ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ವಿಜ್ಞಾನಿಗಳಿಗೆ ಇನ್ಫೊಸಿಸ್‌ ಪ್ರಶಸ್ತಿ

ಆರು ಮಂದಿಗೆ ಜ.7ರಂದು ಪ್ರದಾನ, ತಲಾ ₹70 ಲಕ್ಷ ಬಹುಮಾನ ಮೊತ್ತ
Last Updated 7 ನವೆಂಬರ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ತಮಿಳುನಾಡಿನಲ್ಲಿ 12ನೇ ತರಗತಿವರೆಗೆ ಸರ್ಕಾರಿ ಶಿಕ್ಷಣ ಪಡೆದರೂ,ಜೀವವೈದ್ಯಕೀಯ ಉಪಕರಣಗಳಿಗೆ ನ್ಯಾನೋ ಉತ್ಪನ್ನಗಳು ಮತ್ತು ಸಣ್ಣ ಅಣುಗಳ ರಾಸಾಯನಿಕ ಸಂಶ್ಲೇಷಣೆಯಲ್ಲಿ ಮಹತ್ವದ ಸಾಧನೆ ಮಾಡಿದ ನಗರದ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಸಂಶೋಧಕ ಪ್ರೊ.ಜಿ. ಮುಗೇಶ್‌ ಸಹಿತ 6 ಮಂದಿ ಇನ್ಫೊಸಿಸ್‌ ವಿಜ್ಞಾನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಮುಗೇಶ್‌ ಅವರಿಗೆ ಭೌತಿಕ ವಿಜ್ಞಾನ ವಿಭಾಗದಲ್ಲಿ ಈ ಪ್ರಶಸ್ತಿ ಲಭಿಸಿದ್ದರೆ, ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ ಕ್ಷೇತ್ರದಲ್ಲಿ ಮುಂಬೈಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಪ್ರೊ. ಸುನೀತಾ ಸುರವಗಿ, ಜೀವವಿಜ್ಞಾನ ಕ್ಷೇತ್ರದಲ್ಲಿ ಹೈದರಾಬಾದ್‌ನ ಸೆಂಟರ್‌ ಫಾರ್‌ ಸೆಲ್ಯುಲರ್‌ ಆ್ಯಂಡ್‌ ಮಾಲಿಕ್ಯುಲರ್‌ ಬಯೋಲಜಿಯ (ಸಿಸಿಎಂಬಿ) ವಿಜ್ಞಾನಿ ಡಾ. ಮಂಜುಳಾ ರೆಡ್ಡಿ, ಮಾನವೀಯ ವಿಭಾಗದಲ್ಲಿ ಮಂಡಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಪ್ರೊಫೆಸರ್‌ ಮನು ವಿ. ದೇವದೇವನ್‌, ಗಣಿತ ವಿಜ್ಞಾನದಲ್ಲಿ ಜ್ಯೂರಿಚ್‌ನ ಇಟಿಎಚ್‌ ಸಂಸ್ಥೆಯ ಪ್ರೊಫೆಸರ್‌ ಸಿದ್ಧಾರ್ಥ ಮಿಶ್ರಾ, ಸಾಮಾಜಿಕ ವಿಜ್ಞಾನ ಕ್ಷೇತ್ರದಲ್ಲಿ ಅಮೆರಿಕದ ಜಾನ್ಸ್‌ ಹಾಪ್‌ಕಿನ್ಸ್‌ ವಿ.ವಿಯ ಪ್ರೊ. ಆನಂದ ಪಾಂಡ್ಯನ್‌ ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ತಲಾ 1 ಲಕ್ಷ ಡಾಲರ್‌ ನಗದು (₹ 70 ಲಕ್ಷ), ಚಿನ್ನದ ಪದಕ ಒಳಗೊಂಡಿದೆ. ಜ. 7ರಂದು ನಗರದಲ್ಲಿ ನೊಬೆಲ್‌ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್‌ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಒಟ್ಟು 196 ನಾಮನಿರ್ದೇಶಿತರ ಪೈಕಿ ಈ 6 ಮಂದಿಯನ್ನು ತಜ್ಞರ ಸಮಿತಿ ಆಯ್ಕೆ ಮಾಡಿದೆ ಎಂದು ಇನ್ಫೊಸಿಸ್‌ ವಿಜ್ಞಾನ ಪ್ರತಿಷ್ಠಾನದ ಅಧ್ಯಕ್ಷ ಎಸ್. ಡಿ. ಶಿಬುಲಾಲ್‌ ಗುರುವಾರ ತಿಳಿಸಿದರು.

ವಿಷವಾಗದ ಕಬ್ಬಿಣ: ದೇಹಕ್ಕೆ ಕಬ್ಬಿಣದ ಅಂಶ ಬಹಳ ಮುಖ್ಯ. ಆದರೆ ಪ್ರೊಟೀನ್‌ನಿಂದ ಕಬ್ಬಿಣದ ಅಂಶ ಹೊರಬಂದಾಗ ಅದು ಮೆದುಳಿಗೆ ವಿಷಕಾರಿಯಾಗುತ್ತದೆ. ಹೀಗಾಗಿ ಪಕ್ಷವಾತ, ಅತಿಮರೆವು ಮೊದಲಾದ ಕಾಯಿಲೆಗಳಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲರಾಸಾಯನಿಕ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದು ಪ್ರಶಸ್ತಿ ವಿಜೇತರ ಪೈಕಿ ಜಿ.ಮುಗೇಶ್‌ ತಿಳಿಸಿದರು.

ಇನ್ಫೊಸಿಸ್‌ ಸಹ ಸಂಸ್ಥಾಪಕ ಕ್ರಿಸ್‌ ಗೋಪಾಲಕೃಷ್ಣ ಮಾತನಾಡಿ, ಸಂಶೋಧನೆ ಮತ್ತು ಅಭಿವೃದ್ಧಿಗೆ ಮೀಸಲಿ
ಡುವ ಹಣದ ಪ್ರಮಾಣ ಹೆಚ್ಚಿಸಲೇಬೇಕಾಗಿದೆ, ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯ ನಡುವೆ ದೊಡ್ಡ ಅಂತರ ಇದ್ದು, ಇದನ್ನು ಭರ್ತಿ ಮಾಡುವ ಕೆಲಸ ಚುರುಕಿನಿಂದ ಆಗಬೇಕಿದೆ ಎಂದರು.

ಟ್ರಸ್ಟಿಗಳಾದ ಕೆ. ದಿನೇಶ್‌, ಶ್ರೀನಾಥ್‌ ಬಟ್ನಿ, ನಂದನ್‌ ನಿಲೇಕಣಿ ಇದ್ದರು.

ಪಾರ್ಶ್ವವಾಯು: ನಮ್ಮಿಂದಲೇ ಔಷಧ ಸಾಧ್ಯ
ಮಾನವನ ಮಿದುಳನ್ನು ಸಂಪರ್ಕಿಸುವ ನರಮಂಡಲಗಳಿಗೆ ತೊಂದರೆ ಉಂಟಾಗುವುದರಿಂದ ಕಾಣಿಸುವ ಕಾಯಿಲೆಯೇಪಾರ್ಕಿನ್ಸನ್‌, ಅಲ್ಲೈಮರ್‌. ಪಕ್ಷವಾತವೂ ಬಹುತೇಕ ಇದೇ ಕಾರಣದಿಂದ ಉಂಟಾಗುತ್ತದೆ. ಇಂತಹ ಕಾಯಿಲೆಗಳನ್ನು ನ್ಯೂರೊಡಿಜನರೇಟಿವ್‌ ಡಿಸೀಸ್ ಎಂದು ಕರೆಯಲಾಗುತ್ತದೆ.‍ಪ್ರೊಟೀನ್‌ನಿಂದ ಕಬ್ಬಿಣದ ಅಂಶ ಬೇರ್ಪಟ್ಟಾಗ ಅದು ಮಿದುಳಿಗೆ ವಿಷಕಾರಿಯಾಗಿ ಬದಲಾಗುತ್ತದೆ.

ಹೀಗೆ ಬೇರ್ಪಡಲು ಕಾರಣವಾಗುವ ಮಾಲಿಕ್ಯುಲರ್‌ಗಳನ್ನು ಕಂಡುಹಿಡಿಯುವ ಪ್ರಯತ್ನದಲ್ಲಿ ಐಐಎಸ್‌ಸಿಯ ಸಂಶೋಧಕ ಡಾ. ಜಿ. ಮುಗೇಶ್‌ ಇದ್ದಾರೆ. ಈಗಾಗಲೇ ಇಲಿಗಳ ಮೇಲೆ ಪ್ರಯೋಗ ನಡೆಸಿ ಯಶಸ್ವಿಯಾಗಿದ್ದು, ಕ್ಲಿನಿಕಲ್ ಪ್ರಯೋಗ ಯಶಸ್ವಿಯಾದರೆ, ದೇಶ ಇಂತಹ ಕಾಯಿಲೆಗಳಿಗೆ ಔಷಧ ಕಂಡುಹಿಡಿದ ಹಿರಿಮೆಗೆ ಪಾತ್ರವಾಗುತ್ತದೆ.ಇದಕ್ಕೆ ಇನ್ನೂ ಬಹಳ ದೂರ ಕ್ರಮಿಸಬೇಕಿದ್ದು, ಬಳಿಕ ಹಕ್ಕುಸ್ವಾಮ್ಯದತ್ತಲೂ ಗಮನ ಹರಿಸಬೇಕಾಗುತ್ತದೆ.

*

ಸಮಸ್ಯೆಗಳಿಗೆ ಪರಿಹಾರವನ್ನು ನಮ್ಮ ಯುವಜನತೆಯೇ ಹುಡುಕುವಂತಾಗಬೇಕು. ಭಾರತ ಪ್ರತಿ ತಿಂಗಳೂ ಆವಿಷ್ಕಾರ ನಡೆಯುವ ಸ್ಥಳವಾಗಬೇಕು.
-ಎನ್‌. ಆರ್‌. ನಾರಾಯಣ ಮೂರ್ತಿ, ಇನ್ಫೊಸಿಸ್ ಸಹ ಸಂಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT