ದುಡಿಯುವ ಬಂಡವಾಳವನ್ನು ಕಾಡುವ ‘ಗುಮ್ಮ’!

7
ಬಹುಮಟ್ಟಿಗೆ ಮರೆಯಾಗಿವೆ ತಾಂತ್ರಿಕ ಸಮಸ್ಯೆಗಳು * ಇನ್ನಷ್ಟು ಸುಧಾರಣೆ ಬಯಸುತ್ತಿರುವ ಉದ್ಯಮಿಗಳು

ದುಡಿಯುವ ಬಂಡವಾಳವನ್ನು ಕಾಡುವ ‘ಗುಮ್ಮ’!

Published:
Updated:
Deccan Herald

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ರಾಜ್ಯಭಾರ ಶುರುವಾಗಿ ಒಂದು ವರ್ಷ ಕಳೆದ ಬಳಿಕವೂ ಉಳಿದಿರುವ ತಾಂತ್ರಿಕ ತೊಡಕುಗಳು ಹಾಗೂ ಲೆಕ್ಕ ಹೊಂದಾಣಿಕೆ ಗೊಂದಲಗಳ ಪರಿಣಾಮ ತೆರಿಗೆ ಮರುಪಾವತಿ ಸಕಾಲಕ್ಕೆ ಆಗದೆ ಉದ್ಯಮಿಗಳು ದುಡಿಯುವ ಬಂಡವಾಳದ ಕೊರತೆಯನ್ನು ಅನುಭವಿಸುವಂತಾಗಿದೆ.

ಜಿಎಸ್‌ಟಿ ಪರ್ವ ಶುರುವಾದ ಬಳಿಕ ತೆರಿಗೆಗೆ ಸಂಬಂಧಿಸಿದ ಎಲ್ಲ ವಿವರಗಳನ್ನೂ ಆನ್‌ಲೈನ್‌ ಮೂಲಕವೇ ದಾಖಲಿಸಬೇಕು. ಆದರೆ, ಸಾವಿರಾರು ಸಣ್ಣ ಹಾಗೂ ಅತೀ ಸಣ್ಣ ಉದ್ಯಮಿಗಳು ಇನ್ನೂ ಆನ್‌ಲೈನ್‌ ವಹಿವಾಟಿನಿಂದ ದೂರವೇ ಉಳಿದಿದ್ದಾರೆ. ಇದರಿಂದ ಖರೀದಿಗಾರರ ಲೆಕ್ಕ ಮತ್ತು ಮಾರಾಟಗಾರರ ಲೆಕ್ಕ ಎರಡೂ ತಾಳೆಯಾಗದೆ ತೆರಿಗೆ ತುಂಬಿದ ಉದ್ಯಮಿಗಳು ಮರುಪಾವತಿಗಾಗಿ ತಿಂಗಳಪರ್ಯಂತ ಕಾಯುತ್ತಾ ಕೂರುವಂತಹ ಸನ್ನಿವೇಶ ಸೃಷ್ಟಿಯಾಗಿದೆ.

‘ಇಬ್ಬರು ಉದ್ಯಮಿಗಳ ನಡುವೆ ಜುಲೈ ತಿಂಗಳಲ್ಲಿ ಒಂದು ವಹಿವಾಟು ನಡೆದಿದೆ ಎಂದಿಟ್ಟುಕೊಳ್ಳಿ. ಈ ವಹಿವಾಟಿನಲ್ಲಿ ‘ಎ’ ಅವರಿಂದ ‘ಬಿ’ಯವರು ₹ 40 ಲಕ್ಷ ಮೊತ್ತದ ಸರಕು ಖರೀದಿಸಿದ್ದಾರೆ ಎಂದುಕೊಳ್ಳೋಣ. ಆ ತಿಂಗಳಿನ ಆನ್‌ಲೈನ್‌ ದಾಖಲೆಯಲ್ಲಿ ‘ಎ’ಯವರ ಮಾರಾಟ ಹಾಗೂ ‘ಬಿ’ಯವರ ಖರೀದಿ ಲೆಕ್ಕಗಳೆರಡೂ ತಾಳೆಯಾಗಬೇಕು. ಇಲ್ಲದಿದ್ದರೆ ತೆರಿಗೆ ಮರುಪಾವತಿಗೆ ಕಾಯಬೇಕಾಗುತ್ತದೆ’ ಎಂದು ಸಮಸ್ಯೆಯ ಕುರಿತು ಒಳನೋಟ ಬೀರುತ್ತಾರೆ ‘ಕ್ಲಿಯರ್‌ ಟ್ಯಾಕ್ಸ್‌’ ಸಂಸ್ಥೆಯ ಸಿಇಒ ಅರ್ಚಿತ್‌ ಗುಪ್ತಾ.

ಜಿಎಸ್‌ಟಿ ವ್ಯವಸ್ಥೆಯಲ್ಲಿ ನೋಂದಣಿ ಮಾಡಿಕೊಂಡ ಪ್ರತಿಯೊಬ್ಬ ಉದ್ಯಮಿ ತನ್ನ ಖರೀದಿ, ಮಾರಾಟ, ಔಟ್‌ಪುಟ್‌ ಜಿಎಸ್‌ಟಿ (ಮಾರಾಟದ ಮೇಲಿನ ತೆರಿಗೆ ಪಾವತಿ) ಹಾಗೂ ಇನ್‌ಪುಟ್‌ ಟ್ಯಾಕ್ಸ್‌ ಕ್ರೆಡಿಟ್‌ (ಹೂಡುವಳಿ ತೆರಿಗೆ ಜಮೆ) ವಿವರವುಳ್ಳ ರಿಟರ್ನ್‌ಗಳನ್ನು ಪ್ರತಿ ತಿಂಗಳು ಸಲ್ಲಿಸಬೇಕು.

ಜಿಎಸ್‌ಟಿಆರ್‌–1 (ಮಾರಾಟ), ಜಿಎಸ್‌ಟಿಆರ್‌–2 (ಖರೀದಿ) ಹಾಗೂ ಜಿಎಸ್‌ಟಿಆರ್‌–3 (ಮಾರಾಟ, ಖರೀದಿ ಮತ್ತು ತೆರಿಗೆ ಪಾವತಿ ವಿವರ) –ಇವು ಪ್ರತಿ ತಿಂಗಳು ಸಲ್ಲಿಕೆಯಾಗಬೇಕಾದ ಮೂರು ರಿಟರ್ನ್‌ ಫಾರ್ಮ್‌ಗಳು. ಜತೆಗೆ ವರ್ಷದ ತೆರಿಗೆ ಪಾವತಿ ಮಾಹಿತಿಯುಳ್ಳ ಜಿಎಸ್‌ಟಿಆರ್‌–9 (ವರ್ಷಕ್ಕೆ ಒಂದು ಸಲ) ತುಂಬಬೇಕು. ಹೀಗಾಗಿ ವರ್ಷದಲ್ಲಿ ಒಟ್ಟಾರೆ 37 ರಿಟರ್ನ್‌ಗಳನ್ನು ಜಿಎಸ್‌ಟಿ ಅಡಿಯಲ್ಲಿ ಸಲ್ಲಿಕೆ ಮಾಡಬೇಕು.

‘ಹೊಸ ತೆರಿಗೆ ವ್ಯವಸ್ಥೆ ಜಾರಿಯಾದ ಹೊಸತರಲ್ಲೇ ಈ ಸಮಸ್ಯೆ ಕಾಣಿಸಿಕೊಂಡಿತ್ತು. ಆಗ ಸರ್ಕಾರ ವಿಶೇಷ ಮರುಪಾವತಿ ಮೇಳಗಳನ್ನು ಆಯೋಜಿಸಿ ಸಮಸ್ಯೆ ಬಗೆಹರಿಸಿತ್ತು. ಜಿಎಸ್‌ಟಿಆರ್‌–1 ಹಾಗೂ ಜಿಎಸ್‌ಟಿಆರ್‌–2 ಫಾರ್ಮ್‌ಗಳ ಕಡ್ಡಾಯ ಸಲ್ಲಿಕೆ ನಿಯಮ ಸಡಿಲಿಸಿ ಜಿಎಸ್‌ಟಿಆರ್‌–3ಬಿ (ತಿಂಗಳ ವಹಿವಾಟಿನ ತಾತ್ಕಾಲಿಕ ವಿವರ) ಫಾರ್ಮ್‌ ತುಂಬಲು ಅವಕಾಶ ಮಾಡಿಕೊಟ್ಟಿತ್ತು’ ಎಂದು ಅರ್ಚಿತ್‌ ವಿವರಿಸುತ್ತಾರೆ.

ತಾಂತ್ರಿಕ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಸಿಗದಿದ್ದಾಗ ಅಧಿಕಾರಿಗಳು ಲೆಕ್ಕ ಪುಸ್ತಕದಲ್ಲಿ ವಿವರ ದಾಖಲಿಸಿಕೊಂಡು ಹೆಚ್ಚುವರಿ ತೆರಿಗೆಯನ್ನು ಹಿಂದಿರುಗಿಸಿದ್ದರು. ಆದರೆ, ಇದೊಂದು ತಾತ್ಕಾಲಿಕ ವ್ಯವಸ್ಥೆಯಾಗಿತ್ತು. ಮರುಪಾವತಿಗೆ ಸಂಬಂಧಿಸಿದ ಸಮಸ್ಯೆಗಳು ಇನ್ನೂ ಉಳಿದುಕೊಂಡಿವೆ ಎಂಬುದು ಉದ್ಯಮ ವಲಯದ ದೂರಾಗಿದೆ. ತೆರಿಗೆ ಮರುಪಾವತಿ ಹಾಗೂ ಹೂಡುವಳಿ ತೆರಿಗೆ ಜಮೆ ಸೌಲಭ್ಯಗಳು ಸಕಾಲಕ್ಕೆ ಸಿಗುತ್ತಿಲ್ಲ ಎಂದು ಹಲವು ಉದ್ಯಮಿಗಳು ಗೊಣಗುತ್ತಾರೆ.

‘ಖರೀದಿದಾರರ ಮತ್ತು ಮಾರಾಟಗಾರರ ಲೆಕ್ಕ ಹೊಂದಾಣಿಕೆ ಪರಿಕಲ್ಪನೆ ಹಿಂದೆ ಯಾರೂ ತೆರಿಗೆಯಿಂದ ತಪ್ಪಿಸಿಕೊಳ್ಳಬಾರದು ಎಂಬ ಸದುದ್ದೇಶ ಇದೆ. ಆದರೆ, ಇಬ್ಬರ ಪೈಕಿ ಒಬ್ಬರು ಜಿಎಸ್‌ಟಿ ನೋಂದಣಿ ಮಾಡಿಕೊಂಡಿರದಿದ್ದರೆ ಮಿಕ್ಕವರು ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದು ಒಳನೋಟ ಬೀರುತ್ತಾರೆ ಎಫ್‌ಕೆಸಿಸಿಐ ಪ್ರತಿನಿಧಿಗಳು.

ಪ್ರತಿದಿನ ಸೃಷ್ಟಿಯಾಗುವ ಅಪರಿಮಿತ ದತ್ತಾಂಶದ ಶೇಖರಣೆಗೆ ಬೇಕಾದ ಸಾಮರ್ಥ್ಯವನ್ನು ಜಿಎಸ್‌ಟಿಎನ್‌ ಇನ್ನೂ ಪಡೆಯಬೇಕಿದೆ ಎಂದು ಅವರು ಹೇಳುತ್ತಾರೆ.

ಬದಲಾಗಿದೆ ಪೋರ್ಟಲ್‌

ಜಿಎಸ್‌ಟಿ ಪಾವತಿ ಕುರಿತು ಆನ್‌ಲೈನ್‌ ಮೂಲಕ ಮಾಹಿತಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಸಾಕಷ್ಟು ಸುಧಾರಣಾ ಕ್ರಮಗಳನ್ನು ತರಲಾಗಿದೆ. ಮೊದಲು ನೋಂದಣಿ ಮಾಡಿಕೊಳ್ಳಲು ಉದ್ಯಮಿಗಳು ಹೆಣಗಾಡಬೇಕಿತ್ತು. ಮಾಹಿತಿ ಶೇಖರಣೆಗೆ ಸರ್ವರ್‌ ಒದ್ದಾಡಿದ್ದರಿಂದ ನೋಂದಣಿಗೆ ಅಗತ್ಯವಾದ ವಿವರ ಸಲ್ಲಿಕೆಯೇ ತಲೆನೋವಾಗಿ ಪರಿಣಮಿಸಿತ್ತು. ಈಗ ಆ ಸಮಸ್ಯೆಗಳೆಲ್ಲ ನೀಗಿವೆ. ನೋಂದಣಿ ಪ್ರಕ್ರಿಯೆ, ರಿಟರ್ನ್‌ ಸಲ್ಲಿಕೆ, ಔಟ್‌ವರ್ಡ್‌ ಇನ್‌ವಾಯ್ಸ್‌ಗಳ ನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ತೋರಿಸಿಕೊಡುವ ವಿಡಿಯೊಗಳನ್ನು ಜಿಎಸ್‌ಟಿ ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !