ಜಯಮಹಲ್ ಬಂಗಾಳಿ ದಸರಾ

7
Jayamahal durga pooja samithi

ಜಯಮಹಲ್ ಬಂಗಾಳಿ ದಸರಾ

Published:
Updated:

ಪಶ್ಚಿಮ ಬಂಗಾಳಕ್ಕೂ ದುರ್ಗಾಪೂಜೆಗೂ ಎಲ್ಲಿಲ್ಲದ ನಂಟು. ಕಾಸ್ಮೋಪಾಲಿಟಿನ್ ನಗರವಾಗಿರುವ ಬೆಂಗಳೂರಿನಲ್ಲೂ ಅಸಂಖ್ಯಾತ ಬಂಗಾಳಿಗಳಿದ್ದಾರೆ. ಪ್ರತಿವರ್ಷ ದಸರಾ ಹಬ್ಬ ಬಂತೆಂದರೆ ಸಾಕು ಇಲ್ಲಿರುವ ಬಂಗಾಳಿ ಸಂಘ– ಸಂಸ್ಥೆಗಳು ವೈಭವಯುತವಾಗಿ ದುರ್ಗಾ ಪೂಜೆಯನ್ನು ಆಚರಿಸುತ್ತವೆ. ದೂರದ ಬಂಗಾಳಕ್ಕೆ ತೆರಳಲಾಗದವರು ತಮ್ಮವರೇ ಆಯೋಜಿಸಿರುವ ದುರ್ಗಾಪೂಜೆಯನ್ನು ಕಣ್ಮನ ತುಂಬಿಕೊಂಡು ಸಂಭ್ರಮಿಸುತ್ತಾರೆ. ಮಾತೆ ದುರ್ಗೆಯ ವಿವಿಧ ಅಲಂಕಾರವನ್ನು ಕಣ್ತುಂಬಿಕೊಂಡು ಕೊನೆಯ ದಿನದ ಕುಂಕುಮ ಹಬ್ಬದಂದು ಬಂಗಾಳಿ ಹೆಣ್ಮಕ್ಕಳು ದೇವಿಗೆ ಕುಂಕುಮ ಹಚ್ಚಿ ಬೀಳ್ಕೊಡುವ ದೃಶ್ಯ ಬಂಗಾಳಿಗರಿಗೆ ತಮ್ಮ ಮಾತೃಭೂಮಿಯ ನೆನಪು ತರುತ್ತದೆ.

ಆರ್‌.ಟಿ.ನಗರದ ಹಳೆಯ ದುರ್ಗಾ ಸಮಿತಿಯಾಗಿರುವ ಜಯಮಹಲ್ ದುರ್ಗಾದೇವಿ ಸಾರ್ವಜನಿಕ ಸಮಿತಿ ಪ್ರತಿವರ್ಷವೂ ವಿಶೇಷ ಅಲಂಕಾರಗಳ ಮೂಲಕ ಸಾರ್ವಜನಿಕರ ಗಮನ ಸೆಳೆಯುತ್ತಿದೆ.


ಕಳೆದ ವರ್ಷ ರೂಪಿಸಿದ್ದ ‘ಜಂಗಲ್ ಬುಕ್’ ಮಾದರಿ

ಪ್ರತಿ ವರ್ಷವೂ ಒಂದು ವಿಷಯಾಧಾರಿತವಾಗಿ ದುರ್ಗೆಯನ್ನು ಅಲಂಕರಿಸುವುದು ವಾಡಿಕೆ. ವಿವೇಕಾನಂದ ರಾಕ್ ಟೆಂಪಲ್, ಜಂಗಲ್ ಬುಕ್ ಹೀಗೆ ವಿಭಿನ್ನ ಥೀಮ್‌ಗಳ ಮೂಲಕ ದುರ್ಗಾ ಭಕ್ತರನ್ನು ಸೆಳೆಯುತ್ತಿದೆ. ಈ ಬಾರಿ ‘ಅಂತರಿಕ್ಷ ನೌಕೆ’ ಥೀಮ್‌ ಅನ್ನು ಈ ಸಮಿತಿ ಒಳಗೊಂಡಿದೆ. ಕಳೆದ ಬಾರಿಯ ಥೀಮ್‌ಗೆ ಅತ್ಯುತ್ತಮ ಅಲಂಕಾರಿಕ ದುರ್ಗೆ ಅನ್ನುವ ಪ್ರಶಸ್ತಿಯೂ ದೊರೆತಿದೆ. ಮೈತ್ರಿ ಬಂಧನ್ ನೀಡುವ ಈ ಪ್ರಶಸ್ತಿಗೆ ನೂರಕ್ಕೂ ಹೆಚ್ಚು ಸ್ಪರ್ಧಿಗಳಿರುತ್ತಾರೆ. 

ಈ ಬಾರಿ 63ನೇ ವರ್ಷದ ದುರ್ಗಾದೇವಿ ಉತ್ಸವ. ಒಂಬತ್ತು ದಿನಗಳ ಬದಲಿಗೆ ಐದು ದಿನಗಳ ಕಾಲ ದುರ್ಗಾ ಪೂಜೆ ಮಾಡುವುದು ದುರ್ಗಾ ಸಮಿತಿಯ ವಿಶೇಷ. ಬಹುತೇಕ ಬಂಗಾಳಿಗಳು ಐದು ದಿನಗಳ ಕಾಲವೇ ದುರ್ಗಾ ಪೂಜೆ ಮಾಡುವುದು ವಾಡಿಕೆ ಎನ್ನುತ್ತಾರೆ ಜಯಮಹಲ್ ದುರ್ಗಾ ಪೂಜೆ ಸಮಿತಿಯ ಉಪಾಧ್ಯಕ್ಷ ತಪನ್ ದತ್ತಾ.

ಈ ಬಾರಿ ಅಕ್ಟೋಬರ್ 15ರಿಂದ 19ರ ತನಕ ದುರ್ಗಾಪೂಜೆ ನಡೆಯಲಿದ್ದು, ಪೂಜೆ, ಅಲಂಕಾರದ ಜತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅನಿರುದ್ಧ್, ಸಮನ್ವಿತಾ ಶರ್ಮಾ ಮತ್ತು ಬಂಗಾಳದ ಪ್ರಸಿದ್ಧ ಗಾಯಕರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳು, ಮಧ್ಯಾಹ್ನ ಮುಕ್ತಾಂಗನ್ (ಮುಕ್ತ ಅಂಗಳ) ಮಾದರಿಯಲ್ಲಿ ಪ್ರತಿಭಾವಂತ ಕಲಾವಿದರಿಗೆ ವೇದಿಕೆ ನೀಡಲಾಗಿದೆ. ಅಷ್ಟಾಗಿ ಬೆಳಕಿಗೆ ಬಾರದ ನೃತ್ಯ, ಚಿತ್ರ ಕಲಾವಿದರಿಗೆ ಇಲ್ಲಿ ತಮ್ಮ ಕಲಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೊನೆಯ ದಿನ ಮುತ್ತೈದೆಯರಿಂದ ದೇವಿಗೆ ಸಿಂಧೂರ ಹಚ್ಚುವ ಕಾರ್ಯಕ್ರಮ ನಡೆಯಲಿದೆ. ಅಂದು ದುರ್ಗಾ ದೇವಿಯನ್ನು ನದಿಯಲ್ಲಿ ಬಿಡಲಾಗುವುದು. ದೇವಿ ತನ್ನೂರಿಗೆ ಸುರಕ್ಷಿತವಾಗಿ ಹೋಗಿ ಬರಲೆಂದು ಮುತ್ತೈದೆಯರು ದೇವಿಗೆ ಕೆಂಪು ಕುಂಕುಮದ ಪೂಜೆ ಮಾಡಿ, ತಾವೂ ಕುಂಕುಮ ಹಚ್ಚಿಕೊಂಡು ಸಂಭ್ರಮದಿಂದ ದೇವಿಯನ್ನು ಬೀಳ್ಕೊಡುತ್ತಾರೆ ಎಂದು ವಿವರಿಸುತ್ತಾರೆ ತಪನ್.

v

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !