ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ಸಮವಸ್ತ್ರದಲ್ಲಿ ಮೋದಿ: ಎಚ್‌.ಕೆ.ಪಾಟೀಲ ಆಕ್ಷೇಪ

ಕ್ಷಮೆ ಕೇಳದಿದ್ದರೇ ಚುನಾವಣಾ ಕಣದಿಂದ ಅನರ್ಹಗೊಳಿಸಲು ಆಗ್ರಹ
Last Updated 17 ಏಪ್ರಿಲ್ 2019, 16:49 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸೇನಾ ಸಮವಸ್ತ್ರವನ್ನು ತೊಟ್ಟು, ಚುನಾವಣಾ ಪ್ರಚಾರ ಮಾಡುವ ಮೂಲಕ ಭಾರತೀಯ ಸೇನೆಯನ್ನು ರಾಜಕೀಯವಾಗಿ ದುರುಪಯೋಗಪಡಿಸಿಕೊಳ್ಳಲು ಯತ್ನಿಸಿರುವ ಪ್ರಧಾನಿ ನರೇಂದ್ರ ಮೋದಿ ತಕ್ಷಣ ಕ್ಷಮೆಯಾಚಿಸಬೇಕು. ಇಲ್ಲವಾದರೆ ಚುನಾವಣಾ ಆಯೋಗ ಅವರನ್ನು ಕಣದಿಂದ ಅನರ್ಹಗೊಳಿಸಬೇಕು ಎಂದು ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಚ್‌.ಕೆ.ಪಾಟೀಲ ಒತ್ತಾಯಿಸಿದರು.

ದೇಶದ ಯುವ ಸಮುದಾಯವನ್ನು ಭಾವನಾತ್ಮಕವಾಗಿ ಸೆಳೆಯಲು ಮೋದಿ ಅವರು ಸೇನಾ ಸಮವಸ್ತ್ರವನ್ನು ತೊಟ್ಟಿಕೊಂಡು ಪ್ರಚಾರ ನಡೆಸುವ ಮೂಲಕ ಭಾರತೀಯ ಸೇನೆಗೆ ಅವಮಾನ ಮಾಡಿರುವುದನ್ನು ಆಕ್ಷೇಪಿಸಿ ಈಗಾಗಲೇ 156 ಸೇನಾಧಿಕಾರಿಗಳು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ಈ ವಿಷಯವನ್ನು ಆಯೋಗ ಲಘುವಾಗಿ ಪರಿಗಣಿಸಬಾರದು ಎಂದು ಅವರು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಖಂಡನೆ
ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಬಡವರಿಗೆ ₹ 72 ಸಾವಿರ ಒದಗಿಸುವ ‘ನ್ಯಾಯ್‌’ ಯೋಜನೆ ಅನುಷ್ಠಾನ ಅಸಾಧ್ಯ ಎಂದು ರಾಜಕೀಯ ಹೇಳಿಕೆ ನೀಡುವ ಮೂಲಕ ನೀತಿ ಆಯೋಗದ ಉಪಾಧ್ಯಕ್ಷರು ಬಿಜೆಪಿ ಕಾರ್ಯಕರ್ತರಂತೆ ವರ್ತಿಸಿದ್ದಾರೆ. ಇದು ಅವರಿಗೆ ಸಂಬಂಧಪಡದ ವಿಷಯ. ತಕ್ಷಣ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರ್ಪಡೆಯಾಗಲಿ ಎಂದರು.

ಅನುಷ್ಠಾನ ಮಾಡಬಹುದಾದ ಪ್ರಣಾಳಿಕೆಯನ್ನು ಕಾಂಗ್ರೆಸ್‌ ಪಕ್ಷ ಬಿಡುಗಡೆ ಮಾಡಿದೆ. ದೇಶಾದ್ಯಂತ ಪ್ರಣಾಳಿಕೆ ಸಂಚಲನ ಉಂಟು ಮಾಡಿದೆ. ಇದರಿಂದ ಬಿಜೆಪಿ ಕಂಗಾಲಾಗಿದೆ. ಅದರ ನೆಲ ಕುಸಿಯತೊಡಗಿದೆ ಎಂದು ಹೇಳಿದರು.

ನೀಚ ರಾಜಕಾರಣ
ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭಾರತೀಯ ಸೇನೆಯನ್ನು ಮೋದಿ ಸೇನೆ ಎನ್ನುವ ಮೂಲಕ ಅಗೌರವ ತೋರಿಸಿದ್ದಾರೆ. ಈ ಸಂಬಂಧ ಚುನಾವಣಾ ಆಯೋಗ ಅವರಿಗೆ ಮೂರು ದಿನ ಪ್ರಚಾರ ನಿಷಿದ್ಧ ಮಾಡಿದೆ. ಮುಖ್ಯಮಂತ್ರಿಯಾದವರಿಗೆ ಇದಕ್ಕಿಂತ ನಾಚಿಕೆಗೇಡು ಮತ್ತೊಂದಿಲ್ಲ. ಸೂಕ್ಷ್ಮತೆ ಇರುವವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿತ್ತು ಎಂದು ಒತ್ತಾಯಿಸಿದರು.

ರಾಜಸ್ಥಾನ ರಾಜ್ಯಪಾಲ ಕಲ್ಯಾಣಸಿಂಗ್‌ ಅವರು ಬಿಜೆಪಿ ಪರ ಮತಯಾಚಿಸುವ ಮೂಲಕ ನೀಚ ರಾಜಕಾರಣ ಮಾಡಿದ್ದಾರೆ. ಚುನಾವಣಾ ಪ್ರಕ್ರಿಯೆ ಪವಿತ್ರವಾಗಿ ಉಳಿಯಬೇಕಾಗಿದ್ದರೆ ರಾಷ್ಟ್ರಪತಿಗಳು ಅವರನ್ನು ಅಮಾನತು ಮಾಡಬೇಕಾಗಿತ್ತು ಎಂದರು.

ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಉಪಾಧ್ಯಕ್ಷ ವಿ.ಆರ್‌.ಸುದರ್ಶನ್‌, ಮುಖಂಡರಾದ ಎ.ಎಂ.ಹಿಂಡಸಗೇರಿ, ಅನಿಲ್‌ಕುಮಾರ್‌ ಪಾಟೀಲ, ಅಲ್ತಾಫ್‌ ಹಳ್ಳೂರ, ಸದಾನಂದ ಡಂಗನವರ, ಮಹೇಂದ್ರ ಸಿಂಘಿ ಇದ್ದರು.

ನಕಲಿ ನೋಟು ಮುದ್ರಣ: ತನಿಖೆಗೆ ಆಗ್ರಹ
ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್‌ ಶಾ ಅವರ ನೇತೃತ್ವದಲ್ಲಿ ಪ್ರಧಾನಿ ಕಚೇರಿಯ 26 ಅಧಿಕಾರಿಗಳ ವಿಶೇಷ ತಂಡವೊಂದುವಿದೇಶದಲ್ಲಿ ₹ 3 ಲಕ್ಷ ಕೋಟಿ ಮೊತ್ತದ ನಕಲಿ ನೋಟುಗಳನ್ನು ಮುದ್ರಿಸಿ ಮೂರು ವಿಶೇಷ ವಿಮಾನಗಳ ಮೂಲಕ ದೇಶಕ್ಕೆ ಅಕ್ರಮವಾಗಿ ತಂದಿರುವ ಬಗ್ಗೆ ಭಾರತೀಯ ಗುಪ್ತಚರ ಇಲಾಖೆ ‘ರಾ’ ಅಧಿಕಾರಿಗಳೇ ಬಹಿರಂಗ ಪಡಿಸಿದ್ದಾರೆ. ಈ ಬಗ್ಗೆ ಟಿಎನ್‌ಎನ್‌ ವೆಬ್‌ಸೈಟ್‌ ವಿಸ್ತೃತ ವರದಿಯನ್ನು ಸಾಕ್ಷಿ ಸಮೇತ ವರದಿ ಮಾಡಿದೆ ಎಂದು ಎಚ್‌.ಕೆ.ಪಾಟೀಲ ಆರೋಪಿಸಿದರು.

ಈ ಹಗರಣದ ಸಂಪೂರ್ಣ ಮಾಹಿತಿಯನ್ನು ಸುಪ್ರಿಂಕೋರ್ಟ್‌ ಮುಖ್ಯ ನ್ಯಾಯಾಮೂರ್ತಿ ಅವರಿಗೆ ಸಲ್ಲಿಸಲಾಗಿದ್ದು, ಈ ಬಗ್ಗೆ ಅವರ ಸುಪರ್ದಿಯಲ್ಲೇ ಉನ್ನತಮಟ್ಟದ ತನಿಖೆಯಾಗಬೇಕು. ಹಗರಣವನ್ನು ಬಹಿರಂಗಪಡಿಸಿದ ವ್ಯಕ್ತಿಗಳ ಜೀವಕ್ಕೆ ಅಪಾಯ ಇರುವುದರಿಂದ, ಸೂಕ್ತ ಭದ್ರತೆ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

**

ಧಾರವಾಡ, ಗದಗ–ಹಾವೇರಿ, ಬಾಗಲಕೋಟೆ, ಬೆಳಗಾವಿ ಸೇರಿದಂತೆ ರಾಜ್ಯದ 20 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ನಿಶ್ಚಿತ
–ಎಚ್‌.ಕೆ.ಪಾಟೀಲ,ಅಧ್ಯಕ್ಷ, ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT