ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ನಾಗಮಂಗಲಕ್ಕೆ ದೇವೇಗೌಡ ಕುತೂಹಲ ಮೂಡಿಸಿದ ಭೇಟಿ

Last Updated 31 ಅಕ್ಟೋಬರ್ 2018, 19:46 IST
ಅಕ್ಷರ ಗಾತ್ರ

ಮಂಡ್ಯ: ಲೋಕಸಭೆ ಉಪಚುನಾವಣೆ ಘೋಷಣೆಯಾದ ನಂತರ ಇದೇ ಮೊದಲ ಬಾರಿಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಗುರುವಾರ ಮತಯಾಚನೆ ಮಾಡಲು ನಾಗಮಂಗಲ ಪಟ್ಟಣಕ್ಕೆ ಭೇಟಿ ನೀಡುತ್ತಿರುವುದು ಜಿಲ್ಲೆಯಾದ್ಯಂತ ಕುತೂಹಲ ಕೆರಳಿಸಿದೆ.

ಲಕ್ಷ್ಮಿ ಅಶ್ವಿನ್‌ಗೌಡ ಅವರಿಗೆ ಟಿಕೆಟ್‌ ನೀಡದೆ ಎಲ್‌.ಆರ್‌.ಶಿವರಾಮೇಗೌಡ ಅವರಿಗೆ ಟಿಕೆಟ್‌ ನೀಡಿರುವುದು ಕೆಲ ಕಾರ್ಯಕರ್ತರಲ್ಲಿ ಅಸಮಾಧಾನ ತಂದಿದೆ. ಅಲ್ಲದೆ ಪತ್ರಕರ್ತ, ವಕೀಲ ಕಂಚನಹಳ್ಳಿ ಗಂಗಾಧರಮೂರ್ತಿ ಕೊಲೆ ಪ್ರಕರಣದಲ್ಲಿ ಶಿವರಾಮೇಗೌಡ ವಿರುದ್ಧ

ನಾಗಮಂಗಲದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದರು. ಈಗ ಅವರ ಪರವಾಗಿ ಮತಯಾಚನೆಗೆ ಬರುತ್ತಿರುವುದು ಕ್ಷೇತ್ರದಲ್ಲಿ ಕುತೂಹಲ ಮೂಡಿಸಿದೆ. ಆಗಿನ ಪ್ರತಿಭಟನೆ ಹಾಗೂ ಈಗಿನ ಮತಯಾಚನೆಗೆ ಯಾವ ಸಮರ್ಥನೆ ನೀಡುತ್ತಾರೆ ಎಂದು ಜನ ಕಾಯುತ್ತಿದ್ದಾರೆ.

ಬಹಿರಂಗ ಪ್ರಚಾರಕ್ಕೆ ತೆರೆ ಬೀಳುವ ದಿನ ಕ್ಷೇತ್ರಕ್ಕೆ ಬರುತ್ತಿದ್ದಾರೆ. ನಾಗಮಂಗಲ ಪಟ್ಟಣದಲ್ಲಿ ಮಾತ್ರ ಪ್ರಚಾರ ನಡೆಸಲಿದ್ದಾರೆ. ಸಮ್ಮಿಶ್ರ ಸರ್ಕಾರದ ಬಹುತೇಕ ಸಚಿವರು ಪಾಲ್ಗೊಳ್ಳುತ್ತಾರೆ ಎಂದು ಜೆಡಿಎಸ್‌ ಮೂಲಗಳು ತಿಳಿಸಿವೆ.

ತಣ್ಣಗಾಗದ ಆಕ್ರೋಶ: ಜೆಡಿಎಸ್‌ಗೆ ಬೆಂಬಲ ನೀಡಿರುವುದಕ್ಕೆ ಕಾಂಗ್ರೆಸ್‌ ಕಾರ್ಯಕರ್ತರ ಆಕ್ರೋಶ ಇನ್ನೂ ತಣ್ಣಗಾಗಿಲ್ಲ. ಬುಧವಾರ ಮದ್ದೂರು ಪಟ್ಟಣದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಪಕ್ಷದ ಹಿರಿಯ ಮುಖಂಡರ ಮೇಲೆ ಹರಿಹಾಯ್ದರು. ಜಿಲ್ಲೆಯಲ್ಲಿ ಜೆಡಿಎಸ್‌ ಮುಖಂಡರ ಸರ್ವಾಧಿಕಾರಿ ಧೋರಣೆಹೆಚ್ಚಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಳ್ಳಾರಿ ಗಡಿಯಲ್ಲಿ ರೆಡ್ಡಿ ವಾಸ್ತವ್ಯ

ಚಿತ್ರದುರ್ಗ: ಬಳ್ಳಾರಿ ಲೋಕಸಭಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಜೆ. ಶಾಂತಾ ಪರ ಕೆಲಸ ಮಾಡಲು ಬಂದಿರುವ ಗಣಿ ಉದ್ಯಮಿ ಜಿ. ಜನಾರ್ದನ ರೆಡ್ಡಿ ಜಿಲ್ಲೆಯ ಗಡಿಯಲ್ಲಿ ವಾಸ್ತವ್ಯ ಹೂಡಿದ್ದಾರೆ.

ಮೊಳಕಾಲ್ಮುರು ತಾಲ್ಲೂಕಿನ ಕೆಳಗಲಹಟ್ಟಿ ಗ್ರಾಮದ ತಿಪ್ಪೇಸ್ವಾಮಿ ಎಂಬುವರ ತೋಟದ ಮನೆಯಲ್ಲಿ ತಂಗಿದ್ದಾರೆ. ಮಾವಿನ ತೋಟದಲ್ಲಿರುವ ಮನೆಯ ಮೊದಲ ಮಹಡಿಯಲ್ಲಿ ವಾಸವಾಗಿರುವ ರೆಡ್ಡಿ, ಮತದಾನ ಮುಗಿಯುವವರೆಗೂ ಇಲ್ಲೇ ಇರುವ ಸಾಧ್ಯತೆ ಇದೆ.

ಶಾಸಕ ಬಿ. ಶ್ರೀರಾಮುಲು ಸೇರಿ ಅನೇಕರು ತೋಟದ ಮನೆಗೆ ಭೇಟಿ ನೀಡಿ ರೆಡ್ಡಿ ಅವರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಉಪ ಚುನಾವಣೆಯ ಗೆಲುವಿಗೆ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಪುತ್ರನ ಸಾವಿನ ಕುರಿತು ನೀಡಿದ ಹೇಳಿಕೆಗೆ ಸ್ವಪಕ್ಷೀಯರಿಂದಲೇ ಟೀಕೆ ವ್ಯಕ್ತವಾಗಿರುವುದರಿಂದ, ರೆಡ್ಡಿ ಬೇಸರಗೊಂಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ಬಳ್ಳಾರಿ ಪ್ರವೇಶಿಸದಂತೆ ರೆಡ್ಡಿ ಅವರಿಗೆ ನ್ಯಾಯಾಲಯ ನಿರ್ಬಂಧ ವಿಧಿಸಿದೆ. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೂ ಮೊಳಕಾಲ್ಮುರು ತಾಲ್ಲೂಕಿನ ಹಾನಗಲ್‌ ಸಮೀಪ ಅವರು ವಾಸ್ತವ್ಯ ಹೂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT