ಶನಿವಾರ, ಮಾರ್ಚ್ 6, 2021
18 °C

ಕಾಮಗಾರಿ ಸ್ಥಳದಲ್ಲಿನ ಹತ್ಯೆ ಅಪಘಾತವಲ್ಲ: ಹೈಕೋರ್ಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕಟ್ಟಡ ನಿರ್ಮಾಣ ಪ್ರದೇಶದಲ್ಲಿ ಅಪರಿಚಿತ ವ್ಯಕ್ತಿಗಳಿಂದ ಹಲ್ಲೆಗೊಳಗಾಗಿ ಸಾವನ್ನಪ್ಪಿದ ವ್ಯಕ್ತಿಗೆ ಘಟನೆ ನಡೆದ ಪ್ರದೇಶದ ಮಾಲೀಕ ಪರಿಹಾರ ನೀಡಬೇಕಾಗಿಲ್ಲ’ ಎಂದು ಹೈಕೋರ್ಟ್ ಆದೇಶಿಸಿದೆ.

ಕಟ್ಟಡ ನಿರ್ಮಾಣ ಜಾಗದಲ್ಲಿ ಅಪರಿಚಿತರಿಬ್ಬರಿಂದ ಹತ್ಯೆಗೀಡಾಗಿದ್ದ ವ್ಯಕ್ತಿಯೊಬ್ಬರ ಪತ್ನಿಗೆ ₹20 ಲಕ್ಷ ಪರಿಹಾರ ನೀಡುವಂತೆ ಕಟ್ಟಡದ ಮಾಲೀಕರಿಗೆ ಆದೇಶಿಸಿದ್ದ ನಗರದ ‘ಲಘು ವ್ಯಾಜ್ಯಗಳು ಮತ್ತು ಮೋಟಾರು ಅಪಘಾತ ಕ್ಲೇಮುಗಳ ನ್ಯಾಯಮಂಡಳಿ’ ಆದೇಶವನ್ನು ನ್ಯಾಯಮೂರ್ತಿ ಆರ್‌.ದೇವದಾಸ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾ ಮಾಡಿದೆ.

‘ಹಲ್ಲೆ ನಡೆಸಿದ ಅಪರಿಚಿತರು ಕಟ್ಟಡ ಪ್ರದೇಶದ ಮಾಲೀಕನಿಗಾಗಲೀ ಕಾರ್ಮಿಕನ ಜೊತೆಗಾಗಲೀ ಸಂಬಂಧ ಹೊಂದಿಲ್ಲ. ಅಂತೆಯೇ ಈ ಘಟನೆ ಕೆಲಸ ಮಾಡುವಾಗ ನಡೆದಿಲ್ಲ. ಹೀಗಾಗಿ ಉದ್ಯೋಗಿಗಳ ಪರಿಹಾರ ಕಾಯ್ದೆ–1923ರ ಕಲಂ 3ರ ಅನುಸಾರ ಈ ಘಟನೆಯನ್ನು ಆಕಸ್ಮಿಕ ಎಂದು ಪರಿಗಣಿಸಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಹೇಳಿದೆ.

ಪ್ರಕರಣವೇನು?: ನಗರದ ಸರಸ್ವತಿಪುರಂನ ಮುನೇಶ್ವರ ಬ್ಲಾಕ್‌ನಲ್ಲಿ ನೆಲೆಸಿದ್ದ ಶಿವಲಿಂಗಯ್ಯ ಎಂಬ ದಿನಗೂಲಿ ಕಾರ್ಮಿಕ ಬನಶಂಕರಿ ಮೊದಲನೇ ಹಂತದ ಎರಡನೇ ಬ್ಲಾಕ್‌ನ ವಿನಾಯಕ ನಗರದಲ್ಲಿ ಸೋಮು ಎಂಬುವರಿಗೆ ಸೇರಿದ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದರು.

2010ರ ಸೆ. 1ರಂದು ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುವ ಸಮಯದಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಶಿವಲಿಂಗಯ್ಯ ಅವರನ್ನು ಕಟ್ಟಡ ನಿರ್ಮಾಣ ಪ್ರದೇಶದಲ್ಲಿಯೇ ಅಡ್ಡಹಾಕಿ ಹಣ ನೀಡುವಂತೆ ಒತ್ತಾಯಿಸಿದ್ದರು. ಇದಕ್ಕೆ ಶಿವಲಿಂಗಯ್ಯ ಪ್ರತಿರೋಧ ವ್ಯಕ್ತಪಡಿಸಿದಾಗ ಅಲ್ಲೇ ಇದ್ದ ಸಿಮೆಂಟ್‌ ಇಟ್ಟಿಗೆಗಳಿಂದ ತಲೆಗೆ ಜಜ್ಜಿ ಹಲ್ಲೆ ನಡೆಸಿದ್ದರು. ಈ ಘಟನೆಯಲ್ಲಿ ಶಿವಲಿಂಗಯ್ಯ ಮೃತಪಟ್ಟಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು