ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರಾಜಕೀಯ ಚಪ್ಪಲಿ ಬಿಟ್ಟರೆ ಅಭಿವೃದ್ಧಿ’

ಸೊಣ್ಣೇನಹಳ್ಳಿಯಲ್ಲಿ ಕನಕ ಸಂಕೀರ್ಣ ಉದ್ಘಾಟನೆ
Last Updated 5 ಸೆಪ್ಟೆಂಬರ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜಕೀಯ ಚಪ್ಪಲಿ ಬಿಟ್ಟು ಬಂದು ಎಲ್ಲ ಜನಪ್ರತಿನಿಧಿಗಳು ಒಗ್ಗೂಡಿದರೆ ಆಯಾ ಸಮುದಾಯ ಅಭಿವೃದ್ಧಿಯಾಗುತ್ತದೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ನಗರದ ಸೊಣ್ಣೇನಹಳ್ಳಿಯಲ್ಲಿ ಗುರುವಾರ ನಡೆದ ಕನಕ ಸಂಕೀರ್ಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಪಕ್ಷ ಭೇದ ಮರೆತು ಎಲ್ಲರೂ ಒಗ್ಗೂಡಿದ್ದರಿಂದ ಕನಕಶ್ರೀ ಸಂಕೀರ್ಣ ತಲೆ ಎತ್ತಿದೆ. ಸಮಾಜದ ವಿಚಾರದಲ್ಲಿ ನಾವೆಲ್ಲ ಒಂದು ಎಂಬುದಕ್ಕೆ ಈ ಕಟ್ಟಡ ಸಾಕ್ಷಿ’ ಎಂದರು.

‘ಹಿಂದೆ ನಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಹಿಂದುಳಿದ ಹಾಗೂ ದಲಿತರ ಮಠಗಳಿಗೆ ₹91 ಕೋಟಿ ನೀಡಿದ್ದೇವೆ. ಈ ಕನಕ ಸಂಕೀರ್ಣ ಅಭಿವೃದ್ಧಿಗೆ ₹3 ಕೋಟಿ ನೀಡುವಂತೆ ಕನಕಶ್ರೀ ಚಾರಿಟಬಲ್‌ ಟ್ರಸ್ಟ್‌ ಮನವಿ ಮಾಡಿದೆ. ಈ ಅನುದಾನ ನೀಡಲು ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಕುರುಬ ಸಮಾಜದ ಸ್ವಾಮೀಜಿಗಳ ನೇತೃತ್ವದಲ್ಲಿ ಸಮುದಾಯ ಅಭಿವೃದ್ಧಿಯಾಗುತ್ತಿದೆ. ಮಠಗಳು ಕೋಟ್ಯಂತರ ರೂಪಾಯಿ ಆಸ್ತಿ ಹೊಂದಿವೆ. ಆದರೂ, ಸಮಾಜ ಇನ್ನೂ ಅಭಿವೃದ್ಧಿ ಹೊಂದಬೇಕಾದ ಅಗತ್ಯವಿದೆ’ ಎಂದು ಈಶ್ವರಪ್ಪ ಹೇಳಿದರು.

‘ಕನಕಶ್ರೀ ಚಾರಿಟಬಲ್‌ ಟ್ರಸ್ಟ್‌ಗೆ ಸರ್ಕಾರ ₹3 ಕೋಟಿ ನೀಡಿದರೆ, ಸಮುದಾಯ ಭವನ, ವಸತಿ ನಿಲಯ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ’ ಎಂದು ಟ್ರಸ್ಟ್‌ ಅಧ್ಯಕ್ಷ ಟಿ.ಬಿ. ಬಳಗಾವಿ ಮನವಿ ಮಾಡಿದರು.

ಅನರ್ಹಗೊಂಡಿರುವ ಶಾಸಕ ಎಚ್. ವಿಶ್ವನಾಥ್, ‘ಕನಕಶ್ರೀ ಸಂಕೀರ್ಣಕ್ಕೆ ಸರ್ಕಾರ ₹1 ಕೋಟಿ ನೀಡಿದೆ. ಕನಕಶ್ರೀ ಹೌಸಿಂಗ್‌ ಸೊಸೈಟಿಯವರು 50 ನಿವೇಶನ ಮಾರಾಟ ಮಾಡಿ ಹಣ ಹೊಂದಿಸಿದ್ದಾರೆ. ಗೃಹ ನಿರ್ಮಾಣ ಸಂಸ್ಥೆಗಳ ವಿರುದ್ಧ ದೂರುಗಳು ಹೆಚ್ಚುತ್ತಿರುವ ಈ ವೇಳೆ, ಕನಕಶ್ರೀ ಸೊಸೈಟಿ ಮಾದರಿ ಕಾರ್ಯ ಮಾಡಿದೆ’ ಎಂದು ಶ್ಲಾಘಿಸಿದರು.

ಹಿಂದುಳಿದ ಮತ್ತು ದಲಿತ ವಸತಿ ನಿಲಯಗಳಿಗೆ ದೇವರಾಜ ಅರಸು ಅವರ ಹೆಸರಿಡುವಂತೆ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರಿಗೆ ನಾನೇ ಮನವಿ ಮಾಡಿದ್ದೆ.

ಎಚ್. ವಿಶ್ವನಾಥ್‌, ಅನರ್ಹಗೊಂಡಿರುವ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT