ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವ ಧಾಟಿಯಲ್ಲಿ ‘ಕರ್ನಾಟಕ ಮಾತೆ’ಗೆ ‘ಜಯ ಹೇ’ ಎನ್ನೋಣ...

Last Updated 30 ನವೆಂಬರ್ 2018, 12:32 IST
ಅಕ್ಷರ ಗಾತ್ರ

ನಮ್ಮ ನಾಡಗೀತೆಯನ್ನು ಇಂಥದ್ದೇ ಸ್ವರ ಸಂಯೋಜನೆಯಲ್ಲಿ ಹಾಡಬೇಕು ಎನ್ನುವ ಅಧಿಕೃತ ನಿಯಮವೇ ಇಲ್ಲ. ಇದು ವಿಪರ್ಯಾಸ, ಆದರೂ ಸತ್ಯ. ಹೀಗಾಗಿಯೇ ನಾಡಗೀತೆಯನ್ನು ಯಾವ ಧಾಟಿಯಲ್ಲಿ ಬೇಕಾದರೂ ಹಾಡುವಂತಹ ಗೊಂದಲ ನಿರ್ಮಾಣವಾಗಿದೆ.

ಈ ಬಗ್ಗೆ ಆಡಳಿತಶಾಹಿಯ ಬೇಜವಾಬ್ದಾರಿತನವನ್ನು ದೂರುವುದು ಸುಲಭ. ಆದರೆ 'ಯಾವ ಧಾಟಿಯಲ್ಲಿ ಹಾಡಬೇಕು' ಎಂಬ ಗೊಂದಲ ಈವರೆಗೆ ಬಗೆಹರಿಯದೆ ಇರಲು ಸರ್ಕಾರವಷ್ಟೇ ಕಾರಣವಲ್ಲ. ಇದರಲ್ಲಿ ಇಬ್ಬರು ಪ್ರತಿಷ್ಠಿತ ರಾಗ ಸಂಯೋಜಕರ ಮೇಲಾಟದ ಕಥೆಯೂ ಅಡಗಿದೆ.

( ಮೈಸೂರು ಅನಂತಸ್ವಾಮಿ ಸಂಗೀತ ನಿರ್ದೇಶನದ ನಾಡಗೀತೆ)

ಅನೇಕ ದಶಕಗಳಿಂದ ಜನರು ಖುಷಿಯಾಗಿ ಹಾಡುತ್ತಿದ್ದ ’ಭಾರತ ಜನನೀಯ ತನುಜಾತೇ’ ಗೀತೆಯನ್ನು ರಾಜ್ಯ ಸರ್ಕಾರ 2000ನೇ ಇಸವಿಯಲ್ಲಿ ನಾಡಗೀತೆಯನ್ನಾಗಿ ಘೋಷಿಸಿತು. ಸರ್ಕಾರದಿಂದ ಮಾನ್ಯತೆ ಪಡೆದಿರುವ ಈ ಗೀತೆಯನ್ನು ಕಳೆದೊಂದು ದಶಕದಿಂದ ಜನರೂ ಖುಷಿಯಾಗಿ ಹಾಡುತ್ತಿದ್ದಾರೆ.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಕುವೆಂಪು ನಾಡಗೀತೆಯನ್ನು ರಚಿಸಿದ್ದಾರೆ. ಇದರಲ್ಲಿ ಕರ್ನಾಟಕದ ವೈಭವವನ್ನು ಕಟ್ಟಿಕೊಡಲಾಗಿದೆ. 1960ರ ಸುಮಾರಿನಲ್ಲಿ ಮೊದಲ ಬಾರಿಗೆ ಸ್ವರ ಸಂಯೋಜಕ ಮೈಸೂರು ಅನಂತಸ್ವಾಮಿ ಈ ಗೀತೆಯ ಭಾವಕ್ಕೆ ಹೊಂದುವ ರಾಗ ಸಂಯೋಜಿಸಿ, ಕೃತಿಯ ಕರ್ತೃ ಕುವೆಂಪು ಎದುರು ಹಾಡಿದ್ದರು.

ಕನ್ನಡ ಕವಿತೆಗಳಿಗೆ ಸ್ವರ ಸಂಯೋಜಿಸಿ ಜನಪ್ರಿಯಗೊಳಿಸಿದ್ದ ಅನಂತಸ್ವಾಮಿ ಅವರು ಆ ವೇಳೆಗಾಗಲೇ ಸುಗಮ ಸಂಗೀತ ಕ್ಷೇತ್ರದಲ್ಲಿ ಪ್ರತಿಷ್ಠಿತ ಸ್ಥಾನ ಪಡೆದುಕೊಂಡಿದ್ದರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ’ಭಾರತ ಜನನೀಯ ತನುಜಾತೇ’ ಗೀತೆಗೆ ರಾಗ ಸಂಯೋಜನೆ ಮಾಡಿ ಕುವೆಂಪು ಅವರ ಸಮ್ಮುಖದಲ್ಲಿ ಪ್ರಸ್ತುತಪಡಿಸಿದ್ದರು. 'ಹಾಡು ಕೇಳಿ ಕುವೆಂಪು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಕೋರಸ್‌ನಲ್ಲಿ (ಸಾಮೂಹಿಕ ಗಾಯನ) ಹಾಡುವಂತೆ ಸಲಹೆ ಮಾಡಿದ್ದರು' ಎಂದು ಮೈಸೂರು ಅನಂತಸ್ವಾಮಿ ತಮ್ಮ ಡೈರಿಯಲ್ಲಿ ಬರೆದುಕೊಂಡಿದ್ದರು.

ಕುವೆಂಪು
ಕುವೆಂಪು

ಅನಂತಸ್ವಾಮಿ ರಾಗಸಂಯೋಜನೆಯನ್ನು ಸುಗಮ ಸಂಗೀತ ಕಲಾವಿದರು ಮೆಚ್ಚಿ ಹಾಡಿದರು. ಶಾಲಾ–ಕಾಲೇಜುಗಳಲ್ಲಿಯೂ ಸಮೂಹಗಾನ ಜನಪ್ರಿಯವಾಯಿತು. ಆಕಾಶವಾಣಿಯೂ ಅನೇಕ ಪ್ರಸಿದ್ಧ ಕಲಾವಿದರ ದನಿಯಲ್ಲಿ ಇದೇ ಸ್ವರ ಸಂಯೋಜನೆಯನ್ನು ಪ್ರಸಾರ ಮಾಡಿತ್ತು.

ಕವಿಗಳು ಮತ್ತು ಸಂಗೀತಗಾರರನ್ನು ಒಳಗೊಂಡಿದ್ದ ರಾಷ್ಟ್ರಕವಿ ಜಿ.ಎಸ್‌.ಶಿವರುದ್ರಪ್ಪ ಅವರ ನೇತೃತ್ವದ ಸಮಿತಿ ಅನಂತಸ್ವಾಮಿ ಅವರ ರಾಗ ಸಂಯೋಜನೆಯನ್ನು ಶಿಫಾರಸು ಮಾಡಿತು. ಹಲವು ರಾಗ ಸಂಯೋಜನೆಗಳನ್ನು ಪರಿಶೀಲಿಸಿದ ಬಳಿಕ ಅನಂತಸ್ವಾಮಿ ಅವರ ಸಂಯೋಜನೆಯನ್ನೇ ಶಿಫಾರಸು ಮಾಡಲು ಸಮಿತಿ ನಿರ್ಧರಿಸಿತು.. ಸಮಿತಿ ತನ್ನ ನಿರ್ಧಾರ ತಿಳಿಸಿ 12 ವರ್ಷಗಳಾದರೂ ಸರ್ಕಾರ ಯಾವುದೇ ಅದೇಶ ಹೊರಡಿಸಲಿಲ್ಲ.

ಸಮಿತಿಯು ಸರ್ಕಾರಕ್ಕೆ ಅನಂತಸ್ವಾಮಿಯ ಸಂಯೋಜನೆಯನ್ನು ಶಿಫಾರಸು ಮಾಡಿದ ಬಳಿಕ ಕಲಾವಿದರ ವಲಯದಲ್ಲಿ ಚಟುವಟಿಕೆಗಳು ಬಿರುಸಾದವು. ಸಂತ ಶಿಶುನಾಳ ಷರೀಫರ ಗೀತೆಗಳಿಗೆ ರಾಗಸಂಯೋಜನೆ ಮಾಡಿ ಜನಪ್ರಿಯರಾಗಿದ್ದ ಸಿ.ಅಶ್ವತ್ಥ್ ಅವರು ತಮ್ಮ ಸಂಯೋಜನೆಯನ್ನು ಸಮಿತಿ ಅಂತಿಮಗೊಳಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

( ಸಿ. ಅಶ್ವತ್ಥ್‌ ಸ್ವರ ಸಂಯೋಜನೆಯನಾಡಗೀತೆ)

ಸಂಗೀತ ಕಲಾವಿದರು ಮತ್ತು ಪ್ರಭಾವಿ ಅಭಿಮಾನಿಗಳು ಅಶ್ವತ್ಥ್ ಅವರ ಸ್ವರ ಸಂಯೋಜನೆಯ ಪರ ಲಾಬಿ ಮಾಡಿದರು. ಕನ್ನಡ ನಾಡಿನೊಂದಿಗೆ ನಂಟು ಹೊಂದಿರುವ ತತ್ವಜ್ಞಾನಿಗಳಾದ ಶಂಕರಾಚಾರ್ಯರು ಮತ್ತು ರಾಮಾನುಜಾಚಾರ್ಯರನ್ನು 'ಭಾರತ ಜನನಿಯ ತನುಜಾತೆ' ಗೀತೆಯಲ್ಲಿ ಉಲ್ಲೇಖಿಸಿದ ಕುವೆಂಪು, ಮಧ್ವಾಚಾರ್ಯರ ಹೆಸರನ್ನೇಕೆ ಕೈಬಿಟ್ಟರು ಎಂಬ ಪ್ರಶ್ನೆಯೂ ಉದ್ಭವಿಸಿತು. ಇದು ಮುಂದೆ ವಿವಾದದ ಸ್ವರೂಪವನ್ನೂ ಪಡೆದುಕೊಂಡಿತು.

ಸರ್ಕಾರಿ ಕಾರ್ಯಕ್ರಮಗಳಲ್ಲಿ ನಾಡಗೀತೆಯಾಗಿ ಹಾಡಲು ಈ ಹಾಡು ತುಂಬಾ ದೊಡ್ಡದಾಗುತ್ತದೆ, ಸಾಕಷ್ಟು ಸಮಯ ಬೇಕಾಗುತ್ತದೆ ಎನ್ನುವ ಆಕ್ಷೇಪಗಳೂ ಕೇಳಿಬಂದವು. ಸಭಿಕರು ನಾಲ್ಕರಿಂದ ಆರು ನಿಮಿಷ ಎದ್ದುನಿಲ್ಲಬೇಕಾಗುತ್ತದೆ. ರಾಜ್ಯಪಾಲರು ಮತ್ತು ಕೆಲ ಗಣ್ಯರಿಗೆ ಹೆಚ್ಚು ವಯಸ್ಸಾಗಿರುತ್ತದೆ. ಅವರಿಗೆ ಇದರಿಂದ ತೊಂದರೆಯಾಗಬಹುದು. ಹೀಗಾಗಿ ಗೀತೆಯ ಸಾಲುಗಳನ್ನು ಕಡಿಮೆ ಮಾಡಬೇಕು ಎನ್ನುವ ಒತ್ತಾಯಗಳು ಕೇಳಿ ಬಂದವು.

ಈ ಎಲ್ಲ ಆಕ್ಷೇಪಗಳ ನಡುವೆಯೇ ಕವಿ ಚನ್ನವೀರ ಕಣವಿ ನೇತೃತ್ವದಲ್ಲಿ ಎರಡನೇ ಸಮಿತಿಯನ್ನು ರೂಪಿಸಲಾಯಿತು. ನಾಡಗೀತೆಯಲ್ಲಿ ಯಾವ ಪದ ಅಥವಾ ಸಾಲುಗಳನ್ನು ಇರಿಸಿಕೊಳ್ಳಬಹುದು, ಯಾವುದನ್ನೆಲ್ಲಾ ತೆಗೆದುಹಾಕಬಹುದು ಯಾವ ಸ್ವರ ಸಂಯೋಜನೆ ಉಳಿಸಿಕೊಳ್ಳಬೇಕು ಎಂದು ಸಮಿತಿ ಪರಾಮರ್ಶೆ ನಡೆಸಿತು.

ಸಮಿತಿ ಸ್ವರ ಸಂಯೋಜನೆ ವಿಚಾರವನ್ನೂ ಪರಾಮರ್ಶಿಸುತ್ತಿರುವ ಸಂಗತಿ ಹಲವರ ಹುಬ್ಬೇರುವಂತೆ ಮಾಡಿತು. ಇದಕ್ಕೆ ಸರ್ಕಾರದಿಂದ ಬಂದ ಉತ್ತರ, 'ನಮ್ಮ ಹತ್ತಿರ ಇದ್ದ ಹಳೆಯ ಕಡತಗಳು ಕಳೆದುಹೋಗಿವೆ'.

ಸಂಗೀತ ವಲಯ ಈ ಉತ್ತರ ಕೇಳಿ ಹೌಹಾರಿತು. ಮೊದಲ ಸಮಿತಿಯ ಸದಸ್ಯರಾಗಿದ್ದವರು ರಾಜ್ಯದಲ್ಲಿಯೇ ಇದ್ದರು. ಅವರನ್ನು ಸರ್ಕಾರ ಮತ್ತೊಮ್ಮೆ ಕೇಳಿದ್ದರೆ ಸಾಕಾಗಿತ್ತು. ಅವರು ಏನು ಶಿಫಾರಸ್ಸು ಮಾಡಿದ್ದರು ಎಂಬುದನ್ನು ಮತ್ತೊಮ್ಮೆ ಹೇಳುತ್ತಿದ್ದರು. ಆದರೆ ಅಂಥ ಯಾವ ಪ್ರಯತ್ನವೂ ನಡೆಯಲಿಲ್ಲ.

ಮೊದಲ ಸಮಿತಿಯಲ್ಲಿದ್ದ ಸಾಹಿತಿ ದೊಡ್ಡರಂಗೇಗೌಡ ಅವರನ್ನು 'ಪ್ರಜಾವಾಣಿ' ಸಂಪರ್ಕಿಸಿತು. ಅವರಿಗೆ ಯಾವ ಧಾಟಿಗೆ 'ಅಧಿಕೃತ' ಮಾನ್ಯತೆ ಸಿಗಬೇಕು ಎನ್ನುವ ಬಗ್ಗೆ ಯಾವುದೇ ಗೊಂದಲ ಇರಲಿಲ್ಲ. 'ಅನಂತಸ್ವಾಮಿಯವರ ರಾಗ ಸಂಯೋಜನೆ ನಾಡಗೀತೆಗೆ ಸರಿಯಾಗಿ ಒಪ್ಪುತ್ತದೆ, ಮೊದಲ ಸಮಿತಿ ಶಿಪಾರಸು ಮಾಡಿದ್ದ ಸಂಯೋಜನೆಯನ್ನೇ ನಾನು ಇಂದಿಗೂ ಶಿಫಾರಸು ಮಾಡುತ್ತೇನೆ' ಎಂದು ಅವರು ಹೇಳಿದರು.

ಸುಗಮ ಸಂಗೀತ ಕಲಾವಿದರೂ ಅನಂತಸ್ವಾಮಿ ಸಂಯೋಜನೆಯನ್ನೇ ಒಪ್ಪುತ್ತಾರೆ

ಡಾ. ಜಯಶ್ರೀ ಅರವೀಂದ್‌, ಗಾಯಕಿ: ’ಅನಂತಸ್ವಾಮಿಯವರು ನಾಡಗೀತೆಗೆ ಅಸ್ಥೆಯಿಂದ ರಾಗ ಸಂಯೋಜಿಸಿದ್ದಾರೆ. ಸರ್ಕಾರ ಇದನ್ನೇ ಮಾನ್ಯ ಮಾಡಲಿದೆ ಎಂಬ ಸುಳಿವು ಈವರೆಗೆ ದೊರೆತಿಲ್ಲ. ಹಾಗೇ ಸಿ.ಅಶ್ವತ್ಥ್ ಅವರ ರಾಗ ಸಂಯೋಜನೆ ಕುರಿತೂ ಅವರಿಗೆ ಯಾವುದೇ ಆಕ್ಷೇಪವಿಲ್ಲ. ಆದರೆ ಅನಂತಸ್ವಾಮಿ ಅವರ ಸಂಯೋಜನೆಗೆ ಅಗೌರವ ತೋರಲಾಗುತ್ತಿದೆ ಎನ್ನುವ ಅರೋಪವನ್ನೂ ಅವರು ಒಪ್ಪುವುದಿಲ್ಲ. 'ಸಂಗೀತ ಕ್ಷೇತ್ರದಲ್ಲಿರುವ ಎಲ್ಲ ಹಿರಿಯರು ಅನಂತಸ್ವಾಮಿ ಅವರ ರಾಗ ಸಂಯೋಜನೆ ಬಗ್ಗೆ ತಿಳಿದಿದ್ದಾರೆ. ಹಲವು ಕಾರ್ಯಕ್ರಮಗಳಲ್ಲಿ ಅವರ ಸಂಯೋಜನೆಯನ್ನು ಹಾಡಿದ್ದಾರೆ'.


(ಡಾ. ಜಯಶ್ರೀ ಅರವೀಂದ್‌)

ಬಿ.ಕೆ.ಸುಮಿತ್ರಾ, ಗಾಯಕಿ:ಅನಂತಸ್ವಾಮಿಗೆ ಎಂದಿಗೊ ಸಿಗಬೇಕಾದ ಗೌರವ ಸಿಗಲಿಲ್ಲ. ಅವರ ಸ್ವರ ಸಂಯೋಜನೆಯನ್ನು ಅಧಿಕೃತ ಎಂದು ಘೋಷಿಸಿ ಈಗಲಾದರೂ ಅವರಿಗೆ ಸಿಗಬೇಕಾದ ಗೌರವ ಸಲ್ಲಿಸಬೇಕಾಗಿದೆ. ಅನಂತಸ್ವಾಮಿ ಅವರಿಂದಲೇ ಮೂಲ ಧಾಟಿಯನ್ನು ಅಭ್ಯಾಸ ಮಾಡಿರುವ ಸುಮಿತ್ರಾ, ‘ಅನಂತಸ್ವಾಮಿ ಅವರ ಸಂಯೋಜನೆ ಅಪ್ಯಾಯಮಾನ. ಸಾಹಿತ್ಯದಲ್ಲಿರುವ ಭಾವವನ್ನು ಈ ಸಂಯೋಜನೆ ಬೆಳಗಿಸುತ್ತದೆ’ ಎಂದು ಅಭಿಪ್ರಾಯಪಡುತ್ತಾರೆ.

ಅನಂತಸ್ವಾಮಿ ಅವರಿಗೆ ಸಿಗಬೇಕಾದ ಮಾನ್ಯತೆ ಸಿಗದಿರಲು ಕಾಣದ ಕೈಗಳೇ ಕಾರಣ ಎಂದು ದೂರುವ ಅವರು, ‘ಇದ್ದಕ್ಕಿದ್ದಂತೆ ಬದಲಾವಣೆಗಳು ಆಗಿಬಿಟ್ಟಿವೆ. ನಮಗೆ ಬೇರೆ ಆಯ್ಕೆಯೇ ಇಲ್ಲದೆ ಸರ್ಕಾರ ಅಂತಿಮಗೊಳಿಸಿದ ಧಾಟಿಯಲ್ಲಿಯೇ ಹಾಡಬೇಕಾದ ಅನಿವಾರ್ಯತೆ ಎದುರಾಗಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ತಮ್ಮ ಸಂಗೀತ ಕಾರ್ಯಕ್ರಮಗಳಲ್ಲಿ ಅನಂತಸ್ವಾಮಿ ಸಂಯೋಜನೆಯ ಧಾಟಿಯಲ್ಲಿ ನಾಡಗೀತೆ ಹಾಡುವ ಸುಮಿತ್ರಾ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಅಶ್ವತ್ಥ್ ಸಂಯೋಜನೆಯ ಧಾಟಿಯನ್ನು ಅನುಸರಿಸುತ್ತಾರೆ. ಸರ್ಕಾರಿ ಕಾರ್ಯಕ್ರಮಗಳಲ್ಲಿ ನಾಡಗೀತೆ ಹಾಡುವುದಷ್ಟೇ ಮುಖ್ಯ. ಅದನ್ನು ಬರೆದವರು, ಸ್ವರ ಸಂಯೋಜಿಸುವುದವರು ಮುಖ್ಯವಾಗುವುದೇ ಇಲ್ಲ. ನಮ್ಮ ರಾಜಕಾರಿಣಿಗಳು ಇತ್ತ ಗಮನ ಕೊಡುತ್ತಿಲ್ಲ ಎನ್ನುವುದು ಬೇಸರದ ಸಂಗತಿ ಎನ್ನುತ್ತಾರೆ ಅವರು.

ಜಿ.ಎಸ್.ಶಿವರುದ್ರಪ್ಪ ನೇತೃತ್ವದ ಸಮಿತಿಯ ಸದಸ್ಯರಾಗಿದ್ದವರಲ್ಲಿ ಹಾರ್ಮೋನಿಯಂ ಕಲಾವಿದ ಡಾ.ವಸಂತ ಕನಕಾಪುರ ಅವರೂ ಒಬ್ಬರು. ಅವರ ಮಾತುಗಳನ್ನು ನೆನಪಿಸಿಕೊಳ್ಳುವ ಸಂಗೀತ ಅಕಾಡೆಮಿ ಸದಸ್ಯ ಮತ್ತು ಸುಗಮ ಸಂಗೀತ ಕಲಾವಿದ ಆನಂದ್ ಮಾದಲಗೆರೆ, ‘ಅನಂತಸ್ವಾಮಿ ಅವರ ಸಂಯೋಜನೆಯನ್ನೇ ಸಮಿತಿ ಶಿಫಾರಸ್ಸು ಮಾಡಿತ್ತು’ ಎಂದು ಹೇಳುತ್ತಾರೆ.

ಆನಂದ್ ಮಾದಲಗೆರೆ
ಆನಂದ್ ಮಾದಲಗೆರೆ

‘ಅನಂತಸ್ವಾಮಿ ಮಾಡಿದ ಸಂಯೋಜನೆಯನ್ನು ಸಮಿತಿಯು ಮಾನ್ಯ ಮಾಡಿದ ಮೇಲೆ ಅದನ್ನು ಬದಲಾವಣೆ ಮಾಡುತ್ತಿರುವುದು ಯಾಕೆ ಎಂದು ಹಲವರು ಕೇಳಿದ್ದರು. ಮೊದಲ ಸಮಿತಿ ನೀಡಿದ್ದ ಶಿಫಾರಸಿನ ಕಡತ ಕಳೆದು ಹೋಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಉತ್ತರ ನೀಡಿದ್ದರು’ ಎಂದು ಅವರು ಪುನರುಚ್ಚರಿಸಿದರು.

ಅನಂತಸ್ವಾಮಿ ಸಂಯೋಜನೆಗೆ ಇರುವ ಆಕ್ಷೇಪವೆಂದರೆ ಅವರು ಕೇವಲ ಎರಡು ಚರಣಗಳಿಗೆ ಮಾತ್ರ ಮಾಧುರ್ಯ ತುಂಬಿದ್ದರು. ಆದರೆ ಅಶ್ವತ್ಥ್ ಪೂರ್ಣ ಗೀತೆಗೆ ಮಾಧುರ್ಯ ತುಂಬಿದ್ದರು ಎಂಬ ಅಭಿಪ್ರಾಯಗಳು ಕೇಳಿ ಬರುತ್ತವೆ.

ಆದರೆ ಅನಂತಸ್ವಾಮಿ ಅವರ ಮಗಳು ಸುನೀತಾ ಅನಂತಸ್ವಾಮಿ ಈ ಆಕ್ಷೇಪವನ್ನು ಒಪ್ಪುವುದಿಲ್ಲ. ಅಪ್ಪನ ಜೊತೆಗೂಡಿ ಎಲ್ಲ ಚರಣಗಳನ್ನು ಹಾಡಿದ ನೆನಪು ನನಗಿದೆ ಎಂದು ಸ್ಪಷ್ಟವಾಗಿ ಹೇಳುತ್ತಾರೆ ಅವರು.

‘ನಾಡಗೀತೆಗೆ ಒಂದು ಅಧಿಕೃತವಾದ ರಾಗ ಸಂಯೋಜನೆ ಇರಬೇಕು ಎಂಬುದು ನಮ್ಮ ಕಳಕಳಿ. ಅದು ಅನಂತಸ್ವಾಮಿಯವರ ಸಂಯೋಜನೆಯಾಗಿರಬೇಕು. ನಮಗೆ ಯಾರೂ ಶತ್ರುವಲ್ಲ. ಸಿ. ಅಶ್ವತ್ಥ್‌ಗಿಂತ ಅನಂತಸ್ವಾಮಿ ಹಿರಿಯರು. ಅವರೇ ನಾಡಗೀತೆಗೆ ಮೊದಲು ರಾಗ ಸಂಯೋಜನೆ ಮಾಡಿದ್ದು’ ಎಂದು ಅನಂದ ಮಾದಲಗರೆರೆ ಹೇಳುತ್ತಾರೆ.

ಅನಂತಸ್ವಾಮಿ ರಾಗ ಸಂಯೋಜನೆ ಮಾಡಿದ ನಂತರ ಗೀತೆ ಜನಜನಿತವಾಯಿತು. ನಂತರವೇ ಸರ್ಕಾರಕ್ಕೆ ನಾಡಗೀತೆಯೊಂದು ಇರಬೇಕು ಎಂಬ ಅಭಿಪ್ರಾಯ ಬಂತು. ಅನಂತಸ್ವಾಮಿ ರಾಗ ಸಂಯೋಜನೆಯನ್ನು ಜನರು ಒಪ್ಪಿಕೊಳ್ಳದಿದ್ದರೆ ನಾಡಗೀತೆಯ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ’ ಎಂದು ಅವರು ಹೇಳುತ್ತಾರೆ.

ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂಬ ಶ್ರೇಯ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ ಈಚೆಗೆ ನಾಡಗೀತೆಯನ್ನು 150 ಸೆಕೆಂಡ್‌ಗಳವರೆಗೆ ಹಾಡಬೇಕು ಎಂದು ಶಿಫಾರಸು ಮಾಡಿತು. ‘ಧಾಟಿಯ ಬಗ್ಗೆ ಏನನ್ನೂ ಯೋಚಿಸದೇ ಕೇವಲ ಹಾಡುವ ಅವಧಿಯ ಬಗ್ಗೆ ಚಿಂತನೆ ಮಾಡುವುದರಿಂದ ಯಾವ ಪ್ರಯೋಜನವೂ ಇಲ್ಲ’ ಎಂದು ಮಾದಲಗೆರೆ ಅಭಿಪ್ರಾಯಪಟ್ಟರು.

ಅನಂತಸ್ವಾಮಿಗೆ ಅಪಮಾನ ಮಾಡಬೇಡಿ: ಸುನೀತ ಅನಂತಸ್ವಾಮಿ...

ಮೈಸೂರು ಅನಂತಸ್ವಾಮಿ ಅವರ ರಾಗ ಸಂಯೋಜನೆಗೇ ‘ನಾಡಗೀತೆಯ ಅಧಿಕೃತ ಧಾಟಿ’ ಮಾನ್ಯತೆ ಸಿಗಬೇಕು ಎಂದು ಅನಂತಸ್ವಾಮಿ ಅವರ ಪುತ್ರಿ ಸುನೀತಾ ಅನಂತಸ್ವಾಮಿ ಈಚೆಗೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಅವರಿಗೆ ಈ ಕುರಿತು ಪತ್ರ ಬರೆದಿರುವ ಅವರು, ‘ಅನಂತಸ್ವಾಮಿ ಅವರು ರಾಗ ಸಂಯೋಜಿಸುವ ಸಂದರ್ಭವನ್ನು ನೆನಪಿಸಿಕೊಂಡಿದ್ದಾರೆ. ತಂದೆಗೆ ನ್ಯಾಯ ದೊರಕಿಸಿಕೊಡಬೇಕು. 2006ರಲ್ಲಿ ಶಿವರುದ್ರಪ್ಪ ನೇತೃತ್ವದ ಸಮಿತಿಯ ಶಿಫಾರಸ್ಸನ್ನು ಸರ್ಕಾರ ದಾಖಲಿಸಿಕೊಂಡಿತ್ತು. ರಾಜ್ಯದಾದ್ಯಂತ ಇರುವ ಶಾಲಾ ಕಾಲೇಜುಗಳಿಗೆ ಸುತ್ತೋಲೆಗಳನ್ನು ಕಳಿಸಿತ್ತು’ ಎಂದು ನೆನಪಿಸಿದ್ದಾರೆ.

ಸುನೀತ ಅನಂತಸ್ವಾಮಿ
ಸುನೀತ ಅನಂತಸ್ವಾಮಿ

ಪ್ರಸ್ತುತ ಅಮೆರಿಕದಲ್ಲಿ ನೆಲೆಸಿರುವ ಅವರು ಈ ಕುರಿತು ‘ಪ್ರಜಾವಾಣಿ’ಗೆ ನೀಡಿರುವ ಇಮೇಲ್ ಸಂದರ್ಶನದಲ್ಲಿ, ‘ನಾನು ಈ ಹಾಡನ್ನು ನನ್ನ ತಂದೆಯ ಜೊತೆಗೆ ಹಾಡಿರುವುದಷ್ಟೇ ಅಲ್ಲ, ನನ್ನ ಕಾಲೇಜು ದಿನಗಳಿಂದಲೂ ಹಲವಾರು ಜನರಿಗೆ ಕಲಿಸಿದ್ದೇನೆ’ ಎಂದು ಹೇಳಿದರು.

ಬೆಂಗಳೂರು ದೂರದರ್ಶನ ಕೇಂದ್ರ ಉದ್ಘಾಟನೆ ಸಮಾರಂಭ ಸೇರಿದಂತೆ ಹಲವಾರು ಪ್ರಮುಖ ಕಾರ್ಯಕ್ರಮಗಳಲ್ಲಿ ಈ ಹಾಡನ್ನು ಅನಂತಸ್ವಾಮಿ ಹಾಡಿದ್ದರು. ಮೈಸೂರಿನಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ರಾಷ್ಟ್ರಕವಿ ಕುವೆಂಪು ಮತ್ತು ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ಅವರ ಸಮ್ಮುಖದಲ್ಲಿ ಅನಂತಸ್ವಾಮಿ ನಾಡಗೀತೆಯನ್ನು ಹಾಡಿದ್ದರು. ಇಂಟರ್‌ನೆಟ್‌ ಹಾಗೂ ಸಮೂಹ ಮಾಧ್ಯಮಗಳು ಇಲ್ಲದಿದ್ದ ಕಾಲದಲ್ಲಿ ಕನ್ನಡ ಕವಿತೆಗಳನ್ನು ಹಾಡಿನ ಮೂಲಕ ಜನರಿಗೆ ತಲುಪಿಸುವ ಕೆಲಸವನ್ನು ನನ್ನ ತಂದೆ ಮಾಡಿದ್ದರು. ಹಾಗಾಗಿಯೇ ಅವರು ತಮ್ಮನ್ನು ಪೋಸ್ಟ್‌ಮನ್ ಎಂದು ಕರೆದುಕೊಳ್ಳುತ್ತಿದ್ದರು ಎಂದು ಸುನೀತಾ ಹೇಳುತ್ತಾರೆ.

ನನ್ನ ದೃಷ್ಟಿಯಲ್ಲಿ, ಅನಂತಸ್ವಾಮಿ ರಾಗ ಸಂಯೋಜನೆಯನ್ನು ಕಡೆಗಣಿಸುವುದು, ಕನ್ನಡ ಸಾಹಿತ್ಯಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದ ಒಬ್ಬ ಕಲಾವಿದನಿಗೆ ಅವಮಾನ ಮಾಡಿದಂತೆ ಎನ್ನುವುದು ಅವರ ಅಭಿಪ್ರಾಯ.

ಕಸರತ್ತು ಬೇಡದ ಧಾಟಿ

2006ರಲ್ಲಿ ಸಮಿತಿಯು ಎಚ್‌.ಆರ್.ಲೀಲಾವತಿ, ಸಿ.ಅಶ್ವತ್ಥ್ ಅವರ ಸಂಯೋಜನೆಯ ಜೊತೆಗೆ ಸಿನಿಮಾಕ್ಕಾಗಿ ಪಿ.ಬಿ.ಶ್ರೀನಿವಾಸ್ ಅವರು ಹಾಡಿದ್ದ ಧಾಟಿಗಳನ್ನು ಪರಿಶೀಲಿಸಿತು. ಕೊನೆಯಲ್ಲಿ ಸಮಿತಿಗೆ ಅನಂತಸ್ವಾಮಿ ಅವರ ಸಂಯೋಜನೆಯೇ ಚಂದ ಎನಿಸಿತ್ತು.

( ಪಿ.ಬಿ.ಶ್ರೀನಿವಾಸ್‌ ದನಿಯಲ್ಲಿ ನಾಡಗೀತೆ/ಸಿನಿಮಾ–ಮನಮೆಚ್ಚಿದ ಮಡದಿ, ಸಂಗೀತ–ವಿಜಯ ಭಾಸ್ಕರ್‌)

ಸಮಿತಿಯ ಸದಸ್ಯರಾಗಿದ್ದ ಕವಿ ದೊಡ್ಡರಂಗೇಗೌಡ ಅವರು, ‘ಅನಂತಸ್ವಾಮಿ ಅವರ ಸಂಯೋಜನೆಯು ನಾಡಗೀತೆಗೆ ಚೆನ್ನಾಗಿ ಹೊಂದುತ್ತದೆ. ಅಶ್ವತ್ಥರ ಸಂಯೋಜನೆಯಲ್ಲಿ ಇರುವಂತೆ ಇದರಲ್ಲಿ ಆಲಾಪಗಳಿಲ್ಲ. ಅಶ್ವತ್ಥ್ ಅವರ ಸಂಯೋಜನೆ ಅತ್ಯದ್ಭುತವಾಗಿದೆ. ಆದರೆ ನಾಡಗೀತೆಗೆ ಮಾತ್ರ ಅನಂತಸ್ವಾಮಿ ಅವರ ಸಂಯೋಜನೆಯೇ ಸೂಕ್ತ’ ಎಂದು ಅಭಿಪ್ರಾಯಪಡುತ್ತಾರೆ.

ಸಮಿತಿಯ ಸದಸ್ಯರಾಗಿದ್ದ ಮತ್ತೋರ್ವ ಸಾಹಿತಿ ಸಿದ್ದಲಿಂಗಯ್ಯ, ‘ಒಬ್ಬ ಕವಿಯಾಗಿ ನಾನು ಪದಗಳ ಬಗ್ಗೆ ಮಾತ್ರವೇ ಮಾತನಾಡಬಹುದು’ ಎನ್ನುತ್ತಾರೆ. ‘ನನಗೆ ಎರಡೂ ಸಂಯೋಜನೆಗಳೂ ಇಷ್ಟ. ಧರಂ ಮುಖ್ಯಮಂತ್ರಿಯಾಗಿದ್ದ ಕಾಲದಿಂದಲೂ ಈ ವಿವಾದ ಹೊಗೆಯಾಡುತ್ತಲೇ ಇದೆ. ಆದರೆ ಸಂಯೋಜನೆಗಳು ಬದಲಾಗಿದ್ದು ಹೇಗೆ ಎಂದು ನನಗೆ ಗೊತ್ತಿಲ್ಲ’ ಎನ್ನುತ್ತಾರೆ.

ರಾಜ್ಯ ಸರ್ಕಾರದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದ ಹಿರಿಯ ಸುಗಮ ಸಂಗೀತ ಗಾಯಕ ವೈಕೆ.ಮುದ್ದುಕೃಷ್ಣ, ‘ಸರ್ಕಾರ ಡಾ.ಜಿ.ಎಸ್.ಶಿವರುದ್ರಪ್ಪ ನೇತೃತ್ವದ ಸಮಿತಿಯ ಶಿಫಾರಸುಗಳನ್ನು ಒಪ್ಪಿಕೊಳ್ಳಲು ತೀರ್ಮಾನಿಸಿದರೆ ನಾನು ಅನಂತಸ್ವಾಮಿ ಅವರ ಸಂಯೋಜನೆಯನ್ನು ಬೆಂಬಲಿಸುತ್ತೇನೆ. ಆದರೆ ಒಂದು ವೇಳೆ ಸರ್ಕಾರ ಕವಿತೆಯ ಪೂರ್ಣ ಪಠ್ಯ ಹಾಡಬೇಕು ಎಂದು ತೀರ್ಮಾನಿಸಿದರೆ ನಾವು ಸಿ.ಆಶ್ವತ್ಥ್ ಅವರ ಸಂಯೋಜನೆಯನ್ನೇ ಒಪ್ಪಿಕೊಳ್ಳಬೇಕು ಎಂದು ಕೋರುತ್ತೇನೆ. ಸರ್ಕಾರ ಈ ವಿಷಯದಲ್ಲಿ ಇನ್ನು ನಿದ್ದೆ ಮಾಡಬಾರದು’ ಎಂದು ಒತ್ತಾಯಿಸುತ್ತಾರೆ.

ವೈಕೆ.ಮುದ್ದುಕೃಷ್ಣ
ವೈಕೆ.ಮುದ್ದುಕೃಷ್ಣ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಪ್ರತಿಕ್ರಿಯಿಸಿ, ‘ನಾಡಗೀತೆಯನ್ನು ಯಾವ ಧಾಟಿಯಲ್ಲಿ ಹಾಡಬೇಕು ಎನ್ನುವ ವಿವಾದವೇ ಇಲ್ಲ. ಕೆಲವರು ಬೇಗನೇ ಮುಗಿಯುವ ಧಾಟಿಗಾಗಿ ಕೋರಿದ್ದರು. ಒಮ್ಮೊಮ್ಮೆ ರಾಷ್ಟ್ರಗೀತೆ, ನಾಡಗೀತೆಗಾಗಿ ನಾವು 8ರಿಂದ 10 ನಿಮಿಷ ನಿಲ್ಲಬೇಕಾಗುತ್ತದೆ. ಈ ವಿಚಾರದ ಬಗ್ಗೆ ನಾನು ಈ ಹಂತದಲ್ಲಿ ಏನೂ ಮಾತನಾಡಲಾರೆ. ನಾವು ಖಂಡಿತ ಈ ವಿಚಾರವನ್ನು ಪರಿಶೀಲಿಸುತ್ತೇವೆ’ ಎಂದು ಹೇಳುತ್ತಾರೆ.

ನಮ್ಮ ಕುಟುಂಬಕ್ಕೆ ಅಘಾತವಾಗಿದೆ

ಸರ್ಕಾರಿ ಕಾರ್ಯಕ್ರಮಗಳಲ್ಲಿ ನಾಡಗೀತೆಗೆ ಅನಂತಸ್ವಾಮಿ ಸಂಯೋಜನೆಯ ಬದಲು ಆಶ್ವತ್ಥ್ ಅವರ ಸಂಯೋಜನೆ ಬಳಕೆಯಾಗುತ್ತಿರುವುದನ್ನು ತಿಳಿದು ನಮ್ಮ ಕುಟುಂಬಕ್ಕೆ ಆಘಾತವಾಗಿದೆ ಎಂದು ಮೈಸೂರು ಅನಂತಸ್ವಾಮಿ ಅವರ ಪತ್ನಿ ಶಾಂತಾ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ಅನಂತಸ್ವಾಮಿ ಕೇವಲ ಎರಡು ಚರಣಗಳಿಗೆ ಮಾತ್ರ ರಾಗ ಸಂಯೋಜನೆ ಮಾಡಿರಲಿಲ್ಲ, ಅವರು ಪೂರ್ಣಗೀತೆಗೆ ರಾಗ ಸಂಯೋಜಿಸಿದ್ದರು. ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿದ್ದಾಗ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವೊಂದರಲ್ಲಿ ತಮ್ಮ ತಂದೆಯ ಜತೆ ನಾಡಗೀತೆಯನ್ನು ಹಾಡಿದ್ದರು’ ಎಂದು ಅನಂತಸ್ವಾಮಿ ಅವರ ಹಿರಿಯ ಪುತ್ರಿ ಸವಿತಾ ನೆನಪಿಸಿಕೊಂಡರು.

‘ನನ್ನ ತಂದೆ 1995ರಲ್ಲಿ ಕೊನೆಯುಸಿರೆಳೆದರು. ಅಪ್ಪ ರಾಗ ಸಂಯೋಜಿಸಿದ್ದ ನಾಡಗೀತೆಯನ್ನು ನಾವು ಚಿಕ್ಕವರಿಂದಲೂ ಕೇಳುತ್ತಿದ್ದೇವೆ. ಈ ವಿಷಯದಲ್ಲಿ ನಮಗೆ ನ್ಯಾಯ ದೊರಯಲಿದೆ ಎಂಬ ವಿಶ್ವಾಸವಿದೆ’ ಎಂದು ಸವಿತಾ ಹೇಳುತ್ತಾರೆ.

ಪೂರಕ ಮಾಹಿತಿ: ನೀನಾ ಸಿ ಜಾರ್ಜ್‌, ರಕ್ಷಿತಾ ಎಂ.ಎನ್‌. ಮಾಲಿನಿ ರಘು,

(ಮೂಲ: ಮೆಟ್ರೊಲೈಫ್ ಪುರವಣಿ, ಡೆಕ್ಕನ್ ಹೆರಾಲ್ಡ್ 29/11/2018. ಅನುವಾದ: ಪೃಥ್ವಿರಾಜ್ ಎಂ.ಎಚ್.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT