ಕುಮಾರಸ್ವಾಮಿಗೆ ಕುರ್ಚಿ ಭೀತಿ ಕಾಡುತ್ತಿದೆ: ಶ್ರೀರಾಮುಲು

7
ಮೊಳಕಾಲ್ಮುರು ಶಾಸಕ ಬಿ.ಶ್ರೀರಾಮುಲು ಟೀಕೆ

ಕುಮಾರಸ್ವಾಮಿಗೆ ಕುರ್ಚಿ ಭೀತಿ ಕಾಡುತ್ತಿದೆ: ಶ್ರೀರಾಮುಲು

Published:
Updated:

ಚಿತ್ರದುರ್ಗ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಕುರ್ಚಿಯ ಭಯ ಕಾಡುತ್ತಿದೆ. ಬೆಂಗಳೂರು ಬಿಟ್ಟು ಹೊರಬಂದರೆ ಸರ್ಕಾರ ಉರುಳುತ್ತದೆ ಎಂಬ ಭೀತಿಯಲ್ಲಿದ್ದಾರೆ ಎಂದು ಮೊಳಕಾಲ್ಮುರು ಶಾಸಕ ಬಿ. ಶ್ರೀರಾಮುಲು ಟೀಕಿಸಿದರು.

ಚಳ್ಳಕೆರೆ ತಾಲ್ಲೂಕಿನ ನೆಲಗನೇತನಹಟ್ಟಿಯ ದಲಿತರ ಮನೆಯಲ್ಲಿ ಗ್ರಾಮವಾಸ್ತವ್ಯ ಮುಗಿಸಿದ ಅವರು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

‘ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳು ಕಳೆದರೂ ಕುಮಾರಸ್ವಾಮಿ ರಾಜಧಾನಿ ಬಿಟ್ಟು ಹೊರಗೆ ಬರುತ್ತಿಲ್ಲ. ಮೈತ್ರಿ ಬಿಕ್ಕಟ್ಟು ತಾರಕಕ್ಕೆ ಏರಿದ್ದು, ಸರ್ಕಾರಿ ಯಂತ್ರ ಸಂಪೂರ್ಣ ನಿಷ್ಕ್ರಿಯಗೊಂಡಿದೆ. ಬಡವರ ಗೋಳು ಕೇಳುವ ಬದಲು ವರ್ಗಾವಣೆ ದಂಧೆಯಲ್ಲಿ ಮುಳುಗಿದೆ’ ಎಂದು ಆರೋಪಿಸಿದರು.

‘ರಾಜ್ಯದಲ್ಲಿ ಮುಂಗಾರು ಮಳೆ ಉತ್ತಮವಾಗಿ ಬಿದ್ದಿದೆ. ರೈತರಿಗೆ ಬಿತ್ತನೆ ಬೀಜ ಹಾಗೂ ಗೊಬ್ಬರವನ್ನು ಸಕಾಲದಲ್ಲಿ ನೀಡಬೇಕು ಎಂಬ ಪರಿಜ್ಞಾನ ಕೂಡ ಸರ್ಕಾರಕ್ಕೆ ಇಲ್ಲ. ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು, ಆರೋಗ್ಯ ಸಚಿವರು ಗಮನಹರಿಸುತ್ತಿಲ್ಲ. ಪ್ರಧಾನ ಕಾರ್ಯದರ್ಶಿ ಸೇರಿ ಯಾವೊಬ್ಬ ಅಧಿಕಾರಿಯೂ ಕೆಲಸ ಮಾಡುತ್ತಿಲ್ಲ’ ಎಂದು ದೂರಿದರು.

‘ಸಾಲ ಮನ್ನಾಗೆ ಕುಮಾರಸ್ವಾಮಿ ಪಡೆದಿದ್ದ 15 ದಿನಗಳ ಕಾಲಾವಕಾಶ ಮುಗಿದಿದೆ. ಯಾವುದೇ ಸಬೂಬು ಹೇಳದೆ ಸಾಲ ಮನ್ನಾ ಮಾಡಬೇಕು. ಇಲ್ಲವಾದರೆ ವಿಧಾನಸೌಧದ ಹೊರಗೆ ಹಾಗೂ ಒಳಗೆ ಬಿಜೆಪಿ ಹೋರಾಟ ನಡೆಸಲಿದೆ. ಸರ್ಕಾರದ ಕಿವಿ ಹಿಂಡಲು ಪಕ್ಷ ಸಜ್ಜಾಗಿದೆ’ ಎಂದರು.

‘ಜೆಡಿಎಸ್‌–ಕಾಂಗ್ರೆಸ್‌ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿಲ್ಲ. ಬಿಜೆಪಿಗೆ ಅಧಿಕಾರ ತಪ್ಪಿಸಬೇಕು ಎಂಬ ಏಕೈಕ ಕಾರಣಕ್ಕೆ ಎರಡೂ ಪಕ್ಷಗಳು ಒಂದಾಗಿವೆ. ಈ ಸಮ್ಮಿಶ್ರ ಸರ್ಕಾರ ಬಹುದಿನ ಉಳಿಯುವುದಿಲ್ಲ. ರಾಜ್ಯ ರಾಜಕೀಯ ಇತಿಹಾಸದಲ್ಲಿ ಯಾವ ಮೈತ್ರಿ ಸರ್ಕಾರವೂ ಅಧಿಕಾರಾವಧಿ ಪೂರ್ಣಗೊಳಿಸಿಲ್ಲ’ ಎಂದು ಹೇಳಿದರು.

ಗುಡಿಸಲಿನಲ್ಲಿ ರಾಮುಲು ಗ್ರಾಮವಾಸ್ತವ್ಯ

ಮೊಳಕಾಲ್ಮುರು ಶಾಸಕ ಬಿ.ಶ್ರೀರಾಮುಲು ಅವರು ಚಳ್ಳಕೆರೆ ತಾಲ್ಲೂಕಿನ ನಲಗೇತನಹಟ್ಟಿಯಲ್ಲಿ ಬುಧವಾರ ರಾತ್ರಿ ಗ್ರಾಮವಾಸ್ತವ್ಯ ಮಾಡಿದರು.

ದಲಿತರ ಕಾಲೊನಿಯ ಕೂಲಿ ಕಾರ್ಮಿಕ ದುರುಗಪ್ಪ ಹಾಗೂ ಮಂಜುಳಾ ದಂಪತಿಯ ಗುಡಿಸಲಿಗೆ ತಡರಾತ್ರಿ ಆಗಮಿಸಿದ ಅವರು ರಾಗಿ ರೊಟ್ಟಿ ಊಟ ಸೇವಿಸಿದರು. ಗುರುವಾರ ನಸುಕಿನಲ್ಲಿ ಎದ್ದು, ಸ್ನಾನ ಮುಗಿಸಿ ಲಿಂಗಪೂಜೆ ನೆರವೇರಿಸಿದರು.

ಜಮೀನು, ನಿವೇಶನ ಹೊಂದಿರದ ದುರುಗಪ್ಪ ದಂಪತಿ ಕೂಲಿ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದಾರೆ. ಪರಿಚಯಸ್ಥರ ನಿವೇಶನದಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸವಾಗಿದ್ದಾರೆ. ಪುತ್ರ 7ನೇ ತರಗತಿ ಹಾಗೂ ಪುತ್ರಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.

**

ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಅಸ್ಥಿರಗೊಂಡರೆ ಸರ್ಕಾರ ರಚನೆಗೆ ಬಿಜೆಪಿ ಪ್ರಯತ್ನಿಸಲಿದೆ. ಪಕ್ಷೇತರ ಶಾಸಕರು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ.
ಬಿ.ಶ್ರೀರಾಮುಲು, ಶಾಸಕ, ಮೊಳಕಾಲ್ಮುರು

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !