ಅರ್ಹತೆ ಇಲ್ಲದಿದ್ದರೂ ನೇಮಕ

7
ವಿಶ್ವವಿದ್ಯಾಲಯಗಳ ಉಪನ್ಯಾಸಕರ ಆಯ್ಕೆ, ಸಿಎಜಿ ವರದಿಯಲ್ಲಿ ಬಹಿರಂಗ

ಅರ್ಹತೆ ಇಲ್ಲದಿದ್ದರೂ ನೇಮಕ

Published:
Updated:

ಬೆಂಗಳೂರು: ಕರ್ನಾಟಕ ಮುಕ್ತ ವಿವಿ ಒಳಗೊಂಡಂತೆ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಿಗೆ ಅಗತ್ಯ ಅರ್ಹತೆಗಳಿಲ್ಲದಿದ್ದರೂ ಅಕ್ರಮವಾಗಿ ಉಪನ್ಯಾಸಕರು, ಸಹಾಯಕ ಪ್ರಾಧ್ಯಾಪಕರು ಮತ್ತು ಪ್ರಾಧ್ಯಾಪಕರನ್ನು ನೇಮಕ ಮಾಡಲಾಗಿದೆ ಎಂದು ಸಿಎಜಿ ವರದಿ ಹೇಳಿದೆ.

ಈ ನೇಮಕಾತಿಗಳನ್ನು ಮಾಡುವಾಗ ಸಾರ್ವಜನಿಕ ಜಾಹಿರಾತುಗಳನ್ನು ನೀಡಿಲ್ಲ ಹಾಗೂ ಆಯ್ಕೆ ಸಮಿತಿ ರಚಿಸದೆ, ನೇರವಾಗಿ ನೇಮಕಾತಿ ಮಾಡಲಾಗಿದೆ ಎಂದು ಸಿಎಜಿ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಮೈಸೂರಿನಲ್ಲಿರುವ ಮುಕ್ತ ವಿಶ್ವ ವಿದ್ಯಾಲಯ 22 ತಾತ್ಕಾಲಿಕ ಉಪನ್ಯಾಸಕರನ್ನು 2013ರಲ್ಲಿ ಸಕ್ರಮ ಮಾಡುವ ತೀರ್ಮಾನ ಕೈಗೊಂಡಿತು. ನೇರವಾಗಿ ನೇಮಕಗೊಂಡಿರುವ ಇವರಲ್ಲಿ 18 ಮಂದಿಗೆ ಕನಿಷ್ಠ ವಿದ್ಯಾರ್ಹತೆಯೂ ಇಲ್ಲ ಎಂದೂ ಹೇಳಿದೆ.

ಈ ವಿಶ್ವವಿದ್ಯಾಲಯವು 2012ರಲ್ಲಿ ಐವರು ಸಹ ಪ್ರಾಧ್ಯಾಪಕರನ್ನು ನೇಮಕ ಮಾಡುವಾಗ ಯುಜಿಸಿ ನಿಗದಿಪಡಿಸಿದ ಮಾನದಂಡಗಳನ್ನು ಪಾಲಿಸಿಲ್ಲ. ಸಹ ಪ್ರಾಧ್ಯಾಪಕರ ಆಯ್ಕೆಗೆ 300 ಎಪಿಐ ಅಂಕಗಳನ್ನು ಪಡೆದಿರಬೇಕೆಂಬ ನಿಯಮವಿದೆ. ಆ ವರ್ಷದ ಡಿಸೆಂಬರ್‌ ತಿಂಗಳಿನಲ್ಲಿ ನಡೆದ ನೇಮಕಾತಿಗೆ ಮೂವರನ್ನು ಸಂದರ್ಶನಕ್ಕೆ ಕರೆಯಲಾಗಿತ್ತು. ಅಭ್ಯರ್ಥಿಗಳು 300 ಎಪಿಐ ಅಂಕ ಪಡೆಯದಿದ್ದರೂ ನೇಮಕ ಮಾಡಲಾಯಿತು ಎಂದು ಸ್ಪಷ್ಟಪಡಿಸಿದೆ.

ಅಲ್ಲದೆ, ಮೈಸೂರು ವಿಶ್ವವಿದ್ಯಾಲಯದಲ್ಲಿ ನೇಮಕವಾದ ಆರು ಉಪನ್ಯಾಸಕರುಗಳಿಗೆ ಅವರ ಹಿಂದಿನ ಹುದ್ದೆಗಳು ಉಪನ್ಯಾಸಕರ ಹುದ್ದೆಗೆ ಸಮನಾಗಿರದ ಕಾರಣ ಯುಜಿಸಿ ನಿಯಮಾವಳಿಗಳ ಅನ್ವಯ ವೇತನ ಸಂರಕ್ಷಣೆಗೆ ಅರ್ಹರಲ್ಲದಿದ್ದರೂ ವೇತನ ಸಂರಕ್ಷಣೆ ಲಾಭ ಮಾಡಿಕೊಡಲಾಗಿದೆ ಎಂದೂ ವರದಿ ತಿಳಿಸಿದೆ.

ಕುವೆಂಪು ವಿವಿಯೂ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಎರಡು ಉಪನ್ಯಾಸಕರ ಹುದ್ದೆಗೆ 2008 ಹಾಗೂ 2010ರಲ್ಲಿ ಸಂದರ್ಶನ ನಡೆಸಿತು. ಆದರೆ, ಎನ್‌ಇಟಿ, ಎಸ್‌ಎಲ್‌ಇಟಿ ಪರೀಕ್ಷೆ ಪಾಸು ಮಾಡದ ಅಥವಾ ಪಿಎಚ್‌ಡಿ ಪದವಿ ಪಡೆಯದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಈ ಹುದ್ದೆಗೆ ಸ್ನಾತಕೋತ್ತರ ಪದವಿಯನ್ನು ಪಡೆಯದೆ ಬಿ.ಎಸ್‌ಸಿ, ಎಂಟೆಕ್‌ ಪಡೆದಿರುವ ಒಬ್ಬ ಅಭ್ಯರ್ಥಿಯನ್ನೂ ಆಯ್ಕೆ ಮಾಡಲಾಗಿದೆ. ಇವರ ಎಂಟೆಕ್‌ ಪದವಿಯನ್ನೂ ಎಐಸಿಟಿಇ ಮಾನ್ಯ ಮಾಡಿರುವುದಿಲ್ಲ.

ಅಲ್ಲದೆ, ಮಗಧ ವಿವಿಯ ಪಿಎಚ್‌ಡಿ ಪದವಿ ‍ಪಡೆದಿರುವುದಾಗಿ ಸುಳ್ಳು ಪ್ರಮಾಣ ಪತ್ರ ನೀಡಿದ್ದಾರೆ ಎಂದೂ ವರದಿ ಬಹಿರಂಗಪಡಿಸಿದೆ. ವಿಶ್ವವಿದ್ಯಾಲಯಗಳ ಸಹಾಯಕ ಪ್ರಾಧ್ಯಾಪಕರು ಹಾಗೂ ಸಮನಾದ ಬೋಧನಾ ಸಿಬ್ಬಂದಿ ನೇಮಕಕ್ಕೆ ಶೈಕ್ಷಣಿಕ ವಿದ್ಯಾರ್ಹತೆ ಜೊತೆಗೆ ಎನ್ಇಟಿ, ಎಸ್‌ಎಲ್‌ಇಟಿ  ಅಥವಾ ‍ಪಿಎಚ್‌ಡಿ ಕಡ್ಡಾಯ. ಯುಜಿಸಿ 2009ರಲ್ಲಿ ಜಾರಿಗೊಳಿಸಿರುವ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿದೆ ಎಂದು ಸಿಎಜಿ ಸ್ಪಷ್ಟಪಡಿಸಿದೆ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !