ಅಂತರ್ಜಾತಿ ವಿವಾಹ ಸಂಖ್ಯೆ ಹೆಚ್ಚಳ

7
ಮೈಸೂರು ಜಿಲ್ಲೆಯಲ್ಲಿ ಹಸೆಮಣೆ ಏರಿದ 360 ಜೋಡಿ

ಅಂತರ್ಜಾತಿ ವಿವಾಹ ಸಂಖ್ಯೆ ಹೆಚ್ಚಳ

Published:
Updated:
ಕೆ.ಎಸ್‌.ಚಂದ್ರಕಲಾ– ಎಂ.ಮಹೇಶ್‌

ಮೈಸೂರು: ಅಂತರ್ಜಾತಿ ವಿವಾಹ ಬಂಧನಕ್ಕೆ ಒಳಗಾಗುವವರ ಸಂಖ್ಯೆ ಮೈಸೂರು ಜಿಲ್ಲೆಯಲ್ಲಿ ಹೆಚ್ಚುತ್ತಿದ್ದು, 2017–18ನೇ ಸಾಲಿನಲ್ಲಿ 360 ಜೋಡಿಗಳು ಹಸೆಮಣೆ ಏರಿವೆ.

ಪ್ರೇಮ ವಿವಾಹವಾದವರು ಹಾಗೂ ನಗರವಾಸಿಗಳು ಈ ಪಟ್ಟಿಯಲ್ಲಿ ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ಎಚ್‌.ಡಿ.ಕೋಟೆ, ತಿ.ನರಸೀಪುರ ಸೇರಿದಂತೆ ಗ್ರಾಮೀಣ ಭಾಗದಲ್ಲೂ ಅಂತರ್ಜಾತಿ ವಿವಾಹದಲ್ಲಿ ಹೆಚ್ಚಳವಾಗಿದೆ. ದಲಿತ ಹುಡುಗಿಯನ್ನು ಇತರ ಜಾತಿಯ ಹುಡುಗ ವರಿಸಿದರೆ ₹ 3 ಲಕ್ಷ, ದಲಿತ ಹುಡುಗನನ್ನು ಇತರ ಸಮುದಾಯದ ಹುಡುಗಿ ವಿವಾಹವಾದರೆ ₹ 2 ಲಕ್ಷ ಪ್ರೋತ್ಸಾಹಧನವನ್ನು ಸರ್ಕಾರ ನೀಡುತ್ತಿದೆ.

ಅಂತರ್ಜಾತಿ ವಿವಾಹ ಪ್ರೋತ್ಸಾಹಿಸಲು ಸಮಾಜ ಕಲ್ಯಾಣ ಇಲಾಖೆ ಜಾರಿಗೆ ತಂದಿರುವ ಯೋಜನೆ ಇದಾಗಿದೆ. 2015–16ರ ವರೆಗೆ ದಲಿತ ಯುವತಿ ವಿವಾಹವಾದವರಿಗೆ ₹ 1 ಲಕ್ಷ ಹಾಗೂ ದಲಿತ ಹುಡುಗ, ಇತರೆ ಜಾತಿಯವರನ್ನು ಮದುವೆಯಾದರೆ ₹ 50 ಸಾವಿರ ಪ್ರೋತ್ಸಾಹಧನ ನೀಡಲಾಗುತಿತ್ತು. ಆ ಸಾಲಿನಲ್ಲಿ ಕೇವಲ 90 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದವು. ಬಳಿಕ ಹಣ ಹೆಚ್ಚಾದಂತೆ ಅಂತರ್ಜಾತಿ ವಿವಾಹಿತರ ಸಂಖ್ಯೆಯಲ್ಲೂ ಏರಿಕೆ ಆಗಿದೆ.

ಅಂತರ್ಜಾತಿ ವಿವಾಹ ಆಗಿರುವವರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ ಹಣ ಪಡೆಯಲು ಇಲಾಖೆಯು ಈಗ ಅವಕಾಶ ಮಾಡಿಕೊಟ್ಟಿದೆ. ವಿವಾಹ ನೋಂದಣಿ ಮಾಡಿರುವುದು ಕಡ್ಡಾಯ. ಹಣವನ್ನು ದಂಪತಿಯ ಜಂಟಿ ಖಾತೆಗೆ ಜಮಾ ಮಾಡ
ಲಾಗುತ್ತದೆ.

‘ಪ್ರೋತ್ಸಾಹಧನ ಕೋರಿ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಯೋಜನೆ ಬಗ್ಗೆ ನಿತ್ಯ ಮಾಹಿತಿ ಕೋರಿ ದೂರವಾಣಿ ಕರೆಗಳು ಬರುತ್ತಿವೆ. ಹೆಚ್ಚು ಪ್ರಚಾರ ನೀಡಿದರೆ ಈ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆ ಆಗಬಹುದು. ನಮ್ಮಲ್ಲಿ ಅನುದಾನಕ್ಕೆ ಕೊರತೆ ಇಲ್ಲ’ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರಭಾ ಅರಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !