ಸೋಮವಾರ, ಆಗಸ್ಟ್ 26, 2019
27 °C

ಪ್ರವಾಹ ಬಂದಿದೆ, ಎಲ್ಲಿದ್ದೀಯಪ್ಪ ಯಡಿಯೂರಪ್ಪ: ಕುಮಾರಸ್ವಾಮಿ

Published:
Updated:

ಬೆಂಗಳೂರು: ನೆರೆ ಹಾಗೂ ಮಳೆ ಅನಾಹುತಗಳಿಂದ ರಾಜ್ಯದ ಹಲವು ಜಿಲ್ಲೆಗಳ ಜನರು ತತ್ತರಿಸಿದ್ದರೂ ಮುಖ್ಯಮಂತ್ರಿ ಹಾಗೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಕಾಂಗ್ರೆಸ್, ಜೆಡಿಎಸ್ ಮುಖಂಡರು ಆರೋಪಿಸಿದ್ದಾರೆ.

ಯಡಿಯೂರಪ್ಪ ಎಲ್ಲಿದ್ದೀಯಪ್ಪ: ಲೋಕಸಭಾ ಚುನಾವಣೆ ವೇಳೆ ‘ನಿಖಿಲ್‌ ಎಲ್ಲಿದ್ದೀಯಪ್ಪ’ ಎಂದು ತಮಾಷೆ ಮಾಡಿದ್ದೀರಿ. ಇಂದು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಉಂಟಾಗಿದ್ದರೂ ಏಕಚಕ್ರಾಧಿಪತ್ಯದ ಸರ್ಕಾರದಲ್ಲಿ ಜನರ ಗೋಳು ಕೇಳುವವರಿಲ್ಲ. ‘ಯಡಿಯೂರಪ್ಪ ಎಲ್ಲಿದ್ದೀಯಪ್ಪ’ ಎಂದು ಕೇಳುವ ಪರಿಸ್ಥಿತಿ ಬಂದಿದೆ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಕುಟುಕಿದ್ದಾರೆ.

‘ರೋಮ್ ಹೊತ್ತಿ ಉರಿಯುವಾಗ ದೊರೆ ನೀರೊ ಪೀಟೀಲು ಬಾರಿಸುತ್ತಿದ್ದ. ಉತ್ತರ ಕರ್ನಾಟಕ ಭಾಗದಲ್ಲಿ ಜನರು ನರಳುತ್ತಿದ್ದರೂ ಸ್ಪಂದಿಸುತ್ತಿಲ್ಲ’ ಎಂದು ಜೆಡಿಎಸ್ ಟ್ವೀಟ್ ಮಾಡಿದೆ.

‘ಬಿ.ಎಸ್.ಯಡಿಯೂರಪ್ಪ ಎಷ್ಟು ದಿನ ಒನ್‌ಮ್ಯಾನ್ ಶೋ ಮಾಡುತ್ತಾರೊ ನೋಡುತ್ತೇವೆ. ಪ್ರವಾಹ ಪರಿಸ್ಥಿತಿ ತೀವ್ರ
ವಾಗಿದ್ದರೂ ಸ್ಪಂದಿಸುತ್ತಿಲ್ಲ’ ಎಂದು ಶಾಸಕ ಡಿ.ಕೆ.ಶಿವಕುಮಾರ್ ಗುಡುಗಿದ್ದಾರೆ.

‘‌ಆಡಳಿತ ಯಂತ್ರ ಸತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್‌ ಮಾಡಿದ್ದಾರೆ. ತಕ್ಷಣ ವಸತಿ, ಊಟದ ವ್ಯವಸ್ಥೆ ಕಲ್ಪಿಸಿ, ಆರೋಗ್ಯ ಸೇವೆ ಕಲ್ಪಿಸಬೇಕು. ಮನೆ ಬಿದ್ದಿರುವ ಕಡೆಗಳಲ್ಲಿ ತಾತ್ಕಾಲಿಕ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು 
ಮುಖಂಡ ಮಲ್ಲಿಕಾರ್ಜುನ ಖರ್ಗೆ ಆಗ್ರಹಿಸಿದ್ದಾರೆ.

‘ಆಡಳಿತ ಯಂತ್ರ ಸತ್ತಿದೆ’

‘ನೆರೆಯಿಂದ ತತ್ತರಿಸಿದವರಿಗೆ ಸ್ಪಂದಿಸಲು ಸರ್ಕಾರವೇ ಇಲ್ಲವಾಗಿದೆ. ಆಡಳಿತ ಯಂತ್ರ ಸತ್ತುಹೋಗಿದೆ. ಅಧಿಕಾರಿಗಳಿಗೆ ಏನು ಮಾಡಬೇಕು ಎಂಬುದೇ ತೋಚುತ್ತಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟ್‌ನಲ್ಲಿ ಟೀಕಿಸಿದ್ದಾರೆ.

‘ಮನಸ್ಸು ಮರುಗುತ್ತಿದೆ’

‘ಉತ್ತರ ಕರ್ನಾಟಕ ಭಾಗದ ಪ್ರವಾಸ ಸಂತ್ರಸ್ತರನ್ನು ಕಂಡು ಮನಸ್ಸು ಮರುಗುತ್ತಿದೆ. ಇಂಥ ಸಂದರ್ಭದಲ್ಲಿ ಅವರೊಂದಿಗೆ ಇರಬೇಕಿತ್ತು ಎನಿಸಿದರೂ ವೈದ್ಯರ ಸಲಹೆ ಮೇರೆಗೆ ಕೆಲವು ದಿನಗಳ ಕಾಲ ವಿಶ್ರಾಂತಿ ಪಡೆಯಬೇಕಾಗಿದೆ. ನನ್ನ ಕ್ಷೇತ್ರ ಬಾದಾಮಿಯಲ್ಲೂ ಪ್ರವಾಹ ಎದುರಾಗಿದ್ದು, ಈಗಾಗಲೇ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

 

 

Post Comments (+)