‘ಹೊರೆ’ ಹೊತ್ತ ದಲಿತ ನಾಯಕ

ಬುಧವಾರ, ಜೂಲೈ 17, 2019
25 °C
ರಾಷ್ಟ್ರೀಯ ಅಧ್ಯಕ್ಷ, ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಜಿಲ್ಲೆಯ ಪಾಲು

‘ಹೊರೆ’ ಹೊತ್ತ ದಲಿತ ನಾಯಕ

Published:
Updated:
Prajavani

ಹಾಸನ: ಪಕ್ಷ–ಸ್ವಾಮಿ ನಿಷ್ಠೆ, ಹಿರಿತನ ಹಾಗೂ ಎಲ್ಲರನ್ನೂ ಸಂಭಾಳಿಸಿಕೊಂಡು ಹೋಗುವ ಸೌಮ್ಯ ಸ್ವಭಾವದ, ಸಕಲೇಶಪುರ ಮೀಸಲು ಕ್ಷೇತ್ರದ ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರಿಗೆ ಜೆಡಿಎಸ್‌ ಸಾರಥ್ಯ ವಹಿಸಲಾಗಿದೆ.

ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡ ರಂತೆಯೇ ಕುಮಾರಸ್ವಾಮಿ ಅವರೂ ಆರು ಬಾರಿ ಶಾಸಕರಾಗಿರುವುದು ವಿಶೇಷ.

ದೇವೇಗೌಡರು 6 ಸಲವೂ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದರು. ಆದರೆ, ಕುಮಾರಸ್ವಾಮಿ ಮೊದಲ ಮೂವರು ಅವಧಿಗೆ, ಈ ಹಿಂದೆ ಮೀಸಲು ಕ್ಷೇತ್ರವಾಗಿದ್ದ ಬೇಲೂರು ಕ್ಷೇತ್ರದಿಂದ 1985, 1994 ಮತ್ತು 2004 ರಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದರು.

ಅದಾದ ಬಳಿಕ ಮೀಸಲು ಕ್ಷೇತ್ರವಾದ ಆಲೂರು-ಸಕಲೇಶಪುರ ವಿಧಾನಸಭಾ ಕ್ಷೇತ್ರದಿಂದ 2008, 2013 ಮತ್ತು 2018 ರಲ್ಲಿ ಸತತ ಮೂರು ಬಾರಿ ಜಯಗಳಿಸುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವವೂ ಅವರಿಗಿದೆ.

ಈ ಬಾರಿಯೂ ಅವರು ಮಂತ್ರಿಯಾಗಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ, ಅದೃಷ್ಟ ಒದಗಿ ಬರಲಿಲ್ಲ. ಮಂತ್ರಿ ಸ್ಥಾನ ಬದಲಿಗೆ ಪ್ರಬಲ ನಿಗಮ, ಮಂಡಳಿಸಿಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಅದೂ
ಸಿಗಲಿಲ್ಲ. ಕೊನೆಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಹುದ್ದೆ ನೀಡುವ ಮೂಲಕ ದಲಿತ ಸಮುದಾಯವನ್ನು ಕಡೆಗಣಿಸಿಲ್ಲ ಎಂಬ ಸಂದೇಶವನ್ನು ಪಕ್ಷ ಸಾರಿದೆ.

ಅಧ್ಯಕ್ಷ ಸ್ಥಾನದ ಜವಾಬ್ದಾರಿ ವಹಿಸಿಕೊಳ್ಳುವ ಮೂಲಕ ಈ ಸ್ಥಾನ ಅಲಂಕರಿಸಿದ ಮತ್ತೊಬ್ಬ ದಲಿತ ನಾಯಕ ಎಂಬ ಹೆಗ್ಗಳಿಕೆಗೆ ಕುಮಾರಸ್ವಾಮಿ ಪಾತ್ರರಾಗಿದ್ದಾರೆ. ಈ ಹಿಂದೆ ಪರಿಶಿಷ್ಟ ಪಂಗಡಕ್ಕೆ ಸೇರಿದ ದಿವಂಗತ ಡಿ.ಟಿ.ಜಯಕುಮಾರ್ ಅಧ್ಯಕ್ಷರಾಗಿದ್ದರು. ಅದಾದ ನಂತರ ಮೆರಾಜುದ್ದೀನ್ ಪಟೇಲ್, ಕೃಷ್ಣಪ್ಪ, ಇತ್ತೀಚೆಗೆ ಎಚ್.ವಿಶ್ವನಾಥ್ ಅವರನ್ನು ಬಿಟ್ಟರೆ ದೇವೇಗೌಡರು, ಕುಮಾರಸ್ವಾಮಿ ಅವರೇ ಈ ಹುದ್ದೆ ನಿಭಾಯಿಸಿದ್ದಾರೆ.

ಅಲ್ಲದೇ ಜಿಲ್ಲೆಯಿಂದ ಈ ಜವಾಬ್ದಾರಿ ವಹಿಸಿಕೊಂಡ ಮೂರನೇ ನಾಯಕ ಕುಮಾರಸ್ವಾಮಿ. ಈ ಹಿಂದೆ ದೇವೇಗೌಡರು, ನಂತರ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷರಾಗಿದ್ದರು. ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಸಹ ಜಿಲ್ಲೆಯವರೇ ಎಂಬುದು ಗಮರ್ನಾಹ ಅಂಶ.

ಇತ್ತೀಚೆಗೆ ದಲಿತ ಸಿ.ಎಂ ಕೂಗು ಎದ್ದಿತ್ತು. ‘ದಲಿತರಿಗೆ ಏನು ಮಾಡಿದ್ದೀರಿ’ ಎಂದು ಯಾರೂ ಬೊಟ್ಟು ಮಾಡಬಾರದು ಎಂಬ ಕಾರಣಕ್ಕೆ ಗೌಡರು ಕುಮಾರಸ್ವಾಮಿ ಅವರಿಗೆ ಅಧ್ಯಕ್ಷ ಪಟ್ಟ ಕಟ್ಟಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

‘ಹೊಸ ಜವಾಬ್ದಾರಿ ನಿಭಾಯಿಸುವ ಶಕ್ತಿಯೂ ಇದೆ. ಹೊರುವ ಶಕ್ತಿಯೂ ಇದೆ. ಸಮಯ ಬಂದಾಗ ಎಲ್ಲವೂ ಬಹಿರಂಗವಾಗಲಿದೆ’ ಎಂದು ಎರಡು ದಿನಗಳ ಹಿಂದೆಯಷ್ಟೇ ಎಚ್.ಕೆ.ಕುಮಾರಸ್ವಾಮಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 3

  Angry

Comments:

0 comments

Write the first review for this !