ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೆಮೊರಿ ಕಾರ್ಡ್‌ಗಳಾದ ವಿದ್ಯಾರ್ಥಿಗಳ ಮಿದುಳು’

ಪಡುಕೋಣೆ–ದ್ರಾವಿಡ್‌ ಸೆಂಟರ್‌ ಫಾರ್‌ ಸ್ಪೋರ್ಟ್ಸ್‌ ಸಂವಾದದಲ್ಲಿ ಸದ್ಗುರು ವಾಸುದೇವ್‌
Last Updated 26 ಜನವರಿ 2019, 19:14 IST
ಅಕ್ಷರ ಗಾತ್ರ

ಬೆಂಗಳೂರು: ಕ್ರೀಡಾ ಪ್ರೀತಿ, ಗೆಲುವಿನ ಇಚ್ಛಾಶಕ್ತಿ, ಪಠ್ಯ ಅಧ್ಯಯನ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಸಾಧಿಸ
ಬೇಕಾದ ಸಮತೋಲನದ ಕುರಿತುಅಧ್ಯಾತ್ಮ ಚಿಂತಕ ಸದ್ಗುರು ಜಗ್ಗಿ ವಾಸುದೇವ್‌ ಸಲಹೆಗಳನ್ನು ನೀಡಿದರು.

ಪಡುಕೋಣೆ–ದ್ರಾವಿಡ್‌ ಸೆಂಟರ್‌ ಫಾರ್‌ ಸ್ಪೋರ್ಟ್ಸ್‌ ಎಕ್ಸಲೆನ್ಸ್‌ನಲ್ಲಿ ಶನಿವಾರ ಅವರುಬ್ಯಾಡ್ಮಿಂಟನ್‌ ತಾರೆ ಪ್ರಕಾಶ್‌ ಪಡುಕೋಣೆ ಅವರೊಂದಿಗೆ ಸಂವಾದದಲ್ಲಿ ಪಾಲ್ಗೊಂಡರು.

ಪ್ರಕಾಶ್‌ ಪಡುಕೋಣೆ: ನಿಮ್ಮ ಪ್ರಕಾರ ಕ್ರೀಡಾ ಪ್ರೀತಿ ಎಂದರೆ..

ಜಗ್ಗಿ ವಾಸುದೇವ್‌: ನನಗೆ ಕ್ರೀಡೆಗಳೆಂದರೆ ಬಹಳ ಇಷ್ಟ. ಮೊದಲು ಗೆಲುವಿಗೆ ಅವಿರತವಾಗಿ ಶ್ರಮಿಸುವುದು, ಬಳಿಕ ಸೋಲಿಗೂ ಸಿದ್ಧವಿರುವುದೇ ಕ್ರೀಡಾ ಪ್ರೀತಿ. ಯುದ್ಧದಲ್ಲಿ ನಿಯಮ ಇರುವುದಿಲ್ಲ, ಹಿಂಸೆ ಇರುತ್ತದೆ. ಕ್ರೀಡೆಯಲ್ಲಿ ನಿಯಮ ಇರುತ್ತೆ, ಇನ್ನೊಬ್ಬರಿಗೆ ನೋವು ಮಾಡುವ ಉದ್ದೇಶ ಇರುವುದಿಲ್ಲ. ವ್ಯಕ್ತಿ ಆಟದಲ್ಲಿ ತಲ್ಲೀನವಾದರೆ ಎಲ್ಲ ಸಮಸ್ಯೆಗಳನ್ನೂ ಮರೆಯುತ್ತಾನೆ.

ಪ್ರಕಾಶ್‌: ಕ್ರೀಡಾರಂಗದ ಸಾಧನೆಯಲ್ಲಿ ಬಲವಾದ ಇಚ್ಛಾಶಕ್ತಿಯ ಪಾಲೆಷ್ಟು?

ವಾಸುದೇವ್‌: ಇಚ್ಛಾಶಕ್ತಿ ಇಲ್ಲದ ಮನುಷ್ಯ ಸೋಮಾರಿ, ಶಕ್ತಿಹೀನನಾಗುತ್ತಾನೆ. ಮನಸ್ಸಿದ್ದರೆ ಮಾರ್ಗ ಎಂಬ ಮಾತೇ ಇದೆಯಲ್ಲ. ಕ್ರೀಡೆ ಮತ್ತು ಮನೋವಿಜ್ಞಾನಕ್ಕೆ ಹತ್ತಿರದ ಸಂಬಂಧವಿದೆ. ‘ಲಕ್ಷಾಂತರ ಜನರ ನಿರೀಕ್ಷೆ ನಿಮ್ಮ ಹೆಗಲ ಮೇಲಿದೆ’ ಎಂದು ಆಟಗಾರರ ಮೇಲೆ ಹೆಚ್ಚು ಒತ್ತಡ ಹಾಕಿದರೆ, ಅದರಿಂದ ನಷ್ಟವೇ ಹೆಚ್ಚು. ಕ್ರೀಡೆಯಲ್ಲಿ ದೇಹದ ಚಲನೆ ಮತ್ತು ಮಿದುಳಿನ ಚಿಂತನೆ ಇರುತ್ತವೆ. ಕ್ರೀಡಾಳು ಫಲಿತಾಂಶದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ಆಟದ ಪ್ರಕ್ರಿಯೆಯಲ್ಲಿ ಹೆಚ್ಚು ಗಮನ ಹರಿಸಬೇಕು.

ಪ್ರಕಾಶ್‌: ವಿದ್ಯಾರ್ಥಿಗಳು ಪಠ್ಯಾಧ್ಯಯನ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಹೇಗೆ ಸಮತೋಲನ ಸಾಧಿಸಬೇಕು? ಅವರಿಗೆ ಈಗ ಗ್ಯಾಜೆಟ್‌ಗಳು ಕಾಡುತ್ತಿವೆಯಲ್ಲಾ..

ವಾಸುದೇವ್‌: ಇಂದಿನ ಶಿಕ್ಷಣದಲ್ಲಿ ಚಾತುರ್ಯಕ್ಕಿಂತ ಸ್ಮರಣೆಗೆ ಆದ್ಯತೆ ನೀಡಲಾಗುತ್ತಿದೆ. ವಿದ್ಯಾರ್ಥಿಗಳ ತಲೆಗಳನ್ನು ಮೆಮೊರಿ ಕಾರ್ಡ್‌ಗಳೆಂದು ಭಾವಿಸಿ ಮಾಹಿತಿ ತುಂಬಲಾಗುತ್ತಿದೆ. ಈ ರೀತಿಯ ಶಿಕ್ಷಣ ನಾಶವಾಗಬೇಕು. ಮಕ್ಕಳಿಗೆ ಶೇ 50 ಪಠ್ಯಶಿಕ್ಷಣ ಇದ್ದರೆ, ಶೇ 50 ಕಲೆ, ಸಂಗೀತ, ನೃತ್ಯ, ರಂಗಭೂಮಿ, ಕ್ರೀಡೆಗಳು ಇರಬೇಕು.

ಗೂಂಡಾಗಳಿಂದ ಬೇಗ ನ್ಯಾಯ ಸಿಗುತ್ತಿದೆ’

‘ಯಾವುದೇ ಪ್ರಕರಣಗಳ ತನಿಖೆ ನಡೆದು, ನ್ಯಾಯಾಲಯದಲ್ಲಿ ಬೇಗ ಇತ್ಯರ್ಥವಾಗುವುದಿಲ್ಲ. ಹಾಗಾಗಿ ಜನಸಾಮಾನ್ಯರು ವಿವಾದಗಳನ್ನು ತಕ್ಷಣ ಬಗೆಹರಿಸಿಕೊಳ್ಳಲು ಠಾಣೆಗೆ ಹೋಗುವ ಬದಲಾಗಿ ಸ್ಥಳೀಯ ಗೂಂಡಾಗಳ ಬಳಿಗೆ ಹೋಗುತ್ತಿದ್ದಾರೆ. ಎದುರಾಳಿಗೆ ತೊಂದರೆ ಕೊಡಬೇಕು ಎಂಬ ಮನಸ್ಥಿತಿಯವರು ಮಾತ್ರ ಕಟಕಟೆಯ ಮೆಟ್ಟಿಲು ಹತ್ತುತ್ತಾರೆ’ ಎಂದು ಜಗ್ಗಿ ವಾಸುದೇವ್‌ ಅಭಿಪ್ರಾಯಪಟ್ಟರು.

‘ದಾವೆಗಳು ನಿರ್ದಿಷ್ಟ ಕಾಲಮಿತಿಯೊಳಗೆ ವಿಲೇವಾರಿಯಾಗಿ ಶಿಕ್ಷೆ ಪ್ರಕಟವಾದರೆ, ಜನರಿಗೂ ಭಯ ಇರುತ್ತದೆ. ನ್ಯಾಯದಾನ ವಿಳಂಬವಾದಷ್ಟೂ ಅಪರಾಧಗಳು ಹೆಚ್ಚುತ್ತವೆ. ಇದರಿಂದ ವಕೀಲರಿಗೆ ಹೆಚ್ಚು ಲಾಭವಾಗುತ್ತದೆ. ವಿಚಾರಣೆಗಳಿಗೆ ಅಲೆದಲೆದು ಸಾಮಾನ್ಯರು ಸಾಯುತ್ತಿದ್ದಾರೆ. ಈ ಡ್ರಾಮಾವನ್ನು ವಕೀಲರು ಎಂಜಾಯ್‌ ಮಾಡುತ್ತಿದ್ದಾರೆ. ಇದಕ್ಕಿಂತ ಗೂಂಡಾಗಳ ತ್ವರಿತ ನ್ಯಾಯದಾನವೇ ಮೇಲು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT