ಕೈಗಾ: ಮೊದಲ ಘಟಕದಿಂದ ವಿಶ್ವದಾಖಲೆ

ಕಾರವಾರ: ಕೈಗಾ ಅಣು ವಿದ್ಯುತ್ ಸ್ಥಾವರದ ಮೊದಲ ಘಟಕವು, ನಿರಂತರ ವಿದ್ಯುತ್ ಉತ್ಪಾದನೆಯಲ್ಲಿ ಸೋಮವಾರ ಬೆಳಿಗ್ಗೆ 9.20ಕ್ಕೆ ವಿಶ್ವ ದಾಖಲೆ ಬರೆಯಲಿದೆ. ಭಾನುವಾರಕ್ಕೆ 940 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಇಂಗ್ಲೆಂಡ್‌ನ ಹೇಶಮ್ ಅಣು ವಿದ್ಯುತ್ ಉತ್ಪಾದನಾ ಘಟಕದ ದಾಖಲೆಯನ್ನು ಸರಿಗಟ್ಟಿತು.
ಇಲ್ಲಿ 2016ರ ಮೇ 13ರಂದು ಬೆಳಿಗ್ಗೆ 9.20ಕ್ಕೆ ವಿದ್ಯುತ್ ಉತ್ಪಾದನೆಗೆ ಚಾಲನೆ ನೀಡಲಾಗಿತ್ತು. ಈ ಘಟಕದಲ್ಲಿ ಭಾರ ಜಲ ರಿಯಾಕ್ಟರ್ ಕಾರ್ಯ ನಿರ್ವಹಿಸುತ್ತಿದೆ. ಈ ಮಾದರಿಯಲ್ಲಿ ನಿರಂತರ ವಿದ್ಯುತ್ ಉತ್ಪಾದಿಸುತ್ತಿರುವ ವಿಶ್ವದ ಮೊದಲ ಘಟಕ ಎಂಬ ಹೆಗ್ಗಳಿಕೆಗೆ ಅ.24ರಂದು (894 ದಿನ) ಪಾತ್ರವಾಗಿತ್ತು.
ಇದಕ್ಕೂ ಮೊದಲು ಈ ವರ್ಷ ಜೂನ್ 18ರಂದು, 766ನೇ ದಿನ ಯಾವುದೇ ಅಡಚಣೆಯಿಲ್ಲದೇ ಕಾರ್ಯ ನಿರ್ವಹಿಸಿದ ದೇಶದ ಮೊದಲ ಅಣು ವಿದ್ಯುತ್ ಉತ್ಪಾದನಾ ಘಟಕ ಎಂಬ ಶ್ರೇಯವನ್ನೂ ತನ್ನದಾಗಿಸಿಕೊಂಡಿತ್ತು.
220 ಮೆಗಾವಾಟ್ ಸಾಮರ್ಥ್ಯದ ಈ ಘಟಕವು, ಸೋಮವಾರ ಬೆಳಿಗ್ಗೆ 9 ಗಂಟೆ 19 ನಿಮಿಷದವರೆಗೆ 49.38 ಕೋಟಿ ಯೂನಿಟ್ ಉತ್ಪಾದನೆ ಮಾಡಲಿದೆ. ಘಟಕದ ಕಾರ್ಯನಿರ್ವಹಣೆಯನ್ನು ಆಧರಿಸಿ ಮತ್ತೊಂದಷ್ಟು ದಿನ ವಿದ್ಯುತ್ ಉತ್ಪಾದನೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಿಯಾಕ್ಟರ್‌ನ ಕಾರ್ಯನಿರ್ವಹಣೆಯನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದ ಭಾರತೀಯ ಪರಮಾಣು ಪ್ರಾಧಿಕಾರದ ಅಧಿಕಾರಿಗಳು, ಘಟಕವನ್ನು ಡಿ.31ರವರೆಗೆ ಚಾಲನೆಯಲ್ಲಿಡಲು ಅನುಮತಿ ನೀಡಿದ್ದರು. ಅದರಂತೆ ವಿದ್ಯುತ್ ಉತ್ಪಾದನೆ ಮುಂದುವರಿಸಲಾಗಿದ್ದು, ಅಣು ವಿದ್ಯುತ್ ಉತ್ಪಾದನೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿದೆ.
‘ಮನೋಸ್ಥೈರ್ಯ ವೃದ್ಧಿ’
‘ಸ್ವದೇಶಿ ತಂತ್ರಜ್ಞಾನವನ್ನು ಬಳಸಿ ಕಾರ್ಯ ನಿರ್ವಹಿಸುತ್ತಿರುವ ಘಟಕ ಇದಾಗಿದೆ. ನಮ್ಮ ದೇಶದ ಅಣು ವಿದ್ಯುತ್ ಯೋಜನೆಗಳು ಅತ್ಯಂತ ಸುರಕ್ಷಿತವಾಗಿವೆ ಎಂದು ವಿಶ್ವಕ್ಕೇ ಸಾರುವ ಸಮಯವಿದು ಎಂದು ನಾನು ಭಾವಿಸುತ್ತೇನೆ. ಇಂದು ದೇಶಕ್ಕೆ ತುಂಬಾ ಅಗತ್ಯವಾಗಿರುವ ವಿದ್ಯುತ್ ಉತ್ಪಾದನೆ ಹೆಚ್ಚಿಸಬೇಕಿದ್ದು, ಕೈಗಾದ ಮೊದಲ ಘಟಕದ ದಾಖಲೆಯು ವಿಜ್ಞಾನಿಗಳ ಮನೋಸ್ಥೈರ್ಯ ಹೆಚ್ಚಿಸಲು ಸಹಕಾರಿಯಾಗಿದೆ’ ಎಂದು ವಿದ್ಯುತ್ ಉತ್ಪಾದನಾ ಘಟಕದ ನಿರ್ದೇಶಕ ಜೆ.ಆರ್.ದೇಶಪಾಂಡೆ ‘ಪ್ರಜಾವಾಣಿ’ ಜತೆ ಸಂತಸ ವ್ಯಕ್ತಪಡಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.