ಭೋರ್ಗರೆವ ಪ್ರವಾಹದ ನಡುವೆ ಸ್ತಬ್ಧವಾದ ಜೋಡುಪಾಲ

7
ಕ್ಷಣಾರ್ಧದಲ್ಲಿ ಸಾವಿರಾರು ಮರಗಳನ್ನು ಕೊಚ್ಚಿಕೊಂಡು ಜನವಸತಿಗೆ ಅಪ್ಪಳಿಸಿದ ತೊರೆ

ಭೋರ್ಗರೆವ ಪ್ರವಾಹದ ನಡುವೆ ಸ್ತಬ್ಧವಾದ ಜೋಡುಪಾಲ

Published:
Updated:
Deccan Herald

ಜೋಡುಪಾಲ(ಕೊಡಗು): ಮಡಿಕೇರಿಯಿಂದ 14 ಕಿಲೋಮೀಟರ್‌ ದೂರದಲ್ಲಿರುವ ಜೋಡುಪಾಲ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಭಾರಿ ಭೂಕುಸಿತ ಮತ್ತು ಪ್ರವಾಹದ ರುದ್ರನರ್ತನಕ್ಕೆ ಅಕ್ಷರಶಃ ಸ್ತಬ್ಧವಾಗಿದೆ. ಬಾಗಿಲು ತೆರದಂತೆಯೇ ಇರುವ ಮನೆಗಳು, ಕೊಚ್ಚಿಹೋದ ಸೇತುವೆ, ಹತ್ತಾರು ಕಿ.ಮೀ.ವರೆಗೂ ಪಯಸ್ವಿನಿ ನದಿಯಲ್ಲಿ ಸಿಲುಕಿಕೊಂಡಿರುವ ಸಿಪ್ಪೆ ಸುಲಿದಿರುವ ಮರಗಳು ಮಳೆಯ ರುದ್ರನರ್ತನದ ಭೀಕರತೆಯನ್ನು ಸಾಕ್ಷೀಕರಿಸುತ್ತಿವೆ.

ಮಂಗಳೂರು– ಮಡಿಕೇರಿ ನಡುವಿನ ಸಂಪರ್ಕದ ಕೊಂಡಿಯಾಗಿರುವ ರಾಷ್ಟ್ರೀಯ ಹೆದ್ದಾರಿ 275ರ ಅಂಚಿನಲ್ಲಿರುವ ಜೋಡುಪಾಲದಲ್ಲಿ ಶುಕ್ರವಾರ ಬೆಳಿಗ್ಗೆ 8.30ಕ್ಕೆ ಬಾಂಬ್‌ ಸಿಡಿದಂತಹ ಶಬ್ಧವಾಗಿದೆ. ಮಳೆಯಿಂದ ರಕ್ಷಣೆ ಪಡೆಯಲು ಮನೆಗಳಲ್ಲಿದ್ದ ಜನರು ಏನಾಯಿತು ಎಂದು ಹೊರಬಂದು ನೋಡುವಷ್ಟರಲ್ಲಿ ಈಶ್ವರಕಲ್ಲು ಪರ್ವತ ಶ್ರೇಣಿಯಲ್ಲಿ ಭಾರಿ ಭೂಕುಸಿತ ಆಗಿರುವುದು ಗೊತ್ತಾಗಿದೆ. ಅಲ್ಲಿಂದ ಹರಿದು ಪಯಸ್ವಿನಿ ನದಿ ಸೇರುವ ತೊರೆಯೊಂದು ಬೃಹತ್‌ ನದಿಯಂತೆ ಭೋರ್ಗರೆಯುತ್ತಾ ಕ್ಷಣಾರ್ಧದಲ್ಲಿ ಬಂದು ಜನವಸತಿಗೆ ಅಪ್ಪಳಿಸಿದೆ.

ಸಾವಿರಾರು ಮರಗಳು, ಬೃಹದಾಕಾರದ ಬಂಡೆಗಳು ಪ್ರವಾಹದ ನೀರಿನೊಂದಿಗೆ ಬಂದು ಅಪ್ಪಳಿಸಿದ ರಭಸಕ್ಕೆ ಮೂರು ಮನೆಗಳು ಮತ್ತು ಒಂದು ಅಂಗಡಿ ಸಂಪೂರ್ಣ ಕೊಚ್ಚಿಹೋಗಿವೆ. ಜೋಡುಪಾಲ ತಿರುವಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದ ಸೇತುವೆಯೊಂದು ಸಣ್ಣ ಕುರುಹೂ ಇಲ್ಲದೆ ಕೊಚ್ಚಿ ಹೋಗಿದೆ. 25ಕ್ಕೂ ಹೆಚ್ಚು ಮನೆಗಳಿಗೆ ಪ್ರವಾಹ ಅಪ್ಪಳಿಸಿದ್ದು, ಭಾರಿ ಹಾನಿಯಾಗಿದೆ. ಕೆಲವೇ ಗಂಟೆಗಳಲ್ಲಿ ಇಡೀ ಊರಿನ ಚಹರೆಯೇ ಬದಲಾಗಿದೆ.

ಪ್ರವಾಹದ ನೀರು ರಾಷ್ಟ್ರೀಯ ಹೆದ್ದಾರಿ ಮೇಲೂ ಹರಿದಿದ್ದು, ಒಂದೂವರೆ ಕಿ.ಮೀ.ವರೆಗೂ ರಸ್ತೆ ಮೇಲೆ ಮರಗಳು ಬಿದ್ದಿವೆ. ಕೆಲವೆಡೆ ನಾಲ್ಕು ಅಡಿಗಳಷ್ಟು ಕೆಸರು ರಸ್ತೆ ಮೇಲಿದೆ. ರಸ್ತೆ ಬದಿಯಲ್ಲಿದ್ದ ಕೆಲವು ಕಟ್ಟಡಗಳ ಬಾಗಿಲು ತೆರೆಯಲೂ ಆಗದಷ್ಟು ಕೆಸರು ಆವರಿಸಿದೆ. ಪ್ರವಾಹದ ನೀರಿನಲ್ಲಿ ಕೊಚ್ಚಿ ಬಂದಿರುವ ಬೃಹದಾಕಾರದ ಬಂಡೆಗಳು ಅಲ್ಲಲ್ಲಿ ಬಿದ್ದಿವೆ. ವಿದ್ಯುತ್‌ ಕಂಬಗಳು ಮುರಿದು ಬಿದ್ದಿದ್ದು, ಪಯಸ್ವಿನಿ ನದಿಯ ನಡುವಿನಲ್ಲಿ ಸಿಲುಕಿಕೊಂಡಿರುವ ಮನೆಗಳ ಅವಶೇಷಗಳು ಘಟನೆಯ ತೀವ್ರತೆಯನ್ನು ಸಾರುತ್ತಿವೆ.

ಇಬ್ಬರ ಶವ ಪತ್ತೆ:

ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಡಿ ದರ್ಜೆ ನೌಕರರಾಗಿದ್ದ ಬಸಪ್ಪ ಎಂಬುವವರ ಮನೆಗೆ ಮೊದಲು ಪ್ರವಾಹ ಅಪ್ಪಳಿಸಿದ್ದು, ಮನೆಯಲ್ಲಿದ್ದ ನಾಲ್ವರೂ ನೀರಿನೊಂದಿಗೆ ಕೊಚ್ಚಿ ಹೋಗಿದ್ದರು. ಬಸಪ್ಪ ಮತ್ತು ಅವರ ಮಗಳು ಮೊನಿಶಾ ಮೃತದೇಹಗಳು ಪತ್ತೆಯಾಗಿವೆ. ಇಬ್ಬರು ಇನ್ನೂ ನಾಪತ್ತೆಯಾಗಿದ್ದಾರೆ. ಉಮ್ಮರ್ ಎಂಬುವವರ ಅಂಗಡಿ ಸಂಪೂರ್ಣ ಕೊಚ್ಚಿಹೋಗಿದ್ದು, ಅವರು ಕೂಡ ಪತ್ತೆಯಾಗಿಲ್ಲ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು, ವಿವಿಧ ಇಲಾಖೆಗಳ ಸಿಬ್ಬಂದಿ, ಸಂಘ ಸಂಸ್ಥೆಗಳ ಸದಸ್ಯರು ದೌಡಾಯಿಸಿ ಬಂದು ಜೋಡುಪಾಲದ ಜನರಿಗೆ ನೆರವಾಗಿದ್ದಾರೆ.  ಅಲ್ಲಿನ ಸುಮಾರು 50 ಕುಟುಂಬಗಳ ಎಲ್ಲರೂ ಮನೆ ತೊರೆದು ಹೊರಬಂದಿದ್ದಾರೆ. ಹೆಚ್ಚು ಮಂದಿ ಸಂಪಾಜೆಯ ಗಂಜಿ ಕೇಂದ್ರಗಳಲ್ಲಿದ್ದಾರೆ. ಉಳಿದವರು ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ.

ಸರಣಿ ಭೂಕುಸಿತ: ಜೋಡುಪಾಲದ ದುರಂತದ ಬೆನ್ನಲ್ಲೇ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಭೂಕುಸಿತ ಹೆಚ್ಚಾಗಿದೆ. ಮಡಿಕೇರಿಯಿಂದ ಜೋಡುಪಾಲದವರೆಗಿನ ರಸ್ತೆ ಬಹುತೇಕ ಮಣ್ಣಿನ ರಾಶಿಯಿಂದ ಮುಚ್ಚಿ ಹೋಗಿದೆ. ನೂರಾರು ಮರಗಳು ರಸ್ತೆಗೆ ಉರುಳಿವೆ. ರಾಷ್ಟ್ರೀಯ ಹೆದ್ದಾರಿ ನಡುವಿನ ಹಲವು ಸೇತುವೆಗಳು, ಬೃಹತ್‌ ಮೋರಿಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ.

ಈ ಮಾರ್ಗದ ಒಂದನೇ ಮಣ್ಣಂಗೇರಿ, ಎರಡನೇ ಮಣ್ಣಂಗೇರಿ, ಮೆದೆನಾಡು ಸೇರಿದಂತೆ ಹತ್ತಾರು ಹಳ್ಳಿಗಳು ಸಂಪೂರ್ಣವಾಗಿ ಸಂಪರ್ಕ ಕಡಿದುಕೊಂಡಿವೆ. ಪಯಸ್ವಿನಿ ನದಿ ಮಣ್ಣನ್ನು ಕೊಚ್ಚಿಕೊಂಡು ವೇಗವಾಗಿ ಹರಿಯುತ್ತಲೇ ಇದೆ. ರಸ್ತೆಯ ಅಂಚಿನಲ್ಲಿ ಶನಿವಾರವೂ ಭೂಕುಸಿತ ಮುಂದುವರಿದಿತ್ತು.

ಜೋಡುಪಾಲದಿಂದ ಮದೆನಾಡುವರೆಗಿನ ಮಾರ್ಗದಲ್ಲಿ ಸೋಮವಾರದಿಂದ ನಿರಂತರವಾಗಿ ಭೂಕುಸಿತ ಆಗುತ್ತಿದೆ. ಅಲ್ಲಿನ ಹಲವು ಕುಟುಂಬಗಳು ಒಂದು ವಾರದಿಂದ ಹೊರಜಗತ್ತಿನ ಸಂಪರ್ಕ ಕಡಿದುಕೊಂಡಿದ್ದವು. ಭಾರಿ ಭೂಕುಸಿತ ಸಂಭವಿಸಿದ ಕೆಲವು ಸ್ಥಳಗಳಲ್ಲಿ ಜಾನುವಾರುಗಳು ಮತ್ತು ನಾಯಿಗಳು ಸತ್ತುಬಿದ್ದಿರುವುದನ್ನು ಕಂಡಿರುವುದಾಗಿ ಪರಿಹಾರ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ಸಿಬ್ಬಂದಿ ‘ಪ್ರಜಾವಾಣಿ’ಗೆ ತಿಳಿಸಿದರು.

350 ಮಂದಿ ರಕ್ಷಣೆ: ಶುಕ್ರವಾರ ಸಂಜೆಯಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತದ ನೇತೃತ್ವದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಜೋಡುಪಾಲದಿಂದ ಮದೆನಾಡುವರೆಗಿನ ಮಾರ್ಗದಲ್ಲಿ ಘಟ್ಟ ಸಾಲಿನ ಮನೆಗಳಲ್ಲಿದ್ದ 350 ಮಂದಿಯನ್ನು ಶನಿವಾರ ಸಂಜೆಯವರೆಗೂ ರಕ್ಷಣೆ ಮಾಡಲಾಗಿದೆ. ಬೆಲೆಬಾಳುವ ವಸ್ತುಗಳು ಮತ್ತು ಬಟ್ಟೆಗಳನ್ನಷ್ಟೇ ಹೊರತರಲು ಅವರಿಗೆ ಸಾಧ್ಯವಾಗಿದೆ. ಕೆಲವು ಮನೆಗಳು ಬಾಗಿಲು ತೆರೆದ ಸ್ಥಿತಿಯಲ್ಲೇ ಇವೆ.

ರಕ್ಷಣೆ ಮಾಡಿರುವವರಲ್ಲಿ ಒಬ್ಬ ಗರ್ಭಿಣಿ, ಒಂದು ತಿಂಗಳಿನ ಮಗುವಿರುವ ಒಬ್ಬ ಬಾಣಂತಿ, ಐದರಿಂದ ಆರು ತಿಂಗಳಿನ ಮಗುವಿರುವ ಮೂವರು ಬಾಣಂತಿಯರು ಸೇರಿದ್ದಾರೆ. ನಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ಕೆಲವು ವೃದ್ಧರನ್ನು ಭೂಕುಸಿತದಿಂದ ಹಾನಿಯಾಗಿರುವ ಮಾರ್ಗದಲ್ಲೇ ಹೊತ್ತು ತರಲಾಯಿತು.

 

ಪ್ರಾಣಿಗಳ ಮೂಕರೋದನ

ಜೋಡುಪಾಲದಿಂದ ಮದೆನಾಡುವರೆಗಿನ ಹಳ್ಳಿಗಳ ಜನರು ಕೈಗೆ ಸಿಕ್ಕ ಅಗತ್ಯ ವಸ್ತುಗಳು, ನಗದು, ಚಿನ್ನಾಭರಣ ಮಾತ್ರ ತೆಗೆದುಕೊಂಡು ರಕ್ಷಣಾ ತಂಡದೊಂದಿಗೆ ಬಂದಿದ್ದಾರೆ. ಜಾನುವಾರು, ನಾಯಿ, ಬೆಕ್ಕು, ಕೋಳಿಗಳು ಅಲ್ಲಿಯೇ ಉಳಿದಿವೆ. ಹೆದ್ದಾರಿಯುದ್ದಕ್ಕೂ ಇರುವ ಒಂಟಿ ಮನೆಗಳಲ್ಲಿ ಉಳಿದಿರುವ ನಾಯಿಗಳು ಮತ್ತು ಜಾನುವಾರು ಹಸಿವಿನಿಂದ ರೋದಿಸುತ್ತಿದ್ದುದು ಶನಿವಾರ ಕೇಳಿಬರುತ್ತಿತ್ತು.

‘ಶುಕ್ರವಾರ ಮನೆಯವರೆಲ್ಲರೂ ತೆರಳಿದ್ದರು. ನಾನು ಅಲ್ಲಿ ಉಳಿದುಕೊಂಡಿದ್ದೆ. ಇವತ್ತು ಕೆಲಸದ ಆಳುಗಳ ಜೊತೆ ನಾನೂ ಬಂದೆ. ಕೊಟ್ಟಿಗೆಯಲ್ಲಿ ಕಟ್ಟಿರುವ ದನಗಳು ಅಲ್ಲೇ ಉಳಿದಿವೆ. ಎರಡು ತಿಂಗಳ ಕರು ಕೂಡ ಇದೆ’ ಎಂದು ಶನಿವಾರ ರಕ್ಷಿಸಿ, ಕರೆತರಲಾದ ಮಾಜಿ ಸೈನಿಕ ಅಪ್ಪಾಜಿ ಕಣ್ಣೀರು ಹಾಕಿದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !