ಬುಧವಾರ, ನವೆಂಬರ್ 13, 2019
17 °C

ನನ್ನ ಮೇಲೆ ಐಟಿ ದಾಳಿಯಾದರೆ ಬಿಎಸ್‌ವೈ ಅಕ್ರಮದ ದಾಖಲೆ ಸಿಗುತ್ತದೆ: ಎಚ್‌ಡಿಕೆ

Published:
Updated:

ಹಾಸನ: ನನ್ನ ಮನೆಗೆ ಐಟಿಯವರು ದಾಳಿ ಮಾಡಿದರೆ ಮುಖ್ಯಮಂತ್ರಿ ಯಡ್ಡಿಯೂರಪ್ಪ ಅವರು ಅಕ್ರಮವಾಗಿ ಆಸ್ತಿ ಸಂಪಾದನೆ ಮಾಡಿರುವ ದಾಖಲೆಗಳೇ ಸಿಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ನೊಂದ ಜನರ ಬದಲು ಅನರ್ಹರ ಹಿತ ಕಾಯುತ್ತಿದ್ದಾರೆ. ಯಡಿಯೂರಪ್ಪ ಅವರು ಲೂಟಿ ಮಾಡುತ್ತಿರುವುದರಿಂದ ಆ ಪದವನ್ನು ಉಚ್ಚರಿಸಲು ಕಷ್ಟವಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ.

ರಾಜ್ಯದಲ್ಲಿ ಕಂಡರಿಯದ ಮಳೆಯಾಗುತ್ತಿದೆ. ಮುಂಗಾರು-ಹಿಂಗಾರು ಒಂದಾಗಿವೆ. ದೊಡ್ಡಮಟ್ಟದ ಅನಾಹುತ ರಾಜ್ಯದಲ್ಲಿ ಆಗುತ್ತಿದೆ. ಪರಸ್ಪರ ‌ಕೆಸರೆರೆಚಾಟದಿಂದ ಸಂತ್ರಸ್ತರಿಗೆ ಪರಿಹಾರ ಸಿಗಲ್ಲ ಎಂದು ಹೇಳಿದ್ದಾರೆ. 

ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರು ರಾಜ್ಯಕ್ಕೆ 12ಕ್ಕೂ ಹೆಚ್ಚು ಬಾರಿ ಬಂದಿದ್ದರು. ಮಹಾರಾಷ್ಟ್ರದಲ್ಲೂ ಮಳೆಹಾನಿ ಪರಿಹಾರದ ಬಗ್ಗೆ ಮಾತನಾಡಿಲ್ಲ.

ಸಂತ್ರಸ್ತರಿಗೆ ನೆರವಾಗುವ ಕಾರಣದಿಂದ ಮೂರೇ ದಿನಕ್ಕೆ ಅಧಿವೇಶನ ಮುಗಿಸಿದ್ದ ಮೋದಿ ಅಲ್ಲಿ ಹೇಳಿದಂತೆ ನೊಂದ ಜನರ ನೋವಿಗೆ ಸ್ಪಂದಿಸಲಿಲ್ಲ. ಬದಲಾಗಿ ಮಹಾರಾಷ್ಟ್ರ ಚುನಾವಣೆಗೆ ಸಮಯ ಮೀಸಲಿಟ್ಟರು. ಕರ್ನಾಟಕದಿಂದ ನೀರು ಬಿಡುವ ಭರವಸೆಯನ್ನೂ ನೀಡಿ ಬಂದಿದ್ದಾರೆ. ಈಗ ನೀರು ಹರಿಸಲು ತೊಡಕಿನ ಕಾರಣ ನೀಡುತ್ತಿದ್ದಾರೆ. ಹಿಂದೆ ಟೀಕೆ ಮಾಡುವಾಗ ಇವರಿಗೆ ಗೊತ್ತಿರಲಿಲ್ಲವೇ? ರಾಜ್ಯದಲ್ಲಿ ಚಿಲ್ಲರೆ ರಾಜಕೀಯ ನಡೆಯುತ್ತಿದೆ ಎಂದು ಕಿಡಿ ಕಾರಿದ್ದಾರೆ. 

ಬೊಕ್ಕಸದಲ್ಲಿ ಹಣ ಇಲ್ಲ ಎಂದು ಹೇಳುತ್ತಾರೆ. ಆದರೆ ಅನರ್ಹರ ಕ್ಷೇತ್ರಗಳಿಗೆ ಕೋಟಿ ಕೋಟಿ ಹಣ ಕೊಡುತ್ತಿದ್ದಾರೆ. ಜನತೆಯ ತೆರಿಗೆಯ ಹಣ ಅಪವ್ಯಯ ಮಾಡಲಾಗುತ್ತಿದೆ ಎಂದು ದೂರಿದರು.

ಜೆಡಿಎಸ್ ವರಿಷ್ಠ ದೇವೇಗೌಡರಿಗೆ ರಾಜ್ಯ ಬಿಡಿ ಎಂದು ನಾನೇ ಹೇಳುತ್ತೇನೆ. ಅವರು ಸೋತಿರಬಹುದು, ಆದರೆ ಅವರು ದೇಶದಲ್ಲಿ ಇರಬೇಕು. ಅವರಿಗೆ ಅಧಿಕಾರ ಬೇಡ, ಆದರೆ ಮತ್ತೊಂದು ಕ್ರಾಂತಿಯಾಗಬೇಕು. ಇಲ್ಲವಾದಲ್ಲಿ ದೇಶ ಹಾಳಾಗಲಿದೆ, ಈಗಾಗಲೇ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಯಾರಾದರೂ ನೇತೃತ್ವ ವಹಿಸಿಕೊಳ್ಳದಿದ್ದರೆ ದೇಶಕ್ಕೆ ಕಷ್ಟಕಾಲ ಬರಲಿದೆ. ದೇವೇಗೌಡರು ಹಾಸನದಿಂದಲೇ ನಿಲ್ಲಬೇಕಿತ್ತು. ಲೋಕಸಭೆಯಲ್ಲಿ ಗೌಡರು ಇರಬೇಕಿತ್ತು ಎಂದು ಪಶ್ವತ್ತಾಪ ವ್ಯಕ್ತಪಡಿಸಿದರು.

ನಾವು ಹೆದರಿ ಕೂರುವುದಿಲ್ಲ. ರಾಜ್ಯ, ದೇಶದಲ್ಲಿ ನಡೆಯುತ್ತಿರುವ ದುರಾಡಳಿತದ ಬಗ್ಗೆ ದನಿ ಎತ್ತಬೇಕಿದೆ. ಚುನಾವಣಾ ಫಲಿತಾಂಶಕ್ಕೂ ದೇಶದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಸಂಬಂಧ ಇಲ್ಲ. ದೇಶದಲ್ಲಿ ಬದಲಾವಣೆಗೆ ಒಂದು ವೇದಿಕೆ ಬೇಕು. ಸತ್ಯಸಂಗತಿಗಳನ್ನು ಧೈರ್ಯವಾಗಿ ಹೇಳಬೇಕಿದೆ. 15 ಕ್ಷೇತ್ರಗಳ ಉಪಚುನಾವಣೆಯನ್ನು ಗಂಭೀರವಾಗಿ ಎದುರಿಸುತ್ತೇವೆ. ಯಾವುದೇ ಮೈತ್ರಿ ಇಲ್ಲ. ಎಲ್ಲೆಡೆ ಅಭ್ಯರ್ಥಿಗಳನ್ನು ಹಾಕುತ್ತೇವೆ ಎಂದು ಹೇಳಿದರು. 

ಪ್ರತಿಕ್ರಿಯಿಸಿ (+)