ಸೋಮವಾರ, ಮೇ 17, 2021
30 °C

‘ಸ್ವಾಮೀಜಿಗೆ ಭಾರತ ರತ್ನ ಕೊಡಲು ಸಾಧ್ಯವಿಲ್ಲ’: ‘ಟೀಂಮೋದಿ’ ಕೊಡುವ ಕಾರಣ ನಿಜವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತ ರತ್ನ ಪ್ರಶಸ್ತಿ ಘೋಷಿಸದ ಕೇಂದ್ರ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಶುಕ್ರವಾರ ರಾತ್ರಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದಕ್ಕೆ ಉತ್ತರ ಎಂಬಂತೆ ಶನಿವಾರ (ಜ.26) ಮುಂಜಾನೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಮರ್ಥಿಸಿಕೊಳ್ಳುವ ಪೋಸ್ಟ್‌ ‘ಟೀಂಮೋದಿ’ ಫೇಸ್‌ಬುಕ್ ಪುಟದಲ್ಲಿ ಪ್ರಕಟವಾಗಿದೆ.

‘ಟೀಂಮೋದಿ’ ಫೇಸ್‌ಬುಕ್ ಪುಟದಲ್ಲಿ ಪ್ರಕಟವಾಗಿರುವ ಪೋಸ್ಟ್‌ನ ಮಾಹಿತಿ ಸಂಪೂರ್ಣ ತಪ್ಪು ಎಂದು ತುಮಕೂರು ಸಿದ್ಧಗಂಗಾ ಮಠದ  ಶಿವಕುಮಾರ ಸ್ವಾಮೀಜಿ ಭಕ್ತರು ಆಕ್ಷೇಪಿಸಿದ್ದಾರೆ. ‘ಲತಾ ಮಂಗೇಶ್ಕರ್‌ಗೆ ಭಾರತ ರತ್ನ ಕೊಡುವಾಗ ಅಡ್ಡಿಯಾಗದ ನಿಯಮಗಳು ಸ್ವಾಮೀಜಿಗೆ ನೀಡಲು ಏಕೆ ಅಡ್ಡಿಯಾಗಬೇಕು?’ ಎಂದು ಕೋಪದಿಂದ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಭಾರತ ರತ್ನ ಎಂದರೇನು? ಭಾರತ ರತ್ನ ನೀಡಲು ಮಾನದಂಡಗಳು, ಅರ್ಹತೆಗಳೇನು? 

‘ಪದ್ಮ ಪ್ರಶಸ್ತಿಯನ್ನು ಕೊಟ್ಟ ನಂತರ ಅದಕ್ಕಿಂತ ಮೇಲಿನ ಪ್ರಶಸ್ತಿ ನೀಡಲು ಕನಿಷ್ಠ 5 ವರ್ಷ ಅಂತರವಿರಬೇಕು. 2015ರಲ್ಲಿ ಸಿದ್ಧಗಂಗಾ ಶ್ರೀಗಳಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿದ್ದು ನರೇಂದ್ರಮೋದಿಯವರೇ. ಭಾರತರತ್ನವನ್ನು ನೀಡಲು 2020ರಲ್ಲೂ ನರೇಂದ್ರಮೋದಿಯವರೇ ಪ್ರಧಾನಿ ಪಟ್ಟದಲ್ಲಿ ಇರಬೇಕು’ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ. ಶನಿವಾರ 12 ಗಂಟೆಗೆ ಫೇಸ್‌ಬುಕ್‌ನಲ್ಲಿ ಈ ಪೋಸ್ಟ್‌ 740 ಶೇರ್, 43 ಕಾಮೆಂಟ್ 508 ಲೈಕ್ಸ್ ಪಡೆದುಕೊಂಡಿತ್ತು. ಪೋಸ್ಟ್‌ಗೆ ಬಳಸಿರುವ ಚಿತ್ರ ವಾಟ್ಸ್ಯಾಪ್‌ ಮತ್ತು ಟೆಲಿಗ್ರಾಂ ಗ್ರೂಪ್‌ಗಳಲ್ಲಿಯೂ ವ್ಯಾಪಕವಾಗಿ ಹರಿದಾಡುತ್ತಿದೆ.

ಇದನ್ನೂ ಓದಿ: ಶಿವಕುಮಾರ ಸ್ವಾಮೀಜಿ ಎಂದೂ ಭಾರತ ರತ್ನ ಬಯಸಿದವರಲ್ಲ: ಸಿದ್ದಲಿಂಗ ಸ್ವಾಮೀಜಿ ಸಂದರ್ಶನ

ಪದ್ಮ ಪ್ರಶಸ್ತಿ ನಿಯಮಗಳು ಹೇಳುವುದೇನು?

ಕೇಂದ್ರ ಗೃಹ ಸಚಿವಾಲಯ ನಿರ್ವಹಿಸುವ https://padmaawards.gov.in ಜಾಲತಾಣದ ಪ್ರಕಾರ ‘ಒಮ್ಮೆ ಪದ್ಮ ಪ್ರಶಸ್ತಿಯನ್ನು ಕೊಟ್ಟ ನಂತರ, ಸಾಮಾನ್ಯವಾಗಿ ನಂತರದ ಐದು ವರ್ಷಗಳಲ್ಲಿ ಮತ್ತೊಂದು ಪದ್ಮ ಪ್ರಶಸ್ತಿ ಕೊಡುವುದಿಲ್ಲ. ಆದರೂ ಉನ್ನತ ಸಾಧನೆ ಮಾಡಿದ ವ್ಯಕ್ತಿಗಳಿಗೆ, ಅಪರೂಪದ ಪ್ರಕರಣಗಳಲ್ಲಿ ಆಯ್ಕೆ ಸಮಿತಿಯು ಈ ನಿಯಮದಿಂದ ವಿನಾಯಿತಿ ಕೊಡಬಹುದು’.

‘ಟೀಂಮೋದಿ’ ಫೇಸ್‌ಬುಕ್‌ ಪುಟದಲ್ಲಿ ಪ್ರಕಟವಾಗಿರುವ ಪೋಸ್ಟ್‌ ಈ ನಿಯಮವನ್ನೇ ತಪ್ಪಾಗಿ ಅರ್ಥೈಸಿಕೊಂಡಿದೆ. ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಅನುಕ್ರಮವಾಗಿ ಉನ್ನತ ಪ್ರಶಸ್ತಿಗಳು. ಈ ನಿಯಮದ ಪ್ರಕಾರ (ವಿಶೇಷ ಸಂದರ್ಭ ಹೊರತುಪಡಿಸಿ) 2001ರಲ್ಲಿ ಪದ್ಮಶ್ರೀ ಪಡೆದವರನ್ನು 2006ರವರೆಗೆ ಪದ್ಮಭೂಷಣ ಅಥವಾ ಪದ್ಮವಿಭೂಷಣ ಪ್ರಶಸ್ತಿಗಳಿಗೆ ಪರಿಗಣಿಸುವಂತಿಲ್ಲ.

ಆದರೆ, ಪದ್ಮ ಪ್ರಶಸ್ತಿಗಳ ಈ ನಿಯಮ ಭಾರತರತ್ನಕ್ಕೆ ಅನ್ವಯವಾಗುವ ಬಗ್ಗೆ ಗೃಹ ಇಲಾಖೆ ಏನನ್ನೂ ಹೇಳಿಲ್ಲ. ಪದ್ಮ ಪ್ರಶಸ್ತಿಗಳು ಬೇರೆ, ಭಾರತರತ್ನವೇ ಬೇರೆ. ಪದ್ಮ ಪ್ರಶಸ್ತಿಗಳಿಗೆ ಇರುವ ನಿಯಮ ಭಾರತರತ್ನಕ್ಕೆ ಅನ್ವಯವಾಗಬೇಕಿಲ್ಲ ಎಂದೇ ಮಠದ ಭಕ್ತರು ಹೇಳುತ್ತಾರೆ. ಒಂದು ವೇಳೆ ಅನ್ವಯವಾಗುವುದಿದ್ದರೂ ಶಿವಕುಮಾರ ಸ್ವಾಮೀಜಿ ಅವರ ಸೇವೆಯನ್ನು ಪರಿಗಣಿಸಿ ಅವರಿಗೆ ನಿಯಮದಿಂದ ವಿನಾಯ್ತಿ ಕೊಡಬಹುದಿತ್ತಲ್ಲವೇ ಎಂದು ಪ್ರಶ್ನಿಸುತ್ತಾರೆ. ಲತಾ ಮಂಗೇಶ್ಕರ್ ಅವರಿಗೆ 1999ರಲ್ಲಿ ಪದ್ಮವಿಭೂಷಣ ಮತ್ತು 2001ರಲ್ಲಿ ಭಾರತರತ್ನವನ್ನು ಕೊಟ್ಟ ಉದಾಹರಣೆಯನ್ನೂ ಹಲವರು ನೆನಪಿಸಿಕೊಳ್ಳುತ್ತಾರೆ.

‘ಸ್ವಾಮೀಜಿ ಹೆಸರಲ್ಲಿ ಪ್ರಶಸ್ತಿ ಸ್ಥಾಪಿಸಿ’

‘ಭಾರತರತ್ನ ಸೇರಿದಂತೆ ಯಾವುದೇ ಪ್ರಶಸ್ತಿಯನ್ನು ಡಾ.ಶಿವಕುಮಾರ ಸ್ವಾಮೀಜಿ ಎಂದಿಗೂ ಬಯಸಿದವರಲ್ಲ’ ಎಂದು ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಇದೀಗ ಸ್ವಾಮೀಜಿ ಅಭಿಮಾನಿಗಳೂ ಸಾಮಾಜಿಕ ಮಾಧ್ಯಮಗಳಲ್ಲಿ ಇದೇ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.

‘ದೇವರಿಗೆ ಬಿರುದು ಅಥವಾ ಪ್ರಶಸ್ತಿಗಳನ್ನು ಕೊಡುವ ಅರ್ಹತೆ ಯಾರಿಗೂ ಇಲ್ಲ. ಅವರೆಂದೂ ತಮಗೆ ಭಾರತರತ್ನವೋ ಇನ್ನೊಂದು ಪ್ರಶಸ್ತಿಯೋ ಸಿಗಬೇಕೆಂದು ಮಹತ್ಕಾರ್ಯಗಳನ್ನು ಮಾಡಿಲ್ಲ. ಜನರಿಂದಲೇ ‘ನಡೆದಾಡುವ ದೇವರು’ ಅಂತ ಕರೆಸಿಕೊಂಡ ಅವರನ್ನು ಭಾರತರತ್ನ ಅಂತ ಕರೆದು ಚಿಕ್ಕವರನ್ನಾಗಿ ಮಾಡಬೇಡಿ. ಬೇಕಾದರೆ ಸರ್ಕಾರವೇ ಅವರ ಹೆಸರಿನಲ್ಲಿ ಅತ್ಯುನ್ನತ ಪ್ರಶಸ್ತಿಯನ್ನು ಸ್ಥಾಪಿಸಿ ಇತರ ಸಾಧಕರಿಗೆ ಕೊಡಲಿ’ ಎಂದು ಕಲ್ಲೇಶ್ ಕಾಮೆಂಟ್ ಮಾಡಿದ್ದಾರೆ.

ಶಿವಕುಮಾರ ಸ್ವಾಮೀಜಿ ಅವರಿಗೆ ಭಾರತರತ್ನ ಕೊಡಬೇಕು ಎನ್ನುವುದು ತುಮಕೂರು ಜಿಲ್ಲೆಯ ಹಳೆಯ ಬೇಡಿಕೆ. 2012ರಲ್ಲಿ ಸ್ವಾಮೀಜಿ ಅವರ 105ನೇ ಹುಟ್ಟುಹಬ್ಬ ಸಂದರ್ಭ ಸಿದ್ಧಗಂಗೆ ಮಠಕ್ಕೆ ಭೇಟಿ ನೀಡಿದ್ದ ಸೋನಿಯಾ ಗಾಂಧಿ ಅವರಿಗೂ ಜಿಲ್ಲೆಯ ನಾಯಕರು ಸ್ವಾಮೀಜಿಗೆ ಭಾರತರತ್ನ ನೀಡಬೇಕು ಎಂದು ಮನವಿ ಮಾಡಿದ್ದರು. ಆಗ ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರವೇ ಅಧಿಕಾರದಲ್ಲಿತ್ತು. ನಂತರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಎಲ್ಲ ಸರ್ಕಾರಗಳೂ ಸ್ವಾಮೀಜಿಗೆ ಭಾರತರತ್ನ ಕೊಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿವೆ ಎಂದು ಮಠದ ಭಕ್ತರಾದ ಶ್ರೀನಿಧಿ ನೆನಪಿಸಿಕೊಳ್ಳುತ್ತಾರೆ. 

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ (2015) ಸ್ವಾಮೀಜಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಾರಣಾಸಿಯಲ್ಲಿ ಈಚೆಗೆ ನಡೆದ ಪ್ರವಾಸಿ ಭಾರತೀಯ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮೋದಿ, ‘ತುಮಕೂರು ಮಠದಲ್ಲಿ ಹಲವಾರು ಬಾರಿ ಶ್ರೀಗಳ ಆಶೀರ್ವಾದ ಪಡೆಯುವ ಅವಕಾಶ ದೊರಕಿದ್ದು ನನ್ನ ಸೌಭಾಗ್ಯ. ನನ್ನನ್ನು ಅವರು ಪ್ರೀತಿಯಿಂದ ಮಗನಂತೆ ಕಂಡಿದ್ದಾರೆ. ಅವರಂಥ ಸ್ವಾಮೀಜಿಯನ್ನು ಕಳೆದುಕೊಂಡಿರುವುದು ತುಂಬಲಾರದ ಹಾನಿ’ ಎಂದು ನೆನಪಿಸಿಕೊಂಡಿದ್ದರು. ಕೇಂದ್ರ ಸರ್ಕಾರವು ಈ ಬಾರಿ ಸ್ವಾಮೀಜಿಗೆ ಭಾರತರತ್ನ ಪ್ರಶಸ್ತಿ ಘೋಷಿಸುತ್ತದೆ ಎಂಬ ನಿರೀಕ್ಷೆ ರಾಜ್ಯದ ಜನರಲ್ಲಿತ್ತು.

ಇದನ್ನೂ ಓದಿ: ಪ್ರಣವ್‌ ಮುಖರ್ಜಿ ‘ಭಾರತ ರತ್ನ’

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.