ಮಂಗಳವಾರ, ನವೆಂಬರ್ 12, 2019
28 °C

ಕಾಂಗ್ರೆಸ್‌ ಸೇರಲು ಬಯಸಿದ್ದ ಜೆಡಿಎಸ್ ಶಾಸಕರು?

Published:
Updated:

ಬೆಂಗಳೂರು: ಎಚ್‌.ಡಿ.ಕುಮಾರ ಸ್ವಾಮಿ ಅವರ ಕಾರ್ಯವೈಖರಿಯಿಂದ ಬೇಸತ್ತಿರುವ ಜೆಡಿಎಸ್‌ನ ಕೆಲವು ಶಾಸಕರು ಡಿ.ಕೆ.ಶಿವಕುಮಾರ್‌ ಅವರು ಕೆಪಿಸಿಸಿ ಅಧ್ಯಕ್ಷರಾದ ತಕ್ಷಣ ಕಾಂಗ್ರೆಸ್‌ ಸೇರಲು ಬಯಸಿದ್ದರೇ?

ಇಂತಹದೊಂದು ಚರ್ಚೆ ಜೆಡಿಎಸ್‌ ಆಂತರಿಕ ವಲಯದಲ್ಲಿ ನಡೆಯುತ್ತಿದೆ. 

ಬಿಜೆಪಿ ಸೇರುವ ಇರಾದೆಯಲ್ಲಿದ್ದ ಕೆಲವು ಜೆಡಿಎಸ್ ಶಾಸಕರು ವಿದೇಶ ಪ್ರಯಾಣ ಬೆಳೆಸಿದ್ದಾರೆ. ಅಲ್ಲಿಂದಲೇ ‘ಪಕ್ಷಾಂತರ’ದ ಸೂತ್ರ ಹೆಣೆಯುವ ಚಿಂತನೆಯಲ್ಲಿದ್ದರು ಎಂದು ಹೇಳಲಾಗಿತ್ತು. ಆದರೆ, ಈ ಶಾಸಕರು ವಿದೇಶಕ್ಕೆ ತೆರಳಿದ ಉದ್ದೇಶ ಕಾಂಗ್ರೆಸ್ ಸೇರುವುದಾಗಿತ್ತೇ ವಿನಃ ಬಿಜೆಪಿಯತ್ತ ಹೋಗುವುದಲ್ಲ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರನ್ನು ಬದಲಿಸಿ, ಆ ಹುದ್ದೆಗೆ ಶಿವಕುಮಾರ್ ಬರಲಿದ್ದಾರೆ. ಬಳಿಕ, ಕಾಂಗ್ರೆಸ್ ಸೇರುವ ಲೆಕ್ಕಾಚಾರ ಈ ಶಾಸಕರಾಗಿತ್ತು. ಆದರೆ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಿವಕುಮಾರ್ ಅವರನ್ನು ಬಂಧಿಸುತ್ತಿದ್ದಂತೆ ಶಾಸಕರ ಆಲೋಚನೆ ಬದಲಾಗಿದೆ ಎಂದು ಅವರು ಹೇಳಿದರು.

ಕುಮಾರಸ್ವಾಮಿ ಅವರು ವಿದೇಶದಿಂದ ವಾಪಸಾಗುತ್ತಿದ್ದಂತೆಯೇ ಇಬ್ಬರು ಶಾಸಕರು, ವಿಧಾನ ಪರಿಷತ್‌ನ ಸದಸ್ಯರೊಬ್ಬರ ಸಹಿತ ಕೆಲವು ಮುಖಂಡರು ವಿದೇಶ ಪ್ರಯಾಣ ಬೆಳೆಸಿದ್ದಾರೆ. ಪಕ್ಷದ ನಾಯಕತ್ವದ ಕೆಲವೊಂದು ನಿರ್ಧಾರಗಳಿಂದ ತಮಗೆ ಬೇಸರವಾಗಿದೆ ಎಂಬುದನ್ನು ಬಹಿರಂಗವಾಗಿ ತೋರಿಸುವುದೇ ಅವರ ಈ ಪ್ರವಾಸದ ಉದ್ದೇಶ.

‘ದೇವೇಗೌಡರಿಗೆ ಗೊತ್ತಿದ್ದೇ ಈ ಎಲ್ಲ ಬೆಳವಣಿಗೆ ನಡೆದಿದೆ. ಸದ್ಯ ಅವರು ಸಹ ಏನೂ ಮಾಡುವ ಸ್ಥಿತಿಯಲ್ಲಿ ಇಲ್ಲ. ಕುಮಾರಸ್ವಾಮಿ ಅವರು ಕೆಲವೇ ಕೆಲವು ಮಂದಿಯಲ್ಲಿ ಅತಿಯಾದ ವಿಶ್ವಾಸ ಇಟ್ಟು ಪಕ್ಷ ಕಟ್ಟುವ ಕೆಲಸ ಮಾಡಿದರೆ ನಾವು ಪಕ್ಷದಲ್ಲಿ ಇರುವುದರಲ್ಲಿ ಅರ್ಥವಿಲ್ಲ ಎಂದು ಕೆಲವು ಶಾಸಕರು ಭಾವಿಸಿದ್ದು, ಅದರಂತೆ ಇದೀಗ ನಡೆಯತೊಡಗಿದ್ದಾರೆ. ಕಾಂಗ್ರೆಸ್‌ನಲ್ಲಿ ಆಗಿರುವ ಬೆಳವಣಿಗೆ ಅವರಿಗೆ ಅನಿರೀಕ್ಷಿತ. ಹೀಗಾಗಿ ಅವರ ನಡೆಯಲ್ಲೂ ಬದಲಾವಣೆ ಆಗಬಹುದು’ ಎಂದು ಅವರು ತಿಳಿಸಿದರು.

 

ಪ್ರತಿಕ್ರಿಯಿಸಿ (+)