ಏನೋ ಆಗಬೇಕಿತ್ತು; ಏನೋ ಆಗಿದ್ದೇನೆ

7
ವಿಧಾನ ಪರಿಷತ್ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ

ಏನೋ ಆಗಬೇಕಿತ್ತು; ಏನೋ ಆಗಿದ್ದೇನೆ

Published:
Updated:
ಬಸವರಾಜ ಹೊರಟ್ಟಿ

ಹಾವೇರಿ: ‘ನಾನು, ಏನೋ ಆಗಿರಬೇಕಿತ್ತು; ಏನೋ ಆಗಿದ್ದೇನೆ. ಆದರೆ, ಎರಡರಲ್ಲಿ (ಸಭಾಪತಿ ಅಥವಾ ಸಚಿವ) ಒಂದು ಖಂಡಿತ ಆಗುತ್ತೇನೆ. ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ’ ಎಂದು ವಿಧಾನ ಪರಿಷತ್ತಿನ ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಮಂಗಳವಾರ ಇಲ್ಲಿ ಹೇಳಿದರು.

‘ನನಗೆ ಗೃಹ ಖಾತೆ ಅಥವಾ ಯಾವುದಾದರೊಂದು ಸಚಿವ ಸ್ಥಾನ ಪಡೆಯುವ ಆಸೆ ಇರಲಿಲ್ಲ. ಮೇಲ್ಮನೆಗೆ ಏಳನೇ ಬಾರಿ ಆಯ್ಕೆಯಾಗಿದ್ದು, ಶಿಕ್ಷಣ ಮಂತ್ರಿ ಆಗುವ ನಿರೀಕ್ಷೆ ಇತ್ತು. ಪಕ್ಷಾತೀತವಾಗಿ, ಹಲವರು ಈ ಆಶಯ ವ್ಯಕ್ತಪಡಿಸಿದ್ದರು. ಆದರೆ, ಈಗ ಸಮ್ಮಿಶ್ರ ಸರ್ಕಾರವಿದ್ದು, ವರಿಷ್ಠರ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಯಾವುದೇ ಸ್ಥಾನದಲ್ಲಿದ್ದರೂ ಶಿಕ್ಷಣ ಕ್ಷೇತ್ರದ ಋಣವನ್ನು ತೀರಿಸುತ್ತೇನೆ’ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಸಭಾಪತಿಯಾದರೆ ಕೆಲಸ ಮಾಡಲು ಆಗುವುದಿಲ್ಲ ಎಂಬ ಭಾವನೆ ತಪ್ಪು. ಮುಖ್ಯಮಂತ್ರಿಯನ್ನೂ ಕರೆಯಿಸಿಕೊಂಡು ಕೆಲಸ ಮಾಡಿಸಬಹುದು. ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಹಾಗೂ ಶೈಕ್ಷಣಿಕ ಸಮಸ್ಯೆಗಳಿಗೆ ಹೆಚ್ಚು ಸ್ಪಂದಿಸಬಹುದು’ ಎಂದರು.

ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಭಾಗಿಯಾಗಿದ್ದರಿಂದ ತಮಗೆ ಸಚಿವ ಸ್ಥಾನ ತಪ್ಪಿಲ್ಲ ಎಂದ ಹೊರಟ್ಟಿ, ‘ಹೋರಾಟವನ್ನು ಮಾತೆ ಮಹಾದೇವಿ, ರಂಭಾಪುರಿ ಶ್ರೀಗಳು ರಾಜಕೀಯಗೊಳಿಸಿದರು. ಆದರೆ, ಇದರಲ್ಲಿ ಭಾಗಿಯೇ ಆಗದ 10ಕ್ಕೂ ಹೆಚ್ಚು ಸಚಿವರೇ ಸೋತಿದ್ದಾರೆ. ಮಹದಾಯಿಗಾಗಿ ಹೋರಾಡಿದವರನ್ನೂ ಜನ ಸೋಲಿಸಿದ್ದಾರೆ!’ಎಂದರು.

ಚುನಾವಣಾ ಪೂರ್ವದಲ್ಲಿ ಎಚ್‌.ಡಿ. ಕುಮಾರಸ್ವಾಮಿ ಅವರು, ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದರು. ಸಾಲ ಮನ್ನಾ ಸೌಲಭ್ಯದ ಪ್ರಯೋಜನ ಪಡೆಯಲಿದ್ದ ರೈತರೆಲ್ಲ ಜೆಡಿಎಸ್‌ಗೆ ಮತ ಹಾಕಿದ್ದರೂ ತಮ್ಮ ಪಕ್ಷ ಸಂಪೂರ್ಣ ಬಹುಮತ ಪಡೆಯುತ್ತಿತ್ತು ಎಂದು ಹೊರಟ್ಟಿ ಅಭಿಪ್ರಾಯಪಟ್ಟರು.

ಹೊಸ ಸರ್ಕಾರ ಬಜೆಟ್ ಮಂಡಿಸಬಹುದು ಎಂದ ಅವರು, ಎರಡೂ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಉತ್ತಮ ಬಜೆಟ್‌ ನೀಡುವ ನಿರೀಕ್ಷೆ ಇದೆ ಎಂದರು.

‘ಪರೀಕ್ಷೆಗಳಲ್ಲಿ ದೀರ್ಘ ಉತ್ತರ ಬರೆಯುವ ಬದಲಾಗಿ, ಸರಿಯಾದ ಉತ್ತರ ಗುರುತು ಹಾಕುವ ಪದ್ಧತಿ ಬಂದಿದೆ. ಇಂದಿನ ಶಿಕ್ಷಣ ವ್ಯವಸ್ಥೆಯಿಂದ ಪರಿಪೂರ್ಣ ವ್ಯಕ್ತಿಗಳು ರೂಪುಗೊಳ್ಳುತ್ತಿಲ್ಲ. ಇನ್ನು, ಪುಸ್ತಕ ನೋಡಿ ಪರೀಕ್ಷೆ ಬರೆಯುವ ಪದ್ಧತಿ ಬಂದರೆ, ಮಕ್ಕಳು ಓದದೇ ಇರುವ ಅಪಾಯವಿದೆ. ಆದರೆ, ಶಿಕ್ಷಣ ಸಚಿವರ ಹೇಳಿಕೆಯ ಸಾಧಕ–ಬಾಧಕಗಳ ಬಗ್ಗೆ ಚರ್ಚೆ ನಡೆಯಬೇಕು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಂಘಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಶಿಕ್ಷಕರು ಸಂಘಟಿತರಾಗುವುದು ತಪ್ಪಲ್ಲ. ಆದರೆ, ಸಂಘಟನೆ ಏನು ಕೆಲಸ ಮಾಡುತ್ತಿದೆ ಎಂಬುದು ಮುಖ್ಯ ಎಂದರು.

‘ಸಭಾಪತಿಯಾಗಿ ಮುಂದುವರಿದರೆ ಯಾವ ಹೋರಾಟವೂ ಇಲ್ಲ’

ಹುಬ್ಬಳ್ಳಿ: ತಾವು ಸಭಾಪತಿಯಾಗಿ ಮುಂದುವರಿದರೆ, ಪಕ್ಷದ ಹಾಗೂ ಲಿಂಗಾಯತ ಹೋರಾಟದ ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡುವುದಾಗಿ ಬಸವರಾಜ ಹೊರಟ್ಟಿ ಮಂಗಳವಾರ ಇಲ್ಲಿ ಹೇಳಿದರು.

ವಿಧಾನ ಪರಿಷತ್ತಿನ ಹಂಗಾಮಿ ಸಭಾಪತಿಯಾದ ನಂತರ ಮೊದಲ ಬಾರಿ ಹುಬ್ಬಳ್ಳಿಗೆ ಆಗಮಿಸಿದ ಅವರು, ಪಕ್ಷದ ಮುಖಂಡರು ನೀಡಿದ ಸನ್ಮಾನ ಸ್ವೀಕರಿಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಲಿಂ‌‌‌ಗಾಯತ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಭಾಗವಹಿಸುವ ಕುರಿತಂತೆ ಪತ್ರಕರ್ತರ ಪ್ರಶ್ನೆಗೆ  ಮೇಲಿನಂತೆ ಪ್ರತಿಕ್ರಿಯಿಸಿದ ಅವರು, ‘ಸಭಾಪತಿಯಾದವರು ಯಾವುದೇ ಹೋರಾಟದಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಶಾಲಾ–ಕಾಲೇಜು ಹಾಗೂ ಇತರೆ ಸಮಾರಂಭಗಳಲ್ಲಿ ಭಾಗವಹಿಸಬಹುದು ಅಷ್ಟೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !