎಂಬ ಬಿಜೆಪಿ ದೂರಿನ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಚುನಾವಣೆ ಆಯೋಗ ಅವರನ್ನು ವರ್ಗಾವಣೆ ಮಾಡಿದೆ.

ನೂತನ ಜಿಲ್ಲಾಧಿಕಾರಿಯಾಗಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಶನಿವಾರ ಅಧಿಕಾರ ವಹಿಸಿಕೊಂಡರು. ಪ್ರಿಯಾಂಕ ಅವರು
ಬೆಂಗಳೂರಿನ ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿಯಾಗಿದ್ದರು.

ಫೆ. 22ರಂದು ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರನ್ನು ಸರ್ಕಾರ ವರ್ಗ ಮಾಡಿ, ಅಕ್ರಂ ಪಾಷ ಅವರನ್ನು
ನಿಯೋಜಿಸಿತ್ತು.

‘ಅಕ್ರಂ ಪಾಷ ಅವರ ಅತ್ತೆಯ ಮನೆ ಹಾಸನ. ಅವರಿಗೆ ಸಂಬಂಧಿಸಿದ ಆಸ್ತಿ ಬಾಳ್ಳುಪೇಟೆಯಲ್ಲಿದೆ. ಸಾಕಷ್ಟು ಸಂಬಂಧಿಕರು ಹಾಗೂ ರಾಜಕೀಯ ಪಕ್ಷದ ಒಡನಾಟ ಇರುವ ಕಾರಣ ಲೋಕಸಭೆ ಚುನಾವಣೆ ನಿಷ್ಪಕ್ಷಪತವಾಗಿ ನಡೆಸುವುದು ಅನುಮಾನ’ ಎಂದು ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಜೆ.ಗೌಡ ಅವರು ಮಾರ್ಚ್‌ 15ರಂದು ಮುಖ್ಯ ಚುನಾವಣಾ ಆಯುಕ್ತರಿಗೆ ದೂರು ನೀಡಿದ್ದರು.

ಈ ಸಂಬಂಧ ಪ್ರಾದೇಶಿಕ ಆಯುಕ್ತರು ಮಾ.16 ರಂದು ನಗರಕ್ಕೆ ಭೇಟಿ ನೀಡಿ ವಿಚಾರಣೆ ನಡೆಸಿದ್ದರು. ದೂರುದಾರರು ಆಯುಕ್ತರನ್ನು ಭೇಟಿ ಮಾಡಿ, ಮಾಹಿತಿ ನೀಡಿದ್ದರು.

ಈ ಬೆಳವಣಿಗೆಗಳ ನಡುವೆ ಹಲವು ದಿನಗಳಿಂದಜಿಲ್ಲಾಧಿಕಾರಿ ವರ್ಗಾವಣೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಅಕ್ರಂ ಪಾಷ ಅವರನ್ನು ಪ್ರಶ್ನಿಸಿದಾಗ, ‘ಸೂಟ್‌ಕೇಸ್‌ ರೆಡಿ ಇದೆ. ಎಲ್ಲಿಗೆ ಬೇಕಾದರೂ ಹೋಗಲು ಸಿದ್ಧ’ ಎಂದು ಉತ್ತರಿಸಿದರು.

ರಾಜಕೀಯದಾಟಕ್ಕೆ ವರ್ಗಾವಣೆ ಅಸ್ತ್ರ

ರಾಜ್ಯ ರಾಜಕೀಯದ ಶಕ್ತಿ ಕೇಂದ್ರಗಳಲ್ಲಿ ಒಂದಾದ ಹಾಸನ ಜಿಲ್ಲಾಧಿಕಾರಿ ಹುದ್ದೆ ಮ್ಯುಸಿಕಲ್ ಚೇರ್‌ನಂತಾಗಿದೆ.

2017ರ ಜುಲೈ 14ರಂದು ರೋಹಿಣಿ ಸಿಂಧೂರಿ ಅಧಿಕಾರ ವಹಿಸಿಕೊಂಡಿದ್ದರು. ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ನಿಲುವುಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವ ಮೂಲಕ ಕಾಂಗ್ರೆಸ್‌ ಮುಖಂಡ ಆಕ್ರೋಶಕ್ಕೆ ಕಾರಣವಾಗಿದ್ದರು.

2018ರ ಏ. 17ರಂದು ರೋಹಿಣಿ ಅವರನ್ನು ವರ್ಗ ಮಾಡಿ ಮೈಸೂರಿನ ಡಿಸಿಯಾಗಿದ್ದ ರಂದೀಪ್ ಡಿ. ಅವರನ್ನು ನಿಯೋಜಿಸಲಾಗಿತ್ತು. ಕೇವಲ ಎಂಟು ದಿನದಲ್ಲಿ ರಂದೀಪ್ ವರ್ಗಗೊಂಡರು.

2018ರ ಏ. 24ರಂದು ಪಿ.ಸಿ.ಜಾಫರ್ ಅಧಿಕಾರ ವಹಿಸಿಕೊಂಡರು. ಈ ನಡುವೆ ಅವಧಿಗೆ ಮುನ್ನವೇ ತಮ್ಮ ವರ್ಗ ಮಾಡಿದ ಸರ್ಕಾರದ ಕ್ರಮ ಪ್ರಶ್ನಿಸಿ ರೋಹಿಣಿ, ಕೇಂದ್ರ ಆಡಳಿತಾತ್ಮ ನ್ಯಾಯಮಂಡಳಿ ಹಾಗೂ ಹೈಕೋರ್ಟ್ ಮೆಟ್ಟಿಲೇರಿದ್ದರು. ರೋಹಿಣಿ ಸಿಂಧೂರಿ ಅವರನ್ನು 2018ರ ಜೂನ್ 25ರಂದು ಹಾಸನ ಡಿಸಿಯಾಗಿ ವರ್ಗ ಮಾಡಿತ್ತು.

2019ರ ಫೆ. 22ಕ್ಕೆ ರೋಹಿಣಿ ಸಿಂಧೂರಿ ವರ್ಗವಾಗಿ, ಆ ಸ್ಥಳಕ್ಕೆ ಅಕ್ರಂ ಪಾಷ ಬಂದರು. ಇದೀಗ ಚುನಾವಣಾ ಆಯೋಗದ ಆದೇಶದ ಅನ್ವಯ ಅವರನ್ನು ಅಲ್ಪಾವಧಿಯಲ್ಲೇ ವರ್ಗ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT